ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | GT Vs CSK: ಗಿಲ್-ಸಾಯಿ ಶತಕದ ಅಬ್ಬರ; ಚೆನ್ನೈ ವಿರುದ್ಧ ಗುಜರಾತ್‌ಗೆ ಜಯ

Published 10 ಮೇ 2024, 13:40 IST
Last Updated 10 ಮೇ 2024, 13:40 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ ಟೈಟನ್ಸ್‌ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಶತಕಗಳ ಭರಾಟೆಯ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟವು ಮಂಕಾಯಿತು. 

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗಿಲ್ ಬಳಗವು 35 ರನ್‌ಗಳಿಂದ ಜಯಿಸಿತು. ಈ ಮೂಲಕ ಟೈಟನ್ಸ್‌ ತಂಡವು ಪ್ಲೇ ಆಫ್‌ ಕನಸನ್ನು ಜೀವಂತವಾಗಿಸಿಕೊಂಡಿತು.

ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿರುವ ಚೆನ್ನೈ ತಂಡದ ಪ್ಲೇ ಆಫ್‌ ಹಾದಿ ತುಸು ಕಠಿಣವಾಯಿತು. ತನ್ನ ಪಾಲಿನಲ್ಲಿ ಇನ್ನುಳಿದಿರುವ ಎರಡೂ ಪಂದ್ಯಗಳಲ್ಲಿ ಜಯಿಸಲೇಬೇಕಾದ ಒತ್ತಡ ಚೆನ್ನೈ ತಂಡಕ್ಕೆ ಇದೆ. ಅದರಲ್ಲೊಂದು ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಮೇ 18) ವಿರುದ್ಧವೂ ಇದೆ. 

ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ಣೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕವಾಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಂತರ ತಮ್ಮ ನಿರ್ಧಾರಕ್ಕೆ ಅವರು ಕೈಕೈ ಹಿಸುಕಿಕೊಳ್ಳಬೇಕಾಯಿತು. ಟೈಟನ್ಸ್ ಆರಂಭಿಕ ಜೋಡಿ ಗಿಲ್ (104; 55ಎ, 4X9, 6X6) ಹಾಗೂ ಸಾಯಿ (103; 51ಎ, 4X5, 6X7) ಮೊದಲ ವಿಕೆಟ್ ಜೊತೆಯಾಟದಲ್ಲಿ 210 ರನ್‌ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 231 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ಚೆನ್ನೈ ತಂಡವು 10 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ರಚಿನ್ ರವೀಂದ್ರ, ಅಜಿಂಕ್ಯ ರಹಾನೆ ಹಾಗೂ ಋತುರಾಜ್ ಡಗ್‌ಔಟ್ ಸೇರಿದರು. ಡ್ಯಾರಿಲ್ ಮಿಚೆಲ್ (63;34ಎ) ಮತ್ತು ಮೋಯಿನ್ ಅಲಿ (56; 36ಎ) ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 109 ರನ್ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು.

ಆದರೆ, 13ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಮೋಹಿತ್ ಶರ್ಮಾ ಅವರು ಮಿಚೆಲ್ ವಿಕೆಟ್ ಕಬಳಿಸಿ ಜೊತೆಯಾಟ ಮುರಿದರು. ನಂತರದ ಓವರ್‌ಗಳಲ್ಲಿ ಮೋಯಿನ್ ಮತ್ತು ಶಿವಂ ದುಬೆ (21) ಅವರ ಆಟಕ್ಕೂ ಅವರು ತಡೆಯೊಡ್ಡಿದರು. ಕೊನೆಯಲ್ಲಿ ಎಂ.ಎಸ್‌. ಧೋನಿ 11 ಎಸೆತಗಳಲ್ಲಿ ಮೂರು ಸಿಕ್ಸರ್‌ ಸೇರಿದಂತೆ ಔಟಾಗದೇ 26 ರನ್‌ಗಳಿಸಿ ಕೊಂಚ ಹೋರಾಟ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ. ಇದರಿಂದಾಗಿ ಚೆನ್ನೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮೋಹಿತ್‌ ಮೂರು ವಿಕೆಟ್‌ ಪಡೆದರೆ, ರಶೀದ್‌ ಖಾನ್‌ ಎರಡು ವಿಕೆಟ್‌ ಗಳಿಸಿದರು.

ಗಿಲ್–ಸಾಯಿ ಜೊತೆಯಾಟ: 

ಎರಡು ವರ್ಷಗಳ ಹಿಂದೆ ಮೊದಲ ವಿಕೆಟ್ ಜೊತೆಯಾಟದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಕೆ.ಎಲ್. ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್  ಮೊದಲ ವಿಕೆಟ್‌ನ ಅಜೇಯ ಜೊತೆಯಾಟವನ್ನು ಗಿಲ್ ಮತ್ತು ಸಾಯಿ ಸಮ ಮಾಡಿದರು. 

ಕಾಕತಾಳೀಯವೆಂದರೆ ಇಬ್ಬರೂ ತಮ್ಮ ಶತಕ ಪೂರೈಸಲು ತಲಾ 50 ಎಸೆತಗಳನ್ನು ಎದುರಿಸಿದರು. ಆದರೆ ಗಿಲ್ ಒಂದು ಜೀವದಾನ ಪಡೆದಿದ್ದರು. ಸಾಯಿ ಮಾತ್ರ ನಿಷ್ಕಳಂಕ ಇನಿಂಗ್ಸ್‌ ಆಡಿದರು. ಗಿಲ್ ಅವರಿಗೆ ಇದು ಐಪಿಎಲ್‌ನಲ್ಲಿ ಒಟ್ಟಾರೆ ನಾಲ್ಕನೇ ಶತಕ ಮತ್ತು ಸಾಯಿಗೆ ಮೊದಲನೇಯದ್ದು. ಗಿಲ್ ಅವರಿಗಿಂತ ಸಾಯಿ ರನ್‌ ಗಳಿಕೆ ವೇಗದಿಂದ ಕೂಡಿತ್ತು. ಅವರು 201.96 ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. 

ಇವರಿಬ್ಬರ ಆಟವು 18ನೇ ಓವರ್‌ನವರೆಗೂ ನಡೆಯಿತು. ಚೆನ್ನೈ ತಂಡಕ್ಕೆ ವೇಗಿಗಳಾದ ಮುಸ್ತಫಿಜುರ್ ರೆಹಮಾನ್, ದೀಪಕ್ ಚಾಹರ್ ಮತ್ತು ಮಥೀಷ ಪಥಿರಾಣ ಅವರ ಗೈರು
ಹಾಜರಿಯು ಕಾಡಿತು.  ಋತುರಾಜ್ ಮತ್ತು ಮಹೇಂದ್ರಸಿಂಗ್ ಧೋನಿಯವರ ಯಾವ ತಂತ್ರಗಳೂ ಫಲ ಕೊಡಲಿಲ್ಲ. ಮಿಚೆಲ್  ಸ್ಯಾಂಟನರ್ ಹಾಗೂ ಸಿಮ್ರನ್‌ಜೀತ್ ಸಿಂಗ್ ಅವರು ದುಬಾರಿಯಾದರು. ಅವರು 15ರ ಇಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು.  18ನೇ ಓವರ್‌ ಬೌಲಿಂಗ್ ಮಾಡಿದ ತುಷಾರ್ ಎರಡನೇ ಎಸೆತದಲ್ಲಿ ಸಾಯಿ ಹಾಗೂ 6ನೇ ಎಸೆತದಲ್ಲಿ ಗಿಲ್ ವಿಕೆಟ್‌ಗಳನ್ನು ಕಬಳಿಸಿದರು. ಶಾರೂಕ್ ಖಾನ್ ರನ್‌ಔಟ್ ಆದರು.  ಡೇವಿಡ್ ಮಿಲ್ಲರ್ 11 ಎಸೆತಗಳಲ್ಲಿ 16 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಪ್ರಮುಖ ದಾಖಲೆಗಳು

210: ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ ರನ್‌ಗಳು. 2022ರಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡದ ಕೆ.ಎಲ್.ರಾಹುಲ್–ಕ್ವಿಂಟನ್ ಡಿಕಾಕ್ ಅವರು ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ಇಷ್ಠೇ ರನ್ ಸೇರಿಸಿದ್ದರು. 

101: ಐಪಿಎಲ್‌ ಟೂರ್ನಿಯಲ್ಲಿ ಇದುವರೆಗೆ ದಾಖಲಾದ ಒಟ್ಟು ಶತಕಗಳು. ಈ ಪಂದ್ಯದಲ್ಲಿ ಶುಭಮನ್ ಗಿಲ್ ಗಳಿಸಿದ ಶತಕವು ನೂರನೇಯದ್ದು. 2008ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡಿದ್ದ ಬ್ರೆಂಡನ್ ಮೆಕ್ಲಂ ಮೊಟ್ಟಮೊದಲ ಶತಕ ದಾಖಲಿಸಿದ್ದರು. 

4: ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಅವರು ಐಪಿಎಲ್‌ನಲ್ಲಿ ಗಳಿಸಿದ ಒಟ್ಟು ಶತಕಗಳು

25: ಸಾಯಿ ಸುದರ್ಶನ್ ಅವರು ಐಪಿಎಲ್‌ನಲ್ಲಿ 1000 ರನ್‌ ಗಳಿಸಲು  ಆಡಿದ ಒಟ್ಟು ಇನಿಂಗ್ಸ್‌ಗಳು. ಅವರು ಸಚಿನ್ ತೆಂಡೂಲ್ಕರ್ ಹಾಗೂ ಋತುರಾಜ್ ಗಾಯಕವಾಡ (ತಲಾ 31), ಜಾನಿ ಬೆಸ್ಟೊ (26) ದಾಖಲೆ  ಮುರಿದರು.

ಪ್ಲೇ ಆಫ್‌ ಹಾದಿಯ ಕೌತುಕ

ಶುಕ್ರವಾರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಜಯಿಸುವುದರೊಂದಿಗೆ ಪ್ಲೇ ಆಫ್‌ ಲೆಕ್ಕಾಚಾರ ಮತ್ತಷ್ಟು ಕುತೂಹಲ ಕೆರಳಿಸಿದೆ.

ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಪ್ರವೇಶಿಸುವ ಸಣ್ಣ ಅವಕಾಶವೊಂದು ಸೃಷ್ಟಿಯಾಗಿದೆ. ಟೈಟನ್ಸ್‌ಗೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT