ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥಸ್ವಾಮಿ ಕಳಸಾರೋಹಣ ಇಂದು

Last Updated 28 ಡಿಸೆಂಬರ್ 2012, 6:22 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನ ಕಳಗೊಂಡ ಗ್ರಾಮದ ಗಿರಿಯಲ್ಲಿರುವ ರಂಗನಾಥಸ್ವಾಮಿ ಮಹಾ ಮಹಿಮೆ ಉಳ್ಳವ ಎಂಬುದು ಅನಾದಿ ಕಾಲದ ನಂಬಿಕೆ. ಸ್ವಾಮಿಗೆ ಭಕ್ತಿಯಿಂದ ನಮಿಸಿದರೆ ಬೇಡಿದ ವರ ಪಡೆಯಬಹುದು ಎಂಬ ಪ್ರತೀತಿ ಇದೆ.

ಗ್ರಾಮಸ್ಥರು ಶನಿವಾರ ಶ್ರೀರಂಗನಾಥಸ್ವಾಮಿ ವಾರ ಎಂದು ಪರಿಗಣಿಸುತ್ತಾರೆ. ಗ್ರಾಮಸ್ಥರು ಯಾವುದೇ ಹಬ್ಬ ಹರಿದಿನಗಳನ್ನು ಶನಿವಾರ ಮಾತ್ರ ಆಚರಿಸುವುದು ವಿಶೇಷ. ಕಳೆದ 16 ವರ್ಷಗಳಿಂದ ಪ್ರತಿ ಹುಣ್ಣಿಮೆಯ ದಿನ ಗಿರಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಹೋಮ, ಅಭಿಷೇಕ ನಡೆದು, ಸಂಜೆ ಸತ್ಯನಾರಾಯಣಸ್ವಾಮಿ ಪೂಜೆ, ಭಜನೆ ಮತ್ತು ಅನ್ನಸಂತರ್ಪಣೆ ನಡೆಯುತ್ತದೆ.

ಶ್ರೀಗಿರಿಯಲ್ಲಿ ಸ್ವಾಮಿಯ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಇದೇ ವರ್ಷ ನಿಲ್ಲಿಸಿರುವ ದೀಪಮಾಲೆ ಕಂಬ ಹಾಗೂ ಪಾದುಕೆಗಳನ್ನು ಕಾಣಬಹುದು. ಇದಕ್ಕೂ ಮೊದಲು ಎಡಗಡೆ ಪರ್ವತ ಮಲ್ಲೇಶ್ವರ ದೇವಸ್ಥಾನವಿದೆ. ಅಲ್ಲಿಂದ ಸ್ವಲ್ಪ ಕೆಳಗೆ ಮಾತೆ ಚೌಡೇಶ್ವರಿ ದೇವಿಯು ಬೇವಿನ ಮರದ ಬುಡದಲ್ಲಿ ನೆಲೆಸಿದ್ದಾಳೆ. ಗ್ರಾಮದಲ್ಲಿ ವಾಲ್ಮೀಕಿ ಮಂದಿರವಿದೆ. ಜಿಲ್ಲೆಯ ಏಕೈಕ ವಾಲ್ಮೀಕಿ ಮಂದಿರ ಇದಾಗಿದೆ.

ಗ್ರಾಮಸ್ಥರು ಹಾಗೂ ದೇವಸ್ಥಾನ ಸಮಿತಿಯವರ ಪ್ರಯತ್ನದ ಫಲವಾಗಿ ರಂಗನಾಥ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಭಕ್ತರ ದೇಣಿಗೆ ಹಾಗೂ ಜನಪ್ರತಿನಿಧಿಗಳು ಅನುದಾನಗಳ ಫಲವಾಗಿ ದೇವಸ್ಥಾನ ಸುತ್ತ ತಡೆಗೋಡೆ, ಎದುರುಗಡೆ ಅನುಭವ ಮಂಟಪ ನಿರ್ಮಾಣವಾಗಿದೆ. ಈ ವರ್ಷ ಭವ್ಯ ಗೋಪುರ ನಿರ್ಮಾಣವಾಗಿದೆ. ಗುಡ್ಡದ ವಿಶಾಲ ಬಯಲಿನಲ್ಲಿ ಅಡುಗೆ ಮನೆ, ಸಭಾ ಭವನ ನಿರ್ಮಿಸಲಾಗಿದೆ. ಸುಂದರ ಪ್ರಕೃತಿಯ ಸೊಬಗು ಸವಿಯಲು ಉತ್ತಮ ತಾಣ ಇದಾಗಿದೆ.

ಕಾರ್ಯಕ್ರಮಗಳು: ಹೊಸ್ತಲ ಹುಣ್ಣಿಮೆ ದಿನವಾದ ಇದೇ 28ರಂದು ಶ್ರೀರಂಗನಾಥ ಸ್ವಾಮಿಯ ಗಿರಿಯಲ್ಲಿ ರಾಜಗೋಪುರದ ಕಳಸಾರೋಹಣ, ದೀಪಮಾಲೆ ಕಂಬ ಸಮರ್ಪಣೆ ಹಾಗೂ ಸಹಸ್ರ ದೀಪೋತ್ಸವ ವೈಭವದಿಂದ ನಡೆಯುವುದು. ಬೆಳಿಗ್ಗೆ 6ಕ್ಕೆ ಪೂಜೆ, ಅಭಿಷೇಕ ನಡೆಯುವುದು. 7ಕ್ಕೆ ಕಳಸಾರೋಹಣ ಹಾಗೂ ದೀಪಮಾಲೆ ಕಂಬ ಸಮರ್ಪಣೆ ನಡೆಯುವುದು. 9ರಿಂದ ಗಣಪತಿ ಹೋಮ, 4ಕ್ಕೆ ಮೆರವಣಿಗೆ, ರಾತ್ರಿ 8ಕ್ಕೆ ಸಹಸ್ರ ದೀಪೋತ್ಸವ ನಡೆಯುವುದು. ಬ್ಯಾಡಗಿ ತಾಲ್ಲೂಕಿನ ಗುಡ್ಡದ ಮಲ್ಲಾಪುರದ ಮೂಕಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವೀರಯ್ಯ ಶಾಸ್ತ್ರಿ ಅಬಲೂರು ನೇತೃತ್ವದಲ್ಲಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆ ನಡೆಯುವುದು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT