ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಕರ ಮೋಹಕತೆಯ ಝಲಕ್‌

Last Updated 16 ಸೆಪ್ಟೆಂಬರ್ 2013, 7:02 IST
ಅಕ್ಷರ ಗಾತ್ರ

ಬಾನಲ್ಲಿ ಸ್ವಚ್ಛಂದವಾಗಿ ವಿಹರಿಸುವ ರಣಹದ್ದುಗಳನ್ನೇ ನಾಚಿಸುವಂತಿದ್ದ ಪುಟ್ಟ ವಿಮಾನಗಳ ವಯ್ಯಾರದ ಹಾರಾಟ. ಹರಿತವಾದ ಖಡ್ಗಗಳನ್ನು ಹಿಡಿದುಕೊಂಡಿದ್ದ ಜಟ್ಟಿಗಳ ಕಾದಾಟ. ತಾಳ–ಹೆಜ್ಜೆ ಮೇಳದೊಂದಿಗೆ ಲೇಜಿಮ್‌ನ ಝಲಕ್‌. ರಕ್ಷಣಾ ಬ್ಯಾಂಡ್‌ನ ಮೋಹಕತೆ. ಪ್ಯಾರಾ ಮೋಟಾರ್‌ ಗ್ಲೈಡಿಂಗ್‌ ಸಾಹಸ...

ವಿಜಾಪುರ ಸೈನಿಕ ಶಾಲೆಯ ಮೈದಾನದಲ್ಲಿ ಭಾನುವಾರ ನಡೆದ ಅಪರೂಪದ ಈ ಸಾಹಸ ಪ್ರದರ್ಶನ ವೀಕ್ಷಿಸಿದ ಜನತೆಗೆ ಖುಷಿಯೋ ಖುಷಿ. ಈ ಸೈನಿಕ ಶಾಲೆಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೇನಾ ಪಡೆಗಳ ಸಾಹಸ ಮತ್ತು ಕವಾಯತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಭಾನುವಾರ ನಡೆದ ಪ್ರದರ್ಶನದಲ್ಲಿ ಗಮನ ಸೆಳೆದಿದ್ದು ಕೇರಳ ಸಾಂಪ್ರದಾಯಿಕ ಶೈಲಿಯ ‘ಕಲಾರಿಪಯಟ್ಟು’ ನೃತ್ಯ. ಹವಾಲ್ದಾರ್‌ ಉನ್ನಿ ಅವರ ನೇತೃತ್ವದಲ್ಲಿ ಮದ್ರಾಸ್‌ ರೆಜಿಮೆಂಟ್‌ನ ಯೋಧರು ನೀಡಿದ ಈ ಪ್ರದರ್ಶನ ಮೈ ನವಿರೇಳಿಸುವಂತಿತ್ತು. ಕೆಂಪು ಬಣ್ಣದ ಟೀ–ಶರ್ಟ್‌, ಬಿಳಿ ಬಣ್ಣದ ಧೋತಿ ತರಹದ ಚೆಡ್ಡಿ ಧರಿಸಿದ್ದ ಅವರೆಲ್ಲ ತಮ್ಮ ಕೈಯಲ್ಲಿ ಖಡ್ಗ, ಕೋಲು, ಭರ್ಚಿ, ರಕ್ಷಣಾ ಕವಚಗಳನ್ನು ಹಿಡಿದುಕೊಂಡಿದ್ದರು.

ಪರಸ್ಪರ ಕಾದಾಡಿ, ಎದುರಾಳಿಯ ದಾಳಿಯನ್ನು ರಕ್ಷಣಾತ್ಮಕವಾಗಿ ಎದುರಿಸಿ ಆತನನ್ನು ಹಿಮ್ಮೆಟ್ಟಿಸುವ ಅವರ ಕಲಾತ್ಮಕತೆ ಕಂಡು ಜನ ಬೆರಗಾದರು. ಅತ್ಯಂತ ಅಪಾಯಕಾರಿಯಾದ ಈ ಆಟವನ್ನು ಯೋಧರು ಸುಲಲಿತವಾಗಿ ಆಡಿದರು. ಕೊನೆಯಲ್ಲಿ ಇಡೀ ಗುಂಪಿನ ಮೇಲೆ ಯೋಧನೊಬ್ಬ ಏಕಾಂಗಿಯಾಗಿ ಮಾಡಿದ ದಾಳಿ ಮತ್ತು ಅದನ್ನು ಎದುರಿಸಿದ ಬಗೆ ಕೌತುಕವಾಗಿತ್ತು!

ಇದಾದ ನಂತರ ನಡೆದ ಪುಟ್ಟ ಪುಟ್ಟ ವಿಮಾನಗಳ ಹಾರಾಟದ ‘ಏರೋ ಮಾಡ್ಲಿಂಗ್‌’ ಪ್ರದರ್ಶನ ಮಕ್ಕಳಿಗೆ ಮುದ ನೀಡಿತು. ಎನ್‌ಸಿಸಿ ಬೆಳಗಾವಿ ವಿಭಾಗದ ಅರ್ಜುನ್‌ ಬಿಲಾವರ ತಂಡದವರು ಈ ಪುಟ್ಟ ವಿಮಾನಗಳನ್ನು ಹಾರಿಸಿದರು. ‘ರೇಡಿಯೊ ಟ್ರಾನ್ಸ್‌ಮೀಟರ್‌’ನ ನಿಯಂತ್ರಣ ಮತ್ತು ನಿರ್ದೇಶನಕ್ಕೆ ತಕ್ಕಂತೆ  ಬಾನೆತ್ತರಕ್ಕೆ ನೆಗೆಯುತ್ತ, ಕ್ಷಣಾರ್ಧದಲ್ಲಿ ಭೂಮಿಯತ್ತ ಧಾವಿಸಿ, ಮತ್ತೆ ಮೇಲಕ್ಕೆ ಹಾರುತ್ತಿದ್ದ ಆ ವಿಮಾನಗಳು ಮೋಡಿ  ಮಾಡಿದವು.

ಬಾನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ರಣ ಹದ್ದುಗಳು ಈ ಪುಟ್ಟ ವಿಮಾನಗಳ ಹಾರಾಟ ಕಂಡು ಬೆರಗಾದಂತಿದ್ದವು. ತಮಗೇ ಸ್ಪರ್ಧೆ ಒಡ್ಡುವ ಈ ‘ಪಕ್ಷಿ’ಗಳು ಯಾವವು ಎಂದು ತಿಳಿಯಲು ಎಂಬಂತೆ ಕೆಲ ರಣಹದ್ದುಗಳು ಮೈದಾನಕ್ಕೇ ನುಗ್ಗಿ ಬಂದವು.  ಒಂದು ರಣಹದ್ದು ಈ ಪುಟ್ಟ ವಿಮಾನದಂತೆ ಮೈ ಬಳಕಿಸುತ್ತ ಹಾರಾಡಿ ಗಮನ ಸೆಳೆಯಿತು. ಬಿಡಾಡಿ ನಾಯಿಗಳ ಹಿಂಡು ವಿಮಾನವೊಂದರ ಬೆನ್ನಟ್ಟಲು ಯತ್ನಿಸಿದವು.

ಪುಣೆಯ ಮರಾಠಾ ಲೈಟ್‌ ಇನ್‌ಫೆಂಟ್ರಿಯ ಹವಾಲ್ದಾರ್‌ ವಿನಾಯಕ ಜಾಧವ್‌ ನೇತೃತ್ವದ ಲೇಜಿಮ್‌ ತಂಡದವರು ಪ್ರೇಕ್ಷಕರೂ ಮೈ ಬಳಕಿಸುವ ಹಾಗೆ ಪ್ರದರ್ಶನ ನೀಡಿದರು. ಈ ಲೇಜಿಮ್‌ ಪ್ರದರ್ಶನದಲ್ಲಿ ಏಕತಾನತೆ ತಪ್ಪಿಸಲು ಹಲವು ಕಸರತ್ತುಗಳನ್ನು ಅಳವಡಿಸಿಕೊಂಡಿದ್ದರು. ‘ಜೈ ಶಿವಾಜಿ...’ ಎಂದು ಕೂಗುತ್ತ ಪ್ರದರ್ಶನ ಆರಂಭಿಸಿದ ಈ ತಂಡದವರು, ಆಗಾಗ ‘ಹೋಯ್‌..’ ಎಂದು ಕೂಗುತ್ತ ಹೆಜ್ಜೆ ಬದಲಾಯಿಸುತ್ತಿದ್ದರು.

ನವ ದೆಹಲಿಯ ಏರ್‌ ವಾರಿಯರ್‌  ತಂಡದವರು ಏರ್‌ಕ್ರಾಫ್ಟ್‌ಮನ್‌ ಎನ್‌.ಎಸ್‌. ಭಂಡಾರಿ ನೇತೃತ್ವದಲ್ಲಿ ಹಾಗೂ ವಿಶಿಷ್ಟ ಉಡುಗೆ ತೊಟ್ಟಿದ್ದ ಮದ್ರಾಸ್‌ನ ಬ್ಯಾಂಡ್‌ನವರು  ಸುಬೇದಾರ ಚನ್ನಪ್ಪ ಅವರ ನಾಯಕತ್ವದಲ್ಲಿ ಪ್ರದರ್ಶನ ನೀಡಿದರು.

ಪ್ಯಾರಾ ಮೋಟಾರ್‌ ಗ್ಲೈಡಿಂಗ್‌ ಮತ್ತೊಂದು ರೋಮಾಂಚನಕಾರಿ ಪ್ರದರ್ಶನ. ಪುಟ್ಟ ಪ್ಯಾರಾ ಮೋಟಾರ್‌ನಲ್ಲಿ ಕುಳಿತು ಪ್ಯಾರಾಚ್ಯೂಟ್ ಸಹಾಯದಿಂದ ಆಗಸದಲ್ಲಿ ಹಾರಾಟ ನಡೆಸಿದ ಯೋಧರ ಸಾಹಸ ಕಂಡು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಬೆಳಗಾವಿಯ ಮರಾಠಾ ಲೈಟ್‌ ಇನ್ಫೆಂಟ್ರಿಯ ಯೋಧರ ಮಲ್ಲಕಂಬ ಪ್ರದರ್ಶನ ಮೋಡಿ ಮಾಡಿತು. ಸರಸರನೆ ಮಲ್ಲಕಂಬವನ್ನೇರಿ, ನಾನಾ ಬಗೆಯ ಸಾಹಸ ಮಾಡುತ್ತ, ಬಾಯಿಯಿಂದ ‘ಬೆಂಕಿ ಉಗುಳುತ್ತಿದ್ದ’ ಕಸರತ್ತು ನೋಡಿದ ಜನ ಪುಳಕಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT