ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟಿಹಳ್ಳಿ ವೀರಭದ್ರನಿಗೆ ಶಿರಸ್ಸು ಪವಾಡ

Last Updated 7 ಜನವರಿ 2012, 6:20 IST
ಅಕ್ಷರ ಗಾತ್ರ

ರಟ್ಟಿಹಳ್ಳಿ: ಹಿರೇಕೆರೂರ ತಾಲ್ಲೂಕಿನ `ರಟ್ಟಿಹಳ್ಳಿ~ ಗ್ರಾಮ ಹಿಂದೆ `ರಟ್ಟಪಳ್ಳಿ70~ ವಿಭಾಗದ ರಾಜಧಾನಿಯಾಗಿತ್ತು. ಪ್ರಾಚೀನ ದೇವಾಲಯಗಳನ್ನು ಹೊಂದಿರುವ ಈ ಊರಿನ ಪ್ರಮುಖ ದೈವ ವೀರಭದ್ರ. ಅನೇಕರಿಗೆ ಮನೆ ದೇವರಾಗಿ ಈ ವೀರಭದ್ರ ಪೂಜಿಸಲ್ಪಡುತ್ತಿದ್ದಾನೆ.

ಈ ದೇವಾಲಯವು ಸುಮಾರು 13-14ನೇ ಶತಮಾನದಲ್ಲಿ ನಿರ್ಮಾಣ ವಾಗಿರಬಹುದು. ದೇವಾಲಯದ ಒಳ ಭಿತ್ತಿಯ ಮೇಲೆ ವಿಜಯ ನಗರ ಅರಸರ ಕಾಲದಲ್ಲಿ ಬಿಡಿಸಿದ ವರ್ಣ ಚಿತ್ರಗಳಿವೆಯಾದರೂ ಹಾಳಾಗಿವೆ.

ವೀರಭದ್ರನ ಸನ್ನಿಧಿಯಲ್ಲಿ ವೀರವ್ರತ ಸ್ವೀಕರಿಸುವುದು ಪ್ರಾಚೀನ ಕರ್ನಾಟಕದಲ್ಲಿ ಒಂದು ಮೌಲ್ಯವಾಗಿ ಪ್ರಸಾರದಲ್ಲಿತ್ತು. ಅನೇಕ ಸಾಹಿತ್ಯ ಕೃತಿಗಳು, ಶಿಲ್ಪಗಳು ಈ ಸಂಗತಿಯನ್ನು ಸಾಬೀತುಪಡಿಸುತ್ತವೆ.

ಈ ವೀರವ್ರತಧಾರಿಗಳ ಮುಖ್ಯ ಉದ್ದೇಶ ಶಿವಾಲಯದ ಶಿವಭಕ್ತರ ಮತ್ತು ಶೈವ ಧರ್ಮದ ರಕ್ಷಣೆಯಾಗಿತ್ತು. ಹೀಗೆ ರಕ್ಷಿಸಿದ ಘಟನೆಯ ಬಳಿಕ ಆತ್ಮ ಬಲಿದಾನ ನೀಡುತ್ತಿದ್ದರು. ಈ ರೀತಿಯಲ್ಲಿ ವೀರವ್ರತಿಗಳು ಅಸ್ತಿತ್ವಕ್ಕೆ ತಂದ ಪದ್ಧತಿಯೇ ಶಿರಸ್ಸು ಪವಾಡ.

ರಟ್ಟಿಹಳ್ಳಿಯ ವೀರಭದ್ರ ದೇವರ ಎದುರಿಗೆ `ವೀರ ವ್ರತ~ ಹಿಡಿದು ರುಂಡ ಅರ್ಪಿಸಿದ `ಶಿರಸ್ಸು ಪವಾಡ~ ಮಾಡಿರುವುದು ತಿಳಿದು ಬರುತ್ತದೆ. ಈ ಶಿರಸ್ಸು ಪವಾಡಕ್ಕೆ ಬಳಸಿದ ಗಂಡಗತ್ತರಿ ಮೂಲ ರೂಪದಲ್ಲಿ ಈಗಲೂ ದೇವಾಲಯದಲ್ಲಿದೆ. ಅಲ್ಲದೇ ಶಿರಸ್ಸು ಪವಾಡ ಮೆರೆದ ವ್ಯಕ್ತಿಯ ರುಂಡ ಶಿಲ್ಪವನ್ನು ಇಲ್ಲಿ ಇಡಲಾಗಿದ್ದು ಈಗಲೂ ಪೂಜೆಗೊಳ್ಳುತ್ತಿದೆ.

ಇದು ಶಿರಸ್ಸು ಪವಾಡ ಮೆರೆದ ನೆಸ್ವಿ ಗ್ರಾಮದ ಸವೀರ ಬೊಮ್ಮಪ್ಪನ ರುಂಡ ಶಿಲ್ಪವಾಗಿದೆ. ಈ ವೀರ ಬೊಮ್ಮಪ್ಪನ ಮನೆತನದವರನ್ನು ಕುರಿತು ಕೋಗುಂಡಿ ನೀಲಕಂಠಪ್ಪನವರು ತಮ್ಮ `ನೆಸ್ವಿ ವೀರಭದ್ರ ದೇವರ ಚರಿತ್ರೆ~  ( ಶ್ರೀ ಕ್ಷೇತ್ರದ ಮಹಾತ್ಮೆ ಹಾಗೂ ಶರಣರ ಪವಾಡಗಳು) ಎಂಬ ಇತ್ತೀಚಿನ ಗದ್ಯ ಕೃತಿಯಲ್ಲಿ ಮಾಹಿತಿ ನೀಡಿದ್ದಾರೆ.

ಈವೀರ ಬೊಮ್ಮಪ್ಪನ ಮನೆತನದವರು ವಿಶ್ವಕರ್ಮ ಜನಾಂಗಕ್ಕೆ ಸೇರಿದವರಾಗಿದ್ದು ಇಷ್ಟಲಿಂಗವನ್ನು ಧರಿಸುತ್ತಾರೆ. ವೀರಭದ್ರನ ನಿಷ್ಠ ಭಕ್ತರಾಗಿದ್ದಾರೆ. ವೀರ ಬೊಮ್ಮಪ್ಪನ ಪತ್ನಿ ಗೊಗ್ಗ ಗ್ರಾಮದ ವೀರಮ್ಮ ದಂಪತಿಗಳಿಬ್ಬರೂ ರಟ್ಟಿಹಳ್ಳಿಗೆ ಆಗಮಿಸಿ ಕುಮದ್ವತಿ ನದಿಯಲ್ಲಿ ಸ್ನಾನ ಮಾಡಿ ವೀರಭದ್ರನ ದೇವಾಲಯಕ್ಕೆ ಬರುತ್ತಾರೆ. ಬಳಿಕ ವೀರ ಬೊಮ್ಮಪ್ಪನು ತನ್ನ ತಲೆಯನ್ನು ಗಂಡಗತ್ತರಿಯಿಂದ ಕತ್ತರಿಸಿ ವೀರಭದ್ರನಿಗೆ ಅರ್ಪಿಸುತ್ತಾನೆ. ವೀರಮ್ಮ ತನ್ನ ಕರುಳು ಅರ್ಪಿಸುತ್ತಾಳೆ. ವೀರ ಬೊಮ್ಮಪ್ಪನ ರುಂಡದ ಶಿಲ್ಪವನ್ನು ಕೆತ್ತಿಸಿ ವೀರಭದ್ರ ದೇವಾಲಯದಲ್ಲಿಡಲಾಗಿದೆ. ಆ ರುಂಡದ ಶಿಲ್ಪವೇ ಇಂದಿಗೂ ಪೂಜೆಗೊಳ್ಳುತ್ತಿದೆ.

ಈ ಮನೆತನದ ಲಕ್ಕಪ್ಪ ವೀರಭದ್ರನಿಗೆ ತನ್ನ ನಾಲಿಗೆ ಅರ್ಪಿಸಿದರೆ, ಶಿವರಾಯಪ್ಪನು ತನ್ನ ರಟ್ಟೆಯನ್ನು ಸೀಳಿ ಅದರಲ್ಲಿ ತನ್ನ ಇಷ್ಟಲಿಂಗವನ್ನು ಬಂಧಿಸುತ್ತಾನೆ. ಶಿವರುದ್ರಪ್ಪ ಎನ್ನುವವನು ಶಿರಸ್ಸು ಪವಾಡ ಮೆರೆಯಲೆತ್ನಿಸಿದಾಗ ಈ  ಭಾಗದ ಮಾಮಲೆದಾರನು ಅದನ್ನು ತಡೆದನೆಂದು ತಿಳಿದು ಬರುತ್ತದೆ. ವೀರ ಬೊಮ್ಮಪ್ಪನ ಶಿಲ್ಪವು ಮೀಸೆ, ವಿಶಾಲವಾದ ಕಣ್ಣುಗಳನ್ನು ಹೊಂದಿದೆ. ಮುಖದಲ್ಲಿ ವೀರ ತೇಜಸ್ಸಿದೆ. ತಲೆಯಲ್ಲಿ ರುದ್ರಾಕ್ಷಿ ಸರ ಮತ್ತು ರುಮಾಲಿದೆ. ಕೂದಲಿಗೆ ಜಡೆ ಹೆಣೆದು ಹಿಂದಕ್ಕೆ ಕಟ್ಟಲಾಗಿದೆ. ಈ ಜಡೆಯನ್ನು ಶಿಲ್ಪಿ ಸುಂದರವಾಗಿ ಕೆತ್ತಿದ್ದಾನೆ. ಈಗ ಈ ರುಂಡಕ್ಕೆ ಬೆಳ್ಳಿ ಮುಖವಾಡ ಜೋಡಿಸಲಾಗಿದೆ.

ಗಂಡಗತ್ತರಿ: ರಟ್ಟಿಹಳ್ಳಿ ವೀರಭದ್ರ ದೇವಾಲಯದಲ್ಲಿ ಶಿರಸ್ಸು ಪವಾಡ ಮೆರೆಯಲು ಬಳಸಿದ ಗಂಡಗತ್ತರಿ ಅಥವಾ ಚಂದ್ರಾಯುಧ ಈಗಲೂ ಇದೆ. ಈ ಗಂಡಗತ್ತರಿ ಎಂಟು ಅಂಗುಲ ಅಗಲವಿದೆ. ಇದಕ್ಕೆ ಎರಡು ಅಲಗು ಹದಿನಾರು ಅಂಗುಲದ ಸರಪಳಿ ಇದೆ. ಸರಪಳಿಯ ಕೆಳಗೆ ರಿಕಾಪು ( ಕುದುರೆಯ ಮೇಲೆ ಹತ್ತಲು ಪಾದ ಊರಲು ಬಳಸುವಂತಹದ್ದು) ಇದು ಐದು ಅಂಗುಲ ಅಗಲವಿದೆ. ತಲೆ ಹಿಂಭಾಗಕ್ಕೆ ಕತ್ತರಿಯಿಟ್ಟುಕೊಂಡು ಸರಪಳಿಯ ರಿಕಾಪುವಿನಲ್ಲಿ ಪಾದವಿಟ್ಟು ಮೇಲಕ್ಕೆದ್ದರೆ ಶಿರ ತುಂಡಾಗಿ ಬೀಳುತ್ತದೆ. ಇತ್ತೀಚೆಗೆ ಅಣ್ಣಿಗೇರಿಯಲ್ಲಿ ಲಭಿಸಿದ ತಲೆ ಬುರುಡೆಗಳೂ ವೀರವ್ರತಿಗಳಿಗೆ ಸಂಬಂಧಿಸಿವೆ ಎಂಬ ಡಾ. ಎಂ.ಎಂ. ಕಲಬುರ್ಗಿ ಅವರ ಹೇಳಿಕೆ ರಟ್ಟಿಹಳ್ಳಿಯ ಈ ಶಿರಸ್ಸು ಪವಾಡವನ್ನು ಸಮರ್ಥಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT