ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಕಾಳಸಂತೆ ತಡೆಗೆ ಜಾಗೃತ ದಳ

Last Updated 21 ಅಕ್ಟೋಬರ್ 2011, 8:30 IST
ಅಕ್ಷರ ಗಾತ್ರ

ಮಂಗಳೂರು:  ಕೃಷಿ ಚಟುವಟಿಕೆ ಚುರುಕುಗೊಂಡ ಸಂದರ್ಭ, ರೈತರಿಗೆ ರಸಗೊಬ್ಬರ ಅತ್ಯಗತ್ಯವಾಗಿ ಬೇಕಾದ ಸಂದರ್ಭಗಳಲ್ಲಿ ಮುಕ್ತ ಮಾರುಕಟ್ಟೆಯಲ್ಲಿಯೇ ರಾಸಾಯನಿಕ ಗೊಬ್ಬರವನ್ನು ದುಬಾರಿ ದರಕ್ಕೆ ಮಾರಾಟ ಮಾಡುವ `ಕಾಳಸಂತೆ~ ವಹಿವಾಟು ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು, ಇದರ ತಡೆಗಾಗಿ ಜಾಗೃತ ದಳ ರಚಿಸಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ.

ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಎಸ್.ದೇವರಾಜ್ ಪ್ರಸ್ತಾಪಿಸಿದ ರಸಗೊಬ್ಬರ ಕಾಳಸಂತೆ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಜಾಗೃತದಳ ರಚನೆ ವಿಷಯ ಪ್ರಕಟಿಸಿದರು.

ರೈತರಿಗೆ ಅಗತ್ಯ ಇರುವಾಗ ಕೃಷಿ ಸಹಕಾರಿ ಸಂಘಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರವೇ ಇರುವುದಿಲ್ಲ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಮಾತ್ರ ಎಲ್ಲಾ ರೀತಿಯ ಗೊಬ್ಬರಗಳೂ ಸಿಗುತ್ತಿರುತ್ತವೆ. ಮಾರಾಟಗಾರರು ಮನಸ್ಸಿಗೆ ಬಂದಂತೆ ದುಬಾರಿ ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಾ ರೈತರನ್ನು ಶೋಷಣೆ ಮಾಡುತ್ತಾರೆ.

ಹಾಗಿದ್ದರೆ ಸರ್ಕಾರದಿಂದ ಜಿಲ್ಲೆಯ ಸಹಕಾರಿ ಸಂಘಗಳಿಗೆ ರಸಗೊಬ್ಬರ ಬಿಡುಗಡೆ ಆಗುತ್ತಿಲ್ಲವೇ? ಆಗಿದ್ದೇ ಆದರೆ ಆ ರಸಗೊಬ್ಬರವೆಲ್ಲ ಎಲ್ಲಿಗೆ ಹೋಗುತ್ತದೆ? ಎಂದು ದೇವರಾಜ್ ಪ್ರಶ್ನೆಗಳನ್ನು ಸಭೆ ಮುಂದಿಟ್ಟರು.

ಸಭೆಗೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪದ್ಮಯ ನಾಯ್ಕ, `ಜಿಲ್ಲೆಯ ರೈತರಿಗೆ 18 ಸಾವಿರ ಟನ್ ರಸಗೊಬ್ಬರ ಅಗತ್ಯವಿದ್ದು, 15,457 ಟನ್ ಪೂರೈಕೆಯಾಗಿದೆ. ಕೃಷಿ ಸಹಕಾರ ಸಂಘಗಳಿಗೆ ರಸಗೊಬ್ಬರ ತರಿಸಿಕೊಡುವ ಹೊಣೆಗಾರಿಕೆ ಕೃಷಿ ಇಲಾಖೆಗೆ ಇಲ್ಲ.

ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಮಾತ್ರವೇ ಇಲಾಖೆ ಮಧ್ಯಪ್ರವೇಶಿಸುತ್ತದೆ. ಸಿಬ್ಬಂದಿ ಕೊರತೆಯಿಂದ ಈ ಬಗ್ಗೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ~ ಎಂದರು. `ಈಗ ರಸಗೊಬ್ಬರ ಸಿಗದೆ ಬಿಕ್ಕಟ್ಟು ಎದುರಾಗಿದೆ. ನೀವೇನು ಮಾಡುತ್ತಿದ್ದೀರಿ?~ ಎಂದು ದೇವರಾಜ್ ಖಾರವಾಗಿಯೇ ಪ್ರಶ್ನಿಸಿದರು.

ಚನ್ನಪ್ಪ ಕೋಟ್ಯಾನ್, ಸಂತೋಷ್ ಕುಮಾರ್ ರೈ, ಮಮತಾ ಗಟ್ಟಿ, ಎಂ.ಎಸ್.ಮೊಹಮ್ಮದ್, ನವೀನ್ ಕುಮಾರ್ ಮೇನಾಲ ಸೇರಿದಂತೆ ಪಕ್ಷಭೇದ ಮರೆತು ಎಲ್ಲ ಸದಸ್ಯರೂ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಸಿಇಒ ವಿಜಯಪ್ರಕಾಶ್, ಇದೊಂದು ಗಂಭೀರ ವಿಚಾರ. ರೈತರು ಶೋಷಣೆಗೆ ಒಳಗಾಗುವುದನ್ನು ತಡೆಯಲೇಬೇಕು. ಇದಕ್ಕಾಗಿ ಮುಕ್ತ ಮಾರುಕಟ್ಟೆಯಲ್ಲಿ ರಸಗೊಬ್ಬರ ಸರಿಯಾದ ಬೆಲೆಯಲ್ಲಿ ಮಾರಾಟ ಆಗುತ್ತಿದೆಯೇ ಎಂಬುದನ್ನು ಗಮನಿಸುವುದಕ್ಕಾಗಿ ಜಾಗೃತ ದಳ ರಚಿಸಲಾಗುವುದು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೆ, ಜಿಲ್ಲಾಧಿಕಾರಿ ಕಚೇರಿ, ಜಿ.ಪಂ. ಕಚೇರಿ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳನ್ನು ಸಹ ಇದರಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು.

ಜಿಲ್ಲೆಗೆ ಪೂರೈಕೆಯಾದ ರಸಗೊಬ್ಬರ ಮತ್ತು ಸಹಕಾರ ಸಂಘಗಳಿಗೆ ಪೂರೈಕೆಯಾದ ರಸಗೊಬ್ಬರದ ಪೂರ್ಣ ವಿವರವನ್ನು ತಮಗೆ ಒದಗಿಸಬೇಕು ಎಂದು ಜಂಟಿ ನಿರ್ದೇಶಕರಿಗೆ ಸಿಇಒ ಸೂಚಿಸಿದರು.

ಅಡಿಕೆಗೆ ರೋಗ: ಜಿಲ್ಲೆಯ 1,882 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಹಳದಿ ರೋಗ ಬಾಧಿಸಿದ್ದರೆ, 27,668 ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಬಾಧಿಸಿದೆ. ಈ ರೋಗಗಳಿಂದಾಗಿ ಶೇ. 45.5ರಷ್ಟು ಅಡಿಕೆ ಇಳುವರಿ ಕುಂಠಿತವಾಗಿದೆ. ರೈತರಿಗೆ 172 ಕೋಟಿ ರೂಪಾಯಿಗಳ ಪರಿಹಾರದ ಪ್ಯಾಕೇಜ್‌ಗಾಗಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ.

ಮುಖ್ಯಮಂತ್ರಿ ಅವರು ಈಗಾಗಲೇ ಈ ವಿಚಾರದಲ್ಲಿ ವಿಶೇಷ ಆಸಕ್ತಿ ತಳೆದಿದ್ದು, ಸಮೀಕ್ಷೆ ನಡೆಸಲು ಸೂಚಿಸಿದ್ದಾರೆ ಎಂದು ಸಿಇಒ ಅವರು ಸಭೆಗೆ ತಿಳಿಸಿದರು.

ಹಳದಿ ರೋಗ ತೋಟಗಳ ಪುನಶ್ಚೇತನಕ್ಕಾಗಿ ಸರ್ಕಾರದ ಒದಗಿಸಿರುವ 3.25 ಕೋಟಿ ರೂಪಾಯಿ ನೆರವು ಪಡೆದು ಮತ್ತೆ ಅಡಿಕೆ ಬೆಳೆ ಬೆಳೆಯುವುದರಲ್ಲಿ ಅರ್ಥವಿಲ್ಲ, ಬದಲಿಗೆ ಪರ್ಯಾಯ ಬೆಳೆಗಳನ್ನು ಬೆಳೆಸುವ ಬಗ್ಗೆ ರೈತರು ಆಸಕ್ತಿ ತಳೆದಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ನವೀನ್ ಕುಮಾರ್ ಮೇನಾಲ ಹೇಳಿದರು.

ಆಧಾರ್: ಆಧಾರ್ ನೋಂದಣಿ ಕಾರ್ಯದಲ್ಲಿ ಪಿಡಿಒ ಮತ್ತು ಗ್ರಾ.ಪಂ. ಕಾರ್ಯದರ್ಶಿಗಳನ್ನು ಬಳಸಿಕೊಳ್ಳುವುದರಿಂದ ಗ್ರಾ.ಪಂ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ ಎಂಬ ಸದಸ್ಯರ ಕಳಕಳಿಗೆ ಸ್ಪಂದಿಸಿದ ಸಿಇಒ, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ತಿಳಿಸಿದರು.

ವಿಶಿಷ್ಟ ಭೌಗೋಳಿಕ ಗುಣಲಕ್ಷಣ, ಅಧಿಕ ಮಳೆ ಇರುವ ಜಿಲ್ಲೆಗೆ ಪ್ಯಾಕೇಜ್ ಟೆಂಡರ್ ನಿಯಮ ಅನ್ವಯಿಸುವುದು ಸೂಕ್ತವಲ್ಲ ಎಂಬ ಹಲವು ಸದಸ್ಯರ ಒತ್ತಾಯಕ್ಕೆ ಮಣಿದ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ದನ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಇದ್ದರು.
15 ದಿನದೊಳಗೆ ಕಡತ ವಿಲೇವಾರಿ: `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಆಶಯದಂತೆ ಎಲ್ಲಾ ಇಲಾಖೆಗಳಲ್ಲೂ 15 ದಿನಗಳಲ್ಲಿ ಕಡತ ವಿಲೇವಾರಿ ಸಂಕಲ್ಪ ತಮ್ಮದೂ ಆಗಿದೆ. ಅದಕ್ಕೆ ಮುನ್ನಡಿಯಾಗಿ ತಾವೂ ಸಹ ಈ ನಿಯಮ ಪಾಲಿಸತೊಡಗಿದ್ದು, ಸಹಿಗಾಗಿ ಪ್ರತಿ ಅಧಿಕಾರಿಗೂ ಪದೇ ಪದೇ ಕಡತ ಹೋಗುವುದನ್ನು ತಪ್ಪಿಸುವ ಕ್ರಮ ಕೈಗೊಂಡಿದ್ದೇನೆ~ ಎಂದು ಸಿಇಒ ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.

ಟಪಾಲು ಯಾರಿಗೆ ತಲುಪಬೇಕೋ ಅವರಿಗೆ ನೇರವಾಗಿ ಸಿಗುವಂತೆ ನೋಡಿಕೊಂಡಿದ್ದರಿಂದ ಒಂದು ವಾರದಲ್ಲಿಯೇ ಕಡತ ವಿಲೇವಾರಿ ಆಗುತ್ತಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ ಎಂದು ಸಿಇಒ, ಇದೇ ಕ್ರಮವನ್ನು ಇತರೆ ಇಲಾಖೆಗಳಲ್ಲಿಯೂ ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಅವರು ಸಭೆಗೆ ತಿಳಿಸಿದರು.

`ಜಿ.ಪಂ. ಸದಸ್ಯರಿಗೂ ಪಡಿತರ ಚೀಟಿ ಸಮಸ್ಯೆ!~

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದೀಚೆಗೆ ಪಡಿತರ ಚೀಟಿ ನೀಡುತ್ತಿಲ್ಲ. ಎಪಿಎಲ್ ಕಾರ್ಡ್‌ಗಳನ್ನೂ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಎಂದು ಮಮತಾ ಗಟ್ಟಿ ಗಮನ ಸೆಳೆದರು.

ಹೊಸ ಸಾಫ್ಟ್‌ವೇರ್ ಅಭಿವೃದ್ಧಿಗೊಳ್ಳುತ್ತಿರುವುದರಿಂದ ಕಾರ್ಡ್ ನೀಡುವುದು ವಿಳಂಬವಾಗುತ್ತಿದೆ ಎಂಬ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಸಹಾಯಕ ನಿರ್ದೇಶಕಿ ಸವಿತಾ ಅವರು ನೀಡಿದ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ಸಭೆ ಸಿದ್ಧವಿರಲಿಲ್ಲ.

ಎಂ.ಎಸ್.ಮೊಹಮ್ಮದ್, ಸರಸ್ವತಿ ಕಾಮತ್, ಕೇಶವ ಗೌಡ, ಸತೀಶ್ ಕುಂಪಲ, ಆಶಾ ತಿಮ್ಮಪ್ಪ ಗೌಡ ಮತ್ತಿತರರು ಸಹ ಪಡಿತರ ಚೀಟಿ ದೊರೆಯದೆ ಜನರು ಪಡುತ್ತಿರುವ ಕಷ್ಟವನ್ನು ಸಭೆ ಗಮನಕ್ಕೆ ತಂದರು.

`ನನ್ನ ಕಾರ್ಡ್‌ನಲ್ಲಿಯೇ ಮಗಳನ್ನು ಮಗ ಎಂದು ನಮೂದಿಸಿದ್ದಾರೆ. ಅದನ್ನು ಸರಿಪಡಿಸಲು ಕೋರಿ ಅರ್ಜಿ ಸಲ್ಲಿಸಿ ಒಂದೂವರೆ ವರ್ಷವಾದರೂ ಇನ್ನೂ ಸರಿಪಡಿಸಿಕೊಟ್ಟಿಲ್ಲ~ ಎಂದು ಸರಸ್ವತಿ ಕಾಮತ್ ವಿಷಯದ ಗಂಭೀರತೆಯನ್ನು ಸಭೆಗೆ ಮನದಟ್ಟು ಮಾಡಿಸಿದರು.

ಜಿಲ್ಲಾಧಿಕಾರಿ ಅವರಿಗೆ ಈ ವಿಚಾರ ಮನದಟ್ಟು ಮಾಡಿಸಿ ತ್ವರಿತವಾಗಿ ಪಡಿತರ ಚೀಟಿಗಳು ಸಿಗುವಂತೆ ಮತ್ತು ಪಡಿತರ ಚೀಟಿಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಕೋರಲಾಗುವುದು ಎಂದು ಕೊನೆಗೆ ಸಿಇಒ ವಿಜಯಪ್ರಕಾಶ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT