ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಾನಂದದ ನೃತ್ಯೋತ್ಸವ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಅದೊಂದು ದಾಖಲೆ ನೃತ್ಯೋತ್ಸವ. ಪ್ರತಿ ತಿಂಗಳ ಮೊದಲನೆ ತಾರೀಖಿನಂದು ಮಲ್ಲೇಶ್ವರದ ಸೇವಾಸದನ ಸಭಾಂಗಣದಲ್ಲಿ ಯಶಸ್ವಿಯಾಗಿ ಮೂಡಿ ಬರುತ್ತಿರುವ ಸಾಯಿ ನೃತ್ಯೋತ್ಸವದ 25ನೆಯ ಕಾರ್ಯಕ್ರಮ ರಸಾನಂದ ನೀಡಿತು.

ಶ್ರೀ ಸಾಯಿ ಕಲಾಕೇಂದ್ರವು ಈ ಮೂಲಕ 125ಕ್ಕೂ ಹೆಚ್ಚಿನ ತಂಡಗಳ 500ಕ್ಕೂ ಹೆಚ್ಚಿನ ನೃತ್ಯ ಕಲಾವಿದರಿಗೆ ವೇದಿಕೆ ಒದಗಿಸಿದೆ. ಶಾಸ್ತ್ರೀಯ ನೃತ್ಯ ಮತ್ತು ನೃತ್ಯಗಾರರಿಗೆ ಅತ್ಯವಶ್ಯಕವಾದ ಪ್ರೋತ್ಸಾಹ ನೀಡಿದೆ.

ಅದಕ್ಕಾಗಿ ಇದರ ರೂವಾರಿಗಳಾದ ಧ್ವನಿ ಮತ್ತು ಬೆಳಕು ತಜ್ಞ, ರಂಗ ಪರಿಣತ, ಛಾಯಾಗ್ರಾಹಕ ಸಾಯಿ ವೆಂಕಟೇಶ್ ಮತ್ತು ಅವರ ನೃತ್ಯಪಟು ಪತ್ನಿ ಡಾ. ಸುಪರ್ಣಾ ವೆಂಕಟೇಶ್ ಅಭಿನಂದನೀಯರು.

ಸಾಯಿ ನೃತ್ಯೋತ್ಸವ ಸರಣಿ 25ರಲ್ಲಿ ಐದೂ ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ಅವಕಾಶವಿತ್ತು. ಯುವ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರ ಉತ್ಸಾಹ ಮತ್ತು ಬಹುತೇಕ ಕಳಂಕರಹಿತ ಕಲೆ ರಂಜಿಸಿತು.

ಭರತನಾಟ್ಯ, ಒಡಿಸ್ಸಿ, ಕಥಕ್, ಮೋಹಿನಿಆಟ್ಟಂ ಮತ್ತು ಕೂಚಿಪುಡಿ ನಾಟ್ಯದ ಸೂಕ್ಷ್ಮ ವಿವರಗಳೂ ಸೂಕ್ತವಾಗಿ ಪ್ರಕಟಗೊಂಡಿದ್ದು ರಸಾನಂದದಾಯಕ. ಒಂದರೆಡು ಸಂದರ್ಭಗಳನ್ನು ಹೊರತುಪಡಿಸಿ ನೃತ್ಯಕ್ಕೆ ಬಳಸಲಾದ ಧ್ವನಿಮುದ್ರಿತ ಸಂಗೀತ ಪರಿಣಾಮಕಾರಿಯಾಗಿತ್ತು.

ಅಂದಿನ ಮೊದಲ ಕಾರ್ಯಕ್ರಮ ಡಾ.ಸುಪರ್ಣಾ ಅವರ ಶಿಷ್ಯರ ಭರತನಾಟ್ಯ. ಶ್ವೇತಾ ವೆಂಕಟೇಶ್, ಶಂಖಾ, ಕಾವ್ಯಶ್ರಿ, ನಿಶಾ ಮತ್ತು ನಿಶಾಂತ್ ತಮ್ಮ ಗುರುಗಳ ಹಿರಿಮೆಯನ್ನು ಹೆಚ್ಚಿಸುವಂತಹ ರೀತಿಯಲ್ಲಿ ತಿಲ್ಲಾನವನ್ನು ಮಂಡಿಸಿದರು.

ವೇದಿಕೆಯನ್ನು ಕಲಾತ್ಮಕ ಮಾದರಿಗಳಲ್ಲಿ ಆವರಿಸಿಕೊಂಡು ವೈವಿಧ್ಯದ ಮತ್ತು ಪರಸ್ಪರ ಸೊಗಸಾಗಿ ಹೊಂದಿದಂತಹ ಅಡುವುಗಳನ್ನು ಅವರು ನಿರೂಪಿಸಿದರು.

ಸೊಗಸಿನ ನವರಸಾಂಜಲಿ
ಸುಪ್ರಸಿದ್ಧ ಮೋಹಿನಿಆಟ್ಟಂ ಗುರು ಶ್ರೀದೇವೀಉನ್ನಿ ಅವರ ಶಿಷ್ಯೆಯರಾದ ವಿನಯಾ, ಬಿಂದು, ಅಮೃತಾ, ದೀಪ್ತಿ ಮತ್ತು ಮಾಯಾ ಅವರು ನವರಸಾಂಜಲಿಯಲ್ಲಿ ನವರಸ (ರಾಗಮಾಲಿಕೆ)ಗಳನ್ನು ಅಭಿವ್ಯಕ್ತಗೊಳಿಸುವಾಗ ಸುಂದರ ಬಾಗು, ಬಳುಕುಗಳು ಮತ್ತು ವಿಳಂಬ ಲಯದ ಸೊಗಸಿನ ದೇಹ ಮತ್ತು ಪಾದ ಚಲನೆಗಳು ಹಾಗೂ ಸಾರ್ಥಕ ಮುಖಾಭಿನಯವನ್ನು ಪ್ರದರ್ಶಿಸಿದರು. ಜಯದೇವನ  ಚಂದನ ಚರ್ಚಿತ  ಅಷ್ಟಪದಿ (ಯಮನ್ ಕಲ್ಯಾಣಿ) ಆಕರ್ಷಿಸಿತು.

ನೃತ್ಯ ಸಂಯೋಜನಾ ಕೌಶಲ್ಯ
ಉತ್ಕೃಷ್ಟ ತಾಂತ್ರಿಕತೆ, ನಾಜೂಕಿನ ತ್ರಿಭಂಗ ಮತ್ತು ಚೌಕಗಳನ್ನು ಉಪಯೋಗಿಸಿಕೊಂಡು ನುರಿತ ನರ್ತಕಿ ಶರ್ಮಿಳಾ ಮುಖರ್ಜಿ ಅವರ ಶಿಷ್ಯೆಯರಾದ ಪೃಥ್ವಿ ಮತ್ತು ಮಾಯಾ ಅವರು ತಮ್ಮ ಗುರುಗಳ ನೃತ್ಯ ಸಂಯೋಜನಾ ಕೌಶಲ್ಯವನ್ನು ಮೆರೆದರು. 

`ಶ್ರಿತಕಮಲಾ ಕುಚಮಂಡಲ~ (ಮಿಶ್ರಖಮಾಚ್, ಆದರೆ ಕಾರ್ಯಕ್ರಮ ನಿರೂಪಕರು ಅದನ್ನು ತಪ್ಪಾಗಿ ಓದಿದರು) ಅಷ್ಟಪದಿಯನ್ನು ಸುಲಲಿತವಾಗಿ ಪ್ರದರ್ಶಿಸುತ್ತಾ `ಮಧುಮುರ ನರಕಾಸುರ, ರಾವಣ ಹತ್ಯೆ, ಕಾಳಿಂಗ ಮರ್ದನ, ಗರುಡವಾಹನ~ ಸನ್ನಿವೇಶಗಳನ್ನು ತಮ್ಮ ಅರ್ಥಪೂರ್ಣ ಅಭಿನಯದಲ್ಲಿ ಪ್ರಕಟಪಡಿಸಿದರು.

ಉಪೇಂದ್ರಭಾಂಜಾ ಅವರ ಒರಿಯಾ ಪದ್ಯದ (ಮಲ್ಲಿ ಮಾಲಾ) ಆಧಾರದ ಮೇಲೆ ಕೃಷ್ಣನ ಕುರಿತಾದ ಗೋಪಿಯ ಪ್ರೇಮವನ್ನು ವಿಶದಪಡಿಸಲಾಯಿತು. ನೃತ್ತ ಮತ್ತು ದೇವಿಯ ವಿವಿಧ ರೂಪದರ್ಶನದಿಂದ ಕಡೆಯ  ಮೋಕ್ಷ  ಬಂಧ ಕಂಗೊಳಿಸಿತು.

ಮಿಂಚಿದ ಲಯಗಾರಿಕೆ

ಶ್ವೇತಾ ವೆಂಕಟೇಶ್, ಶಮಿತಾ, ಕಾವ್ಯಶ್ರಿ ಮತ್ತು ನಿಶಾಂತ್ ಅವರ ಕಥಕ್ ಪ್ರದರ್ಶನದಲ್ಲಿ ಕಥಕ್‌ನ ಲಯಗಾರಿಕೆ ಮತ್ತು ತಂತ್ರಗಾರಿಕೆ ಮಿಂಚಿತು. ನಾಗರಾಜ್ ಅವರ ಶಿಷ್ಯೆಯರಾದ ಈ ನರ್ತಕರು ತಮ್ಮ ಪಾದಕ್ರಿಯೆ, ದೇಹಚಲನೆಗಳು ಮತ್ತು ಉತ್ತಮ ಅಭಿನಯದಿಂದ ವಿಷ್ಣು ವಂದನೆಯನ್ನು ಸಾಕಾರಗೊಳಿಸಿದರು.
 
ಮಹಾರಾಜ ಬಿಂದಾದಿನ್ ಅವರ ಕೃತಿಯನ್ನು ಆಧರಿಸಿ ಕೃಷ್ಣನನ್ನು ಮತ್ತು ತುಳಸೀದಾಸರ ರಚನೆಯ ಮೂಲಕ ಶಿವನನ್ನು ಸ್ತುತಿಸಿದರು. ನಟರಾಜ ಸ್ತುತಿಯಲ್ಲಿ ಪ್ರತಿಪಾದನಾ ಶುದ್ಧತೆ ಮತ್ತು ಬದ್ಧತೆಗಳು ಎದ್ದುಕಂಡವು.

ಪರಿಷ್ಕೃತ ಅಭಿನಯ
ಕ್ರಿಯಾಶೀಲ ದೇಹ ಭಾಷೆ, ಮುಖಚರ್ಯೆಗಳು ಹಾಗೂ ಉದ್ದಕ್ಕೂ ಗೋಚರಿಸಿದ ವಾಚಿಕಾಭಿನಯ ಅಂದಿನ ಕಡೆಯ ಕೂಚಿಪುಡಿ ನಾಟ್ಯ ಕಾರ್ಯಕ್ರಮವನ್ನು ಅಲಂಕರಿಸಿತು. ಗುರು ಧರಣೀ ಕಶ್ಯಪ್ ಅವರೇ ಸ್ವತಃ ಕೃಷ್ಣ ಪಾತ್ರಧಾರಿಯಾಗಿ ಪ್ರದರ್ಶನವನ್ನು ಮುನ್ನಡೆಸಿದುದು ವಿಶೇಷ. ಅಣ್ಣಮಾಚಾರ್ಯರ ಕೃತಿ (ಅದಿಗೋ ಅಲ್ಲದಿಗೋ) ಪರಿಷ್ಕೃತ ಅಭಿನಯದಿಂದ ಜೀವಂತಗೊಂಡಿತು.

ಅರ್ಚನಾ ಪುಣ್ಯೇಶ್ ಅವರೊಂದಿಗೆ ಹಿತ್ತಾಳೆ ತಟ್ಟೆಯ ಮೇಲೆ ಕ್ಲಿಷ್ಟ ಲಯಮಾದರಿಗಳನ್ನು, ಕೃಷ್ಣನನ್ನು ಕುರಿತಾದ ತರಂಗದಲ್ಲಿ ಕಡೆದದ್ದು ಚೇತೋಹಾರಿ ಅನುಭವ ನೀಡಿತು. ಕೊನೆಯಲ್ಲಿ ಅವರೊಡನೆ ಮೂರು ನರ್ತಕಿಯರೂ  ಸೇರಿ ನಯನ ಮನೋಹರ ನೃತ್ತದಲ್ಲಿ ಬೆಳಗಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT