ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ತಡೆದು ಮಹಿಳೆಯರ ಪ್ರತಿಭಟನೆ

ಕೆಸರು ಗದ್ದೆಯಾದ ರಸ್ತೆ ದುರಸ್ತಿಗೆ ಒತ್ತಾಯ
Last Updated 7 ಜುಲೈ 2013, 12:16 IST
ಅಕ್ಷರ ಗಾತ್ರ

ಹಾವೇರಿ: ಕೆಸರು ಗದ್ದೆಯಂತಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಪುರದ ಓಣಿಯ ನಾಗರಿಕರು ರಸ್ತೆಗೆ ಕಲ್ಲುಗಳನ್ನಿಟ್ಟು ಶನಿವಾರ ಪ್ರತಿಭಟನೆ ನಡೆಸಿದರು.

ಪುರದ ಓಣಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಕಟ್ಟಿ, ಕಲ್ಲುಗಳನ್ನಿಟ್ಟು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿದರಲ್ಲದೇ, ರಸ್ತೆ ದುರಸ್ತಿ ಹಾಗೂ ಗಟಾರು ಸ್ವಚ್ಛಗೊಳಿಸದ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಓಣಿಯ ನಿವಾಸಿ ಲಕ್ಷ್ಮಕ್ಕ ದೇವಿಹೊಸೂರು ಮಾತನಾಡಿ, ಕಳೆದ ಎರಡ್ಮೂರು ವರ್ಷಗಳಿಂದ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಅದನ್ನು ಈವರೆಗೆ ಡಾಂಬರು ಮಾಡಲಾಗಿಲ್ಲ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗುತ್ತವೆ. ಮಕ್ಕಳು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೂ, ನಗರಸಭೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಮಳೆಗಾಲದಲ್ಲಿಯೂ ಇದೇ ಪರಿಸ್ಥಿತಿಯಾಗಿತ್ತು. ಹಲವಾರು ಮಕ್ಕಳು, ವೃದ್ದರು ರಸ್ತೆಯಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿದ್ದಾರಲ್ಲದೇ, ಅನೇಕ ದ್ವಿಚಕ್ರವಾಹನ ಸವಾರರು ಸ್ಕಿಡ್‌ಆಗಿ ಬಿದ್ದು ಗಾಯಗೊಂಡಿದ್ದಾರೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂದು ಆಪಾದಿಸಿದರು.

ಹಿಂದಿನ ವರ್ಷದಿಂದಲೇ ನಗರಸಭೆ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ರಸ್ತೆ ದುರಸ್ತಿ ಮಾಡಿಸಿ, ಡಾಂಬರ್ ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯದ ಸಮಸ್ಯೆ ತಾಳಿಕೊಳ್ಳಲಾಗದೇ ಅನಿವಾರ್ಯವಾಗಿ ಪ್ರತಿಭಟನೆಗಿಳಿದಿದ್ದೇವೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳ ಜೊತೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಈಗಲೇ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ತಾತ್ಕಾಲಿಕವಾಗಿ ಕೆಸರು ನಿಲ್ಲದಂತೆ ವ್ಯವಸ್ಥೆ ಮಾಡಲಾಗುತ್ತದೆ. ಗಟಾರು ಸ್ವಚ್ಛ ಮಾಡುವ ಭರವಸೆ ನೀಡಿದರಲ್ಲದೇ, ಮಳೆಗಾಲ ಮುಗಿದ ನಂತರ ರಸ್ತೆ ದುರಸ್ತಿಯ ಜತೆಗೆ ಡಾಂಬರ್ ಮಾಡುವ ಭರವಸೆ ನೀಡಿದರು.

ನಗರಸಭೆ ನೂತನ ಸದಸ್ಯ ಕರಬಸಪ್ಪ ಹಳದೂರ ಸೇರಿದಂತೆ ಓಣಿಯ ಮಹಿಳೆಯರಾದ ಅನ್ನಪೂರ್ಣ, ರತ್ನಕ್ಕ, ಲಲಿತಾ ಕಳ್ಳಿ, ಮಹಾದೇವಿ ಮಡ್ಲಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT