ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ತುಂಬ ಗುಂಡಿಗಳು...

Last Updated 16 ಏಪ್ರಿಲ್ 2011, 7:05 IST
ಅಕ್ಷರ ಗಾತ್ರ

ಸಕಲೇಶಪುರ: ಪಶ್ಚಿಮಘಟ್ಟದ ಪ್ರವಾಸಿ ತಾಣಗಳಲ್ಲಿ ಒಂದಾದ ಬಿಸಿಲೆ ರಕ್ಷಿತ ಅರಣ್ಯ ಹಾಗೂ ಕುಕ್ಕೆ ಸುಬ್ರಹ್ಮಣಕ್ಕೆ ಪಟ್ಟಣದಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ದೋಣಿಗಾಲ್‌ನಿಂದ ಸುಬ್ರಮಣ್ಯವರೆಗೆ ಸುಮಾರು 73 ಕಿ.ಮೀ. ಉದ್ದವಿರುವ ಈ ರಸ್ತೆಯಲ್ಲಿ ಮೂರು ರಾಜ್ಯ ಹೆದ್ದಾರಿಗಳು ಒಳಪಡುತ್ತವೆ. ದೋಣಿಗಾಲ್-ಬ್ಯಾಕರವಳ್ಳಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಗೆ, ಬ್ಯಾಕರವಳ್ಳಿ-ವಣಗೂರು ಜನ್ನಾಪುರ-ವಣಗೂರು ರಾಜ್ಯ ಹೆದ್ದಾರಿಗೂ, ವಣಗೂರು-ಸುಬ್ರಹ್ಮಣ್ಯ ನಡುವೆ ಬೆಂಗಳೂರು-ಜಾಲ್‌ಸೂರು ರಾಜ್ಯ ಹೆದ್ದಾರಿಗೆ ಒಳಪಡುತ್ತದೆ. ಹೆಸರಿಗೆ ಮೂರು ರಾಜ್ಯ ಹೆದ್ದಾರಿಯನ್ನು ಒಳಗೊಂಡಿದ್ದರೂ ಸಹ ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದಕ್ಕೆ ಮಾತ್ರ ಸಾಧ್ಯವಿಲ್ಲ.

ಬ್ಯಾಕರವಳ್ಳಿಯಿಂದ ಸುಬ್ರಹ್ಮಣ್ಯದ ವರೆಗೆ ರಸ್ತೆಯ ಉದ್ದಕ್ಕೂ ಗುಂಡಿಗಳು ಬಾಯ್ತೆರೆದುಕೊಂಡಿವೆ. ವಣಗೂರಿನಿಂದ ಜಿಲ್ಲೆಯ ಗಡಿಭಾಗದ ಬಿಸಿಲೆ ವರೆಗೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ 20 ಕೋಟಿ ರೂಪಾಯಿಗಳ ಪ್ರಸ್ತಾವ ಸಲ್ಲಿಸಿ ಎರಡು ವರ್ಷಗಳು ಕಳೆದಿದ್ದು, ರಸ್ತೆ ಅಭಿವೃದ್ಧಿ ಇರಲಿ ಗುಂಡಿ ಮುಚ್ಚುವ ಕೆಲಸ ಕೂಡ ಆಗಿಲ್ಲ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹೊರನಾಡು-ಸುಬ್ರಹ್ಮಣ್ಯ ನಡುವೆ 180 ಕಿ.ಮೀ. ರಸ್ತೆಯನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿವ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತು, ಟೆಂಡರ್ ಹಂತಕ್ಕೆ ತಲುಪಿತ್ತು. ನಂತರ ಬಂದ ಬಿ.ಎಸ್.ಯಡಿಯೂರಪ್ಪ ಸರ್ಕಾರ ಈ ಯೋಜನೆಯನ್ನೇ ರದ್ದುಗೊಳಿಸಿದ್ದರಿಂದ ರಸ್ತೆ ಪುನಃ ನೆನೆಗುದಿಗೆ ಬಿತ್ತು.

ಬಿಸಿಲೆ ಬ್ಯೂಟಿ ಸ್ಪಾಟ್, ರಕ್ಷಿತ ಅರಣ್ಯ, ಅಬ್ಬಿ ಪಾಲ್ಸ್, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು,  ಸರ್ಕಾರ ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವುದು ಅಗತ್ಯವಾಗಿದೆ.
                       
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT