ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪಾಲ್‌, ರಾಮ್ದಿನ್‌ ಮಿಂಚು

ಟ್ರಿನಿಡಾಡ್‌ಗೆ ಮಣಿದ ಬ್ರಿಸ್ಬೇನ್‌ ಹೀಟ್‌
Last Updated 22 ಸೆಪ್ಟೆಂಬರ್ 2013, 19:30 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ರವಿ ರಾಂಪಾಲ್‌ (14ಕ್ಕೆ 4) ತೋರಿದ ಪ್ರಭಾವಿ ಬೌಲಿಂಗ್‌ ಹಾಗೂ ದಿನೇಶ್‌ ರಾಮ್ದಿನ್‌ (48) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನು­ವಾರ ನಡೆದ ಪಂದ್ಯದಲ್ಲಿ ಟ್ರಿನಿಡಾಡ್‌ ತಂಡ 25 ರನ್‌ಗಳಿಂದ ಆಸ್ಟ್ರೇಲಿಯದ ಬ್ರಿಸ್ಬೇನ್‌ ಹೀಟ್‌ ವಿರುದ್ಧ ಜಯ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಟ್ರಿನಿಡಾಡ್‌ 9 ವಿಕೆಟ್‌ಗೆ 135 ರನ್‌ ಪೇರಿಸಿದರೆ, ಎದುರಾಳಿ ತಂಡ 18.4 ಓವರ್‌ಗಳಲ್ಲಿ 110 ರನ್‌ಗಳಿಗೆ ಆಲೌಟಾಯಿತು.

ಟಾಸ್‌ ಗೆದ್ದ ಬ್ರಿಸ್ಬೇನ್‌ ತಂಡದ ನಾಯಕ ಜೇಮ್ಸ್‌ ಹೋಪ್ಸ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಟ್ರಿನಿಡಾಡ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. 38 ರನ್‌ಗಳಿಗೆ ಮೂರು ವಿಕೆಟ್‌ಗಳು ಬಿದ್ದವು.

ರಾಮ್ದಿನ್‌ ತೋರಿದ ಉತ್ತಮ ಆಟದ ನೆರವಿನಿಂದ ತಂಡದ ಮೊತ್ತ 100 ರನ್‌ಗಳ ಗಡಿ ದಾಟಿತು. 38 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. 37 ರನ್‌ಗಳಿಗೆ 4 ವಿಕೆಟ್‌ ಪಡೆದ ಅಲಿಸ್ಟರ್ ಮೆಕ್‌ಡರ್ಮಟ್‌ ಬ್ರಿಸ್ಬೇನ್‌ ಪರ ಮಿಂಚಿದರು.

ಸಾಧಾರಣ ಗುರಿ ಬೆನ್ನಟ್ಟಿದ ಬ್ರಿಸ್ಬೇನ್ ಒಂದು ಹಂತದಲ್ಲಿ ಎರಡು ವಿಕೆಟ್‌ಗೆ 76 ರನ್‌ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ 14 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದ ರಾಂಪಾಲ್‌ ಈ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು.

ಜೋ ಬರ್ನ್ಸ್‌ 45 (43 ಎಸೆತ, 2 ಬೌಂ, 2 ಸಿಕ್ಸರ್‌) ಉತ್ತಮ ಆಟವಾಡಿ ದರೂ, ಅವರಿಗೆ ಇತರ ಬ್ಯಾಟ್ಸ್‌ಮನ್‌ ಗಳಿಂದ ಬೆಂಬಲ ಲಭಿಸಲಿಲ್ಲ.

ರಾಂಪಾಲ್‌ಗೆ ತಕ್ಕ ಸಾಥ್‌ ನೀಡಿದ ರಯಾದ್‌ ಎಮ್ರಿತ್‌ ಹಾಗೂ ಸುನಿಲ್‌ ನಾರಾಯಣ್‌ ತಲಾ ಎರಡು ವಿಕೆಟ್‌ ಪಡೆದರು. ಸ್ಯಾಮುಯೆಲ್‌ ಬದ್ರಿ ನಾಲ್ಕು ಓವರ್‌ಗಳಲ್ಲಿ ಕೇವಲ 16 ರನ್‌ ಬಿಟ್ಟುಕೊಟ್ಟು ಒಂದು ವಿಕೆಟ್‌ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 135 (ಲೆಂಡ್ಲ್‌ ಸಿಮನ್ಸ್‌ 14, ಎವಿನ್‌ ಲೆವಿಸ್‌ 19, ದಿನೇಶ್‌ ರಾಮ್ದಿನ್‌ 48, ಅಲಿಸ್ಟರ್‌ ಮೆಕ್‌ಡರ್ಮಟ್‌ 37ಕ್ಕೆ 4, ನಥಾನ್‌ ಹೌರಿಟ್ಜ್‌ 22ಕ್ಕೆ 2) ಬ್ರಿಸ್ಬೇನ್‌ ಹೀಟ್‌: 18.4 ಓವರ್‌ಗಳಲ್ಲಿ 110 (ಜೋ ಬರ್ನ್ಸ್‌ 45, ಬೆನ್‌ ಕಟಿಂಗ್‌ 17, ರವಿ ರಾಂಪಾಲ್‌ 14ಕ್ಕೆ 4, ರಯಾದ್‌ ಎಮ್ರಿತ್‌ 26ಕ್ಕೆ 2, ಸುನಿಲ್‌ ನಾರಾಯಣ್‌ 25ಕ್ಕೆ 2) ಫಲಿತಾಂಶ: ಟ್ರಿನಿಡಾಡ್‌ಗೆ 25 ರನ್‌ ಗೆಲುವು, ಪಂದ್ಯಶ್ರೇಷ್ಠ: ದಿನೇಶ್‌ ರಾಮ್ದಿನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT