ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರ ಗದ್ದಿಗೆ ಬಾಗಿಲಿಗೆ ಕಿಡಿಗೇಡಿಗಳಿಂದ ಬೆಂಕಿ

Last Updated 22 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಅಬ್ಬಿಫಾಲ್ಸ್ ರಸ್ತೆಯಲ್ಲಿರುವ ಐತಿಹಾಸಿಕ ರಾಜರ ಗದ್ದಿಗೆಯ ದ್ವಾರವೊಂದಕ್ಕೆ ಕಿಡಿಗೇಡಿಗಳು ಮಂಗಳವಾರ ಬೆಳಗಿನ ಜಾಗ ಬೆಂಕಿ ಹಚ್ಚಿದ್ದು, ಬಾಗಿಲು ಬಹುತೇಕ ಬೆಂಕಿಗೆ ಆಹುತಿಯಾಗಿದೆ.

ಪಂಚಲೋಹದ ಮೊಳೆ ಹಾಗೂ ತೇಗದ ಮರ ಬಳಸಿ ನಿರ್ಮಿಸಿರುವ ಬಾಗಿಲಿಗೆ ಕಿಡಿಗೇಡಿಗಳು ರಾತ್ರಿ ಕಾವಲುಗಾರನಿಲ್ಲದ ಸಮಯ ಸಾಧಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬಹುಶಃ ಬೆಳಗಿನ ಜಾವ 4 ಗಂಟೆ ನಂತರ ಕಿಡಿಗೇಡಿಗಳು ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಗಲು ಪಾಳಿಯಲ್ಲಿ ಕೆಲಸ ನಿರ್ವಹಿಸುವ ಪುರಾತತ್ವ ಇಲಾಖೆಯ ಕಾವಲುಗಾರ ಸುಧಾಕರ್ ಎಂಬುವರು ಬೆಳಿಗ್ಗೆ 6.30ಕ್ಕೆ ಸ್ಥಳಕ್ಕೆ ತೆರಳಿದಾಗ ಗದ್ದಿಗೆ ಬಾಗಿಲು ಇನ್ನೂ ಉರಿಯುತ್ತಲೇ ಇತ್ತು. ಕೂಡಲೇ ಗದ್ದಿಗೆಯಲ್ಲಿ ಪೂಜೆ ಮಾಡುವ ಸೀತಾರಾಂ ಎಂಬುವರಿಗೆ ಸುದ್ದಿ ತಿಳಿಸಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲಾಯಿತು.

ಕಳೆದ 19ರಂದು ಕೂಡ ಕಿಡಿಗೇಡಿಗಳು ಬಾಗಿಲು ಒಡೆಯುವ ವಿಫಲ ಯತ್ನ ನಡೆಸಿದ್ದರು ಎನ್ನಲಾಗಿದೆ. ಬಾಗಿಲು  ಬಹುತೇಕ ಬೆಂಕಿಗೆ ಆಹುತಿಯಾಗಿರುವುದರಿಂದ ಪಂಚಲೋಹದ ಮೊಳೆಗಳು ಕಳಚಿ ಬಿದ್ದಿವೆ. 1820ರಲ್ಲಿ ಚಿಕ್ಕವೀರರಾಜೇಂದ್ರ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿದ ಲಿಂಗರಾಜೇಂದ್ರ ಹಾಗೂ ದೇವಮ್ಮಾಜಿ ಸಮಾಧಿಗಳಿರುವ ಈ ಗದ್ದಿಗೆ ಬಹಳ ವರ್ಷಗಳಿಂದ ಇಲಾಖೆಯ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ಇತ್ತೀಚಿನ ವರ್ಷಗಳಂತೂ ಈ ಗದ್ದಿಗೆ ಹೇಳುವವರು- ಕೇಳುವವರೇ ಇಲ್ಲದೆ ಅನಾಥ ಸ್ಥಿತಿಯಲ್ಲಿದ್ದು, ಪುಂಡರ ತಾಣವಾಗಿ ಮಾರ್ಪಟ್ಟಿದೆ.

ಸುದ್ದಿ ತಿಳಿದ ತಕ್ಷಣ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದರು. ಫೆ. 24ರಂದು ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಎರಡು ದಿನ ಮುನ್ನ ಈ ಘಟನೆ ನಡೆದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಹಿಂದೂಪರ ಸಂಘಟನೆಗಳ ಮುಖಂಡರು ಐಜಿಪಿಗೆ ಮನವಿ ಪತ್ರ ಸಲ್ಲಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪುರಾತತ್ವ ಇಲಾಖೆಯ ಕ್ಯುರೇಟರ್ ಬಿ.ಪಿ. ರೇಖಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರಿನ ಪುರಾತತ್ವ ಇಲಾಖೆಯ ಸಹಾಯಕ ಎಂಜಿನಿಯರ್‌ಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT