ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ನೀಡಿ ಜನರ ಬಳಿ ಹೋಗಲಿ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉಡುಪಿ: `ರಾಜ್ಯದ ಬಿಜೆಪಿ ಸರ್ಕಾರ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಸಂಪುಟದಲ್ಲಿ ಶೇ 80 ರಷ್ಟು ಸಚಿವರು ಕಳಂಕಿತರಾಗಿದ್ದು, ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಿ ಜನರ ಬಳಿ ಹೋಗಬೇಕು~ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಆಗ್ರಹಿಸಿದರು.

ಇಲ್ಲಿನ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಬಗ್ಗೆ ಸೋಮವಾರ ರಾಜ್ಯಪಾಲರಿಗೆ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಿದ್ದೇವೆ ಎಂದರು.

`ಸಚಿವ ಸಂಪುಟದಲ್ಲಿ 14 ಮಂದಿ ಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿನಲ್ಲಿದ್ದಾರೆ.

ಮಾಜಿ ಸಚಿವ ಹಾಲಪ್ಪ ಜೈಲಿಗೆ ಹೋಗಿ ಬಂದವರು. ಮಾಜಿ ಸಚಿವ ಶ್ರೀರಾಮುಲು, ಕರುಣಾಕರ ರೆಡ್ಡಿ, ಸಚಿವ ಸೋಮಣ್ಣ, ರೇಣುಕಾಚಾರ್ಯ, ಆರ್.ಅಶೋಕ್, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್, ಆನಂದ ಅಸ್ನೋಟಿಕರ್, ಕೆ.ಎಸ್.ಈಶ್ವರಪ್ಪ ಅವರ ಮೇಲೂ ಪ್ರಕರಣಗಳಿವೆ. ಇಡೀ ಸಂಪುಟದಲ್ಲಿ ಒಂದಿಬ್ಬರು ಸಚಿವರನ್ನು ಬಿಟ್ಟರೆ ಉಳಿದವರೆಲ್ಲ ಕಳಂಕಿತರು~ ಎಂದು ಅವರು ಆರೋಪಿಸಿದರು.

`ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ನೈತಿಕತೆ ಇದ್ದರೆ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿದ್ದರೆ ಅವರು ಕೂಡಲೇ ರಾಜೀನಾಮೆ ನೀಡಬೇಕು~ ಎಂದರು.

`ಯಡಿಯೂರಪ್ಪ ಅವರ ಆಶೀರ್ವಾದ, ಆದರ್ಶದ ಮೇಲೆ ನಡೆಯುತ್ತಿರುವ ಡಿ.ವಿ.ಸದಾನಂದ ಅವರು ಮಾತ್ರ ಜೈಲಿಗೆ ಹೋಗದೇ ಇರಲಿ~ ಎಂದು ಕುಟುಕಿದರು.

ಯಾವ ರಾಜಕಾರಣಿಗೂ ಬೇಡ: `ಯಡಿಯೂರಪ್ಪ ಜೈಲಿಗೆ ಹೋಗಿರುವ ಬಗ್ಗೆ ನಾವ್ಯಾರೂ ಎಲ್ಲಿಯೂ ಸಂತೋಷ ಸಂಭ್ರಮಾಚರಣೆ     ಮಾಡಿಲ್ಲ. ಇದೊಂದು ಕಾನೂನಿಗೆ ಸಿಕ್ಕ ಜಯವೇ ಹೊರತೂ ಸಂಭ್ರಮ ಪಡುವ ವಿಚಾರವೇನೂ ಅಲ್ಲ~ ಎಂದರು.

ಕಾಂಗ್ರೆಸ್ ಸಂಭ್ರಮ -ಬಿಜೆಪಿ ಟೀಕೆ
ಹುಬ್ಬಳ್ಳಿ: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನವಾಗಿದ್ದಕ್ಕೆ ಕಾಂಗ್ರೆಸ್‌ನವರು, ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯನವರು ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದ್ದು ನಾಚಿಕೆಗೇಡು~ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. `ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂಬ ಕಾಂಗ್ರೆಸ್‌ನವರ ಬೇಡಿಕೆಗೆ ನೈತಿಕ ಹಕ್ಕಿಲ್ಲ. ಏಕೆಂದರೆ ಕೇಂದ್ರದಲ್ಲಿ ದೊಡ್ಡ ಹಗರಣಗಳು ನಡೆದಿವೆ.

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಕೇಂದ್ರ ಸಚಿವರಾದ ಪ್ರಣವ್ ಮುಖರ್ಜಿ ಹಾಗೂ ಪಿ. ಚಿದಂಬಂರ ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ~ ಎಂದು ಅವರು ಹೇಳಿದರು. ಪಕ್ಷಕ್ಕೆ ಹಿನ್ನಡೆಯಾಗಿಲ್ಲವೆ ಎಂದು ಕೇಳಿದ್ದ ಪ್ರಶ್ನೆಗೆ `ಹಿನ್ನಡೆಯಾಗಿದೆ ಎಂದು ಹೇಳಲಾಗದು. ಅವರು ಪಕ್ಷಕ್ಕಾಗಿ ದುಡಿದವರು.

ಅವರ ರೀತಿಯಲ್ಲೇ ಪಕ್ಷಕ್ಕಾಗಿ ದುಡಿಯುತ್ತೇವೆ. ಇನ್ನು ಮುಂದೆ ಕಾಂಗ್ರೆಸ್‌ನವರ ಆರೋಪಗಳಿಗೆ ನಮ್ಮ ಪಕ್ಷದವರು ಉತ್ತರ ಕೊಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರೇ ಉತ್ತರಿಸಲಿದ್ದಾರೆ~ ಎಂದರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT