ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಕೇಂದ್ರ ತಂಡ

23ರಿಂದ ಅತಿವೃಷ್ಟಿ, ಅನಾವೃಷ್ಟಿ ಅಧ್ಯಯನ ಪ್ರವಾಸ
Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅತಿವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ತಂಡ ಇದೇ 23ರಿಂದ 26­ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ.

ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸುಮಾರು 2,500 ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದ್ದು, ವಸ್ತುಸ್ಥಿತಿ ಬಗ್ಗೆ ತಂಡವು ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ನೀಡಲಿದೆ.

ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌, ಹಾನಿಯ ಬಗ್ಗೆ ಅಧ್ಯಯನ ನಡೆಸಲು ರಾಜ್ಯಕ್ಕೆ ತಂಡವನ್ನು ಕಳುಹಿಸಿ ಕೊಡಲಿದ್ದಾರೆ.

ಇದೇ 23ಕ್ಕೆ ನಗರಕ್ಕೆ ಬರುವ ತಂಡ ಮುಖ್ಯಕಾರ್ಯದರ್ಶಿಗಳೊಂದಿಗೆ ಸಮಾ­ಲೋಚನೆ ನಡೆಸಿ ಹಾನಿಯ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆಯಲಿದೆ. ಇದಾದ ನಂತರ ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.

ಪ್ರವಾಸದ ನಂತರ ತಂಡವು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ತುಷಾರ್‌ ಗಿರಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಾಥಮಿಕ ಅಂದಾಜಿನ ಪ್ರಕಾರ ಅತಿವೃಷ್ಟಿಯಿಂದ ರೂ. 2,000  ಕೋಟಿ ಹಾನಿಯಾಗಿತ್ತು. ಆದರೆ, ಈಚೆಗೆ ಬಿದ್ದ ಮಳೆಯಿಂದಾಗಿ ಇನ್ನೂ ರೂ. 500 ಕೋಟಿಯಷ್ಟು ಹಾನಿಯಾಗಿದೆ. ಹೀಗಾಗಿ ಒಟ್ಟು ರೂ. 2500 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದರು.

60 ಹೋಬಳಿಗಳಲ್ಲಿ ಬರಗಾಲ: ಈ ಮುಂಚೆ ಸುಮಾರು 130 ಹೋಬಳಿಗಳಲ್ಲಿ ಬರಗಾಲ ಇತ್ತು. ಆದರೆ, ಈಚೆಗೆ ದಾವಣಗೆರೆ, ರಾಯಚೂರು, ಬಳ್ಳಾರಿ, ಹುಬ್ಬಳ್ಳಿ – ಧಾರವಾಡ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಹೀಗಾಗಿ ಸದ್ಯ ಸುಮಾರು 60 ಹೋಬಳಿಗಳಲ್ಲಿ ಬರಗಾಲ ಇದೆ ಎಂದು ವಿವರಿಸಿದರು.

ಬರ ಪರಿಹಾರ ಕಾಮಗಾರಿಗಳಿಗೆ ರೂ. 720 ಕೋಟಿಗಳ  ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಕೃತಿ ವಿಕೋಪ ನಿಧಿಯಡಿ ₨ 475 ಕೋಟಿ  ನೆರವು ಕೇಳಲಾಗಿತ್ತು.

ಆದರೆ, ಈಗ ಬರಪೀಡಿತ ಹೋಬಳಿಗಳ ಸಂಖ್ಯೆ ಕಡಿಮೆಯಾಗಿದೆ. ಅತಿವೃಷ್ಟಿಯಿಂದ ಆಗಿರುವ ಹಾನಿ ಜಾಸ್ತಿಯಾಗಿದೆ. ಹೀಗಾಗಿ ಪರಿಷ್ಕೃತ ಮನವಿ ಪತ್ರವನ್ನು ತಂಡಕ್ಕೆ ಸಲ್ಲಿಸ ಲಾಗುವುದು. ಬರಪೀಡಿತ ಹೋಬಳಿ ಗಳಿಗೆ ಸದ್ಯ ಕೇಂದ್ರ ತಂಡ ಭೇಟಿ ನೀಡು ವುದಿಲ್ಲ ಎಂದು ವಿವರಿಸಿದರು.

ಹೆಚ್ಚಿನ ಅನುದಾನ ನಿರೀಕ್ಷೆ: ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ನಡೆದ ಜನತಾದರ್ಶನದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,  ಅತಿವೃಷ್ಟಿ ಮತ್ತು ಅನಾವೃಷ್ಟಿಯ ಬಗ್ಗೆ ಈಗಾಗಲೇ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.  ಅಧ್ಯಯನ ತಂಡದ ಭೇಟಿ ನಂತರ ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಪ್ರವಾಸ: ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರ ಹಾಗೂ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಬಾಗಲಕೋಟೆಗೆ 19ರಂದು ಹಾಗೂ 20ಕ್ಕೆ ಗುಲ್ಬರ್ಗ, 22ಕ್ಕೆ ಧಾರವಾಡ ಮತ್ತು 24ರಂದು ವಿಜಾಪುರಕ್ಕೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ. ಕೃಷ್ಣಪ್ಪ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬೇಜವಾಬ್ದಾರಿ ಮತ್ತು ಸುಳ್ಳು ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ. ಆಸಕ್ತಿ ಇದ್ದರೆ ಅಹಿಂದ ಸಂಘಟನೆ ಯನ್ನು ಅವರೇ ಮಾಡಲಿ. ಬೇಡ ಎಂದು ಯಾರೂ ಹೇಳಿಲ್ಲ’ ಎಂದರು.

ಪರಾಮರ್ಶೆ ಮಾಡುವುದಾದರೆ ಮಾಡ್ಲಿ’

ಸಚಿವರ ಕಾರ್ಯವೈಖರಿ ಪರಾಮರ್ಶಿಸುವುದು ಹೊಸತಲ್ಲ. ಆದರೆ, ಇಷ್ಟು ಬೇಗ ಪರಾಮರ್ಶಿಸುವುದು ಸರಿ ಅಲ್ಲ. ಆದರೂ ಮಾಡ್ತೀವಿ ಅಂದರೆ ಮಾಡ್ಲಿ.
ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT