ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಣದಲ್ಲೇ ಅರಣ್ಯ ವಾಸಿಗಳ ಪುನರ್ವಸತಿ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಯೋಜನೆಗಳ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 800 ಕುಟುಂಬಗಳ ಸ್ಥಳಾಂತರಕ್ಕೆ ಅಗತ್ಯವಿರುವ 100 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರದಿಂದಲೇ ಪಡೆದು, ಬಳಸಿಕೊಳ್ಳಲು ಅರಣ್ಯ ಇಲಾಖೆ ಯೋಚಿಸಿದೆ. ಕೇಂದ್ರ ಸರ್ಕಾರದ `ಹುಲಿ ಯೋಜನೆ~ಯಡಿ ಅನುದಾನ ಲಭ್ಯವಾಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚಿಂತನೆ ನಡೆಸಿದೆ.

ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನರು, ಪರಿಶಿಷ್ಟ ಪಂಗಡ ಮತ್ತು ಜಾತಿಗಳ ಜನರ ಪುನರ್ವಸತಿ, ಪರಿಹಾರ ಮತ್ತು ಮೂಲಸೌಕರ್ಯ ಒದಗಿಸುವ ಸಂಬಂಧ ಸೋಮವಾರ ವಿಕಾಸಸೌಧದಲ್ಲಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎ.ನಾರಾಯಣ ಸ್ವಾಮಿ ಮತ್ತು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಈ ವಿಷಯ ತಿಳಿಸಿದರು.

ರಾಜ್ಯದ ವಿವಿಧ ಹುಲಿ ಯೋಜನೆಗಳ ವ್ಯಾಪ್ತಿಯಲ್ಲಿ 1,400 ಕುಟುಂಬಗಳನ್ನು ಪುನರ್ವಸತಿಗಾಗಿ ಗುರುತಿಸಲಾಗಿತ್ತು. ಈ ಪೈಕಿ 940 ಕುಟುಂಬಗಳು ಅರಣ್ಯದಿಂದ ಹೊರಹೋಗಲು ಸಹಮತ ವ್ಯಕ್ತಪಡಿಸಿವೆ. 140 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಉಳಿದ ಕುಟುಂಬಗಳ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರದ ಅನುದಾನ ದೊರೆಯುವುದು ವಿಳಂಬವಾಗುತ್ತದೆ. ಆದ್ದರಿಂದ ಸದ್ಯ ರಾಜ್ಯ ಸರ್ಕಾರದ ಹಣವನ್ನು ಬಳಸಿಕೊಳ್ಳಲು ಯೋಚಿಸಲಾಗಿದೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಈ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಲಾಗುವುದು ಎಂದು ಯೋಗೇಶ್ವರ್ ಹೇಳಿದರು.

ತಜ್ಞರ ಸಭೆ: ರಾಜ್ಯದಲ್ಲಿ ಆನೆ ಹಾವಳಿ ತಡೆಯುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ಚರ್ಚೆ ನಡೆಸಲು ಇದೇ 21ರಂದು ತಜ್ಞರ ಸಭೆ ನಡೆಸಲಾಗುವುದು. ತಜ್ಞರು ನೀಡುವ ಸಲಹೆಗಳು ಮತ್ತು ಸರ್ಕಾರದ ನೀತಿಗಳಲ್ಲಿ ಇರುವ ಅವಕಾಶವನ್ನು ಪರಿಶೀಲಿಸಿದ ಬಳಿಕ ಆನೆ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.

`ರಾಜ್ಯದಲ್ಲಿ ಆನೆಗಳ ಸಂಖ್ಯೆ ತೀರಾ ಹೆಚ್ಚಾಗಿಲ್ಲ. ಹಿಂದಿನ ಪ್ರಮಾಣದಲ್ಲೇ ಆನೆಗಳ ಸಂತತಿ ಬೆಳವಣಿಗೆಯಾಗುತ್ತಿದೆ. ಅರಣ್ಯ ಅತಿಕ್ರಮಣ, ಮೇವಿನ ಕೊರತೆಯಂತಹ ಕಾರಣಗಳಿಂದ ಆನೆಗಳು ಜನವಸತಿ ಪ್ರದೇಶಕ್ಕೆ ನುಸುಳುತ್ತಿವೆ. ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸಮಸ್ಯೆಗೆ ಕಾರಣ ಎಂಬ ವಾದ ಸತ್ಯಕ್ಕೆ ದೂರವಾದುದು~ ಎಂದರು.

ಹಕ್ಕುಪತ್ರಕ್ಕೆ ಗಡುವು: `ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ 4,000 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಬಾಕಿ ಇದೆ. ಈ ಪೈಕಿ 3,000 ಕುಟುಂಬಗಳಿಗೆ ಎರಡು ತಿಂಗಳೊಳಗೆ ಹಕ್ಕುಪತ್ರ ವಿತರಿಸಲು ಗಡುವು ನೀಡಲಾಗಿದೆ. ಎರಡು ತಿಂಗಳ ಬಳಿಕ ಮತ್ತೆ ಸಭೆ ನಡೆಸಿ ಪರಿಶೀಲಿಸಲಾಗುವುದು~ ಎಂದು ನಾರಾಯಣಸ್ವಾಮಿ ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ವಾಸಿಸುವ 1,63,115 ಮಂದಿ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 20,450 ಮಂದಿ ಪರಿಶಿಷ್ಟರು. ಒಟ್ಟು ಅರ್ಜಿಗಳಲ್ಲಿ 1.44 ಲಕ್ಷ ತಿರಸ್ಕೃತವಾಗಿವೆ. 6,073 ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. 13,955 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ ಎಂದು ಅವರು ವಿವರ ನೀಡಿದರು.

ಅರಣ್ಯದೊಳಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ವಾಸಿಸುತ್ತಿರುವ ಪ್ರದೇಶಗಳು, ಅಧಿಸೂಚಿತ ಹಾಡಿಗಳಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆಯೂ ಎರಡು ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಸಾಧ್ಯವಾದ ಕಾರಣದಿಂದ ಅಲ್ಲಿನ ಜನರಿಗೆ ಸೌರದೀಪಗಳನ್ನು ವಿತರಿಸಲು ಆದೇಶಿಸಲಾಗಿದೆ ಎಂದರು.

ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಚಿಕ್ಕಣ್ಣ, ಪುಟ್ಟರಂಗಶೆಟ್ಟಿ,  ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಕೆ.ವರ್ಮಾ, ಬಿ.ಕೆ.ಸಿಂಗ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT