ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬಹುದೇ?

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಿಂದ ಸಂಕಟದ ಸ್ಥಿತಿಯಲ್ಲಿದೆ. 2004ರ ವಿಧಾನಸಭಾ ಚುನಾವಣಾ ಸೋಲಿನ ನಂತರ ಸತತ ಸೋಲು ಎದುರಿಸಿದೆ. 2008ರ ವಿಧಾನಸಭೆ ಚುನಾವಣೆ, ಆನಂತರದ `ಆಪರೇಷನ್ ಕಮಲ~ದ ಹೆಸರಿನಲ್ಲಿ ನಡೆದ ವಿಧಾನಸಭೆ ಉಪಚುನಾವಣೆಗಳು ಹಾಗೂ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿತು.

ರಾಜ್ಯದಲ್ಲಿ ಕಾಂಗ್ರೆಸ್ ಈಗಿನದ್ದಕ್ಕಿಂತ ಹೆಚ್ಚು ಸಂಕಷ್ಟದ ಹಾದಿ ಕ್ರಮಿಸಿದ್ದು ಕರ್ನಾಟಕದ ರಾಜಕೀಯದ ಬಗ್ಗೆ ಮಾಹಿತಿ ಇರುವವರಿಗೆ ಚೆನ್ನಾಗಿ ಗೊತ್ತಿದೆ. ಜನತಾ ಪಕ್ಷ- ಜನತಾದಳದ ಸರ್ಕಾರ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಾಗ (1983ರಿಂದ 1989) ಕಾಂಗ್ರೆಸ್ ಪ್ರಥಮ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿತ್ತು.

ಆ ಏಳು ವರ್ಷಗಳ ಅವಧಿಯಲ್ಲಿಯೂ ಚುನಾವಣೆ ನಡೆದಿದ್ದವು. ಅವುಗಳಲ್ಲೂ ಜನತಾ ಪಕ್ಷದ್ದೇ ವರ್ಚಸ್ಸು ಇತ್ತು. ಜನತಾದಳ ಸರ್ಕಾರದ ಎರಡನೇ ಅವಧಿ (1994ರಿಂದ 1999) ಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಭಯಾನಕ ಸ್ಥಿತಿ ಎದುರಿಸಿತ್ತು.
 
ಬಾಬರಿ ಮಸೀದಿ ಧ್ವಂಸ ಹಾಗೂ ಬೇರೆ ಕಾರಣಗಳಿಂದಾಗಿ ಆಗಿನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಓಟ್‌ಬ್ಯಾಂಕ್ ಅದರಿಂದ ದೂರ ಸರಿದಿತ್ತು. ಇದೇ ಕಾರಣದಿಂದಾಗಿ ಕರ್ನಾಟಕದಲ್ಲಿ 1994ರಲ್ಲಿ ನಡೆದ ವಿಧಾನಸಭೆ,1996ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸ್ಥಿತಿ ದಯನೀಯವಾಗಿತ್ತು. 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ 35 ಸ್ಥಾನಗಳು ಸಿಕ್ಕಿದ್ದವು.

ಪಕ್ಷದ ಮತ ಗಳಿಕೆ ಪ್ರಮಾಣ ಶೇ 27.21ರಷ್ಟಿತ್ತು. ಅದೇ ರೀತಿ 1996ರ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ಐದು ಸ್ಥಾನಗಳು ಮಾತ್ರ ಸಿಕ್ಕಿದ್ದವು. ಮತಗಳ ಪ್ರಮಾಣ ಶೇ 30.29 ಆಗಿತ್ತು. 1994ರ ವಿಧಾನಸಭೆ ಮತ್ತು 1996ರ ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪ್ರದರ್ಶನ ಇದುವರೆಗಿನ ಅತ್ಯಂತ ಕಳಪೆ ಪ್ರದರ್ಶನವಾಗಿತ್ತು.

ಇಂತಹ ಪ್ರತಿಕೂಲ ಪರಿಸ್ಥಿತಿಯ ನಂತರವೂ ಕಾರ್ಯಕರ್ತರು ಎದೆಗುಂದಲಿಲ್ಲ. ನಂತರ 1999ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂತು. ಆದರೆ, ಇಂದು ಕಾಂಗ್ರೆಸ್ ಪರಿಸ್ಥಿತಿ 1994ರಿಂದ 1999 ರ ನಡುವಿನ ಅವಧಿಯಷ್ಟು ಕೆಟ್ಟ ಸ್ಥಿತಿಯಲ್ಲಿಲ್ಲ. ಆದರೂ ಸದ್ಯ ಕಾಂಗ್ರೆಸ್‌ನಲ್ಲಿ ತುಸು ನಿರಾಶೆಯ ವಾತಾವರಣ ಜಾಸ್ತಿ ಕಂಡು ಬರುತ್ತಿದೆ.

ಕಳೆದ ಮೂರು ವರ್ಷಗಳಿಂದ ಪಕ್ಷಕ್ಕೆ ಆಗುತ್ತಿರುವ ಸತತ ಸೋಲಿನಿಂದ ಕಾರ್ಯಕರ್ತರು ಚಿಂತೆಗೀಡಾಗಿದ್ದಾರೆ. ಅದು ಸಹಜ. ವಿಶೇಷವಾಗಿ ಬಿಜೆಪಿಯ ಆಕ್ರಮಣಕಾರಿ ರಾಜಕೀಯ ಹಾಗೂ ಮೇಲ್ವರ್ಗದ ಮುಖಂಡರ ದಂಡು ಬಿಜೆಪಿ ಸೇರಿರುವುದು ಸಾಮಾನ್ಯ ಕಾರ್ಯಕರ್ತರಿಗಷ್ಟೆ ಅಲ್ಲ, ಕಾಂಗ್ರೆಸ್‌ನ ಮುಖಂಡರನ್ನೂ ಆತಂಕಕ್ಕೀಡು ಮಾಡಿದೆ.

ಜಾತ್ಯತೀತ ಅಥವಾ ಬಿಜೆಪಿ ವಿರುದ್ಧದ ಮತಗಳು ಚೆದುರಿ ಹೋಗದಂತೆ ತಡೆಗಟ್ಟದಿರುವುದು ಮತ್ತು ಪಕ್ಷಕ್ಕೆ ಸಮರ್ಥ ನೇತೃತ್ವ ಇಲ್ಲದೆ ಇರುವುದು ಕಾಂಗ್ರೆಸ್‌ನ ಇಂದಿನ ಕಳಪೆ ಪ್ರದರ್ಶನಕ್ಕೆ ಕಾರಣ. ಬಿಜೆಪಿ ಎರಡು ದಶಕಗಳ ಸುದೀರ್ಘ ಸಂಘರ್ಷದ ನಂತರ ಅಧಿಕಾರಕ್ಕೆ ಬಂದಿದೆ.

ಈ ಮಧ್ಯೆ ನಡೆದ ನಾಲ್ಕು (1994, 1999, 2004, 2008) ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಮತ್ತು ಮತ ಪ್ರಮಾಣ ವೃದ್ಧಿಯಾಗಿದೆ. ಅದಾಗಿಯೂ ಈ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ ಪ್ರಮಾಣ ಕಾಂಗ್ರೆಸ್‌ಗಿಂತ ಕಡಿಮೆ ಇದೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 110 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಗೆ ಕಾಂಗ್ರೆಸ್ ಪಕ್ಷಕ್ಕಿಂತ ಸುಮಾರು 2 ಲಕ್ಷ ಕಡಿಮೆ ಮತಗಳು ದೊರೆತಿವೆ. 2008ರ ಚುನಾವಣೆ ಫಲಿತಾಂಶದಿಂದ ಗೊತ್ತಾಗುವ ಸಂಗತಿಯೆಂದರೆ ಒಂದು ವೇಳೆ ಬಿಜೆಪಿ ವಿರುದ್ಧ ಇರುವ ಸುಮಾರು ಶೇ 66 ರಷ್ಟು ಮತಗಳ ಪೈಕಿ ಕೇವಲ ಶೇ 5 ರಷ್ಟು ಮತಗಳು ಕಾಂಗ್ರೆಸ್‌ಗೆ ಸಿಕ್ಕಿದ್ದರೆ ಇನ್ನೂ 50 ಹೆಚ್ಚಿನ ಸ್ಥಾನಗಳು ಸಿಗುತ್ತಿದ್ದವು.

ಜಾತ್ಯತೀತ ಮತಗಳು ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ನಡುವೆ ವಿಭಜನೆ ಆಗುತ್ತಿವೆ. 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ 35.28 ಮತ್ತು ಜೆಡಿಎಸ್‌ಗೆ ಶೇ 20.59 ರಷ್ಟು ಮತಗಳು ದೊರೆತಿದ್ದವು.
 
ಈ ಮಧ್ಯೆ, ಬಿಜೆಪಿ ಶೇ 31.68 ರಷ್ಟು ಮತಗಳನ್ನು ಪಡೆದು ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಅಧಿಕ ಅಂದರೆ 79 ಸ್ಥಾನಗಳನ್ನು ಪಡೆದಿತ್ತು. ಅದೇ ರೀತಿ, 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ 34.59 ಹಾಗೂ ಜೆಡಿಎಸ್ ಶೇ 19.57 ರಷ್ಟು ಮತಗಳನ್ನು ಪಡೆದಿದ್ದವು.
 
ಬಿಜೆಪಿ ಶೇ 33.86 ರಷ್ಟು ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿಯಿತು. ಈ ಎರಡು ಚುನಾವಣೆಗಳ ಅಂಕಿ ಅಂಶಗಳನ್ನು ಗಮನಿಸಿದರೆ ಬಿಜೆಪಿ ವಿರುದ್ಧದ ಮತಗಳ ವಿಭಜನೆಯಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಆದಷ್ಟು ಬೇಗ ಕಾಂಗ್ರೆಸ್ ಜೊತೆಗೆ ಒಪ್ಪಂದವಾಗಲಿ, ನಂತರ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚಿಸುವ ದಿಸೆಯಲ್ಲಿ ಹೆಜ್ಜೆ ಇರಿಸಬಹುದಾಗಿದೆ ಎಂಬ ಆಶಯ ಜೆಡಿಎಸ್ ಮುಖಂಡರದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಯಾವುದೇ ಸ್ಪಷ್ಟ ಸಂಕೇತ ನೀಡಲಿಲ್ಲ.
 
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಎಷ್ಟು ತಡವಾಗುತ್ತದೆಯೋ ಅಷ್ಟು ಹಾನಿಯಾಗುತ್ತದೆ ಎನ್ನುವುದು ಬಿಜೆಪಿ ವಿರೋಧಿ ಮನಃಸ್ಥಿತಿ ಹೊಂದಿರುವ ಬಹುತೇಕ ರಾಜಕೀಯ ಸಮೀಕ್ಷರ ಅಭಿಪ್ರಾಯ. ಏಕೆಂದರೆ ಬಿಜೆಪಿ ಸರ್ಕಾರ ಎಲ್ಲ ರೀತಿಯ ನೈತಿಕ ಮತ್ತು ಅನೈತಿಕ ಸಾಧನಗಳನ್ನು ಬಳಸಿ ಪಕ್ಷ ಮತ್ತು ಕೇಡರ್‌ಅನ್ನು ಬಲಪಡಿಸುತ್ತಿದೆ.

ಸತತ ಸೋಲಿನಿಂದ ಕಾಂಗ್ರೆಸ್ ಏಕೆ ಪಾಠ ಕಲಿಯುತ್ತಿಲ್ಲ? ಕಾಂಗ್ರೆಸ್‌ಗೆ ತನ್ನ ಪರಿಸ್ಥಿತಿ ಸುಧಾರಿಸಿಕೊಳ್ಳಲು ಇನ್ನೆಷ್ಟು ಸೋಲುಗಳ ಅವಶ್ಯಕತೆ ಇದೆ? ಎನ್ನುವುದು ಕೆಲವರ ಪ್ರಶ್ನೆಯೂ ಆಗಿದೆ.
 
ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ದಿಸೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಜೆಡಿಎಸ್ ಜೊತೆಗೆ ಸಮ್ಮಿಶ್ರ ಸರ್ಕಾರ ರಚನೆ ಅಥವಾ ಚುನಾವಣಾ ಮೈತ್ರಿ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಈವರೆಗೆ ಯಾವುದೇ ಸ್ಪಷ್ಟ ಸೂಚನೆ ಸಿಕ್ಕಿಲ್ಲ.

ಈ ವಿಚಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆ. `ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅನಿವಾರ್ಯ; ಬಿಜೆಪಿ ವಿರುದ್ಧದ ಮತಗಳ ವಿಭಜನೆ ಕಡಿಮೆ ಮಾಡುವುದಕ್ಕಾಗಿ ಇದೊಂದೇ ಮಾರ್ಗ~ ಎನ್ನುವುದು ಕೆಲವು ನಾಯಕರ ಅಭಿಪ್ರಾಯ.

ಈ ನಿಲುವು ತಾಳಿರುವ ನಾಯಕರು ಒಂದು ವೇಳೆ 2008 ರಲ್ಲಿ ನಡೆದ ವಿಧಾನಸಭೆ ಮತ್ತು 2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ; ಅಥವಾ ಲೋಕಸಭೆ ಚುನಾವಣೆಯಲ್ಲಿ 19 ಸ್ಥಾನಗಳು ಸಿಗುತ್ತಿರಲಿಲ್ಲ ಎಂದು ಹಿಂದಿನ ಎರಡು, ಮೂರು ಚುನಾವಣೆಗಳ ಅಂಕಿ ಅಂಶಗಳೊಂದಿಗೆ ತಮ್ಮ ವಾದ ಮಂಡಿಸುತ್ತಾರೆ.

ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಮೈತ್ರಿ ನಡೆದರೆ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಹೆಚ್ಚಿನ ಲಾಭ ಆಗುತ್ತದೆ ಎನ್ನುವುದು ಈ ಪಕ್ಷಗಳ ನಡುವಿನ ಮೈತ್ರಿಯನ್ನು ವಿರೋಧಿಸುತ್ತಿರುವವರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಪ್ರಸ್ತಾಪ ಸೂಕ್ತವಲ್ಲ ಎಂಬ ಅಭಿಪ್ರಾಯ ಮೈತ್ರಿ ವಿರೋಧಿ ನಾಯಕರದು. ಇಂದು ಜೆಡಿಎಸ್ ಒಂದು ಪರಿವಾರ. ಅದು ಮೂರ‌್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಪಕ್ಷವಾಗಿ ಉಳಿದಿದೆ. ಅದರ ನಾಯಕರು ದೆಹಲಿಯಲ್ಲಿ ಅಧಿಕಾರ ನಡೆಸುವ ಕನಸು ಕಾಣುತ್ತಾರೆ. ಕಳೆದ ಏಳು ವರ್ಷಗಳಲ್ಲಿ ಜೆಡಿಎಸ್ ಜನಬೆಂಬಲ ಕಡಿಮೆಯಾಗುತ್ತ ಬಂದಿದೆ.
 
ಆದರೆ, ದೇವೇಗೌಡರ ಪರಿವಾರದ ಮಹತ್ವಾಕಾಂಕ್ಷೆ ಮಾತ್ರ ಹೆಚ್ಚಾಗಿದೆ. ಮತ್ತೊಂದೆಡೆ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅದರ ಅಸ್ತಿತ್ವ ಇಲ್ಲ. 1999ರಲ್ಲಿ ನಡೆದ ಜನತಾದಳದ ವಿಭಜನೆಯ ನಂತರ ಆ ಪಕ್ಷಕ್ಕೆ ಕೇವಲ ಶೇ. 10.42 ರಷ್ಟು ಮತಗಳು ದೊರೆತಿದ್ದವು.
 
ಚುನಾವಣೆ ಕೆಲವೇ ದಿನಗಳ ನಂತರ ಜೆಡಿಎಸ್ ಟಿಕೆಟ್ ಮೇಲೆ ಜಯಗಳಿಸಿದ್ದ ಆರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು. ಜೆಡಿಎಸ್ ತೊರೆದವರಲ್ಲಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಿಂದ ಗೆದ್ದ ಎಲ್ಲ ಐವರು ಶಾಸಕರು ಸೇರಿದ್ದರು.
 
ಆ ಪಕ್ಷದ ಎಂ.ಪಿ. ಪ್ರಕಾಶ, ಪಿ.ಜಿ.ಆರ್. ಸಿಂಧ್ಯ ಮತ್ತಿತರ ನಾಯಕರು ಜನತಾದಳ (ಎಸ್) ವೇದಿಕೆಯಲ್ಲಿ ಕಾಣಿಸತೊಡಗಿದರು. ಇದರ ಲಾಭ 2004 ರಲ್ಲಿ ನಡೆದ ಚುನಾವಣೆಯಲ್ಲಿ ಆ ಪಕ್ಷಕ್ಕೆ ಸಿಕ್ಕಿತು. ಆ ಚುನಾವಣೆಯಲ್ಲಿ ಜೆಡಿಎಸ್‌ಗೆ ಶೇ 20.59 ಮತಗಳು ಹಾಗೂ 58 ಸ್ಥಾನಗಳು ದೊರೆತವು.

ಆಗಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮತಗಳಲ್ಲಿ ದೊಡ್ಡ ಪ್ರಮಾಣದ ವಿಭಜನೆಯಾಗಿತ್ತು. ಇದೇ ಕಾರಣಕ್ಕಾಗಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಆ ಚುನಾವಣೆವರೆಗೆ ಬಿಜೆಪಿಯ ಮತಪ್ರಮಾಣ (ಶೇ 28.49) ವಿಧಾನಸಭೆಯಲ್ಲಿ ಬಹುಮತ ಪಡೆಯುವಷ್ಟು ಪ್ರಮಾಣದಲ್ಲಿ ಇರಲೇ ಇಲ್ಲ.

2008 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 218 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 28 ಜನ ಮಾತ್ರ ಗೆದ್ದರು. 105 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಜೆಡಿಎಸ್‌ಗೆ ದೊರೆತ 28 ಸ್ಥಾನಗಳಲ್ಲಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ 12 ಜಿಲ್ಲೆಗಳ 96 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಸ್ಥಾನಗಳು ಮಾತ್ರ ಸೇರಿದ್ದವು.
 
2008 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 13 ಜಿಲ್ಲೆಗಳಲ್ಲಿ ಖಾತೆ ತೆರೆಯಲಿಲ್ಲ. ಲೋಕಸಭಾ ಚುನಾವಣೆ ಕ್ಷೇತ್ರಗಳ ಲೆಕ್ಕದಲ್ಲಿ ನೋಡಿದರೆ 28ರ ಪೈಕಿ 14 ಕ್ಷೇತ್ರಗಳಲ್ಲಿ ಜೆಡಿಎಸ್‌ನ ಒಬ್ಬರೂ ಶಾಸಕರಾಗಿ ಆಯ್ಕೆಯಾಗಿರಲಿಲ್ಲ. ಜೆಡಿಎಸ್ ಅಸ್ತಿತ್ವ ಕಡಿಮೆಯಾಗುತ್ತ ನಡೆದದ್ದು 2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ.

ಆಗ ಪಕ್ಷ ಲೋಕಸಭೆಯ 28 ಕ್ಷೇತ್ರಗಳ ಪೈಕಿ 21ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಮೂವರು ಜಯಗಳಿಸಿದರು. ಪಕ್ಷಕ್ಕೆ ದೊರೆತ ಮತ ಪ್ರಮಾಣ ಶೇ 13.57. ಆ ಚುನಾವಣೆಯಲ್ಲಿ ಪಕ್ಷದ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಒಬ್ಬ ಅಭ್ಯರ್ಥಿ ಮಾತ್ರ ದ್ವಿತೀಯ ಸ್ಥಾನದಲ್ಲಿದ್ದರು.
 
ಯಾವ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದರೋ ಅಥವಾ ದ್ವಿತೀಯ ಸ್ಥಾನ ಪಡೆದಿದ್ದರೋ ಆ ಜಿಲ್ಲೆಗಳು (ಹಾಸನ, ಮಂಡ್ಯ, ಬೆಂಗಳೂರು ಗ್ರಾಮೀಣ ಮತ್ತು ತುಮಕೂರು) ಹಳೆಯ ಮೈಸೂರು ಭಾಗದ ಒಕ್ಕಲಿಗರ ಪ್ರಭಾವ ಇರುವ ಜಿಲ್ಲೆಗಳಾಗಿವೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಜಯಗಳಿಸಿದ 28 ಸ್ಥಾನಗಳ ಪೈಕಿ 15 ಸ್ಥಾನಗಳು ಇದೇ ನಾಲ್ಕು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿದ್ದವು.
 
2009 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 33.35 ಲಕ್ಷ ಮತಗಳು ದೊರೆತಿದ್ದವು. ಇದರ ಅರ್ಧಕ್ಕಿಂತ ಹೆಚ್ಚು ಮತಗಳು ಅಂದರೆ 16.83 ಲಕ್ಷ ಮತಗಳು ಬಂದದ್ದು ಇದೇ 4 ಜಿಲ್ಲೆಗಳಿಂದ.

ಒಂದು ವೇಳೆ ಜೆಡಿಎಸ್, ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಮತ್ತೆ ತನ್ನ ಜನಬೆಂಬಲವನ್ನು ಗಟ್ಟಿಗೊಳಿಸುತ್ತದೆ. ಬಿಜೆಪಿ ಮತಗಳ ವಿಭಜನೆ ಹೆಚ್ಚಾಗುತ್ತದೆ. ಮತ್ತು ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ತನ್ನ ಬಲದ ಮೇಲೆ ಅಧಿಕಾರಕ್ಕೆ ಬರುವ ಮಾರ್ಗ ಮುಚ್ಚಲ್ಪಡುತ್ತದೆ. ಮಹಾರಾಷ್ಟ್ರ, ಕೇರಳ ಮತ್ತು ಜಮ್ಮು ಕಾಶ್ಮೀರದಲ್ಲಿ ಇಂದು ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ.

ಕರ್ನಾಟಕದಲ್ಲಿಯೂ ಒಮ್ಮೆ ಜೆಡಿಎಸ್ ಜೊತೆಗೆ ಚುನಾವಣಾ ಮೈತ್ರಿ ಏರ್ಪಟ್ಟರೆ ಕಾಂಗ್ರೆಸ್‌ನ ಸ್ಥಿತಿ ವಿಕ್ರಮ- ಬೇತಾಳ ಕಥೆಯ ವಿಕ್ರಮನಂತಾಗುತ್ತದೆ. ಬರುವ ಅನೇಕ ಚುನಾವಣೆಗಳವರೆಗೆ ಜೆಡಿಎಸ್ ಅನ್ನು ಬೆನ್ನ ಮೇಲೆ ಕೂರಿಸಿಕೊಳ್ಳುವ ಸ್ಥಿತಿ ಬರುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT