ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮೂರು ದಿನ ಯಾತ್ರೆ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ `ಜನಚೇತನ ಯಾತ್ರೆ~ ಇದೇ 30, 31 ಮತ್ತು ನವೆಂಬರ್ 1ರಂದು ರಾಜ್ಯದಲ್ಲಿ ಸಂಚರಿಸಲಿದೆ. ಈ ಸಂದರ್ಭದಲ್ಲಿ ಅವರು ಬೆಂಗಳೂರು, ಮಂಗಳೂರು, ಹೊನ್ನಾವರ ಮತ್ತು ಅಂಕೋಲಾಗಳಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಸರಗೋಡು ಮೂಲಕ ಇದೇ 30ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದ್ದು, ಅಂದು ಸಂಜೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಡ್ವಾಣಿ ಮಾತನಾಡಲಿದ್ದಾರೆ. ಅಂದು ರಾತ್ರಿ ಅವರು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

31ರಂದು ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಅಡ್ವಾಣಿ ಮಾತನಾಡಲಿದ್ದಾರೆ ಎಂದು ಯಾತ್ರೆಯ ರಾಜ್ಯ ಸಂಚಾಲಕ, ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

31ರಂದು ರಾತ್ರಿ ಗೋಕರ್ಣದಲ್ಲಿ ವಾಸ್ತವ್ಯ ಹೂಡಲಿರುವ ಅವರು, ನವೆಂಬರ್ 1ರಂದು ಅಂಕೋಲಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಯಾತ್ರೆ ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳಲಿದೆ.

`ಯಡಿಯೂರಪ್ಪ ಬರುತ್ತಾರಾ?~: `ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರಾ?~ ಎಂದು ಸುದ್ದಿಗಾರರು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದಾಗ, `ಯಡಿಯೂರಪ್ಪ ಅವರ ವಿರುದ್ಧ ಇರುವುದು ಆರೋಪಗಳು ಮಾತ್ರ. ಯಾವ ಆರೋಪಗಳೂ ಸಾಬೀತಾಗಿಲ್ಲ. ಅವರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರಾ ಎಂದು ತಿಳಿಯಲು ಇದೇ 30ರವರೆಗೆ ಕಾದುನೋಡಿ~ ಎಂದು ಉತ್ತರಿಸಿದರು.
 
`ಯಡಿಯೂರಪ್ಪನವರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲೂ ಭಾಗವಹಿಸುತ್ತಾರೆ~ ಎಂದು ನಳಿನ್ ಸ್ಪಷ್ಟಪಡಿಸಿದರು.

`ಹುಡ್ಕೋ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಂಸದ ಅನಂತ ಕುಮಾರ್ ಯಾತ್ರೆಯ ಸಂಚಾಲಕ ಸ್ಥಾನದಲ್ಲಿರುವುದು ಏಕೆ~ ಎಂದು ಪ್ರಶ್ನಿಸಿದಾಗ, `ಅನಂತ ಕುಮಾರ್ ಅವರ ಮೇಲಿರುವುದು ರಾಜಕೀಯ ಪ್ರೇರಿತ ಆರೋಪಗಳು ಮಾತ್ರ. ಹುಡ್ಕೋ ಹಗರಣ ಸಂಬಂಧ ಯಾವ ನ್ಯಾಯಾಲಯವೂ ಅವರ ವಿರುದ್ಧ ತನಿಖೆಗೆ ಆದೇಶಿಸಿಲ್ಲ~ ಎಂದು ರವಿ ಉತ್ತರಿಸಿದರು. ಬಿಜೆಪಿ ಮಾಧ್ಯಮ ಪ್ರಮುಖ ಎಸ್. ಪ್ರಕಾಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮೊದಲು ಕರ್ನಾಟಕದಲ್ಲಿ ಕ್ರಮ ಜರುಗಿಸಿ

ನವದೆಹಲಿ (ಪಿಟಿಐ): ಅಡ್ವಾಣಿ ಅವರ ರಥಯಾತ್ರೆಯನ್ನು ಸಿಪಿಎಂ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
`ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಬಿಜೆಪಿ ನಿಜಕ್ಕೂ ಪ್ರಾಮಾಣಿಕವಾಗಿ ಇರುವುದೇ ಆದರೆ ತನ್ನ ಆಡಳಿತವಿರುವ ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಇರುವ ಭ್ರಷ್ಟರ ವಿರುದ್ಧ ಮೊದಲು ಅದು ಕ್ರಮ ಜರುಗಿಸಲಿ~ ಎಂದು ಪಕ್ಷದ ನಾಯಕ ಸೀತಾರಾಂ ಯಚೂರಿ ಹೇಳಿದ್ದಾರೆ.

`ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾಗಿರುವ ಬಿ.ಎಸ್.ಯಡಿಯೂರಪ್ಪ ಮತ್ತು ಇತರರ ವಿರುದ್ಧ ಬಿಜೆಪಿ ಕ್ರಮಕ್ಕೆ ಮುಂದಾಗಲಿ. ಅಲ್ಲಿಯವರೆಗೂ ರಥಯಾತ್ರೆ ರಾಜಕೀಯ ನಾಟಕದಂತೆಯೇ ಭಾಸವಾಗುತ್ತದೆ~ ಎಂದು ಪಕ್ಷದ ಮುಖವಾಣಿ `ಪೀಪಲ್ಸ್ ಡೆಮಾಕ್ರಸಿ~ಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT