ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರ ವಿರುದ್ಧ ಚಾರ್ಜ್‌ಷೀಟ್

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಯಡಿಯೂರಪ್ಪ ಸರ್ಕಾರಕ್ಕೆ ‘ಕಂಟಕ’ವಾಗಿ ಕಾಡುತ್ತಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಬಿಜೆಪಿ ಸಂಸದರ ನಿಯೋಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಆಗ್ರಹಿಸಿದೆ.

ಬಿಜೆಪಿ ಸಂಸದೀಯ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿ, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ  ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಬೆಳಿಗ್ಗೆ 11.40 ಕ್ಕೆ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜ್ಯಪಾಲರ ವಿರುದ್ಧ 50 ಪುಟಗಳ ‘ಚಾರ್ಜ್‌ಷೀಟ್’ ಸಲ್ಲಿಸಿದರು.

ಹಂಸರಾಜ್ ಭಾರದ್ವಾಜ್ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ  ಬಿಜೆಪಿ ಸರ್ಕಾರ ಅದರಲ್ಲೂ ಯಡಿಯೂರಪ್ಪ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ರಾಜಭವನವನ್ನು ವಿರೋಧ ಪಕ್ಷದ ಕಚೇರಿಯಾಗಿ ಪರಿವರ್ತಿಸಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರಿಗೆ ಮಣೆ ಹಾಕುತ್ತಿದ್ದಾರೆ ಎಂದು  ನಿಯೋಗ ಆರೋಪಿಸಿದೆ.

ಬಿಜೆಪಿ ನಿಯೋಗದ ಮನವಿಯನ್ನು ರಾಷ್ಟ್ರಪತಿ 10 ನಿಮಿಷ ಆಲಿಸಿದರು. ಅಡ್ವಾಣಿ, ರಾಜ್ಯಪಾಲರ ‘ಆಕ್ಷೇಪಾರ್ಹ’ ನಡವಳಿಕೆ ವಿವರಿಸಿದರು. ಪಾಟೀಲ್ ಎಲ್ಲವನ್ನು ತಾಳ್ಮೆಯಿಂದ ಕೇಳಿಸಿಕೊಂಡರಾದರೂ ಏನೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ರಾಜ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರು ಇತಿಮಿತಿ ಮೀರಿ ವರ್ತಿಸುತ್ತಿದ್ದಾರೆ. ಸಂದರ್ಭವಿರಲಿ ಅಥವಾ ಬಿಡಲಿ ಎಲ್ಲ ವೇದಿಕೆಗಳಲ್ಲೂ ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೆ  ಆರೋಪ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಹೇಳಿಕೆಗಳು ‘ಭಾರದ್ವಾಜ್ ವಿರೋಧ ಪಕ್ಷದ ನಾಯಕರೇ’ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಭಾರದ್ವಾಜ್ 2009ರ ಜೂನ್ 25ರಂದು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಮರುದಿನ ತುಮಕೂರಿನ ಸಭೆಯಲ್ಲಿ ‘ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ‘ಎಂದು ನೀಡಿದ ಹೇಳಿಕೆಯಿಂದ ಯಡಿಯೂರಪ್ಪ ಅವರ ಮೇಲೆ ಮೊಕದ್ದಮೆ ಹೂಡಲು ನೀಡಿದ ಒಪ್ಪಿಗೆವರೆಗೆ ನಡೆದು ಬಂದಿರುವ ‘ವಿವಾದಾತ್ಮಕ ದಾರಿ’ ಕುರಿತು ಪಟ್ಟಿ ಮಾಡಲಾಗಿದೆ. ಈ ಆರೋಪಗಳಿಗೆ ಬೆಂಬಲವಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಸಂಪಾದಕೀಯಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ ಗಣಿಗಾರಿಕೆ; ಕಾನೂನು-ಸುವ್ಯವಸ್ಥೆ; ಭೂ ಹಗರಣ ಮತ್ತು ಅದರ ವಿಚಾರಣೆಗೆ ರಚಿಸಿದ  ನ್ಯಾಯಾಂಗ ಆಯೋಗ; ಗೋಹತ್ಯೆ ನಿಷೇಧ ಮಸೂದೆ ಕುರಿತಂತೆ ನೀಡಿರುವ ವಿವಾದಾತ್ಮ ಹೇಳಿಕೆಗಳು, ಮುಖ್ಯಮಂತ್ರಿ ಮೇಲೆ ಮೊಕದ್ದಮೆಗೆ ನೀಡಿದ ಒಪ್ಪಿಗೆ ಸೇರಿದಂತೆ ಪ್ರತಿಯೊಂದು ಅಂಶವನ್ನು ಮನವಿಯಲ್ಲಿ ವಿವರಿಸಲಾಗಿದೆ.

ನಿಯೋಗದಲ್ಲಿ ಕೆ.ಎಸ್.ಈಶ್ವರಪ್ಪ, ವೆಂಕಯ್ಯ ನಾಯ್ಡು, ಅನಂತ ಕುಮಾರ್, ಡಿ.ಬಿ.ಚಂದ್ರೇಗೌಡ, ಪ್ರಭಾಕರ ಕೋರೆ, ಕೆ. ಬಿ. ಶಾಣಪ್ಪ, ಬಿ.ವೈ. ರಾಘವೇಂದ್ರ, ಪ್ರಹ್ಲಾದ್ ಜೋಶಿ, ಪಿ. ಸಿ. ಮೋಹನ್, ರಮೇಶ್ ಜಿಗಜಿಣಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT