ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ನಾಥ್ ಅವಿರೋಧ ಆಯ್ಕೆ

Last Updated 23 ಜನವರಿ 2013, 20:59 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಅಧ್ಯಕ್ಷರಾಗಿ ಹಿರಿಯ ನಾಯಕ ರಾಜ್‌ನಾಥ್ ಸಿಂಗ್ (61) ಬುಧವಾರ ಸರ್ವಾನುಮತದಿಂದ ಆಯ್ಕೆಯಾದರು. `ಪೂರ್ತಿ ಕಂಪೆನಿ'ಯಲ್ಲಿ ಬೇನಾಮಿ ಹೆಸರಿನಲ್ಲಿ ಬಂಡವಾಳ ಹೂಡಿರುವ ಆರೋಪ ಎದುರಿಸುತ್ತಿರುವ ನಿತಿನ್ ಗಡ್ಕರಿ ಪುನಃ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಮಂಗಳವಾರ ಪ್ರಕಟಿಸಿದ್ದರಿಂದ  ರಾಜ್‌ನಾಥ್ ಸಿಂಗ್ ಅವಿರೋಧ ಆಯ್ಕೆಯಾದರು. ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಇವರೇ ಪಕ್ಷದ ನೇತೃತ್ವ ವಹಿಸಲಿದ್ದಾರೆ.

ರಾಜ್‌ನಾಥ್ ಸಿಂಗ್ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿರುವುದು ಇದು ಎರಡನೇ ಸಲ. 2009ರಲ್ಲಿ ಗಡ್ಕರಿ ಇವರಿಂದಲೇ ಅಧಿಕಾರ ವಹಿಸಿಕೊಂಡಿದ್ದರು.  ಈ ಹಿರಿಯ ನಾಯಕ ಆರ್‌ಎಸ್‌ಎಸ್‌ಗೆ ಗಡ್ಕರಿ ಅವರಷ್ಟು ಹತ್ತಿರದವರಲ್ಲದಿದ್ದರೂ ದೂರವಂತೂ ಇಲ್ಲ. ಸಂಘ- ಪರಿವಾರದ ಮುಖಂಡರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ.

ಮೋಹನ್ ಭಾಗವತ್‌ಗೆ ಹಿನ್ನಡೆ: ಒಂದು ವಾರದಿಂದ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯೊಳಗೆ ನಡೆದ `ಶೀತಲ ಸಮರ'ದಲ್ಲಿ ಕೊನೆಗೂ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಬಣ ಮೇಲುಗೈ ಪಡೆದಿದೆ. `ರಾಷ್ಟ್ರೀಯ ಸ್ವಯಂ ಸೇವಕ ಸಂಘ', ಅದರಲ್ಲೂ ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಹಿನ್ನಡೆಯಾಗಿದೆ. ಇನ್ನೇನು ಗಡ್ಕರಿ ಪುನರಾಯ್ಕೆ ಖಚಿತ ಎನ್ನುವ ಹಂತದಲ್ಲಿ `ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ' ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು.

ಅಧ್ಯಕ್ಷರ ಚುನಾವಣೆಯಿಂದ ದೂರ ಉಳಿಯುವುದಾಗಿ ಗಡ್ಕರಿ ಪ್ರಕಟಿಸಿದ ಬಳಿಕ ರಾಜ್‌ನಾಥ್ ಸಿಂಗ್ ಅವರನ್ನು ಸರ್ವಸಮ್ಮತವಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಅದರಂತೆ  ರಾಜ್‌ನಾಥ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆ ಸುಲಭವಾಯಿತು. `ಅಧ್ಯಕ್ಷರ ಚುನಾವಣೆಯಲ್ಲಿ ಭಿನ್ನಮತೀಯರು ಮೇಲುಗೈ ಪಡೆದಿದ್ದಾರೆ. ಗಡ್ಕರಿ ಸ್ಪರ್ಧಿಸದೆ ಒಳ್ಳೆಯ ಕೆಲಸ ಮಾಡಿದ್ದಾರೆ.

ರಾಜ್‌ನಾಥ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದು ತೃಪ್ತಿ ತಂದಿದೆ' ಎಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಎಂ.ಜಿ. ವೈದ್ಯ ಹೇಳಿದ್ದಾರೆ. ತಮ್ಮ ಮೇಲೆ ಬಂದಿರುವ ಆರೋಪಗಳಿಂದ ಹೊರಬರುವವರೆಗೂ ಪಕ್ಷದೊಳಗೆ ಯಾವುದೇ ಸ್ಥಾನ ಪಡೆಯುವುದಿಲ್ಲ ಎಂದು ಗಡ್ಕರಿ ಮಂಗಳವಾರ ಗಡ್ಕರಿ ಪ್ರಕಟಿಸಿದ್ದರು.
ಬಿಜೆಪಿ ಅಧ್ಯಕ್ಷರಾಗಿ ರಾಜ್‌ನಾಥ್ ಆಯ್ಕೆ ಆಗುತ್ತಿದ್ದಂತೆ, ಅವರನ್ನು ಗಡ್ಕರಿ ಅಭಿನಂದಿಸಿದರು. ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತಿತರ ನಾಯಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT