ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಗೌಡ ಸಮ್ಮೇಳನ ಅಧ್ಯಕ್ಷ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ನಾಡು ಖ್ಯಾತಿ ಹೊಂದಿರುವ ರಾಮನಗರ ಜಿಲ್ಲೆಯ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಅವರು ಆಯ್ಕೆ ಆಗಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಶನಿವಾರ ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬೈರಮಂಗಲ ರಾಮೇಗೌಡ ಅವರ ಹೆಸರನ್ನು ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ ಮತ್ತು ಕೋಶಾಧ್ಯಕ್ಷ ಬಿ.ಟಿ.ನಾಗೇಶ್ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನವೆಂಬರ್ 18 ಮತ್ತು 19ರಂದು ಎರಡು ದಿನ ಜಿಲ್ಲಾ ಕಸಾಪ ಸಮ್ಮೇಳನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಎರಡು ದಿನಗಳ ಗೋಷ್ಠಿಗಳ ಅಧ್ಯಕ್ಷರ ಆಯ್ಕೆಯೂ ಇದೇ ಸಂದರ್ಭದಲ್ಲಿ ನಡೆಯಿತು ಎಂದರು.

ಸಾಹಿತಿಗಳಾದ ಸರಸ್ವತಿ ಗೌಡ, ಡಾ. ಸುಧಾಕರ್, ಸ್ವಪ್ರಭಾನಂದ ಶರ್ಮ, ಚಕ್ಕಲೂರು ಚನ್ನಪ್ಪ, ಡಾ. ಕೆ.ವಿ.ಚಂದ್ರಣ್ಣ, ಡಾ. ಚಕ್ಕೆರೆ ಶಿವಶಂಕರ್, ಸೂ.ಚಿ.ಗಂಗಾಧರಯ್ಯ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದವು. ಈ ಕುರಿತು ಚರ್ಚೆಗಳು ನಡೆದ ನಂತರ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು ಎಂದು ಅವರು ತಿಳಿಸಿದರು.

ಈಗಾಗಲೇ ಸಮ್ಮೇಳನ ಉದ್ಘಾಟನೆಗೆ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರನ್ನು ಆರಿಸಲಾಗಿದ್ದು, ಅವರಿಗೆ ಆಹ್ವಾನವನ್ನೂ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ದಿನ ಧ್ವಜಾರೋಹಣ, ಮೆರವಣಿಗೆ, ಉದ್ಘಾಟನೆ, ಎರಡು ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ರೈತರ ಸಮಸ್ಯೆಗಳು ಹಾಗೂ ಮಳೆ ನೀರು ಸಂಗ್ರಹಣ; ಅಂತರ್ಜಲ ಮತ್ತು ಪರಿಸರ ಕುರಿತು ವಿಚಾರ ಸಂಕಿರಣ ನಡೆಸಲಾಗುವುದು. ಎರಡನೇ ದಿನ `ಕವಿಗೋಷ್ಠಿ ಹಾಗೂ ಸಾಹಿತ್ಯ ಮತ್ತು ಆಧುನಿಕ ಬದುಕು ವಿಷಯ~ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ಎರಡನೇ ದಿನ ಸುಮಾರು 20 ಜನರಿಗೆ ಸನ್ಮಾನ ಮಾಡಲಾಗುತ್ತದೆ. ಸಮಾರೋಪ ಸಮಾರಂಭದ ಜತೆಗೆ ಹಾಸ್ಯೋತ್ಸವ ನಡೆಸಲು ಉದ್ದೇಶಿಸಲಾಗಿದೆ. ಹಾಸ್ಯ ಕಲಾವಿದರಾದ ಕೃಷ್ಣೇಗೌಡ, ಮೈಸೂರು ಆನಂದ್ ಹಾಗೂ ಡಾ. ಸುಧಾ ಬರಗೂರು ಅವರನ್ನು ಆಹ್ವಾನಿಸಲು ಯೋಚಿಸಲಾಗಿದೆ ಎಂದು ಅವರು ಉತ್ತರಿಸಿದರು.

ಮೂರು ಪುಸ್ತಕ:  ಸಮ್ಮೇಳನದ ಅಂಗವಾಗಿ ಮೂರು ಪುಸ್ತಕಗಳನ್ನು ಹೊರ ತರಲಾಗುವುದು. ಸಮ್ಮೇಳನದ ಸ್ಮರಣ ಸಂಚಿಕೆ, ಜನಪದ ಕುರಿತು ಪುಸ್ತಕ ಹಾಗೂ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗುವುದು.

ಅದರ ಜತೆಗೆ ಸ್ಥಳೀಯ ಸಾಹಿತಿಗಳಿಬ್ಬರು ತಮ್ಮ ಪುಸ್ತಕ ಬಿಡುಗಡೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ರಾಮನಗರದ ಶಾಸಕರಾದ ಕೆ.ರಾಜು ಅವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಸಮ್ಮೇಳ ಆಯೋಜಿಸಲಾಗುವುದು ಎಂದರು.

ರಾಮನಗರ ತಾಲ್ಲೂಕು ಕಸಾಪ ಅಧ್ಯಕ್ಷ ಬೈರೇಗೌಡ ಮಾತನಾಡಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕಸಾಪ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ರಾಮನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದ್ದಾಗ 2006ರಲ್ಲಿ ಜಿಲ್ಲೆಯ 8ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು.

ಈ ಬಾರಿಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ತಾಲ್ಲೂಕಿನ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಡಿಸೆಂಬರ್ ತಿಂಗಳಿನಲ್ಲಿ ರಾಮನಗರ ತಾಲ್ಲೂಕು ಮಟ್ಟದ ಕಸಾಪ ಸಮಾವೇಶ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು. ಸಂಚಾಲಕ ಎಚ್.ಪಿ.ನಂಜೇಗೌಡ, ಪ್ರಧಾನ ಕಾರ್ಯದರ್ಶಿ ಪಾದ್ರಳ್ಳಿ ರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನಕ್ಕೆ ಅಂದಾಜು 30 ಲಕ್ಷ ಖರ್ಚು
ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎರಡನೇ ಸಮ್ಮೇಳನಕ್ಕೆ ಅಂದಾಜು 30 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಪರಿಷತ್ತಿನ ಅಧ್ಯಕ್ಷ ಬಿ.ಟಿ.ಚಿಕ್ಕಪುಟ್ಟೇಗೌಡ ತಿಳಿಸಿದರು. ಸುಮಾರು 2000 ಜನರ ಆಗಮನದ ನಿರೀಕ್ಷೆಯಲ್ಲಿ ಜಿಲ್ಲಾ ಕಸಾಪ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಿತ್ತು.
 
ಆದರೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಕೆ.ರಾಜು ಅವರು 5000 ಜನರನ್ನು ಸಮ್ಮೇಳನಕ್ಕೆ ಕರೆತರಬೇಕು ಎಂದು ಹೇಳಿ, 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮ್ಮೇಳನ ನಡೆಸಲು ಸೂಚಿಸಿದ್ದಾರೆ. ಶಾಸಕರೇ ನೇತೃತ್ವವಹಿಸಿರುವುದರಿಂದ ಸಮ್ಮೇಳನಕ್ಕೆ ಅಗತ್ಯವಿರುವಷ್ಟು ಹಣಕಾಸು ದೊರೆಯುತ್ತದೆ ಎಂಬ ನಿರೀಕ್ಷೆ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಕಸಾಪದಿಂದ ಸಮ್ಮೇಳನಕ್ಕೆ 3 ಲಕ್ಷ ರೂಪಾಯಿ ಬರುತ್ತದೆ. ಅದರಲ್ಲಿ ಮೂರು ಪುಸ್ತಕಗಳನ್ನು ಹೊರತರಬೇಕು. ಅದಕ್ಕೆ ಅಂದಾಜು 1.80 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆ ನಂತರ ಆಹ್ವಾನ ಪತ್ರಿಕೆ ಮುದ್ರಣಕ್ಕೆ ಈ ಹಣ ವ್ಯಯವಾಗುತ್ತದೆ. ದಾನಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಒದಗಿಸುವ ದೇಣಿಗೆಯಿಂದ ಸಮ್ಮೇಳನದ ಒಟ್ಟಾರೆ ಖರ್ಚು ವೆಚ್ಚವನ್ನು ಭರಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT