ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿಭಾಗದ 100 ಸಿಬ್ಬಂದಿ ವಜಾ

ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ
Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ರಾಯಚೂರು: ಕೆಲಸಕ್ಕೆ ಗೈರು ಹಾಜರಾಗುವುದು, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಬೇರೆ ಕೆಲಸ ಮಾಡುತ್ತಿದ್ದ  ಅಂದಾಜು 100 ಚಾಲಕ ಮತ್ತು ನಿರ್ವಾಹಕರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಈಶಾನ್ಯ ಸಾರಿಗೆ ಸಂಸ್ಥೆ  ರಾಯಚೂರು ವಿಭಾಗವು  ಕೆಲಸದಿಂದ ವಜಾಗೊಳಿಸಿದೆ.

ಆರಂಭದಲ್ಲಿ ಕರ್ತವ್ಯಕ್ಕೆ ನಿರ್ಲಕ್ಷ್ಯ ತೋರುವವರಿಗೆ ಎಚ್ಚರಿಕೆ ನೀಡಿದ್ದ ಸಂಸ್ಥೆ ಬಳಿಕ ಕೆಲವರನ್ನು ವಜಾಗೊಳಿಸಿತು. ಆದರೂ ಕರ್ತವ್ಯ ಬಗ್ಗೆ ನಿರ್ಲಕ್ಷ್ಯ ತೋರುವವರ ಸಂಖ್ಯೆ  ಕಡಿಮೆ ಆಗಲಿಲ್ಲ. ಹೀಗಾಗಿ ಸಂಸ್ಥೆಯು ಕಠೋರ ನಿರ್ಧಾರ ಕೈಗೊಂಡಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸಾರಿಗೆ ಸಂಸ್ಥೆ ಅಧಿಕಾರಿ ಹೇಳಿಕೆ:
ಕರ್ತವ್ಯ ನಿರ್ಲಕ್ಷ್ಯ ತೋರಿದವರನ್ನು ವಜಾಗೊಳಿಸುವ ಕೆಲಸವನ್ನು ಸಂಸ್ಥೆ ಜನವರಿ ತಿಂಗಳಿಂದಲೇ ಆರಂಭಿಸಿದೆ. ಈವರೆಗೂ ಸುಮಾರು 100 ಜನರನ್ನು  ವಜಾ ಮಾಡಲಾಗಿದೆ. ಚಾಲಕರು ಮತ್ತು ನಿರ್ವಾಹಕರೇ ಹೆಚ್ಚಿನವರು ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ವಿಭಾಗೀಯ ಅಧಿಕಾರಿ ವೆಂಕಟೇಶ್ವರರೆಡ್ಡಿ ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ' ಗೆ ತಿಳಿಸಿದರು.

`ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು ಬೇರೆ ಬೇರೆ ಕಡೆ ತೆರಳುವವರು ಸೇರಿದಂತೆ ಜನ ಸಾಮಾನ್ಯರು ಸಾರಿಗೆ ಸಂಸ್ಥೆ ಬಸ್ಸನ್ನೇ ನೆಚ್ಚಿಕೊಂಡಿರುತ್ತಾರೆ. ನಿರ್ದಿಷ್ಟ ಪಡಿಸಿದ ಮಾರ್ಗದಲ್ಲಿ ನಿರ್ದಿಷ್ಟ ಸಮಯಕ್ಕೆ ಬಸ್ ಸಂಚಾರ ಆರಂಭಿಸದೇ ಇದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ವರ್ಷಪೂರ್ತಿ ವ್ಯಾಸಂಗ ಮಾಡಿದ ಹಳ್ಳಿ ವಿದ್ಯಾರ್ಥಿಗಳಿಗೆ ಅವರು ಪರೀಕ್ಷೆಗೆ ತೆರಳುವ ದಿನ ಬಸ್ ಬರದೇ ಇದ್ದರೇ ತೊಂದರೆ  ಪಡುತ್ತಾರೆ. ಭವಿಷ್ಯ ಹಾಳಾಗುವ ಪರಿಸ್ಥಿತಿ ಇರುತ್ತದೆ. ಇಂತಹ ಸಮಸ್ಯೆಯನ್ನು ಸಾರ್ವಜನಿಕರೇ ದೂರವಾಣಿ ಮೂಲಕ ನನ್ನ ಗಮನಕ್ಕೆ ತಂದು ಪರಿಹಾರಕ್ಕೆ ಮನವಿ ಮಾಡುತ್ತಾರೆ' ಎಂದು ವಿವರಿಸಿದರು.

ಏನೇನು ಮಾಡುತ್ತಾರೆ?: `ಒಬ್ಬ ಹೆಸರಿಗೆ ಮಾತ್ರ ಸಾರಿಗೆ ಸಂಸ್ಥೆ ನೌಕರ. ಕೆಲಸ ಮಾಡುವುದಿಲ್ಲ. ಹಾಜರಿ ಹಾಕುತ್ತಾನೆ. ಲಿಂಗಸುಗೂರಲ್ಲಿ 40 ಎಕರೆ ದಾಳಿಂಬೆ ತೋಟ ಮಾಡಿಕೊಂಡಿದ್ದಾನೆ. ಅನಾರೋಗ್ಯ ಕಾರಣ ನೀಡಿ ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾನೆ. ಪರಿಶೀಲನೆ ನಡೆಸಿದಾಗ ತೋಟ ಮಾಡಿಕೊಂಡಿರುವುದು ಗೊತ್ತಾಗಿದೆ. ಇನ್ನೊಬ್ಬ ಮದುವೆ ಸೀಸನ್‌ನಲ್ಲಿ ಬರುವುದೇ ಇಲ್ಲ.

ರಜೆ ಪಡೆಯುವುದು, ಸಹಿ ಮಾಡಿ ಕೆಲಸಕ್ಕೆ ಹಾಜರಾಗದೇ  ಮದುವೆ ಸಮಾರಂಭದಲ್ಲಿ ಬಾಜಾ ಭಜಂತ್ರಿ ಬಾರಿಸಲು ತೆರಳುತ್ತಾನೆ. ಅಲ್ಲದೇ ಬಾಜಾ ಭಜಂತ್ರಿ ಗುತ್ತಿಗೆ ಹಿಡಿದು ವ್ಯವಹಾರ ಮಾಡುತ್ತಿದ್ದ. ಇದಲ್ಲವನ್ನೂ ಸಂಸ್ಥೆ ಗಮನಿಸಿ ಕ್ರಮ ಕೈಗೊಂಡಿದೆ. ಇಂತಹ ಅನೇಕ ಉದಾಹರಣೆಗಳಿವೆ. ಚಿತ್ರ ಸಮೇತ ದಾಖಲೆಗಳಿವೆ' ಎಂದು ವೆಂಕಟೇಶ್ವರರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT