ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ ತೆಲಂಗಾಣಕ್ಕೆ ಹೊಸ ಪ್ರಸ್ತಾಪ

Last Updated 2 ಡಿಸೆಂಬರ್ 2013, 20:08 IST
ಅಕ್ಷರ ಗಾತ್ರ

ನವದೆಹಲಿ:  ರಾಯಲಸೀಮಾದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸಿ ರಾಯಲ ತೆಲಂಗಾಣ ರಚಿಸುವ ಪ್ರಸ್ತಾಪವೊಂದನ್ನು ಯುಪಿಎಯಲ್ಲಿನ ಒಂದು ಬಣ ಮುಂದಿಟ್ಟಿದ್ದು, ಆಂಧ್ರಪ್ರದೇಶದ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಉದ್ದೇಶಿತ ತೆಲಂಗಾಣದ ಬದಲಾಗಿ ರಾಯಲ ತೆಲಂಗಾಣ ರಚಿಸುವ ಹೊಸ ಪ್ರಸ್ತಾಪ ರಾಜ್ಯ ವಿಭಜನೆಯ ಪ್ರಕ್ರಿಯೆನ್ನು ಮತ್ತಷ್ಟು ವಿಳಂಬಗೊಳಿಸುವ ಸಾಧ್ಯತೆಯಿದೆ. ಜುಲೈ ೩೦ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಯಲ ತೆಲಂಗಾಣ ವಿಚಾರ ಮೊದಲ ಬಾರಿ ಚರ್ಚೆಗೆ ಬಂದಿತ್ತು. ಆಂಧ್ರ ವಿಭಜನೆಯ ಪರ ಮತ್ತು ವಿರೋಧವಾಗಿ ತೀಕ್ಷ್ಣ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಈಗ ಮತ್ತೊಮ್ಮೆ ಈ ವಿಷಯ ಜೀವ ಪಡೆದಿದೆ.

ಕಳೆದ ವಾರ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ದಾಮೋದರ ರಾಜನರಸಿಂಹ, ಕೇಂದ್ರ ನಾಯಕರ ಜತೆ ಮಾತುಕತೆ ನಡೆಸುವಾಗ ರಾಯಲಸೀಮೆಯ ಎರಡು ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರ್ಪಡೆಗೊಳಿಸುವ ವಿಚಾರ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಹೈದರಾಬಾದ್‌ ಮೇಲೆ ಹಿಡಿತ ಇಟ್ಟುಕೊಳ್ಳಲು ಯತ್ನಿಸುತ್ತಿರುವ ಸೀಮಾಂಧ್ರ ಭಾಗದ ನಾಯಕರು ತಂದ ಒತ್ತಡದಿಂದಾಗಿ ಈ ಪ್ರಸ್ತಾಪ ಮುಂದಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಪ್ರಸ್ತಾಪಕ್ಕೆ ತೆಲಂಗಾಣ ಭಾಗದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ರಾಯಲಸೀಮೆಯ ಎರಡು ಜಿಲ್ಲೆಗಳನ್ನು ಸೇರಿಸುವ ಪ್ರಸ್ತಾಪಕ್ಕೆ ನನ್ನ ವಿರೋಧ ಇದೆ. ಮೊದಲ ಸುತ್ತಿನ ಮಾತುಕತೆಗಳಲ್ಲಿ ಈ ವಿಚಾರ ಇರಲಿಲ್ಲ. ಕೊನೆಯ ಹಂತದಲ್ಲಿ ಅದನ್ನು ಸೇರಿಸುವುದು ಸರಿಯಲ್ಲ’ ಎಂದು ತೆಲಂಗಾಣ ಭಾಗದ ಪ್ರಮುಖ ನಾಯಕರಾಗಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್‌. ಜೈಪಾಲ ರೆಡ್ಡಿ ಅವರು ಹೇಳಿದ್ದಾರೆ. ತೆಲಂಗಾಣ ಭಾಗದ ಮತ್ತೊಬ್ಬ ಹಿರಿಯ ಕಾಂಗ್ರೆಸ್‌ ನಾಯಕ ಡಿ. ಶ್ರೀನಿವಾಸ ಸಹ ಈ ಪ್ರಸ್ತಾಪ ವಿರೋಧಿಸಿದ್ದು, ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT