ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಚಾಲೆಂಜರ್ಸ್‌ಗೆ ವೇಲ್ಸ್ ಸವಾಲು

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅದೃಷ್ಟ ಎಂದರೆ ಹೀಗೆ ಬಂದು ಒಲಿಯುತ್ತದೆ. ರಾಯಲ್ ಚಾಲೆಂಜರ್ಸ್‌ಗೆ ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ. ಆಗ ಸೆಮಿಫೈನಲ್ ತಲುಪುವುದೇ ಕಷ್ಟ ಎನಿಸಿತ್ತು. ಆದರೆ ಕೊನೆಯ ಎರಡು ಹಣಾಹಣಿಯಲ್ಲಿ ಲೆಕ್ಕಾಚಾರವೇ ಬದಲಾಯಿತು. ಗೆಲುವೆನ್ನುವ ಬೆಳಕು ಮೂಡಿತು. ಕಾಡಿದ್ದ ಆಂತಕವನ್ನು ದೂರಕ್ಕೆ ದೂಡಿತು!

ಬಾಡಿದ್ದ ಡೇನಿಯಲ್ ವೆಟೋರಿ ಮುಖದಲ್ಲಿಯೂ ಪ್ರಶಸ್ತಿಯ ಕಡೆಗೆ ದಾಪುಗಾಲಿಡುವ ಸಂತಸ ನಲಿದಾಡಿತು. ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ `ಬಿ~ ಗುಂಪಿನಲ್ಲಿ ಸಂಕಷ್ಟದಲ್ಲಿದ್ದ ಬೆಂಗಳೂರಿನ ತಂಡವು ಪುಟಿದೆದ್ದ ಅದ್ಭುತವಾದ ರೀತಿಯೇ ಇಂಥದೊಂದು ಸಂಭ್ರಮಕ್ಕೆ ಕಾರಣ. ಲೀಗ್ ಹಂತದಲ್ಲಿ ರನ್‌ಗಳ ಸರಾಸರಿಯಲ್ಲಿ ತೂಗಿದಾಗಲೂ ಅದೃಷ್ಟವು ಚಾಲೆಂಜರ್ಸ್ ಕೈಬಿಡಲಿಲ್ಲ. ಪರಿಣಾಮವಾಗಿ ಸೆಮಿಫೈನಲ್‌ನಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ಹೋರಾಡುವ ಅವಕಾಶ.

ಉದ್ಯಾನನಗರಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಶುಕ್ರವಾರ ನಡೆಯಲಿದೆ ವೇಲ್ಸ್ ಪಡೆಗೆ ಚಾಲೆಂಜರ್ಸ್ ತಂಡದವರ ಸವಾಲು. ಲೀಗ್ ಹಂತದಲ್ಲಿನಂತೆ ಎಡವಿ ಬಿದ್ದು ಎದ್ದೇಳಲು ಮತ್ತೊಂದು ಅವಕಾಶವಿಲ್ಲ. ಆದ್ದರಿಂದ ಗೆದ್ದು ಫೈನಲ್‌ನತ್ತ ದಾಪುಗಾಲು ಇಡಬೇಕು. ತನ್ನದೇ ಅಂಗಳದಲ್ಲಿ ಆಡುತ್ತಿರುವುದರಿಂದ ವಿಜಯ್ ಮಲ್ಯ ಒಡೆತನದ ತಂಡವು ಮತ್ತೊಂದು ಅದ್ಭುತ ವಿಜಯದ ಕನಸು ಕಾಣುತ್ತಿರುವುದಂತೂ ಸಹಜ.

ಪಟ್ಟು ಸಡಿಲಗೊಳಿಸದೇ ದಿಟ್ಟ ಆಟವಾಡಿ ಸೌತ್ ಆಸ್ಟ್ರೇಲಿಯಾ ಎದುರು ಮೆಚ್ಚುವಂಥ ವಿಜಯ ಸಾಧಿಸಿದ ವೆಟೋರಿ ಬಳಗದವರ ವಿಶ್ವಾಸ ಮುಗಿಲೆತ್ತರದಲ್ಲಿದೆ. ಆದರೂ ನ್ಯೂ ಸೌತ್ ವೇಲ್ಸ್ ಸುಲಭದ ಎದುರಾಳಿಯಲ್ಲ ಎನ್ನುವ ಎಚ್ಚರಿಕೆಯನ್ನು ಮನದಲ್ಲಿ ಗಟ್ಟಿಯಾಗಿ ನೆಟ್ಟುಕೊಂಡಿದ್ದಾರೆ.

ಸೈಮನ್ ಕ್ಯಾಟಿಚ್ ನಾಯಕತ್ವದ ವೇಲ್ಸ್ ಚುಟುಕು ಕ್ರಿಕೆಟ್‌ನಲ್ಲಿ ಭಾರಿ ಬಲಾಢ್ಯ. ಅದಕ್ಕೆ ಲೀಗ್ ಹಂತದಲ್ಲಿಯೇ ಸ್ಪಷ್ಟ ಸಾಕ್ಷಿ ಸಿಕ್ಕಿದೆ. ಟ್ರಿನಿಡಾಡ್ ಅಂಡ್ ಟೊಬಾಗೊ, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬಂದಿರುವ ತಂಡ ಇದು. `ಎ~ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕೇಪ್ ಕೋಬ್ರಾಸ್ ವಿರುದ್ಧ ಆಘಾತ ಅನುಭವಿಸಿದರೂ, ಬೆರಗಾಗುವ ರೀತಿಯಲ್ಲಿ ಚೇತರಿಕೆ ಕಂಡಿದೆ.

`ಆರ್‌ಸಿಬಿ~ ಕೂಡ ಬಿದ್ದು ಆನಂತರ ಎದ್ದಿರುವ ತಂಡ. ವಾರಿಯಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಸೋಲಿನ ನಂತರ ಅಗತ್ಯವಾಗಿದ್ದ ಎರಡು ಗೆಲುವು ಪಡೆಯಿತು ಎನ್ನುವುದೇ ಸಮಾಧಾನ. ಸಾಮರ್ಸೆಟ್ ಹಾಗೂ ಸೌತ್ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 51 ರನ್ ಹಾಗೂ 2 ವಿಕೆಟ್‌ಗಳ ಅಂತರದಲ್ಲಿ ಜಯಿಸಿದ್ದು ಚಾಲೆಂಜರ್ಸ್‌ಗೆ ಪ್ರಯೋಜನಕಾರಿ. ಅದಕ್ಕಿಂತ ಮುಖ್ಯವಾಗಿ ನಿಕಟ ಸ್ಪರ್ಧೆಯಲ್ಲಿದ್ದ ರೈಡರ್ಸ್ (+0.306) ಮತ್ತು ವಾರಿಯರ್ಸ್ (+0.246) ತಂಡಗಳನ್ನು ರನ್ ಸರಾಸರಿಯಲ್ಲಿ ಹಿಂದೆ ಹಾಕಿದ್ದು. ಲೀಗ್ ಹಂತದಲ್ಲಿ ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟುಗಳನ್ನು ಗಳಿಸಿ, ರನ್ ಸರಾಸರಿಯನ್ನು +0.325 ಆಗಿಸಿಕೊಂಡ ಬೆಂಗಳೂರಿನ ತಂಡವು ಗುಂಪಿನಲ್ಲಿ ಎರಡನೇ ಸ್ಥಾನ ಗಿಟ್ಟಿಸಿದ ರೀತಿಯೇ ಅದ್ಭುತ.

ಚಾಲೆಂಜರ್ಸ್ ಛಲದಿಂದ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದ್ದು ಕ್ರಿಸ್ ಗೇಲ್, ವಿರಾಟ್ ಕೊಹ್ಲಿ ಹಾಗೂ ತಿಲಕರತ್ನೆ ದಿಲ್ಶಾನ್ ಅಬ್ಬರದ ಬ್ಯಾಟಿಂಗ್. ಆದರೆ ವೆಟೋರಿ ಮುಂದಾಳತ್ವದ ತಂಡವು ನಾಲ್ಕರ ಘಟ್ಟದಲ್ಲಿ ಸ್ಥಾನ ಗಿಟ್ಟಿಸಲು ಕಾರಣಕರ್ತ ಎನಿಸಿದ್ದು ಮಾತ್ರ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅರುಣ್ ಕಾರ್ತಿಕ್. ಸೌತ್ ಆಸ್ಟ್ರೇಲಿಯಾ ವಿರುದ್ಧ ಅವರು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸದಿದ್ದರೆ ಸೆಮಿಫೈನಲ್ ಕನಸಿನ ಮುತ್ತು ಕೈಜಾರಿ ಬೀಳುವುದು ಖಚಿತವಾಗಿತ್ತು. ಆದ್ದರಿಂದ ಕಾರ್ತಿಕ್ ದಿನ ಬೆಳಗಾಗುವುದರಲ್ಲಿ ಉದ್ಯಾನನಗರಿಯವರಿಗೆ `ಹೀರೊ~ ಆಗಿದ್ದಾರೆ.

ಬೌಲಿಂಗ್‌ಗಿಂತ ಬ್ಯಾಟಿಂಗ್ ವಿಭಾಗದಲ್ಲಿನ ಬಲವನ್ನು ನೆಚ್ಚಿಕೊಂಡಿರುವ ಚಾಲೆಂಜರ್ಸ್ ತಂಡವು ಶುಕ್ರವಾರದ ಪಂದ್ಯಕ್ಕಾಗಿ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತದೆಂದು ನಿರೀಕ್ಷೆ ಮಾಡಲಾಗದು. ಗೇಲ್, ದಿಲ್ಶಾನ್ ಹಾಗೂ ಕೊಹ್ಲಿ ಗಟ್ಟಿತನದ ಆಟವಾಡಿದರೆ ಮುಂದಿನ ಹಾದಿ ಸುಗಮ ಎನ್ನುವುದು ವೆಟೋರಿಗೂ ಗೊತ್ತು. ಆದರೆ ಸೌತ್ ವೇಲ್ಸ್ ತಂಡದ ಸ್ಟೀವ್ ಓಕೀಫ್, ಸ್ಟುವರ್ಟ್ ಕ್ಲಾಕ್, ಮೈಕಲ್ ಸ್ಟಾರ್ಕ್ ಹಾಗೂ ಮೋಸೆಸ್ ಹೆನ್ರಿಕ್ಸ್ ಬೌಲಿಂಗ್ ದಾಳಿಯನ್ನು ಎಷ್ಟು ಸಮರ್ಥವಾಗಿ ಆತಿಥೇಯರು ನಿಭಾಯಿಸುತ್ತಾರೆ ಎನ್ನುವುದೇ ನಿರ್ಣಾಯಕ.

ಸೌತ್ ವೇಲ್ಸ್ ಕೂಡ ಬ್ಯಾಟಿಂಗ್‌ನಲ್ಲಿ ಬಲಾಢ್ಯವಾಗಿದೆ. ಡೇವಿಡ್ ವಾರ್ನರ್ ಹಾಗೂ ಡೇನಿಯಲ್ ಸ್ಮಿತ್ ಅವರನ್ನು ಬೇಗ ನಿಯಂತ್ರಿಸುವುದು ಅಗತ್ಯ. ಇವರಿಬ್ಬರು ಕ್ರೀಸ್‌ನಲ್ಲಿ ಗಟ್ಟಿಯಾದರೆ ಚಾಲೆಂಜರ್ಸ್‌ಗೆ ಅಪಾಯ ಖಚಿತ!

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಡೇನಿಯಲ್ ವೆಟೋರಿ (ನಾಯಕ), ಮಯಾಂಕ್ ಅಗರ್ವಾಲ್, ಶ್ರೀನಾಥ್ ಅರವಿಂದ್, ಅರುಣ್ ಕಾರ್ತಿಕ್, ರಾಜು ಭಟ್ಕಳ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಲ್, ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ಅಭಿಮನ್ಯು ಮಿಥುನ್, ಡರ್ಕ್ ನಾನೆಸ್, ಅಸದ್ ಪಠಾಣ್, ಜಮಾಲುದ್ದೀನ್ ಸಯ್ಯದ್ ಮೊಹಮ್ಮದ್, ಸೌರಭ್ ತಿವಾರಿ.

ನ್ಯೂ ಸೌತ್ ವೇಲ್ಸ್: ಸೈಮನ್ ಕ್ಯಾಟಿಚ್ (ನಾಯಕ), ಸ್ಟುವರ್ಟ್ ಕ್ಲಾರ್ಕ್, ಪ್ಯಾಟ್ ಕಮಿನ್ಸ್, ನಥಾನ್ ಹೌರಿಜ್, ಜೋಶ್ ಹ್ಯಾಜಲ್‌ವುಡ್, ಮೋಸೆಸ್ ಹೆನ್ರಿಕ್ಸ್, ಫಿಲಿಪ್ ಹಗ್ಸ್, ನಿಕ್ ಮ್ಯಾಡಿನ್‌ಸನ್, ಸ್ಟೀವ್ ಓಕೀಫ್, ಡೇನಿಯಲ್ ಸ್ಮಿತ್, ಸ್ಟೀವನ್ ಸ್ಮಿತ್, ಮೈಕಲ್ ಸ್ಟಾರ್ಕ್, ಡೇವಿಡ್ ವಾರ್ನರ್ ಮತ್ತು ಶೇನ್ ವ್ಯಾಟ್ಸನ್.
ಪಂದ್ಯ ಆರಂಭ: ರಾತ್ರಿ 8.00ಕ್ಕೆ.
ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT