ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭದ್ರತೆಗೆ ಸವಾಲು

Last Updated 26 ಆಗಸ್ಟ್ 2011, 19:00 IST
ಅಕ್ಷರ ಗಾತ್ರ

`ಆಧಾರ್~ ಯೋಜನೆಯನ್ನು ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂಬುದನ್ನು ಒಪ್ಪಿಕೊಂಡರೂ ಅದನ್ನು ಜಾರಿಗೆ ತರುತ್ತಿರುವ ವಿಧಾನವನ್ನು ನೋಡಿದರೆ ಈ ಯೋಜನೆಯೇ ರಾಷ್ಟ್ರೀಯ ಭದ್ರತೆಗೆ ಸವಾಲಾಗಲಾರದೇ ಎಂಬ ಸಂಶಯ ಹುಟ್ಟುತ್ತದೆ.
 
ಸುಪ್ರೀಂಕೋರ್ಟ್‌ನ ನ್ಯಾಯವಾದಿ ಹಾಗೂ ಅಸೋಚಾಮ್‌ನ ಸೈಬರ್ ಕಾನೂನು ಸಮಿತಿಯ ಮುಖ್ಯಸ್ಥ ಪವನ್ ದುಗ್ಗಲ್ ಅವರು ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿರುವ ಖಾಸಗಿ ಕಂಪೆನಿಗಳ ಮೂಲದ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯನ್ವಯ ಕೇಳಿದ್ದರು.

ಹಲವು ತಿಂಗಳುಗಳ ಪ್ರಯತ್ನದ ನಂತರ ಅವರಿಗೆ ದೊರೆತ ಮಾಹಿತಿಯಲ್ಲೂ ಈ ಕಂಪೆನಿಗಳ ನಿಜ ಮೂಲದ ವಿವರಗಳಿರಲಿಲ್ಲ ಎಂದು ಅವರು ತಮ್ಮ ವಿವರವಾದ ಲೇಖನದಲ್ಲಿ ಹೇಳಿದ್ದಾರೆ.

ಹಲವು ಕಂಪೆನಿಗಳು ತಮ್ಮ ಮೂಲವನ್ನು ದೇಶದ ಪ್ರತಿಷ್ಠಿತ ವಿಳಾಸಗಳಲ್ಲೇ ಗುರುತಿಸಿಕೊಂಡಿದ್ದರೂ ಅವುಗಳ ನಿಜ ಮೂಲ `ತೆರಿಗೆ ಸ್ವರ್ಗ~ಗಳಲ್ಲಿವೆ ಎಂಬ ಅಂಶವನ್ನು ಅವರು ಬಯಲು ಮಾಡಿದ್ದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯೋಜನೆಯನ್ನು `ಗುರುತು ಸ್ಪಷ್ಟವಿಲ್ಲದ~ ಕಂಪೆನಿಗಳ ಪಾಲುದಾರಿಕೆಯಲ್ಲಿ ನಡೆಸುವುದು ಎಷ್ಟು ಸುರಕ್ಷಿತ?

ಇರಾನ್‌ನ ಯುರೇನಿಯಂ ಸಂಸ್ಕರಣಾ ಕ್ರಿಯೆಯನ್ನು ಬಹುತೇಕ ವಿಫಲಗೊಳಿಸಿದ್ದು ಸ್ಟಕ್ಸ್‌ನೆಟ್ ಎಂಬ ವೈರಸ್. ಇದರ ಕುರಿತಂತೆ ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ ಮಾಡಿದ ವರದಿಯೊಂದು ಹೇಳುವಂತೆ ಈ ವೈರಸ್ ಸೃಷ್ಟಿಸಿದ್ದು ಅಮೆರಿಕ ಮತ್ತು ಇಸ್ರೇಲ್‌ಗಳು.

ಇರಾನ್‌ನ ಯುರೇನಿಯಂ ಸಂಸ್ಕರಣಾ ಮಾದರಿಯ ಸ್ಥಾವರಗಳಲ್ಲಿ ಇದು ಪರೀಕ್ಷಿಸಿಯೇ ವೈರಸ್ ಅನ್ನು ಬಿಡುಗಡೆ ಮಾಡಲಾಗಿತ್ತಂತೆ. ಇಂಥದ್ದೊಂದು ಸಮಸ್ಯೆಯನ್ನು `ಆಧಾರ್~ ಕೂಡಾ ಎದುರಿಸಬಾರದು ಎಂದೇನೂ ಇಲ್ಲ.

`ಆಧಾರ್~ ಯೋಜನೆಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯ ಮಾಜಿ ನಿರ್ದೇಶಕರೂ ಇರುವ ಎಲ್-1 ಐಡೆಂಟಿಟಿ ಸಲ್ಯೂಷನ್ಸ್ ಕೂಡಾ ಪಾಲ್ಗೊಂಡಿದೆ. ಈ ಸಂಸ್ಥೆಯ ನಿರ್ದೇಶಕರಲ್ಲಿ ಬಹುತೇಕರು ಅಮೆರಿಕದ ರಕ್ಷಣಾ ಇಲಾಖೆಯೊಂದಿಗೆ ಸಂಬಂಧವಿರುವವರೇ ಇದ್ದಾರೆ.

`ಆಧಾರ್~ನ ಬಹುಮುಖ್ಯ ಭಾಗವಾಗಿರುವ ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸುವ ಮತ್ತು ಸಂಗ್ರಹಿಸುವ ವಿಧಾನವನ್ನು ರೂಪಿಸಿರುವುದೇ ಈ ಸಂಸ್ಥೆ.

ಮುಂದೊಂದು ದಿನ ಭಾರತದ ಪ್ರತಿಯೊಬ್ಬನ ವಿವರಗಳೂ ಅಮೆರಿಕದ ರಕ್ಷಣಾ ಇಲಾಖೆಯ ಕೈ ಸೇರುವುದಿಲ್ಲ ಎಂದು ಹೇಗೆ ನಂಬುವುದು?  ಯೋಜನೆ ಸಂಪೂರ್ಣಗೊಳ್ಳುವ ಹೊತ್ತಿಗೆ 120 ಕೋಟಿ ಭಾರತೀಯ ಪ್ರಜೆಗಳ ಗುರುತು ವಿವರಗಳು ಆಧಾರ್ ದತ್ತ ಸಂಚಯದಲ್ಲಿರುತ್ತದೆ.

ಈ ವಿವರಗಳನ್ನು ಗ್ಯಾಸ್ ವಿತರಕರು, ಬ್ಯಾಂಕು, ಸರ್ಕಾರಿ ಇಲಾಖೆಗಳು ಮುಂತಾದುವುಗಳೆಲ್ಲವೂ ತಮ್ಮ ವ್ಯವಹಾರಗಳ ವೇಳೆ ಬಳಸಹೊರಟರೆ ಏನಾಗಬಹುದು?

ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಆಟೋಮೇಶನ್ ವಿಭಾಗದ ಪ್ರೊಫೆಸರ್ ಕೆ. ಗೋಪಿನಾಥ್ ಅವರು ಹೇಳುವಂತೆ `ಇದು ಅಸಾಧ್ಯ ಎಂದು ನಾನು ಹೇಳುತ್ತಿಲ್ಲ. ಆದರೆ ಇದನ್ನು ತಪ್ಪಿಲ್ಲದಂತೆ ಮತ್ತು ವಿಶ್ವಾಸಾರ್ಹವಾಗಿ ಮಾಡುವುದಕ್ಕೆ ಅಗತ್ಯವಿರುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ.

ವಿದ್ಯುತ್, ಇಂಟರ್‌ನೆಟ್ ಎಲ್ಲವೂ ಅನಿಶ್ಚಿತವಾಗಿರುವ ಭಾರತೀಯ ಸಂದರ್ಭದಲ್ಲಂತೂ ಇದು ಮತ್ತಷ್ಟು ಸಮಸ್ಯೆಗಳನ್ನು ತಂದಿಡುತ್ತದೆ. ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಒಂದು ವೇಳೆ `ಆಧಾರ್~ ದತ್ತಸಂಚಯ ಸ್ಥಗಿತಗೊಂಡಿತು ಎಂದರೆ ಅದಕ್ಕೆ ಪರ್ಯಾಯವೇನು ಎಂಬುದನ್ನು ಈ ತನಕ ಯಾರೂ ವಿವರಿಸಿಲ್ಲ~.

ದತ್ತಸಂಚಯಕ್ಕೂ ಪರ‌್ಯಾಯ ವ್ಯವಸ್ಥೆ ಇರಬೇಕಲ್ಲವೇ ಎನ್ನುವುದು ಗೋಪಿನಾಥ್ ಅವರ ಪ್ರಶ್ನೆ. ತಾಂತ್ರಿಕವಾಗಿ ನೋಡಿದರೆ `ಆಧಾರ್~ನ ಎಲ್ಲಾ ವಿವರಗಳನ್ನು ಒಂದೆಡೆ ಸಂಗ್ರಹಿಸಿಡಲು ಸಾಧ್ಯವಿಲ್ಲ.
 
ಇದನ್ನು ಹಂಚಿ ಬೇರೆ ಬೇರೆ ಪಾರ್ಟಿಷನ್‌ಗಳಲ್ಲಿ ಇಡಬೇಕಾಗುತ್ತದೆ. ಅಂದರೆ ಒಂದೆಡೆಯಿಂದ ವೈಯಕ್ತಿಕ ಗುರುತಿಗೆ ಸಂಬಂಧಿಸಿದ ಪ್ರಶ್ನೆಯೊಂದು ಬಂದರೆ ಅದು ಬೇರೆ ಬೇರೆಡೆಗಳಲ್ಲಿರುವ ವಿವರಗಳನ್ನು ಕಂಪ್ಯೂಟರ್ ಹುಡುಕಿ ಉತ್ತರ ಕೊಡಬೇಕಾಗುತ್ತದೆ.

ಸಂದೇಶ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವ ಈ ಪ್ರಕ್ರಿಯೆ ಎಷ್ಟೋ ಬಾರಿ ಉತ್ತರವನ್ನು ನೀಡದೇ ಇರಬಹುದು. ಈಗಾಗಲೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ನ ವ್ಯವಹಾರಗಳ ಸಂದರ್ಭದಲ್ಲೂ ಇದು ಉದ್ಭವಿಸುತ್ತಿದೆ. ದತ್ತಾಂಶದ ಪ್ರಮಾಣ ಸಣ್ಣದಾಗಿರುವುದರಿಂದ ಕೆಲವು ಪ್ರಯತ್ನಗಳಲ್ಲಿ ಸರಿಯಾದ ಫಲಿತಾಂಶ ಸಿಗಬಹುದು.

ಆದರೆ 120 ಕೋಟಿ ಜನರ ಮಾಹಿತಿಯನ್ನು ಸುರಕ್ಷಿತವಾಗಿ ಒಂದೆಡೆ ಸಂಗ್ರಹಿಸಿದಂಥ ಉದಾಹರಣೆಗಳು ನಮಗೆ ಲಭ್ಯವಿಲ್ಲ. ಎಲ್ಲಾ ಸುರಕ್ಷಾ ವಲಯಗಳನ್ನು ದಾಟುವ ಕ್ರಿಯೆಯೇ ಬಳಕೆದಾರನಲ್ಲಿ ರೇಜಿಗೆ ಹುಟ್ಟಿಸಬಹುದು.

ಸಂದೇಶಗಳ ಸಂಖ್ಯೆ ಹೆಚ್ಚಾಗಿ ಉತ್ತರವೇ ಸಿಗದಂಥ ಸಂದರ್ಭದಲ್ಲಿ ವ್ಯವಹಾರದ ಗತಿ ಏನು? ಎಟಿಎಂನಲ್ಲಿ ಹಣ ಬಾರದಿದ್ದಾಗ ಸಹನೆ ಕಳೆದುಕೊಳ್ಳುವವರು ಮನೆಗೆ ಗ್ಯಾಸ್ ತಲುಪಿಸಲು ಬಂದವನು ನಿಮ್ಮ ಗುರುತು ಸಿಗುತ್ತಿಲ್ಲ ಎಂದು ಸಿಲಿಂಡರ್ ಹಿಂದಕ್ಕೆ ಕೊಂಡೊಯ್ಯಲು ಹೊರಟರೆ ಹೇಗೆ ಪ್ರತಿಕ್ರಿಯಿಸಬಹುದು?

ವಿಶಿಷ್ಟ ಗುರುತಿಗಾಗಿ ಕಣ್ಣಿನ ಪಾಪೆ ಮತ್ತು ಬೆರಳಚ್ಚುಗಳನ್ನು ಬಳಸಲಾಗುತ್ತಿದೆ. ಈ ಎರಡೂ ತಂತ್ರಗಳೂ ಸಂಪೂರ್ಣ ವಿಶ್ವಾಸಾರ್ಹವಲ್ಲ. ಭಾರತದ ಸಂದರ್ಭದಲ್ಲಂತೂ ಇದು ಹಲವು ಕೋಟಿ ಜನರ `ಪೌರತ್ವ~ವನ್ನೇ ನಿರಾಕರಿಸಿಬಿಡಬಹುದು. ಏಕೆಂದರೆ ದೈಹಿಕ ಕೆಲಸಗಳಲ್ಲಿ ತೊಡಗಿಕೊಂಡಿರುವ ಕೈ ಬೆರಳಚ್ಚುಗಳನ್ನು ದಾಖಲಿಸುವುದು ಕಷ್ಟ. ಭಾರತದಲ್ಲಿ ಅಂಥವರ ಸಂಖ್ಯೆ 20 ಕೋಟಿಯಷ್ಟಿದೆ.

ಸಾಮಾನ್ಯ ಸಂದರ್ಭದಲ್ಲೇ ಹೀಗೆ ಸರಿಯಾಗಿ ಗುರುತಿಸಲಾಗದ ಬೆರಳಚ್ಚುಗಳ ಪ್ರಮಾಣ ಶೇಕಡಾ 15. ಇದಕ್ಕೆ 20 ಕೋಟಿಯನ್ನು ಸೇರಿಸಿಕೊಂಡರೆ ಅದರ ಪ್ರಮಾಣವೆಷ್ಟಾಗಬಹುದು? ಕ್ಯಾಟರಾಕ್ಟ್ ಇತ್ಯಾದಿ ಸಮಸ್ಯೆಗಳಿಂದ ಬಳಲುವವರ ವಿಷಯದಲ್ಲಿ ಐರಿಸ್ ದಾಖಲೆಗಳು ಪ್ರಯೋಜನಕ್ಕೆ ಬರುವುದಿಲ್ಲ. ಹುಟ್ಟು ಕುರುಡುತನ, ಅಂಗವಿಕಲರು ಮುಂತಾದವರನ್ನೂ ಸೇರಿಸಿಕೊಂಡರೆ ಸಮಸ್ಯೆ ಸಂಕೀರ್ಣತೆಯ ಕಾರಣಕ್ಕೆ ವಿಶಿಷ್ಟವಾಗಿಬಿಡುತ್ತದೆ.

ಪ್ರೈವೆಸಿ ಸಮಸ್ಯೆ: ಅಡಿಯಿಂದ ಮುಡಿವರೆಗೆ ಭ್ರಷ್ಟಾಚಾರ  ಇರುವ ದೇಶದಲ್ಲಿ `ಆಧಾರ್~ ವಿವರಗಳ ಸೋರಿಕೆಯಾಗುವುದಿಲ್ಲ ಎಂಬುದನ್ನು ನಂಬುವುದು ಕಷ್ಟ.

`ಕೆವೈಆರ್~(ನೊ ಯುವರ್ ರೆಸಿಡೆನ್ಸ್) ಎಂಬ ಹೆಸರಿನಲ್ಲಿ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ಮೇಲೆ ಅವುಗಳನ್ನು ಸಂಗ್ರಹಿಸುವ `ರಿಜಿಸ್ಟ್ರಾರ್~ಗಳಾಗಿರುವ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಹಿಡಿತವಿರುತ್ತದೆ. ಇದರಲ್ಲಿ ಅನೇಕ ವಿವರಗಳು   `ಐಚ್ಛಿಕ~ ಎನ್ನಲಾಗುತ್ತಿದ್ದರೂ ರಿಜಿಸ್ಟ್ರಾರ್‌ಗಳು ಈ ಮಾಹಿತಿಯನ್ನು ಜನರಿಗೆ ನೀಡುತ್ತಿಲ್ಲ.

ಬ್ಯಾಂಕ್ ಖಾತೆಯ ಸಂಖ್ಯೆಯಿಂದ ಆರಂಭಿಸಿ ವಿಳಾಸದ ತನಕದ ಈ ವಿವರಗಳನ್ನು ಖಾಸಗಿ ಕ್ಷೇತ್ರ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಈಗಾಗಲೇ ಜನರನ್ನು ಕಾಡುತ್ತಿರುವ ಸ್ಪ್ಯಾಮ್ ಎಸ್‌ಎಂಎಸ್‌ಗಳೇ ಸಾಕ್ಷಿ.

ಎಲ್ಲದಕ್ಕಿಂತ ಹೆಚ್ಚು ಭಯ ಹುಟ್ಟಿಸುವುದು ಇಂಥದ್ದೊಂದು ಯೋಜನೆಗೆ ಮುನ್ನ ವೈಯಕ್ತಿಕ ವಿವರಗಳ ರಕ್ಷಣೆಗೆ ಸಂಬಂಧಿಸಿದ ಕಾನೂನೊಂದನ್ನು ರೂಪಿಸಬೇಕು.

ಅಂಥದ್ದೊಂದು ಕಾನೂನು ಇನ್ನು ರೂಪುಗೊಳ್ಳುತ್ತಲೇ ಇರುವ ಹೊತ್ತಿನಲ್ಲಿ ಬೆರಳಚ್ಚಿನಿಂದ ಆರಂಭಿಸಿದ ಎಲ್ಲಾ ವಿವರಗಳನ್ನು `ಆಧಾರ್~ಗಾಗಿ ನೋಂದಾಯಿಸುವ ಏಜೆನ್ಸಿಗಳಿಗೆ ಹೇಗೆ ಒಪ್ಪಿಸುವುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT