ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ದ್ರಾವಿಡ್ ಹೀಗೆ ಬಂದು ಹಾಗೆ ಹೋದಾಗ...

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಕೋರಮಂಗಲದ ಫೋರಂ ಮಾಲ್. ಮಧ್ಯಾಹ್ನ 12.30. ಯಾವಾಗಲೂ ಗ್ರಾಹಕರಿಂದ ಗಿಜಿಗುಡುತ್ತಿದ್ದ ಮಳಿಗೆಗಳೆಲ್ಲಾ ಆ ಸಮಯದಲ್ಲಿ ಖಾಲಿ ಖಾಲಿ.ಶಾಪಿಂಗ್ ಮಾಡಲು ಬಂದಿದ್ದವರೆಲ್ಲಾ ಒಂದೇ ಕಡೆ ಸೇರಿದ್ದರು.

ಅವರಲ್ಲಿ ಹೆಚ್ಚಿನವರು ಯುವಕ ಯುವತಿಯರು. ಅವರೆಲ್ಲರೂ ಸೆಲೆಬ್ರಿಟಿಯೊಬ್ಬರ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಅವರ ಕಾತರದ ಮುಖಭಾವವೇ ಹೇಳುತ್ತಿತ್ತು.

 ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ರಿಟೇಲ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿವೇಕ್ ಲಿಮಿಟೆಡ್, ಫೋರಂ ಮಾಲ್‌ನಲ್ಲಿ ಹೊಸದಾಗಿ ತೆರೆದಿರುವ ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆ `ವಿವೇಕ್ಸ್ ಡಿಜಿಟಲ್ಸ್ 1~ರ ಉದ್ಘಾಟನೆಯ ಸಂದರ್ಭ ಅದು. ಕೆಲವು ತಿಂಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಕಣ್ತುಂಬಿಕೊಳ್ಳಲು ಅಷ್ಟು ಜನ ಕಾಯುತ್ತಿದ್ದರು.

ಮಾಲ್‌ಗೆ ಬಂದಿದ್ದ ಮಹಿಳೆಯ ತೆಕ್ಕೆಯಲ್ಲಿದ್ದ ಮಗು ಮಳಿಗೆಯೊಂದರ ಶೊಕೇಸ್‌ನಲ್ಲಿಟ್ಟ ಗೊಂಬೆಯತ್ತ ಕೈ ತೋರುತ್ತಾ ಅದನ್ನು ಕೊಡಿಸುವಂತೆ ದುಂಬಾಲು ಬೀಳುತ್ತಿತ್ತು. ಅಷ್ಟರಲ್ಲಿ ದ್ರಾವಿಡ್ ಬಂದರು. ಅಭಿಮಾನಿಗಳ ಹಿಂಡು ಅವರನ್ನು ಹಿಂಬಾಲಿಸಿತು. ಅಮ್ಮ ಆ ಕಡೆ ಕೈ ತೋರಿಸಿ, `ನೋಡು ಅಲ್ಲಿ ದ್ರಾವಿಡ್ ಅಂಕಲ್~ ಎಂದ ಕೂಡಲೇ ಅಳು ನಿಲ್ಲಿಸಿದ ಮಗು, ಆ ಕಡೆಯೇ ಕುತೂಹಲದಿಂದ ನೋಡಲು ಆರಂಭಿಸಿತು.

ಅಭಿಮಾನಿಗಳತ್ತ ಮಂದಹಾಸ ಬೀರುತ್ತಲೇ ಸಾಗಿದದ್ರಾವಿಡ್ ಹೊಸ ಮಳಿಗೆಯ ಬಾಗಿಲಿಗೆ ಕಟ್ಟಿದ್ದ ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಅಧಿಕೃತವಾಗಿ ಮಳಿಗೆಯನ್ನು ಉದ್ಘಾಟಿಸಿದರು. ಕ್ರಿಕೆಟ್‌ನ ಈ `ವಾಲ್~ಗೆ ಅಭಿಮಾನಿಗಳೇ ಗೋಡೆಯಂತಾದರು! 

 ದ್ರಾವಿಡ್ ಅವರನ್ನು ಸುತ್ತುವರಿದ ಕ್ರಿಕೆಟ್ ಪ್ರೇಮಿಗಳು ಆಟೊಗ್ರಾಫ್ ಪಡೆಯಲು ಮುಗಿಬಿದ್ದರು. ಇನ್ನು ಕೆಲವು ಅಭಿಮಾನಿಗಳು ಅವರ ಬಳಿ ನಿಂತುಕೊಂಡು ಸ್ನೇಹಿತರಿಂದ ಫೋಟೊ ತೆಗೆಸಿಕೊಳ್ಳುವುದರಲ್ಲಿ ತಲ್ಲೆನರಾಗಿದ್ದರು.

ಅವರ ಸಮೀಪಕ್ಕೆ ಹೋಗಲು ಸಾಧ್ಯವಾಗದ ಯುವಕ ಯುವತಿಯರು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಕ್ರಿಕೆಟ್ ದಂತಕತೆಯ ಫೋಟೊ ಸೆರೆ ಹಿಡಿಯಲು ಯತ್ನಿಸಿದರು. ಅದರಲ್ಲಿ ಕೆಲವರು ಯಶಸ್ವಿಯಾದರೆ ಇನ್ನು ಕೆಲವರು ನಿರಾಶರಾದರು.

ಇದು ಯಾವುದೂ ಸಾಧ್ಯವಾಗದವರು ಕೇವಲ ಕಣ್ಣಿನಲ್ಲಿ ಅವರ ಚಿತ್ರವನ್ನು ಕ್ಲಿಕ್ಕಿಸಿಕೊಂಡು ತೃಪ್ತಿ ಪಟ್ಟುಕೊಂಡರು.ಈ ಎಲ್ಲಾ ಗೌಜು ಗದ್ದಲದ ಮಧ್ಯೆಯೇ ಮಳಿಗೆಯ ಮಾಲೀಕರಿಂದ ದ್ರಾವಿಡ್ ಅವರಿಗೆ ಶಾಲು ಹೊದಿಸಿ ಪುಟ್ಟ ಸನ್ಮಾನ.

ಇನ್ನು ಇಲ್ಲಿ ಹೆಚ್ಚು ನಿಲ್ಲಬಾರದು ಎಂದು ನಿರ್ಧರಿಸಿದಂತೆ ಕಂಡುಬಂದ ದ್ರಾವಿಡ್ ಹೊಸ ಮಳಿಗೆಯ ಸುತ್ತಲೂ ಕಣ್ಣು ಹಾಯಿಸಿ, ಮಾಲೀಕರಿಗೆ ಶುಭಾಶಯ ತಿಳಿಸಿ, ಅಭಿಮಾನಿಗಳತ್ತ ಮಗದೊಮ್ಮೆ ನಗು ಬೀರಿ ಹೊರಟರು. ಅಲ್ಲಿ ಜಮಾಯಿಸಿದ್ದ ಜನರ ಹಿಂಡು ಅವರನ್ನೇ ಹಿಂಬಾಲಿಸಿತು.

ಹದಿನೈದು ನಿಮಿಷಗಳ ಕಾಲ ನಡೆದ ಈ ದೃಶ್ಯಾವಳಿಗಳನ್ನು ಒದ್ದೆಯಾದ ಕಣ್ಣಿನಲ್ಲಿ ಕುತೂಹಲದಿಂದ ವೀಕ್ಷಿಸುತ್ತಿದ್ದ ಮಗು,ದ್ರಾವಿಡ್ ಸಾಗುತ್ತಿದ್ದ ಕಡೆಗೆ ಕೈ ಬೀಸುತ್ತಾ`ಟಾಟಾ ಅಂಕಲ್~ ಎಂದು ತೊದಲುತ್ತಿತ್ತು.

ಗೊಂಬೆ ಕೊಡಿಸು ಎಂದು ಪೀಡಿಸುತ್ತಿದ್ದ ಮಗುವನ್ನು ಸಮಾಧಾನ ಮಾಡಿದ ಖುಷಿ ಅಮ್ಮನಿಗೆ. ಕ್ರಿಕೆಟ್ ದಿಗ್ಗಜನನ್ನು ಕಣ್ಣಾರೆ ಕಂಡ ಖುಷಿ ಅಲ್ಲಿ ಸೇರಿದ್ದ ಕ್ರಿಕೆಟ್ ಪ್ರೇಮಿಗಳಿಗೆ. ನಿವೃತ್ತ ಜೀವನದ ಸವಿ ಅನುಭವಿಸುತ್ತಿರುವ ಮಾಜಿ ಕ್ರಿಕೆಟಿಗನ ಮುಂದೆ ಹಲವು ಪ್ರಶ್ನೆಗಳನ್ನಿಡಬೇಕು ಎಂದುಕೊಂಡಿದ್ದ ಮಾಧ್ಯಮ ಮಂದಿಗೆ ಆಗಿದ್ದು ಮಾತ್ರ ನಿರಾಸೆ.

  ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು  ಮಾರುವ ವಿವೇಕ್ ಲಿಮಿಟೆಡ್‌ಗೆ ರಿಟೇಲ್ ಕ್ಷೇತ್ರದಲ್ಲಿ 47 ವರ್ಷಗಳ ಇತಿಹಾಸವಿದೆ. 1965ರಲ್ಲಿ ಆರಂಭಗೊಂಡಿರುವ ಸಂಸ್ಥೆಯು ವಿವೇಕ್ಸ್ ಮತ್ತು ಜೈನ್‌ಸನ್ಸ್ ಎಂಬ ಎರಡು ರಿಟೇಲ್ ಬ್ರಾಂಡ್‌ಗಳನ್ನು ಹೊಂದಿದೆ.

 ತಮಿಳುನಾಡು ಮತ್ತು ಕರ್ನಾಟಕದಲ್ಲಿ ಒಟ್ಟು 47 ಮಳಿಗೆಗಳನ್ನು ಹೊಂದಿರುವ ಸಂಸ್ಥೆಯು ಬೆಂಗಳೂರಿನ ಜಯನಗರದಲ್ಲಿ ಮತ್ತು ಕೋರಮಂಗಲದ ಫೋರಂ ಮಾಲ್‌ನಲ್ಲಿ ಹೊಸದಾಗಿ ಮಳಿಗೆಗಳನ್ನು ತೆರೆದಿದೆ. ಜಯನಗರದ ಮಳಿಗೆಯನ್ನು ಕನ್ನಡದ ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ದ್ವಾರಕೀಶ್ ಉದ್ಘಾಟಿಸಿದರು. ಆ ಮಳಿಗೆಯಲ್ಲೂ ಫೋರಂನಲ್ಲಿ ಇದ್ದಂಥದ್ದೇ ವಾತಾವರಣ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT