ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿಕರ ಸಾಂಬಾರಿಗೆ ಲವಂಗ ಬೀನ್ಸ್

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕೇರಳದ ತಿರುವನಂತಪುರ ಪ್ರವಾಸಕ್ಕೆಂದು ಹೋದ ಪುತ್ತೂರಿನ ರವೀಂದ್ರನಾಥ ಐತಾಳರು ಲವಂಗವನ್ನು ಹೋಲುವ ಕಾಯಿಯನ್ನು ಅಲ್ಲಿನ ಕೃಷಿಕ ಮಿತ್ರರ ತೋಟದಲ್ಲಿ ನೋಡಿದರು.  ಅಲಸಂಡೆಯ ಬಳ್ಳಿಯ ರೀತಿಯಲ್ಲಿ ಹಬ್ಬಿ ಹರಡಿರುವ ಅದರಲ್ಲಿ ಅಲ್ಲಲ್ಲಿ ಹೂವೊಂದನ್ನು ಹೋಲುವ ಕಾಯಿಗಳು.  ನಾಲ್ಕು ಇಂಚು ಉದ್ದದ ಅದು ಲವಂಗ ಬೀನ್ಸ್ ಎಂಬ ಬಳ್ಳಿ ತರಕಾರಿ ಎಂದು ಸ್ನೇಹಿತರು ತಿಳಿಸಿದಾಗ ಅವರಿಗೆ ಅಚ್ಚರಿ.

ಮೊತ್ತ ಮೊದಲ ಬಾರಿಗೆ ಇಂತಹ ವಿಚಿತ್ರ ತರಕಾರಿಯನ್ನು ಕಂಡ ಅವರು ಅದರ ಬೀಜ ಸಂಗ್ರಹಿಸಿ ತಂದರು. ತಂದ ಆರು ಬೀಜಗಳಲ್ಲಿ ಎರಡು ಬೀಜಗಳು ಮೊಳಕೆ ಒಡೆದವು. ಬಳ್ಳಿ ಹಬ್ಬಿತು. ಒಂದು ತಿಂಗಳಿನಲ್ಲಿಯೇ ಹೂವುಗಳು ಅರಳಿ ಕಾಯಿಗಳು ಕಾಣಿಸಿದವು.

`ಹೂವಿನಂತಹ ತುದಿ ಭಾಗವನ್ನು ತೆಗೆದು ಬಳಸಿ ರುಚಿಕರ ಖಾದ್ಯ ತಯಾರಿಸಬಹುದು.  ಪಲ್ಯ, ಸಾಂಬಾರು, ಮಜ್ಜಿಗೆ ಹುಳಿ ಹೀಗೆ ಅನೇಕ ಪಾಕೇತನಗಳಿಗೆ ಬಳಸಲು ಅತ್ಯಂತ ಸೂಕ್ತ.  ಹಿತ್ತಲಿನಲ್ಲಿ ಮೂರು ನಾಲ್ಕು ಬಳ್ಳಿಗಳು ಇದ್ದರೆ ಮನೆಯ ಬಳಕೆಗೆ ಸಾಕಷ್ಟು ದೊರೆಯುತ್ತದೆ” ಎನ್ನುತ್ತಾರೆ ಐತಾಳರು.

ಲವಂಗ ಬೀನ್ಸ್ ವೈಜ್ಞಾನಿಕವಾಗಿ `ಐಪೊಮುಯ್ ಮುರಿಕಾಟ' ಎಂಬ ಹೆಸರು ಹೊಂದಿದೆ.  ಕೇರಳದ ಗ್ರಾಮಾಂತರದಲ್ಲಿ ಸಾಮಾನ್ಯವಾಗಿ ಕಂಡುಬರುವ ಬಳ್ಳಿ ತರಕಾರಿ.  ಅಲ್ಲಿ ಇದಕ್ಕೆ ವರ್ಷವಿಡೀ ಫಸಲು ನೀಡುವ ಕಾರಣದಿಂದ ನಿತ್ಯ ಬದನೆ ಎಂಬ ಅರ್ಥ ಬರುವ `ನಿತ್ಯ ವಜ್ಹದಿಲ್' ಎಂಬ ಹೆಸರು ಬಳಕೆಯಲ್ಲಿದೆ. 

ಐತಾಳರು ಹೇಳುವ ಪ್ರಕಾರ ನಮ್ಮ ಭಾರತೀಯ ಮೂಲದ ಪ್ರಾದೇಶಿಕ ತರಕಾರಿಯಾಗಿದ್ದರೂ ಬಹುಶಃ ಪಾಕೇತನಗಳನ್ನು ಸಿದ್ಧಪಡಿಸುವಲ್ಲಿ ಶ್ರಮವನ್ನು ಬಯಸುವ ಕಾರಣಕ್ಕೋ ಏನೋ ಅಷ್ಟೊಂದು ಜನಪ್ರಿಯವಾಗಿಲ್ಲ. ಹೂವು ಅರಳಿ ಹತ್ತು ದಿನಗಳಲ್ಲಿಯೇ ಕಾಯಿ ಕಾಣಿಸುತ್ತದೆ.  ಎಳತು ಇದ್ದಾಗಲೇ ಕೊಯ್ದರೆ ರುಚಿಕರ. ಬಲಿತರೆ ನಾರು ಬೆಳೆದು ಗಟ್ಟಿಯಾಗುತ್ತದೆ.

ನಿತ್ಯ ಬದನೆ ಎಂಬ ಹೆಸರು ಕೇರಳದಲ್ಲಿ ಇದೆಯಾದರೂ ಇದು ಬದನೆ ವರ್ಗಕ್ಕೆ ಸೇರಿಲ್ಲ. ರುಚಿಯಲ್ಲಂತೂ ಬದನೆಗಿಂತ ಭಿನ್ನ.  ಬಳ್ಳಿಗಳನ್ನು ಮಳೆಗಾಲದಲ್ಲಿ ಕತ್ತರಿಸಿ ನೆಟ್ಟರೂ ಬದುಕುತ್ತದೆ.  ಹಾಗೆ ನೆಟ್ಟ ಬಳ್ಳಿಗಳಲ್ಲಿ ಎರಡೇ ವಾರಗಳಲ್ಲಿ ಕಾಯಿಗಳು ಕಾಣಿಸುತ್ತವೆ.  ಬಳ್ಳಿ ಆರು ವರ್ಷಗಳ ಕಾಲ ಬಾಳಿಕೆ ಬಂದು ನಿರಂತರ ಬೀನ್ಸ್ ಇಳುವರಿ ನೀಡುತ್ತದೆ.  ಇದನ್ನು ಹಸಿಯಾಗಿಯೇ ಸಲಾಡ್ ಮಾಡಲು ಕೂಡಾ ಬಳಸಬಹುದು.

ರವೀಂದ್ರನಾಥ್ ಐತಾಳರು ತಮ್ಮ ಎರಡು ಬಳ್ಳಿಗಳಿಂದ ಇಪ್ಪತ್ತು ಬಳ್ಳಿಗಳನ್ನು ಮಾಡಿ ಮಳೆಗಾಲದಲ್ಲಿ ಬೆಳೆಸಿದ್ದರು.  ಬಳ್ಳಿಗಳಿಂದ ಕಾಯಿಗಳನ್ನು ಸಂಗ್ರಹಿಸಿ ಸ್ನೇಹಿತರಿಗೆ, ಕೃಷಿಕ ಮಿತ್ರರಿಗೆ ಹಂಚಿದ್ದಾರೆ.  ತನ್ನಂತೆ ಇತರರೂ ಈ ಅಪರೂಪದ ಲವಂಗ ಬೀನ್ಸ್ ಬೆಳೆಯುವಂತೆ ಪ್ರೇರೇಪಿಸಿದ್ದಾರೆ. ಸಂಪರ್ಕಕ್ಕೆ: ರವೀಂದ್ರನಾಥ್ ಐತಾಳ್  - 94485 45823.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT