ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 15 ಲಕ್ಷ ಪಡೆದು ಪರಾರಿ; ಬಂಧನ

Last Updated 4 ಅಕ್ಟೋಬರ್ 2011, 18:55 IST
ಅಕ್ಷರ ಗಾತ್ರ

ಬೆಂಗಳೂರು:  ವೈದ್ಯಕೀಯ ಸೀಟು ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ಹದಿನೈದು ಲಕ್ಷ ರೂಪಾಯಿ ಹಣ ಪಡೆದು ಪರಾರಿಯಾಗಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಮುಂಬೈನ ರಾಜೇಶ್ವರ್‌ಸಿಂಗ್ (32) ಬಂಧಿತ ಆರೋಪಿ. ಆತನಿಂದ ಹದಿನೈದು ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್ ನಿವಾಸಿ ಉದ್ಯಮಿ ರಮೇಶ್ ಬಾಬು ಎಂಬುವರಿಂದ ಆತ ಹಣ ಪಡೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

`ರಾಜೇಶ್ವರ್‌ಸಿಂಗ್ ಮುಂಬೈನಲ್ಲಿ ರೈಟ್ ಫ್ರೇಮ್ ಕನ್ಸಲ್ಟೆನ್ಸಿ ಹೆಸರಿನ ದಲ್ಲಾಳಿ ಕೇಂದ್ರ ನಡೆಸುತ್ತಿದ್ದ. ರಮೇಶ್‌ಬಾಬು ಅವರು ಪ್ರವೇಶ ಪರೀಕ್ಷೆಗಾಗಿ ಮಗಳು ಹರಿಕಾಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾಗ ಆರೋಪಿಯ ಪರಿಚಯವಾಗಿತ್ತು. ದೇಶದ ಪ್ರಮುಖ ವೈದ್ಯಕೀಯ ಕಾಲೇಜುಗಳ ಸಂಪರ್ಕವಿದ್ದು ಸೀಟು ಕೊಡಿಸುವುದಾಗಿ ಹೇಳಿದ್ದ ಆರೋಪಿ, ರಮೇಶ್ ಅವರ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ಪಡೆದಿದ್ದ~ ಎಂದು ಎಸ್‌ಐ ಟಿ.ಎಂ.ಧರ್ಮೇಂದ್ರ ತಿಳಿಸಿದ್ದಾರೆ.

`ಬೆಂಗಳೂರಿನ ಕಿಮ್ಸನಲ್ಲಿ ಸೀಟು ಕೊಡಿಸುವುದಾಗಿ ಆತ ಇ-ಮೇಲ್ ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ ರಮೇಶ್ ಅವರು ಸೋಮವಾರ ನಗರಕ್ಕೆ ಬಂದಿದ್ದರು. ಕಿಮ್ಸಗೆ ಅವರನ್ನು ಕರೆದೊಯ್ದ ಆರೋಪಿ ಹದಿನೈದು ಲಕ್ಷ ಪಡೆದುಕೊಂಡ. ಕಾಲೇಜಿನ ಒಳಗೆ ಹೋಗಿ ಹಣ ಕಟ್ಟಿ ಬರುವುದಾಗಿ ಹೇಳಿ ಹೋಗಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ವಂಚನೆ ಆಗಿರುವುದು ಗೊತ್ತಾದ ನಂತರ ರಮೇಶ್ ದೂರು ನೀಡಿದರು~ ಎಂದು ಅವರು ಮಾಹಿತಿ ನೀಡಿದರು.

`ರಾತ್ರಿ 8.45ಕ್ಕೆ ನಗರದಿಂದ ಹೊರಡುವ ವಿಮಾನದಲ್ಲಿ ರಮೇಶ್ ಮುಂಬೈಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಆದರೆ ಆ ವೇಳೆಗಾಗಲೇ ಆತ ವಿಮಾನ ಹತ್ತಿದ್ದರಿಂದ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಮುಂಬೈ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ರಾತ್ರಿ ಹತ್ತು ಗಂಟೆಯ ವಿಮಾನದಲ್ಲಿ ಮುಂಬೈಗೆ ಹೋಗಿ ಅಲ್ಲಿನ ಸಿಬ್ಬಂದಿಯ ಸಹಾಯದಿಂದ ರಾಜೇಶ್ವರ್‌ನನ್ನು ಬಂಧಿಸಲಾಯಿತು~ ಎಂದು ಧರ್ಮೇಂದ್ರ ತಿಳಿಸಿದರು.

ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಆರ್.ಗೋವಿಂದರಾಜು ಎಸ್‌ಐ ಧರ್ಮೇಂದ್ರ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT