ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 600 ಮೀರದ ಕಾರ್ಯಕರ್ತರ ಕೂಲಿ

ಎಲ್ಲ ಪಕ್ಷಗಳಿಗೂ `ಬಾಡಿಗೆ ಬಂಟರು'
Last Updated 23 ಏಪ್ರಿಲ್ 2013, 8:22 IST
ಅಕ್ಷರ ಗಾತ್ರ

ತುಮಕೂರು: ವಾತಾವರಣದ ಉಷ್ಣಾಂಶ, ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ, ನಿಗಿನಿಗಿ ಸೂರ್ಯ, ಬರದಲ್ಲಿ ನಿಟ್ಟುಸಿರುವ ಬಿಡುತ್ತಿರುವ ರೈತ ಸಮುದಾಯ ಹೀಗೆ ಎಲ್ಲದರೊಂದಿಗೂ ನಗರದ ಚುನಾವಣಾ ಪ್ರಚಾರ ಕಣ ಬಾಂಧವ್ಯ ಬೆಸೆದುಕೊಂಡಿದೆ.

ನಗರದಲ್ಲಿ ಸಕ್ರಿಯವಾಗಿರುವ ನಾಲ್ಕು ರಾಜಕೀಯ ಪಕ್ಷಗಳ ಜಟ್ಟಿಗಳನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದಾಗ ಹಲ ಸ್ವಾರಸ್ಯಕರ ವಿಚಾರಗಳು ಕೇಳಿ ಬಂದವು.

ಸ್ವಯಂ ಸೇವಕರು: ಬಿಜೆಪಿ, ಕಾಂಗ್ರೆಸ್, ಕೆಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಪ್ರಚಾರದ ಉಸ್ತುವಾರಿ ಹೊತ್ತಿರುವವರ ಪ್ರಕಾರ ತಮ್ಮ ಪಕ್ಷಗಳ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರೆಲ್ಲ `ಸ್ವಯಂ ಸೇವಕರು'.

ಪಕ್ಷದ ತತ್ವ, ಸಿದ್ಧಾಂತ ಮತ್ತು ಅಭ್ಯರ್ಥಿಯ ಒಳ್ಳೆಯತನವನ್ನು ಮೆಚ್ಚಿ ನಗರದ ಬಹುತೇಕ ನವ ಯುವಕರೂ- ಪ್ರಬುದ್ಧ ಮಧ್ಯ ವಯಸ್ಕರೂ-  ಹಿರಿಯರು ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರಂತೆ. ಅಭ್ಯರ್ಥಿ ಮನೆ ಬಾಗಿಲಿಗೇ ಬರುವುದು ಬೇಡ. ನಾವೇ ಪ್ರಚಾರ ನಡೆಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಭರವಸೆಯನ್ನೂ ನೀಡಿದ್ದಾರಂತೆ.

`ಈ ಕಾಲದಲ್ಲಿ ಇದೆಲ್ಲಾ ಸಾಧ್ಯಾನಾ? ನಿಜ ಹೇಳ್ರೀ' ಎಂದು ಕೆದಕಿದರೆ, `ಯಾವ ಪಕ್ಷದಲ್ಲೂ ಇಲ್ಲೆವರೆಗೆ ಡೇಲಿ ವೇಜಸ್ 600 ರೂಪಾಯಿ ಮೀರಿಲ್ಲ. ಪೋಲಿಂಗ್ ಹತ್ರ ಆದ್ಹಂಗೆ ಇದು 2000 ರೂಪಾಯಿ ಮುಟ್ಟಬಹುದು' ಎಂದು ಮೈಗೆ ಎಣ್ಣೆ ಸವರಿಕೊಂಡ ಉತ್ತರ ನೀಡುತ್ತಾರೆ.

ತರಬೇತಿ: ಮನೆ ಗೇಟ್ ತೆಗೆಯುವ ರೀತಿ, ಬಾಗಿಲು ತಟ್ಟುವ ವಿಧಾನ, ಹಿರಿಯರೊಂದಿಗೆ ವರ್ತಿಸಬೇಕಾದ ನಡಾವಳಿ ಕುರಿತು ಬಿಜೆಪಿ ತನ್ನ ಪ್ರಮುಖ ಕಾರ್ಯಕರ್ತರಿಗೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಿದೆ. ಕೇವಲ ಎರಡು ನಿಮಿಷದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಮಾಜಿ ಸಚಿವ ಎಸ್.ಶಿವಣ್ಣ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಬಣ್ಣಿಸುವ ಕಲೆಗಾರಿಕೆಯನ್ನು ಕಾರ್ಯಕರ್ತರಿಗೆ ಮನದಟ್ಟು ಮಾಡಿಸಿದೆ.

ಈ ವಿಚಾರದಲ್ಲಿ ಕೆಜೆಪಿ ಸಹ ಹಿಂದೆ ಬಿದ್ದಿಲ್ಲ. ಹಾಲಿ ಕೆಜೆಪಿಯಲ್ಲಿರುವ ಬಹುತೇಕ ಬಿಜೆಪಿ ಪೂರ್ವಾಶ್ರಮಿಗಳು ಅಲ್ಲಿನ ಅನುಭವದ ಸಾರವನ್ನು ಇಲ್ಲಿಗೆ ಧಾರೆ ಎರೆಯುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅತಿಮುಖ್ಯ ಸಾಧನೆಗಳನ್ನು ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಚುಟುಕಾಗಿ ಹೇಳುವ ಕಲೆಯನ್ನು ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಹೇಳಿಕೊಟ್ಟಿದೆ.

ಜೆಡಿಎಸ್‌ನಲ್ಲಿ ಇಂಥ ವ್ಯವಸ್ಥಿತ ಪ್ರಯತ್ನಗಳು ಕಂಡು ಬರುತ್ತಿಲ್ಲ. ಆದರೆ ಈಚೆಗಷ್ಟೇ ಜಿಲ್ಲೆಗೆ ಬಂದಿದ್ದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರ ಭಾಷಣಗಳನ್ನು ಪತ್ರಿಕೆಗಳಲ್ಲಿ ಓದಿ ಮನದಟ್ಟು ಮಾಡಿಕೊಂಡಿರುವ ಕಾರ್ಯಕರ್ತರು ಅದನ್ನೇ ಪರಿಣಾಮಕಾರಿಯಾಗಿ ಪುನರುಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಕಾರ್ಯ ಪದ್ಧತಿ: ಮತದಾನಕ್ಕೆ ಕ್ಷಣಗಣನೆ ಆರಂಭವಾದಂತೆ ನಾಲ್ಕೂ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕಾಗುತ್ತಿವೆ. ಬಿಜೆಪಿ ನಗರ ಘಟಕದಲ್ಲಿ `ಇಂಥ ದಿನ- ಇಂಥ ವಾರ್ಡ್‌ನಲ್ಲಿ ಇಷ್ಟು ಮನೆಗಳನ್ನು ತಲುಪಬೇಕು' ಎಂಬ ನಿರ್ದಿಷ್ಟ ಪಟ್ಟಿ ತಯಾರಾಗಿದ್ದು, ಅದರಂತೆ ಪ್ರಚಾರ ಕಾರ್ಯ ಸಾಗಿದೆ.

`ಒಂದು ದಿನಕ್ಕೆ 4 ವಾರ್ಡ್‌ನಂತೆ ನಮ್ಮ ಕಾರ್ಯಕರ್ತರಿಗೆ ರೂಟ್ ಮ್ಯಾಪ್ ಹಾಕಿಕೊಟ್ಟಿದ್ದೇವೆ. ಅದರ ಪ್ರಕಾರ ಪ್ರಚಾರ ನಡೆಯುತ್ತಿದೆ. ನಗರದ ಎಲ್ಲ ಬಡಾವಣೆಗಳಲ್ಲಿ ಅಭ್ಯರ್ಥಿಯ ರೋಡ್ ಶೋ ನಡೆಯಲಿದೆ. ಪ್ರಮುಖ ಸಂಘ- ಸಂಸ್ಥೆಗಳ ನಾಯಕರ ಪಟ್ಟಿ ತಯಾರಿಸಿದ್ದೇವೆ. ಅಂಥ ಮನೆಗಳಿಗೆ ಅಭ್ಯರ್ಥಿಯನ್ನು ಕರೆದೊಯ್ಯುತ್ತೇವೆ' ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ವೈ.ರುದ್ರೇಶ್ ವಿವರಿಸುತ್ತಾರೆ.

ಇದರ ಜತೆಗೆ ನಿತ್ಯ ಪ್ರಯಾಣಿಕರಾಗಿರುವ ನೌಕರರನ್ನು ಸೆಳೆಯಲು ಪಕ್ಷ ತಂತ್ರ ರೂಪಿಸಿದೆ. `ತುಮಕೂರಿನಿಂದ ಸಾವಿರಾರು ನೌಕರರು ಪ್ರತಿದಿನ ಬೆಂಗಳೂರು- ತಿಪಟೂರು ಕಡೆಗೆ ಕೆಲಸಕ್ಕೆ ಹೋಗುತ್ತಾರೆ. ಅಂಥವರನ್ನು ಭೇಟಿಯಾಗುವ ಉದ್ದೇಶದಿಂದ ಸೋಮವಾರ ಬೆಳಿಗ್ಗೆ 5.30ರಿಂದ 9.30ರವರೆಗೆ ಅಭ್ಯರ್ಥಿ ಜ್ಯೋತಿ ಗಣೇಶ್ ನೇತೃತ್ವದಲ್ಲಿ ತುಮಕೂರು ರೈಲು ನಿಲ್ದಾಣದಲ್ಲಿ ಪ್ರಚಾರ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಚಲಿಸುವ ರೈಲಿನಲ್ಲಿ ಪ್ರಚಾರ ನಡೆಸುವ ಯೋಜನೆ ಇದೆ' ಎಂದು ಕೆಜೆಪಿ ಯುವ ಘಟಕದ ಕಾರ್ಯದರ್ಶಿ ಮಂಜುನಾಥ ಹೇಳುತ್ತಾರೆ.

ನಗರಸಭೆಗೆ ಆಯ್ಕೆಯಾಗಿರುವ 13 ಸದಸ್ಯರು ಮತ್ತು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಸೋತವರನ್ನು ಜೆಡಿಎಸ್ ನೆಚ್ಚಿಕೊಂಡಿದೆ. ನಗರಸಭೆ ಚುನಾವಣೆಗಾಗಿ ರಚಿಸಿದ್ದ ಪಕ್ಷದ ಬೂತ್ ಸಮಿತಿಗಳಿಗೆ ಮತ್ತೆ ಜೀವ ಬಂದಿದೆ.

`ಎಲ್ಲ ನಾಯಕರೂ ಅವರವರ ಪಾಡಿಗೆ ಪ್ರತ್ಯೇಕವಾಗಿ ತಂಡಗಳನ್ನು ರಚಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿ ಎಲ್ಲ ಸಮುದಾಯದ ನಾಯಕರನ್ನು ಭೇಟಿಯಾಗಿ ಮತ ಯಾಚಿಸುತ್ತಿದ್ದಾರೆ. ಜನ ಗುಂಪುಗೂಡಿದ ಕಡೆ ಭಾಷಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್‌ಗಳಲ್ಲೂ ರೋಡ್ ಶೋ ನಡೆಸಲಾಗುವುದು' ಎಂದು ಜೆಡಿಎಸ್ ವಕ್ತಾರ ಮಲ್ಲಿಕಾರ್ಜುನಯ್ಯ ವಿವರಿಸುತ್ತಾರೆ.

ಪರೋಕ್ಷ ಪ್ರಭಾವ: ಅಭ್ಯರ್ಥಿಗಳಿಗಿಂತ ಅವರು ಗೆಲುವು ಸಾಧಿಸಿದರೆ ನಿರ್ದಿಷ್ಟ ಪಕ್ಷಕ್ಕೆ ಸಿಗುವ ಲಾಭದ ಬಗ್ಗೆಯೂ ಚರ್ಚೆ ಸಾಗಿದೆ.
`ಕುಮಾರಸ್ವಾಮಿ ಸಿಎಂ ಆಗಬೇಕು- ಅದಕ್ಕಾಗಿ ಗೋವಿಂದರಾಜು ಗೆಲ್ಲಬೇಕು' ಎಂಬ ಮಾತು ಜೆಡಿಎಸ್ ಪಾಳಯದಲ್ಲಿ ಕೇಳಿಬರುತ್ತದೆ. `ಇಂದು ಶಿವಣ್ಣ ಗೆದ್ದರೆ- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತ ಗಳಿಸಬಹುದು. ಮೋದಿ ಪ್ರಧಾನಿಯಾಗಲು ಅದರಿಂದ ಅನುಕೂಲ' ಎಂಬ ಬಾದರಾಯಣ ಸಂಬಂಧದ ವಿಶ್ಲೇಷಣೆ ಬಿಜೆಪಿಯಲ್ಲಿದೆ.

`ಯಡಿಯೂರಪ್ಪಗೆ ಆಗಿರುವ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಜ್ಯೋತಿ ಗಣೇಶ್ ಗೆಲ್ಲಬೇಕು' ಎಂದು ಕೆಜೆಪಿ ಕಾರ್ಯಕರ್ತರು ನುಡಿಯುತ್ತಾರೆ. `ಈ ದೇಶದ ಹಣೆ ಬರಹ ಬದಲಿಸಲು ರಾಹುಲ್ ಗಾಂಧಿ ಬೇಕು. ಈಗ ರಫೀಕ್ ಗೆದ್ದರೆ ಮುಂದೆ ರಾಹುಲ್‌ಗೆ ಅನುಕೂಲ' ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತದೆ.


ರೋಡ್ ಶೋಗೆ 300
ಅಭ್ಯರ್ಥಿಗಳ ರೋಡ್ ಶೋಗಳಲ್ಲಿ ಪಾಲ್ಗೊಳ್ಳುವವರಿಗೆ ದಿನಕ್ಕೆ ರೂ 300 ಫಿಕ್ಸ್ ಆಗಿದೆ. ಇದು ಕಾರ್ಯಕರ್ತರಿಗೆ ಸಿಗುವ ದಿನಗೂಲಿಗಿಂತ ಅರ್ಧದಷ್ಟು ಕಡಿಮೆ. `ರೋಡ್‌ಶೋ ಆರಂಭವಾಗುವ ಮೊದಲು `ಮೇಸ್ತ್ರಿ'ಗೆ ಮುಖ ತೋರಿಸಿ, ವೋಟ್ ಫಾರ್... ಘೋಷಣೆ ಕೂಗಬೇಕು.

ರೋಡ್ ಶೋ ಮುಗಿಯುವ ಸ್ಥಳದಲ್ಲಿ `ಪೇಮೆಂಟ್' ಇಸ್ಕೋಬೋದು” ಎಂದು ನಗರದಲ್ಲಿ ನಡೆಯುವ ರೋಡ್ ಶೋಗಳಲ್ಲಿ ಪ್ರತಿದಿನ ಪಾಲ್ಗೊಳ್ಳುವ ವ್ಯಕ್ತಿಯೊಬ್ಬರು ತಿಳಿಸಿದರು.

ಸಾವಿರಾರು ಮಂದಿ
ನಾಲ್ಕು ರಾಜಕೀಯ ಪಕ್ಷಗಳ ಮುಖಂಡರ ಮಾತುಗಳನ್ನು ನಂಬುವುದಾದರೆ `ಚುನಾವಣೆ ಉದ್ಯಮ' ನಗರದಲ್ಲಿ ಬರೋಬ್ಬರಿ 6 ಸಾವಿರ ಮಂದಿಗೆ ಪೂರ್ಣಕಾಲೀನ ಉದ್ಯೋಗ ನೀಡಿದೆ. ನಾಲ್ಕೂ ರಾಜಕೀಯ ಪಕ್ಷಗಳ ಮುಖಂಡರು ನಗರದಲ್ಲಿ ತಮ್ಮ ಪರವಾಗಿ ಸರಾಸರಿ 1.5 ಸಾವಿರ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT