ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿದ್ವಯರ ತೀವ್ರ ವಿಚಾರಣೆ

Last Updated 14 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಬಾವ ಬಿ.ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದೆ.

ರೆಡ್ಡಿದ್ವಯರಿಗೆ ಜಾಮೀನು ನೀಡಲು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ಇಬ್ಬರನ್ನೂ ಸೆ.19ರ ವರೆಗೆ ಸಿಬಿಐ ವಶಕ್ಕೆ ನೀಡಿತ್ತು.

ಇಲ್ಲಿನ ಕೊಟಿ ಪ್ರದೇಶದಲ್ಲಿರುವ ಸಿಬಿಐ ಕಚೇರಿಯಲ್ಲಿ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರ ಹಾಜರಾತಿಗೆ ಅನುಮತಿ ನೀಡಲಾಗಿದೆ ಎಂದು ಸಿಬಿಐ ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮಿನಾರಾಯಣ ತಿಳಿಸಿದರು.

ಮಂಗಳವಾರ ಇಬ್ಬರನ್ನೂ ತಮ್ಮ ವಶಕ್ಕೆ ನೀಡುತ್ತಿದ್ದಂತೆಯೇ ಸಿಬಿಐ ತನ್ನ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿತ್ತು. ರಾತ್ರಿ ಇಬ್ಬರನ್ನು ಅಜ್ಞಾತ ಸ್ಥಳದಲ್ಲಿ ಇರಿಸಿತ್ತು. ನಗರದ ಕೇಂದ್ರ ಅಪರಾಧ ಠಾಣೆಯಲ್ಲಿ ಸಿಬಿಐ ತನ್ನ ಲಾಕಪ್ ಹೊಂದಿದ್ದು, ಅಲ್ಲಿಯೇ ಅವರನ್ನು ಇರಿಸಲಾಗಿತ್ತು ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಇಬ್ಬರನ್ನೂ ಕಚೇರಿಗೆ ಕರೆ ತಂದು ವಿಚಾರಣೆ ಮುಂದುವರೆಸಿತು.

ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ಕಂಪೆನಿಯಿಂದ ನಡೆದಿರುವ ಅಕ್ರಮ ಗಣಿಗಾರಿಕೆ, ಇದರಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರದ ಕುರಿತು ಇಬ್ಬರನ್ನೂ ಪ್ರಶ್ನಿಸಲಾಗುತ್ತಿದೆ.

ಓಎಂಸಿ ಮಾಡಿದ ಅಕ್ರಮ ಗಣಿಗಾರಿಕೆಯಿಂದ ಸಂಗ್ರಹಿಸಿದ ಅದಿರನ್ನು ಅನಂತಪುರ ಜಿಲ್ಲೆಯ ಅಂತರಗಂಗಮ್ಮ ಕೊಂಡ (ಎಜಿಕೆ) ಗಣಿ ಕಂಪೆನಿ ಪ್ರದೇಶಕ್ಕೆ ಸಾಗಿಸಿ ಸಂಗ್ರಹಿಸಿರುವ ಕುರಿತೂ ಪ್ರಶ್ನೆ ಮಾಡಲಾಗುತ್ತಿದೆ.

ಸೆ.5ರಂದು ಬಳ್ಳಾರಿಯಲ್ಲಿ ರೆಡ್ಡಿದ್ವಯರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳು, ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡ ಸಿಬಿಐ ನಂತರ ಇಬ್ಬರನ್ನೂ ಬಂಧಿಸಿ, ಹೈದರಾಬಾದ್‌ನ ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು. ನಂತರ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT