ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌ಬಸ್ ಟಿಕೆಟ್

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಬ್ಬಗಳ ಸಾಲು ಸಾಲು, ಊರಿಗೆ ಹೋಗುವವರದ್ದು ಹೇಳಲಾಗದ ಗೋಳು. ರೈಲುಗಳು ತಿಂಗಳ ಹಿಂದೆಯೇ ಬುಕ್ ಆಗಿವೆ. ಸರ್ಕಾರಿ ಬಸ್ಸುಗಳದ್ದೂ ಅದೇ ಹಾಡು. ಇನ್ನು ಖಾಸಗಿ ಬಸ್ಸಿನವರು ಇದೇ ಒಂದು ಸುಗ್ಗಿ ಎಂದು ಮನಬಂದಂತೆ ದರ ನಿಗದಿ ಮಾಡುತ್ತಾರೆ.

ಸುವಿಹಾರಿ ಬಸ್ಸು ತೊರಿಸಿ `ಡಕೋಟಾ ಎಕ್ಸ್‌ಪ್ರೆಸ್~ ನಲ್ಲಿ ಕೂರಿಸಿ ಕಳುಹಿಸುವ ಸಾಧ್ಯತೆ ಹೆಚ್ಚು. ಆದರೆ ಖಾಸಗಿ ಬಸ್ಸಿಗೂ ವ್ಯವಸ್ಥಿತ ರೂಪ ನೀಡುವ ಸಲುವಾಗಿ ರೆಡ್‌ಬಸ್.ಇನ್ ಅಸ್ತಿತ್ವಕ್ಕೆ ಬಂದಿದೆ.

ಐದು ವರ್ಷಗಳ ಹಿಂದೆ ತಾವು ಅನುಭವಿಸಿದ ತೊಂದರೆಯನ್ನೇ ಮೂವರು ಎಂಜಿನಿಯರ್‌ಗಳು ಅವಕಾಶವನ್ನಾಗಿ ಬಳಸಿಕೊಂಡು www.redbus.in ಪೋರ್ಟಲ್ ಆರಂಭಿಸಿದರು. ಖಾಸಗಿ ಬಸ್ಸುಗಳನ್ನು ಒಂದೇ ಸೂರಿನಡಿ ತಂದು ಗ್ರಾಹಕರು ಹಾಗೂ ಖಾಸಗಿ ಬಸ್ಸುಗಳ ನಡುವೆ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸಿದರು.
 
ಈಗಾಗಲೇ ದೇಶದ 850 ಖಾಸಗಿ ಬಸ್ ಸಂಸ್ಥೆಗಳ 15 ಸಾವಿರ ಬಸ್ಸುಗಳ ಮಾಹಿತಿ, ಬುಕ್ಕಿಂಗ್, ಶುಲ್ಕ ವಿವರ, ಆಸನಗಳ ನಕ್ಷೆ ಹಾಗೂ ಅಂತರ್ಜಾಲದ ಮೂಲಕವೇ ಹಣ ಪಾವತಿಸಿ ಇ-ಟಿಕೆಟ್ ಪಡೆಯುವ ವ್ಯವಸ್ಥೆ ಇತ್ಯಾದಿ ಹತ್ತು ಹಲವು ಸೌಲಭ್ಯಗಳು ಈ ಒಂದು ಜಾಲತಾಣದಲ್ಲೇ ಲಭ್ಯ.

ರೆಡ್‌ಬಸ್.ಇನ್ ಕೂಡ ಸರ್ಕಾರಿ ಬಸ್ ಅಥವಾ ರೈಲ್ವೇ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯದಂತೆಯೇ ಖಾಸಗಿ ಬಸ್ಸುಗಳಿಗಾಗಿ ಮಾಡಿದ ತಾಣ. ಇದರಲ್ಲಿ ಮುಂಗಡ ಬುಕ್ಕಿಂಗ್ ಮಾಡುವ ವ್ಯಕ್ತಿ ರೆಡ್‌ಬಸ್.ಇನ್ ವೆಬ್‌ಸೈಟ್‌ಗೆ ಹೋಗಿ ತಮ್ಮ ಪ್ರಯಾಣದ ಮಾಹಿತಿ ನೀಡಿದರೆ ಸಾಕು. ಆ ಮಾರ್ಗದಲ್ಲಿ ಸಂಚರಿಸುವ ವಿವಿಧ ಸಂಸ್ಥೆಗಳ ಬಸ್ಸುಗಳ, ಅವುಗಳ ದರಗಳ, ಆಸನ ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ಸಿಗಲಿದೆ.

`ಬಸ್ಸಿನಿಂದ ಬಸ್ಸಿಗೆ ಆಸನಗಳ ಸಂಖ್ಯೆಗಳು ವ್ಯತ್ಯಾಸವಿರುತ್ತದೆ. ಹೀಗಾಗಿ ಪ್ರತಿಯೊಂದು ಬಸ್ಸುಗಳ ಆಸನಗಳ ಸಂಖ್ಯೆಯ ಆಧಾರದಲ್ಲೇ ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಒಂಟಿ ಮಹಿಳೆಯರು ಪ್ರಯಾಣಿಸುವಾಗ ಅವರಿಗಾಗಿ ಮಹಿಳೆಯರ ಆಸನ ಕಾಯ್ದಿರಿಸುವ ಸೌಲಭ್ಯವೂ ಈ ತಾಣದಲ್ಲಿದೆ~ ಸಂಸ್ಥೆಯ ಸಿಇಒ ಫಣೀಂದ್ರ ಸಾಮಾ ಹೇಳುತ್ತಾರೆ.

ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ದ್ದ್‌ದು, ದೇಶದ 14 ನಗರಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಈಗಾಗಲೇ 20 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೆಡ್‌ಬಸ್.ಇನ್ ಕೇವಲ ಖಾಸಗಿ ಮಾತ್ರವಲ್ಲದೆ ಎರಡು ಸರ್ಕಾರಿ ಸಾರಿಗೆ ಸಂಸ್ಥೆಗಳ ಟಿಕೆಟ್ ವಿತರಣೆಯ ಜವಾಬ್ದಾರಿಯನ್ನೂ ಹೊತ್ತಿಕೊಂಡಿದೆ.

ಗ್ರಾಹಕರಿಗೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದೆ ಆಯಾಯ ಬಸ್ಸುಗಳು ನಿಗದಿಪಡಿಸಿದ ದರದಲ್ಲೇ ಟಿಕೆಟ್ ನೀಡಲಾಗುತ್ತಿದೆ. ಬಸ್ಸುಗಳ ಚಿತ್ರಗಳು ಹಾಗೂ ಇನ್ನಿತರ ಬಸ್ಸುಗಳಲ್ಲಿರುವ ಸೌಲಭ್ಯಗಳ ವೀಡಿಯೊ ಕೂಡಾ ತಾಣದಲ್ಲಿರುತ್ತದೆ.

ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ಸುಗಳನ್ನು ಆಯ್ಕೆ ಮಾಡುವ ಸರ್ವ ಸ್ವಾತಂತ್ರ್ಯವೂ ಇದರಲ್ಲಿದೆ. ಟಿಕೆಟ್ ಕಾಯ್ದಿರಿಸುವ ವ್ಯಕ್ತಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ತಾವಿರುವಲ್ಲೇ ಟಿಕೆಟ್ ತರಿಸಿಕೊಂಡು ಹಣ ಪಾವತಿ ಮಾಡುವ ಸೌಲಭ್ಯ ನೀಡಲಾಗಿದೆ. ಜತೆಗೆ ಪರಿಸರ ಕುರಿತ ವಿಶೇಷ ಕಾಳಜಿಯಿಂದಾಗಿ ಮೊಬೈಲ್ ಟಿಕೆಟ್ ಪರಿಚಯಿಸಿದೆ. ಈ ಮೂಲಕ ಪ್ರಯಾಣಿಕರ ಮೊಬೈಲ್‌ಗೆ ಬರುವ ಎಸ್‌ಎಂಎಸ್ ಅನ್ನೇ ಟಿಕೆಟ್ ಎಂದು ಪರಿಗಣಿಸಲಾಗುತ್ತದೆ.

ಫಣೀಂದ್ರ ಸಾಮಾ, ಚರಣ್ ಪದ್ಮರಾಜು ಹಾಗೂ ಸುಧಾಕರ್ ಪಾಸುಪುನುರಿ ಎಂಬ ಮೂವರು ಎಂಜಿನಿಯರ್‌ಗಳ ಕನಸಿನ ಕೂಸು ಇಂದು ರಾಷ್ಟ್ರದಾದ್ಯಂತ ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ಕೇವಲ ಒಂದೇ ಜಾಲತಾಣದ ಮೂಲಕ ಕನ್ಯಾಕುಮಾರಿಯಿಂದ ದೆಹಲಿವರೆಗೂ ಯಾವುದೇ ಗೋಜಿಲ್ಲದೆ ಸಂಚರಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಈಗಾಗಲೇ ನೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಸಂಸ್ಥೆ 40 ಸಾವಿರ ಏಜೆಂಟರ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಸಂಸ್ಥೆಯ ಮೂಲಕ ಐದು ಲಕ್ಷ ಮಂದಿ ಪ್ರಯಾಣಿಸಿದ್ದಾರೆ.
ಜಾಲ ತಾಣ ವಿವರ: http://www.redbus.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT