ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆವಿನ್ಯೂ ನಿವೇಶನಕ್ಕೆ ಶೀಘ್ರ ಖಾತಾ...!

Last Updated 2 ಜೂನ್ 2011, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ರೆವಿನ್ಯೂ ನಿವೇಶನದಾರರು ತಮ್ಮ ಆಸ್ತಿಗಳಿಗೆ ಖಾತಾ ಪಡೆಯುವ ದಿನಗಳು ಹತ್ತಿರವಾಗುವ ಲಕ್ಷಣ ಕಾಣುತ್ತಿದೆ. ಭೂ ಪರಿವರ್ತನಾ ಶುಲ್ಕ ಹಾಗೂ ಸುಧಾರಣಾ ಶುಲ್ಕ ಸಂಗ್ರಹಿಸುವ ಮೂಲಕ ಖಾತಾ ನೀಡುವ ಬಿಬಿಎಂಪಿಯ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 2.50 ಲಕ್ಷ ಮಂದಿ ರೆವಿನ್ಯೂ ಆಸ್ತಿಗಳ ಮಾಲೀಕರು ಇದೀಗ ತಮ್ಮ ಆಸ್ತಿಗೆ ಖಾತಾ ಪಡೆಯಬಹುದಾಗಿದೆ.

ಭೂ ಪರಿವರ್ತನಾ ಶುಲ್ಕದೊಂದಿಗೆ ಸುಧಾರಣಾ ಶುಲ್ಕ ಪಡೆದು ಖಾತಾ ನೀಡುವ ಪ್ರಸ್ತಾವಕ್ಕೆ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಕಾಯಿದೆಗೆ ತಿದ್ದುಪಡಿ ಮಾಡುವ ಮಸೂದೆ ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಮಸೂದೆಗೆ ಅನುಮೋದನೆ ದೊರೆತರೆ ರೆವಿನ್ಯೂ ಆಸ್ತಿದಾರರು ತಮ್ಮ ಆಸ್ತಿಗಳಿಗೆ 2012ರ ಸೆಪ್ಟೆಂಬರ್ ಒಳಗೆ ಶುಲ್ಕ ಪಾವತಿಸಿ ಖಾತಾ ಪಡೆಯಬಹುದಾಗಿದೆ.

ಅಕ್ರಮ-ಸಕ್ರಮ ಅಗತ್ಯವಿಲ್ಲ: ಪಾಲಿಕೆ ವ್ಯಾಪ್ತಿಯಲ್ಲಿ ಕೃಷಿ ಭೂಮಿಯಿಂದ ಕೃಷಿಯೇತರ ಚಟುವಟಿಕೆಗೆ ಬಳಸುತ್ತಿರುವ ಭೂಮಿಗೆ ಈಗ ಖಾತಾ ಪಡೆಯಬಹುದಾಗಿದೆ. ಇದಕ್ಕಾಗಿ `ಅಕ್ರಮ- ಸಕ್ರಮ~ ಯೋಜನೆಯನ್ನು ನೆಚ್ಚಿಕೊಳ್ಳುವಂತಿಲ್ಲ. ಆದರೆ ಈ ಕಾನೂನಿನಡಿ ಕಟ್ಟಡದ ನಿಯಮ ಉಲ್ಲಂಘನೆಯನ್ನು ಸಕ್ರಮಗೊಳಿಸಲು ಅವಕಾಶವಿಲ್ಲ.

ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿ ಅನ್ವಯ 2009ರ ಸೆಪ್ಟೆಂಬರ್‌ನಿಂದ 2010ರ ಸೆಪ್ಟೆಂಬರ್‌ವರೆಗೆ ರೆವಿನ್ಯೂ ನಿವೇಶನಗಳ ಮಾಲೀಕರು ಭೂಪರಿವರ್ತನಾ ಶುಲ್ಕ ಪಾವತಿಸಿ ಖಾತಾ ಪಡೆಯಲು ಅವಕಾಶವಿತ್ತು.

ಈಗ ಕಾನೂನಿಗೆ ತಿದ್ದುಪಡಿ ತಂದು ಪರಿವರ್ತನಾ ಶುಲ್ಕ ಪಾವತಿ ಗಡುವು ಅವಧಿಯನ್ನು 2012ರ ಸೆಪ್ಟೆಂಬರ್‌ವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪಾಲಿಕೆಯ 800 ಚದರ ಕಿ.ಮೀ. ವ್ಯಾಪ್ತಿಯಲ್ಲಿನ ಭೂ ಪರಿವರ್ತನೆಯಾಗದ ಆಸ್ತಿಗಳಿಗೆ ಈವರೆಗೆ `ಬಿ~ ಖಾತಾ ನೀಡಲಾಗಿದೆ. ಭೂ ಪರಿವರ್ತನೆಯಾದ ಆಸ್ತಿಗಳಿಗಷ್ಟೇ ಖಾತಾ ವಿತರಿಸಿದೆ. ಇದೀಗ ಕಾನೂನಿಗೆ ತಿದ್ದುಪಡಿ ತಂದರೆ `ಬಿ~ ಖಾತಾದಾರರು ಸಹ ಪರಿವರ್ತನಾ ಶುಲ್ಕ, ಸುಧಾರಣಾ ಶುಲ್ಕ ಪಾವತಿಸಿ ಖಾತಾ ಪಡೆಯಬಹುದು ಎಂದು ತಿಳಿದುಬಂದಿದೆ.

ರೂ 1,500 ಕೋಟಿ ನಿರೀಕ್ಷೆ: `ಪಾಲಿಕೆ ವ್ಯಾಪ್ತಿಯಲ್ಲಿನ ರೆವಿನ್ಯೂ ಬಡಾವಣೆಗಳಿರುವ ಪ್ರದೇಶಗಳಲ್ಲೂ ಮೂಲ ಸೌಕರ್ಯ ಕಲ್ಪಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಹಾಗಾಗಿ ಸುಧಾರಣಾ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದ್ದು, ಸುಮಾರು 1,500 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ~ ಎಂದು ಪಾಲಿಕೆ ಅಧಿಕಾರಿ ಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT