ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಕಾಲರ್ ಅಳವಡಿಕೆ ವಿವಾದದಲ್ಲಿ ಭಾಗಿಯಾಗಿಲ್ಲ: ವಿ.ವಿ

Last Updated 1 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ವಿಶ್ವವಿದ್ಯಾಲಯದಿಂದ ವಂಚನೆಗೊಳಗಾದ ವಿದ್ಯಾರ್ಥಿಗಳ ಕಾಲಿಗೆ ರೇಡಿಯೊ ಕಾಲರ್ ಅಳವಡಿಸಿರುವುದರಿಂದ ಉಂಟಾಗಿರುವ ವಿವಾದದಲ್ಲಿ ತಾನು ನೇರವಾಗಿ ಭಾಗಿಯಾಗಿಲ್ಲ; ಇದಕ್ಕೆಲ್ಲಾ ಭಾರತೀಯ ಮೂಲದ ಸಿಬ್ಬಂದಿ ಕಾರಣ ಎಂದು ವಿಶ್ವವಿದ್ಯಾಲಯ ಮಂಗಳವಾರ ಹೇಳಿಕೊಂಡಿದೆ. ಇದೇ ಮೊದಲ ಬಾರಿಗೆ ಈ ವಿವಾದ ಕುರಿತಂತೆ ಹೇಳಿಕೆ ನೀಡಿರುವ ಕ್ಯಾಲಿಫೋರ್ನಿಯಾ ಮೂಲದ ಟ್ರೈವ್ಯಾಲಿ ವಿಶ್ವವಿದ್ಯಾಲಯ, ಸಂಸ್ಥೆ ವಿರುದ್ಧ ಬಂದಿರುವ ವೀಸಾ ವಲಸೆ ನೀತಿ ಉಲ್ಲಂಘನೆ ಆರೋಪಗಳನ್ನು ಆಧಾರ ರಹಿತ ಎಂದು ತಳ್ಳಿಹಾಕಿದೆ. ಅಲ್ಲದೇ  ತಾನು ಯಾವುದೇ ವಿದ್ಯಾರ್ಥಿಗೆ ಮೋಸ ಮಾಡಿಲ್ಲ ಎಂದಿದೆ.

‘ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿಯು (ಐಸಿಇ) ಆಧಾರ ರಹಿತ ಆರೋಪಗಳನ್ನು ಮಾಡಿ ತನಿಖೆಗಾಗಿ ಸಂಸ್ಥೆಯನ್ನು ಮುಚ್ಚಿದೆ. ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ವಿ.ವಿಯನ್ನು ತೊರೆಯಲು ಮುಂದಾಗಿದ್ದಾರೆ. ಹಲವು ಪ್ರಾಧ್ಯಾಪಕರು ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದಾರೆ’ ಎಂದು ಟ್ರೈ ವ್ಯಾಲಿ ವಿ.ವಿ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಸಾನ್ ಸು ಸುದ್ದಿ ಸಂಸ್ಥೆಗೆ ಕಳುಹಿಸಿದ ಇ- ಮೇಲ್‌ನಲ್ಲಿ ತಿಳಿಸಿದ್ದಾರೆ

‘ವಿ.ವಿಯ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಸಹಾಯಕ ಅಂಜಿ ರೆಡ್ಡಿ ಎಂಬುವವರು ರಾಮ್ ಕ್ರಿಸ್ತ ಕರ್ರಾ  ಎಂಬ ವಿದ್ಯಾರ್ಥಿಯೊಂದಿಗೆ ಸೇರಿ ಆರಂಭಿಸಿದ ಕನ್ಸಲ್ಟೆಂಟ್ ಕಂಪೆನಿ ಮೂಲಕ ಕಳೆದ ಏಪ್ರಿಲ್‌ನಲ್ಲಿ ಮೋಸದ ಯೋಜನೆಯೊಂದನ್ನು ರೂಪಿಸಿದ್ದರು. ಐ-20 ಫಾರ್ಮ್ ಮತ್ತು ಸಿಪಿಟಿಯ (ಪಠ್ಯ ಪ್ರಾಯೋಗಿಕ ಅಧ್ಯಯನ) ಒಪ್ಪಿಗೆ ಪಡೆದುದಕ್ಕೆ ಬದಲಾಗಿ ರಾಮ್ ಕ್ರಿಸ್ತ ಕರ್ರಾ ವೈಯಕ್ತಿಕ ಬ್ಯಾಂಕ್ ಖಾತೆಗೆ ಭೋಧನಾ ಶುಲ್ಕವನ್ನು ಪಾವತಿಸುವಂತೆ ಇವರು ವಿದ್ಯಾರ್ಥಿಗಳನ್ನು ಕೇಳಿಕೊಂಡಿದ್ದರು. ಈ ವಂಚನೆ ಬಯಲಾದ ಕೂಡಲೇ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು’ ಎಂದು ಇ-ಮೇಲ್ ನಲ್ಲಿ ಅವರು ಹೇಳಿದ್ದಾರೆ.   ‘ಈಗ ಇವರಿಬ್ಬರು ವಿಶ್ವವಿದ್ಯಾಲಯದ ವಿರುದ್ಧ ಐಸಿಇಗೆ ದೂರು ನೀಡಿದ್ದಾರೆ’ ಎಂದು  ಸುಸಾನ್ ಆರೋಪಿಸಿದ್ದಾರೆ.

ಐಸಿಇಯು ವಿ.ವಿಯನ್ನು ಮುಚ್ಚಿರುವುದರಿಂದ ನೂರಾರು ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಜೊತೆಗೆ ಗಡಿಪಾರಾಗುವ ಭೀತಿಯನ್ನೂ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಚಲನವಲನಗಳ ಮೇಲೆ ನಿಗಾ ಇಡಲು ಅಮೆರಿಕ ಅಧಿಕಾರಿಗಳು ಹಲವಾರು ವಿದ್ಯಾರ್ಥಿಗಳ ಕಾಲಿಗೆ ರೇಡಿಯೊ ಕಾಲರ್‌ಗಳನ್ನು ಅಳವಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.ಅಮೆರಿಕದ ಅಧಿಕಾರಿಗಳ ಈ ವರ್ತನೆವನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಇಂತಹ ಅಮಾನವೀಯ ಕೃತ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರು ಒಬಾಮ ಆಡಳಿತವನ್ನು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT