ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್

ದೀಪಾವಳಿ ವಿಶೇಷಾಂಕ 2013 ಕಥಾ ಸ್ಪರ್ಧೆ– ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅ  ದು ಕರೆಂಟು ಕಾಣದ ಬಡಗುಡಿಸಲು, ಬೆಳಗಿನ ಐದು ಗಂಟೆಗೆಲ್ಲ ಹೋಟೆಲಿನ ಕಪ್ಪು ಬಸಿ ತೊಳೆಯುವ ಕೆಲಸಕ್ಕೆ ಸೀಮೆಎಣ್ಣೆ ಬುಡ್ಡಿಯ ಮಬ್ಬು ಬೆಳಕಿನಲ್ಲಿ ಸಿದ್ಧಳಾಗಿ ಹೊರಟಿದ್ದಾಳೆ ಪಾರ್ವತಿ. ಆಗಲೇ ಎಮ್ಮೆಯ ಹಾಲನ್ನು ಸಹ ಕರೆದಿದ್ದಾಳೆ. ಎಮ್ಮೆ ಹಾಲು ಅವಳ ಆದಾಯದ ಅರ್ಧ ಭಾಗ. ಗಂಡ ಆನಂದ ಮುಳುಗಿ ಹೋಗುವಷ್ಟು ಕುಡಿದು ಬಂದು ಮಲಗಿದವನು ಮೇಲಕ್ಕೇಳುವುದು ಮಧ್ಯಾಹ್ನಕ್ಕೋ, ಸಾಯಂಕಾಲಕ್ಕೋ. ಮೊದಲು ಮಿತಿಯಲ್ಲಿ ಕುಡಿಯುತ್ತಿದ್ದವನು ಈಚೀಚೆಗೆ ಮೇಲಕ್ಕೇಳದಂತೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ.

ಬುದ್ಧಿ ಹೇಳಲು ಹೋದರೆ ದನಕ್ಕೆ ಬಡಿದಂತೆ ಬಡಿಯುತ್ತಾನೆ. ಅವನು ಗುಡಿಸಿಲಿನ ಒಂದು ಮೂಲೆಯಲ್ಲಿ ವಿಕಾರವಾಗಿ ಜೊಲ್ಲು ಸುರಿಸುತ್ತ ಗೊರಕೆ ಹೊಡೆಯುವುದು ಕಂಡು ಪಾರ್ವತಿ ದೊಡ್ಡ ನಿಟ್ಟಿಸಿರುಬಿಟ್ಟಳು. ಆ ನಿಟ್ಟುಸಿರಿನಲ್ಲಿ ಬರೀ ನಿರಾಸೆಯೇ ತುಂಬಿತ್ತು. ಹೋಟೆಲ್ ಕೆಲಸ ಮುಗಿಸಿ ಬೆಳಗಿನ ಹತ್ತು ಗಂಟೆಗೆ ವಾಪಸಾದ ನಂತರ ನಾಲ್ಕೈದು ಕಡೆ ಮನೆ ಕೆಲಸಕ್ಕೆ ಹೋಗುತ್ತಾಳೆ. ಅವಳು ದುಡಿಯಬೇಕು ಮನೆ ನಡೆಯಬೇಕು ಎಂಬಂಥ ಪರಿಸ್ಥಿತಿ. ಅವರಿವರು ಕೊಟ್ಟ ಬಟ್ಟೆಗಳಲ್ಲಿ ಜೀವನ ಸವೆಸಿರುವ ಪಾರ್ವತಿ ಎಂದೂ ಹೊಸ ಬಟ್ಟೆಗಳನ್ನು ಕಂಡವಳಲ್ಲ. ಇನ್ನೊಂದು ಮೂಲೆಯಲ್ಲಿ ಮುದುರಿ ಮಲಗಿರುವ ಒಬ್ಬಳೇ ಮಗಳು ಗೌರಿಯನ್ನು ಶಾಲೆ ಬಿಡಿಸಿ ಈಗ ಎರಡು ವರ್ಷವಾಯಿತು. ಆರನೇ ತರಗತಿಯಲ್ಲಿರಬೇಕಿತ್ತು ಓದಿದ್ದರೆ. ಸರಿಯಾಗಿ ಹೊಟ್ಟೆಬಟ್ಟೆಗೆ ಇಲ್ಲದ ಪೀಚಲು ಹುಡುಗಿ ಗೌರಿಯನ್ನು ಕಂಡು ಪಾರ್ವತಿಗೆ ಸಂಕಟವಾಯಿತು.

ಮಗಳನ್ನು ಏಳಿಸದೆ ಬಾಗಿಲು ಮುಂದೆ ಮಾಡಿಕೊಂಡು ಹೋಟೆಲ್ ಕಡೆ ಹೆಜ್ಜೆ ಹಾಕಿದಳು. ಬಸ್ಟಾಂಡ್‌ನಲ್ಲಿರುವ ಹೋಟೆಲಿನಲ್ಲಾಗಲೇ ಗಿರಾಕಿಗಳು ತುಂಬಿದ್ದರು. ಹೋಟೆಲಿನ ಯಜಮಾನ ಇಡೀ ಜಗತ್ತನ್ನೇ ಬೈಯ್ಯುತ್ತ ಕಾಫೀ, ಟೀ, ಇಡ್ಲಿ ಮಾಡುತ್ತ ಬೆವರುತ್ತ ಹೋಟೆಲ್ ತುಂಬ ಓಡಾಡುತ್ತಿದ್ದ. ಬಂದ ಪಾರ್ವತಿಗೆ ‘ಬಂದೆಯಾ ಪಾರ್ವತಿ! ಇಷ್ಟು ತಡಮಾಡಿ ತಿಂಡಿ ತಿನ್ನಲು ಬಂದೆಯೋ ಅಥವಾ ಕಪ್ಪು ಬಸಿ ತೊಳೆಯಲು ಬಂದೆಯೋ?’ ಎಂದ ವ್ಯಂಗ್ಯವಾಗಿ. ಪಾರ್ವತಿ ಉಸಿರು ಬಿಡಲಿಲ್ಲ. ತಲೆತಗ್ಗಿಸಿ ರಾಶಿ ರಾಶಿ ಬೀಳುತ್ತಿದ್ದ ಎಂಜಲು ಲೋಟ ತಟ್ಟೆಗಳನ್ನು ತೊಳೆಯುವುದರಲ್ಲಿ ಮಗ್ನಳಾದಳು.

ಇಷ್ಟರಲ್ಲಿಯೇ ಏನಾದರೊಂದು ತೀರ್ಮಾನವಾಗುತ್ತದೆ ಎಂದ ಗಿರಾಕಿಯೊಬ್ಬ. ಅತಿಯಾಯಿತು ಮಹರಾಯ, ಪಾಠ ಕಲಿಸಲೇಬೇಕು ಎಂದ ಮತ್ತೊಬ್ಬ. ದೂರದ ಕತ್ತಲಲ್ಲಿ ಎದೆ ಝಲ್ಲೆನ್ನುವಂತೆ ಯಾರೋ ನಕ್ಕಿದ್ದು ಕೇಳಿಸಿತು. ಅವರು ಪರ ಊರಿನವರಂತಿದ್ದರು. ಹಿಂದಿನಸಲ ಕೋಮುಗಲಭೆ ಆದಾಗಲೂ ಅವರು ಕಾಣಿಸಿಕೊಂಡಿದ್ದು ನೆನಪಾಯಿತು.

ಮತ್ತೆ ಕೋಮು ಗಲಭೆಗೆ ಊರು ಸಜ್ಜಾಗುತ್ತಿದ್ದ ಹಾಗೆ ತೋರಿತು ಪಾರ್ವತಿಗೆ. ಗಲಾಟೆ ಆಯಿತೆಂದರೆ ಹೋಟೆಲ್ ಬಂದ್, ದುಡಿಮೆಗೆ ಸಂಚಕಾರ ಮತ್ತೆ ಖಾಲಿ ಹೊಟ್ಟೆ! ಈ ಗಲಭೆಗಳಿಂದ ಯಾವ ದೇವರಿಗೆ ಪ್ರೀತಿಯೋ? ಸುಡುಗಾಡು...

ತಾಯಿ ಬಾಗಿಲು ದಾಟಿದ ಮೇಲೆ ಗೌರಿಗೆ ಎಚ್ಚರವಾಯಿತು, ಹಾಸಿದ್ದ ಹೊದ್ದಿದ್ದ ಚಿಂದಿಗಳನ್ನು ನೀಟಾಗಿ ಮಡಿಸಿ ಮೂಲೆಯಲ್ಲಿಟ್ಟು ಮುಖ ತೊಳೆದು ತನ್ನ ತಂದೆಯ ಗೊರಕೆ ಕನವರಿಕೆಗಳನ್ನು ಉಪೇಕ್ಷಿಸಿ ಕೊಟ್ಟಿಗೆ ಕಡೆ ನಡೆದಳು, ಎಮ್ಮೆ ಸಾವಕಾಶವಾಗಿ ಮೆಲುಕು ಹಾಕುತ್ತ ಅರೆಗಣ್ಣಾಗಿ ಭಾವ ಸಮಾಧಿಯಲ್ಲಿತ್ತು. ಕೊಟ್ಟಿಗೆಯ ಬಾಗಿಲ ಬಳಿ ಕಟ್ಟಿ ಹಾಕಿದ್ದ ಎಮ್ಮೆ ಕರು ಹಾಲು ಕುಡಿಯಲು ತಾಯಿಯ ಕಡೆ ಜಗ್ಗಾಡುತ್ತಿತ್ತು. ಗೌರಿಯು ಕರು ಬಳಿ ಬಂದು ಮಾತನಾಡಿಸುತ್ತ ಮೈ ಸವರ ತೊಡಗಿದಳು. ಎಮ್ಮೆ ಎದುರು ಒಂದು ಹಿಡಿ ಹುಲ್ಲನ್ನು ಎಸೆದಳು, ಎಮ್ಮೆ ನಾಲಿಗೆಯಿಂದ ಹುಲ್ಲನ್ನು ಎಳೆದುಕೊಂಡು ತಿನ್ನತೊಡಗಿತು.

ಆಗ ಹೊರಗಡೆ ಇದ್ದಕ್ಕಿದ್ದಂತೆ ಜೋರು ಗಲಾಟೆ ಕೇಳಿಸಿತು. ನಾಲ್ಕಾರು ಜನ ಕೈಯ್ಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ‘ಹುಚ್ಚು ನಾಯಿ ಹತ್ತಿರ ಹೋಗಬೇಡಿ. ಹುಷಾರು, ಜೊಲ್ಲು ತಾಗೀತು’ ಇತ್ಯಾದಿ ಕೂಗುತ್ತ ದೌಡಾಯಿಸಿ ಬಂದರು. ನಾಯಿ ಎತ್ತೆತ್ತಲೋ ಓಡುತ್ತ ಗೌರಿಯ ಕಡೆ ಬಂದೇ ಬಿಟ್ಟಿತು. ಅದಕ್ಕೆ ಮೈಮೇಲೆ ಎಚ್ಚರವಿರುವಂತೆ ತೋರಲಿಲ್ಲ, ನಾಲಿಗೆ ಇಳಿಬಿಟ್ಟು ಜೊಲ್ಲು ಸುರಿಸುತ್ತಿತ್ತು, ಕಣ್ಣುಗಳು ರಕ್ತದುಂಡೆಯಂತಿದ್ದವು, ಕಾಯಿಲೆಯ ಸಂಕಟ ಮತ್ತು ಜನರ ಏಟಿಗೆ ಅದು ಬೊಬ್ಬೆ ಹೊಡೆಯುತ್ತಿತ್ತು.

ಗೌರಿ ಓಡಿ ತಪ್ಪಿಸಿಕೊಂಡಳು, ಆದರೆ ಕರುವನ್ನು ಕಟ್ಟಿ ಹಾಕಿದ್ದರಿಂದ ಓಡಲಾಗದೆ ಒದರುತ್ತ ಜಗ್ಗಾಡತೊಡಗಿತು, ರಭಸದಿಂದ ಓಡಿ ಬಂದ ನಾಯಿ ಕರುವಿನ ಹಿಂಗಾಲಿಗೆ ಕಡಿದೇಬಿಟ್ಟಿತು. ಅಲ್ಲಿಗೆ ಓಡಿ ಬಂದಿದ್ದ ಜನ ಕೂಗಾಡುತ್ತ ದೊಣ್ಣೆಗಳಿಂದ ಬೀಸಿ ಹೊಡೆದದ್ದೇ ನಾಯಿ ಜೋರಾಗಿ ಕೂಗಿ ಸತ್ತು ಬಿದ್ದಿತು. ನಾಯಿಯ ಶವವನ್ನು ಹಗ್ಗದಿಂದ ಕಟ್ಟಿ ಹೊರಗೆಳೆದುಕೊಂಡು ಹೋದರು. ಆದರೆ ಅದೀಗಾಗಲೇ ಹಲವಾರು ಜನ ಜಾನುವಾರುಗಳನ್ನು ಕಡಿದಿತ್ತು.

ಕ್ಷಣಾರ್ಧದಲ್ಲಿ ನಡೆದ ಈ ಅನಾಹುತವನ್ನು ಕಣ್ಣಾರೆ ಕಂಡ ಗೌರಿ ಕರುವಿನ ಬಳಿ ಬಂದರೆ ಅದು ಹಿಂದಿನ ಕಾಲಿನಲ್ಲಿ ರಕ್ತ ಸುರಿಸುತ್ತ ಅಡ್ಡ ಮಲಗಿ ಒದರುತ್ತಿತ್ತು. ಗಾಬರಿಯಲ್ಲಿದ್ದ ಗೌರಿ ಏನು ಮಾಡಬೇಕೆಂದು ತೋಚದೆ ತಂದೆಯನ್ನು ಎಬ್ಬಿಸಹೋದರೆ ಅವನು ಈ ಕಾಲಕ್ಕೆ ಏಳುವ ಮನುಷ್ಯನಾಗಿ ತೋರಲಿಲ್ಲ. ಚಿಂದಿ ಬಟ್ಟೆ ಒತ್ತಿ ಹಿಡಿದು ಸುರಿಯುತ್ತಿದ್ದ ರಕ್ತವನ್ನು ನಿಲ್ಲಿಸಲು ಗೌರಿ ಪ್ರಯತ್ನಿಸಿದಳು. ಆದರೆ ಕರು ಏನು ಮಾಡಲೂ ಬಿಡದೆ ಹಗ್ಗ ಹರಿದುಕೊಂಡು ಕೊಟ್ಟಿಗೆಯಲ್ಲೆಲ್ಲ ಕುಣಿಯತೊಡಗಿತು. ಕುಣಿದಂತೆಲ್ಲ ಹೆಚ್ಚೆಚ್ಚು ರಕ್ತ ಸುರಿಯತೊಡಗಿತು. ಎಮ್ಮೆಯು ತನ್ನ ಕರುವಿಗಾದ ದುರ್ಗತಿಗೆ ಮತ್ತು ಇದ್ದಕ್ಕಿದ್ದಂತೆ ಉಂಟಾದ ಅವಘಡಕ್ಕೆ ಬೆದರಿ ಅರಚತೊಡಗಿತು. ಗೌರಿ ಇದರಿಂದೆಲ್ಲ ಆಘಾತಗೊಂಡು ಅಳತೊಡಗಿದಳು.

ಹೋಟೆಲ್‌ನಲ್ಲಿ ಎಂಜಲು ತೊಳೆಯುತ್ತಿದ್ದ ಪಾರ್ವತಿಗೆ ಮಹದೇವ ಬಂದು ವಿಷಯ ತಿಳಿಸಿದ. ಕೂಡಲೇ ಪಾರ್ವತಿ ಯಾರ ಅಪ್ಪಣೆಗೂ ಕಾಯದೆ ಮನಗೆ ದೌಡಾಯಿಸಿದಳು. ಎಚ್ಚರವಿದ್ದಾಗಲೆಲ್ಲ ತನ್ನಷ್ಟಕ್ಕೆ ತಾನು ಒಬ್ಬನೇ ಮಾತನಾಡಿಕೊಳ್ಳುವುದರಿಂದ ಮಹದೇವನಿಗೆ ‘ಮರುಳ ಮಹದೇವ’ ಎಂಬ ಅಡ್ಡ ಹೆಸರಿತ್ತು.

ಅವನ ಮನೆ ಪಾರ್ವತಿಯ ಮನೆಯ ಹತ್ತಿರದಲ್ಲಿತ್ತು. ಅವನಿಗೆ ಮೂರು ಜನ ತಂಗಿಯರು. ಅವರು ಆರೋಗ್ಯವಂತರು, ನೇರ ನಡೆಯುವರು ಆಗಿದ್ದರೂ ಬಡತನವೇ ಕಾರಣವಾಗಿ ಮದುವೆಯಾಗದೆ ಮನೆಯಲ್ಲಿಯೇ ಉಳಿದಿದ್ದರು. ಅವರ ಮದುವೆಗೆ ಪ್ರಯತ್ನಿಸಿ ಸೋತು ತಾಯಿ ಸತ್ತು ಹೋಗಿದ್ದರೆ, ಅಣ್ಣ ಮಹದೇವ ‘ಮರುಳ ಮಹದೇವ’ನಾಗಿದ್ದ. ಸೂಕ್ಷ್ಮ ಮನಸ್ಸಿನ ಮಹದೇವನೂ ಮದುವೆಯಾಗದೇ ಉಳಿದ. ಲೆಕ್ಕ ಬಲ್ಲವನೂ, ಪ್ರಾಮಾಣಿಕನೂ ಆದ ಮಹದೇವ ಒಂದೆರಡು ಅಂಗಡಿಗಳಲ್ಲಿ ಲೆಕ್ಕ ಬರೆದು ದುಡಿಯುತ್ತಿದ್ದ. ಯಾರಿಗೂ ತೊಂದರೆ ಕೊಡದ ಅವನ ಮಾತುಗಾರಿಕೆ ಎಲ್ಲರಿಗೆ ವಿಚಿತ್ರವಾಗಿ ತೋರುತ್ತಿತ್ತು. ‘ದುಡ್ಡಿಗೆ ಧಿಕ್ಕಾರ’, ‘ವರದಕ್ಷಿಣೆಗೆ ಧಿಕ್ಕಾರ’ ಎಂದು ಶುರು ಮಾಡಿದರೆ ಅದಕ್ಕೆ ಕೊನೆಯೆಂಬುದೇ ಇರುತ್ತಿರಲಿಲ್ಲ. ಮಾತು ನಿಲ್ಲಿಸು ಎಂದು ಯಾರಾದರೂ ಕೇಳಿಕೊಂಡರೆ ಕೂಡಲೇ ಮೌನವಹಿಸುತ್ತಿದ್ದ.

ಮನೆಗೆ ಪಾರ್ವತಿಯ ಜೊತೆ ಮಹದೇವನೂ ಬಂದ, ಇದು ಆಕೆಗೆ ಆಸರೆಯಾಯಿತು. ಕೊಟ್ಟಿಗೆಯಲ್ಲಿ ಅಳುತ್ತಿದ್ದ ಗೌರಿಯನ್ನು ಪಾರ್ವತಿ ಸಮಾಧಾನ ಮಾಡುವಷ್ಟರಲ್ಲಿ ಮಹದೇವ ಒಳ ಹೋಗಿ ಬಕೆಟ್‌ನಲ್ಲಿ ನೀರು ತಂದು ಕರುವಿನ ಗಾಯವನ್ನು ಚೆನ್ನಾಗಿ ತೊಳೆದು, ‘ಪಾರ್ವತಕ್ಕ ಕೂಡಲೇ ಸಲೀಮ್ ಡಾಕ್ಟರ್‌ರನ್ನು ಕರೆತರಬೇಕು. ನಾಯಿ ಭಯಂಕರವಾಗಿ ಕಚ್ಚಿದೆ’ ಎಂದ.

ಡಾ. ಸಲೀಮ್ ಎಂಬ ಪಶುವೈದ್ಯ ಹತ್ತಿರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಒಂದು ವರ್ಷದ ಹಿಂದೆ ವರ್ಗವಾಗಿ ಬಂದು ಕೆಲಸ ನಿರ್ವಹಿಸುತ್ತಿದ್ದರು. ಅವರ ಹೆಸರು ಹೇಳಿದ ಕೂಡಲೇ ಪಾರ್ವತಿಯ ಎದೆ ಧಸಕ್ಕೆಂದಿತು. ಅದಕ್ಕೆ ಕಾರಣವೂ ಇತ್ತು.

ಸಲೀಂ ಬಂದ ಹೊಸತರಲ್ಲಿ ಪಾರ್ವತಿಯನ್ನು ಮಾತನಾಡಿಸಿ ತಮ್ಮಲ್ಲಿಗೂ ಮನೆಗೆಲಸಕ್ಕೆ ಬರಬೇಕೆಂದು ಕೇಳಿಕೊಂಡಿದ್ದರು, ಪಾರ್ವತಿ ಹೇಳಿದಷ್ಟು ಹಣವನ್ನು ಕೊಡಲು ಒಪ್ಪಿದ್ದರು, ಡಾಕ್ಟರನ್ನು ನೋಡಿದ ಮೇಲೆ ಪಾರ್ವತಿಗೆ ಆಗುವುದಿಲ್ಲ ಎಂದು ಹೇಳಲು ಮನಸ್ಸು ಬರಲಿಲ್ಲ.
‘ಪಾರ್ವತಿ ಹಿಂದೂ ಆಗಿ ಒಬ್ಬ ಮುಸ್ಲಿಮನ ಮನೆಗೆ ಕಸ ಮುಸುರೆ ಕೆಲಸಕ್ಕೆ ಹೋಗುವುದು ಅವಮಾನಕರ’ ಎಂದು ಒಂದು ಹಿಂದೂಪರ ಗುಂಪು ಪಾರ್ವತಿಗೆ ಬುದ್ಧಿವಾದ ಹೇಳಿತು. ಮಾತು ಕೇಳದಿದ್ದರೆ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲ ಎಂದು ಧಮಕಿ ಹಾಕಿತು.

ಇತ್ತ ಮುಸ್ಲಿಂಪರ ಗುಂಪೊಂದು ಸಲೀಮರ ಮನೆಗೆ ಹೋಗಿ– ‘ನೀವು ಈ ಊರಿಗೆ ಹೊಸಬರು, ಮನೆಗೆಲಸ ಮಾಡಲು ನಮ್ಮವರಿಲ್ಲವೇ? ನಾವು ಹೇಳಿದಂತೆ ಕೇಳಬೇಕು, ಧರ್ಮವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದರೆ ನಿಮಗೆ ಕಷ್ಟವಾಗುತ್ತದೆ’ ಎಂದು ಜಬರಿಸಿದರು.
ಸಲೀಮರ ಮನೆಗೆ ಪಾರ್ವತಿ ಬರಲಿಲ್ಲ, ಸಲೀಮ ಬೇರೆ ಯಾರನ್ನೂ ಕೆಲಸಕ್ಕೆ ಬಿಟ್ಟುಕೊಳ್ಳಲಿಲ್ಲ. ಕೆಲ ಮುಸ್ಲಿಂ ಮುಖಂಡರು ಸಲೀಮ್ ಬಗ್ಗೆ ‘ಗರಂ’ ಆದರು.

ಈ ಪ್ರಸಂಗವನ್ನು ನೆನಸಿಕೊಂಡು ‘ಸಲೀಂ ಡಾಕ್ಟ್ರು ನಮ್ಮ ಮನೆಗೆ ಬರುವುದಿಲ್ಲ ಬಿಡು’ ಎಂದಳು ಪಾರ್ವತಿ. ಆದರೆ ಮಹದೇವ, ‘ಅವರು ಯಾವ ಮನೆಗೂ ಬರುವುದಿಲ್ಲ ಎಂದು ಹೇಳುವುದಿಲ್ಲ. ಅವರನ್ನು ನಾನು ಚೆನ್ನಾಗಿ ಬಲ್ಲೆ, ನಮ್ಮ ಮನೆಯ ಸತ್ತು ಹೋಗುವಂತಿದ್ದ ಎಮ್ಮೆಗೆ ನಾಲ್ಕು ದಿನ ಎಡಬಿಡದೆ ಬಂದು ಹುಶಾರು ಮಾಡಿದರು. ಅವರನ್ನು ನಾನು ಕರೆದುಕೊಂಡು ಬರುತ್ತೇನೆ’ ಎಂದು ಹೊರಟೇ ಬಿಟ್ಟ.

ಅರ್ಧ ಗಂಟೆಯೊಳಗೆ ಡಾಕ್ಟರನ್ನು ಮಹದೇವ ಕರೆದುಕೊಂಡು ಬಂದ, ಎಮ್ಮೆ ಕರುವನ್ನು ಪರೀಕ್ಷಿಸತೊಡಗಿದ ವೈದ್ಯರು ಸರಳರೂ ನಿಗರ್ವಿಗಳೂ ಆಗಿದ್ದರು. ಪಾರ್ವತಿಯನ್ನು ಕಂಡಕೂಡಲೇ ಕುಶಲ ವಿಚಾರಿಸಿದರು. ಹಿಂದೆ ನಡೆದ ಯಾವ ಘಟನೆಯನ್ನು ನೆನೆಸದೆ ಪಾರ್ವತಿಗೆ ಇರುಸು ಮುರುಸಾಗದಂತೆ ವರ್ತಿಸಿದರು. ಒಂದು ಹಾಳೆಯಲ್ಲಿ ಹುಚ್ಚು ನಾಯಿ ರೋಗದ ಲಸಿಕೆಯನ್ನು ಬರೆದರು, ಮತ್ತೊಂದು ಹಾಳೆಯಲ್ಲಿ ಕರುವಿಗೆ ಮಾಡಬೇಕಾದ ಆರು ಇಂಜೆಕ್ಷನ್‌ಗಳ ದಿನಾಂಕಗಳನ್ನು ಬರೆದುಕೊಟ್ಟರು. ಮೂರು ತಿಂಗಳ ಅವಧಿಯಲ್ಲಿ ಮಾಡಬೇಕಾಗಿರುವ ಇಂಜೆಕ್ಷನ್‌ಗಳ ದಿನಾಂಕವನ್ನು ಯಾವ ಕಾರಣಕ್ಕೂ ಬದಲಿಸಬಾರದು, ಇಂಜೆಕ್ಷನ್ ದಿನವೇ ಔಷಧವನ್ನು ಖರೀದಿಸಿ ತರಬೇಕೇ ವಿನಾ ಮೊದಲೇ ಖರೀದಿಸಿ ಮನೆಯಲ್ಲಿಡಬೇಡಿ ಮುಂತಾಗಿ ಅನೇಕ ಸೂಚನೆಗಳನ್ನು ಕೊಟ್ಟರು.

ಪಾರ್ವತಿಗೆ ತಾನು ಒಬ್ಬ ವೈದ್ಯರ ಬಳಿ ವ್ಯವಹರಿಸುತ್ತಿದ್ದೇನೆ ಎಂದೆನಿಸದೆ ಪರಿಚಿತ ವ್ಯಕ್ತಿಯೊಡನೆ ಒಡನಾಡಿದಂತೆನಿಸಿತು. ಮಹದೇವ ‘ವೈರಸ್‌ಗೆ ಧಿಕ್ಕಾರ, ರೇಬಿಸ್‌ಗೆ ಧಿಕ್ಕಾರ, ಹುಚ್ಚ ನಾಯಿಗೆ ಧಿಕ್ಕಾರ’ ಇತ್ಯಾದಿ ಕೂಗುತ್ತ ಔಷಧದ ಅಂಗಡಿಯಿಂದ ಇಂಜೆಕ್ಷನ್ ತಂದನು. ಉದ್ದಕ್ಕೂ ಮನಸ್ಸಿನಲ್ಲಿದ್ದುದನ್ನು ಮಾತನಾಡುವುದು, ಘೋಷಣೆಗಳನ್ನು ಕೂಗುವುದು ಮಾಡುತ್ತಲೇ ಇದ್ದ. ‘ಸಾರ್... ಈ ಇಂಜೆಕ್ಷನ್ ಮಾಡಿದರೆ ಕರು ಗ್ಯಾರಂಟಿ ಬದುಕುತ್ತದೆಯೇ?’ ಎಂದು ಕೇಳಿದ.

‘ರೇಬಿಸ್ ರೋಗದಲ್ಲಿ ಯಾವುದನ್ನೂ ನಿಶ್ಚಿತವಾಗಿ ಹೇಳಲು ಬರುವುದಿಲ್ಲ. ಆದರೆ ಆರೂ ಇಂಜೆಕ್ಷನ್ ಆಗುವ ತನಕ ಕರುವಿಗೆ ರೇಬಿಸ್ ಕಾಣಿಸಿಕೊಳ್ಳದಿದ್ದರೆ ಅಪಾಯದಿಂದ ಪಾರಾದಂತೆ. ಈ ಕರುವಿಗೆ ರೇಬಿಸ್ ಕಾಣಿಸಿಕೊಳ್ಳುವುದಿಲ್ಲ ಎಂಬ ಆಶಾಭಾವದೊಂದಿಗೆ ಚಿಕಿತ್ಸೆ ಮಾಡೋಣ’ ಎಂದರು ಸಲೀಂ. ಡಾಕ್ಟ್ರ ಮಾತಿಗೆ ಮಹದೇವ ಒಪ್ಪಿ ತಲೆಯಾಡಿಸಿದ. ಈ ಮಾತುಕತೆಯ ಜೊತೆಗೆ ಡಾಕ್ಟ್ರು ಚಿಕಿತ್ಸೆಯನ್ನೂ ಮಾಡಿ ಮುಗಿಸಿದರು. ಪಾರ್ವತಿ ಮತ್ತು ಗೌರಿ ಕರುವಿಗೆ ಚಿಕಿತ್ಸೆ ದೊರಕಿದ್ದರಿಂದ ಹಗುರಾಗಿದ್ದರು.

ಒಳಗೆ ಗೊರಕೆ ಹೊಡೆಯುತ್ತ ಮಲಗಿರುವ ಆನಂದನಿಗೆ ಎಮ್ಮೆಯ ಇಂಜೆಕ್ಷನ್ ಕೊಟ್ಟು ಎಚ್ಚರವಾಗುವಂತೆ ಮಾಡಿ ಎಂದ ಮಹದೇವ. ಇದಕ್ಕೆ ಎಲ್ಲರೂ ನಕ್ಕರು. ಆ ರೀತಿಯಲ್ಲಾದರೂ ತನ್ನ ಗಂಡ ಸರಿಯಾದರೆ ಒಳ್ಳೆಯದಿತ್ತು ಎನಿಸಿತು ಪಾರ್ವತಿಗೆ. ಗೌರಿಯು ಸಲೀಂ ಡಾಕ್ಟರನ್ನು ಆದರಿಸತೊಡಗಿದ್ದಳು. ಅವರಿಗೆ ಎಲ್ಲವೂ ಸಾಧ್ಯವಿರಬಹುದೆನಿಸಿತು ಅವಳ ಪುಟ್ಟ ಮನಸ್ಸಿಗೆ. ಎಲ್ಲರೂ ನಗುನಗುತ್ತ ಅಲ್ಲಿಂದ ಚದುರಿದರು.

ಪಾರ್ವತಿಗೆ ಅನ್ನಿಸಿದಂತೆ ಅಂದು ಸಾಯಂಕಾಲದ ಹೊತ್ತಿಗೆ ಊರಿನ ಪರಿಸ್ಥಿತಿ ಬಿಗಡಾಯಿಸಿತು. ಬಸ್ಟ್ಯಾಂಡಿನಲ್ಲಿ ಯಾವುದೋ ಹುಡುಗ ಯಾವುದೋ ಹುಡುಗಿಯನ್ನು ಮಾತನಾಡಿಸಿದ್ದೇ ಎಡವಟ್ಟಾಯಿತು. ಅವರಿಬ್ಬರು ಬೇರೆ ಬೇರೆ ಧರ್ಮದವರೆಂದು ಪತ್ತೆ ಮಾಡಿ ಜಗಳ ಪ್ರಾರಂಭಿಸಿದರು. ವಾಸ್ತವವಾಗಿ ಹುಡುಗ ಹುಡುಗಿಯರು ಬೇರೆ ಊರಿಗೆ ಸೇರಿದ್ದ ಅಣ್ಣ ತಂಗಿಯಾಗಿದ್ದರು. ನಿಜವನ್ನು ನಂಬಲು ಯಾರೂ ತಯಾರಿರಲಿಲ್ಲ.

ಯಾರು ಏನೇ ಆಡಿದರೂ ಮಾಡಿದರೂ ಸಂಶಯದ ಹುತ್ತ ಬೆಳೆಯುತ್ತ ಹೋಯಿತು. ಊರಿನ ವಾತಾವರಣ ಪ್ರಕ್ಷುಬ್ಧಗೊಂಡಿತು. ಹಿಂದೂ ಮುಸ್ಲಿಮರು ತಮ್ಮ ತಮ್ಮ ಗುಂಪುಗಳಲ್ಲಿ ಇರತೊಡಗಿದರು. ಒಬ್ಬಂಟಿ ಸಿಕ್ಕವರನ್ನು ದೇವರು, ಧರ್ಮದ ಹೆಸರಲ್ಲಿ ಕತ್ತರಿಸಿ ಎಸೆದರು. ಕರ್ಫ್ಯೂ, ಪೊಲೀಸ್, ವ್ಯಾನುಗಳು ಇತ್ಯಾದಿ ಕಿರಿಕಿರಿ ಪ್ರಾರಂಭವಾಯಿತು. ಗಲಾಟೆ ಹುಟ್ಟು ಹಾಕಿದವರು ಬೆಚ್ಚಗೆ ಬೆಂಕಿ ಕಾಯಿಸಿಕೊಂಡರು. ಅಮಾಯಕರು ಸತ್ತರು. ಪಾರ್ವತಿಯಂಥವರಿಗೆ ದುಡಿದು ತಿನ್ನುವುದು ಕಷ್ಟವಾಯಿತು. ಅಲ್ಲಿ ಇರಿತ, ಇಲ್ಲಿ ಅತ್ಯಾಚಾರ ಎಂಬ ಮಾತುಗಳು ಎಲ್ಲೆಲ್ಲೂ ಹಬ್ಬಿನಿಂತವು.

ಶಾಂತಿಯಿರಲಿ, ಸಮರವಿರಲಿ, ಕಾಲ ನಿಲ್ಲುವುದಿಲ್ಲ.
ಇಂದು ನಾಯಿ ಕಡಿದ ಮೂರನೆಯ ದಿನ, ಎರಡನೆಯ ಇಂಜಿಕ್ಷನ್ ಕೊಡಿಸಬೇಕು, ಊರು ಹತ್ತಿ ಉರಿವ ಹೊತ್ತಿನಲ್ಲಿ ಡಾಕ್ಟರನ್ನು ಹೇಗೆ ಕರೆತರುವುದು. ಗಂಡ ಆನಂದನನ್ನು ಕುಡಿಸಿ ಗಲಾಟೆ ಮಾಡಲು ಯಾವುದೋ ಒಂದು ಗುಂಪು ಕರೆದುಕೊಂಡು ಹೋಗಿದ್ದಾರೆ. ಗೌರಿ ಚಿಕ್ಕವಳು, ನಾನೇ ಹೋಗಿ ಕರೆದರೆ ಡಾಕ್ಟ್ರು ಬರುತ್ತಾರೋ ಇಲ್ಲವೋ? ಇಂಜೆಕ್ಷನ್ ತರಲು ಅಂಗಡಿ ತೆಗೆದಿದೆಯೋ ಇಲ್ಲವೋ? ಕರುವಿಗೆ ಸದ್ಯಕ್ಕೆ ರೇಬಿಸ್ ರೋಗದ ಲಕ್ಷಣಗಳೇನೂ ಇಲ್ಲ. ಹಾಲು ಕುಡಿದುಕೊಂಡು ಚಟುವಟಿಕೆಯಿಂದಿದೆ. ಆದರೆ ಕೊಡಿಸಬೇಕಾದ ಇಂಜೆಕ್ಷನ್ ಕೊಡಿಸಲೇಬೇಕಲ್ಲ? ಮುಂತಾಗಿ ಯೋಚಿಸುತ್ತಾ ಪಾರ್ವತಿ ಮಹದೇವನ ಮನೆ ಕಡೆ ಹೆಜ್ಜೆ ಹಾಕಿದಳು.

ಮಹದೇವ ಭಾವಾವೇಶದಲ್ಲಿ ವಿಪರೀತ ಮಾತನಾಡುತ್ತಿದ್ದ. ‘ಬಿಡುಬಿಡು, ಹೀಗೆ ವಿನಾಕಾರಣ ಗಲಾಟೆ ಮಾಡಿಕೊಂಡರೆ ಎಲ್ಲರಿಗೂ ಹುಚ್ಚು ಹಿಡಿದಿದೆ ಎಂದು ತಿಳಿಯಬೇಕು. ಎಮ್ಮೆ ಕರುವಿಗೆ ಮಾತ್ರ ಯಾಕೆ ಇಂಜೆಕ್ಷನ್? ಹೊಡೆದಾಡುತ್ತಿರುವ ಎಲ್ಲರನ್ನೂ ಹಿಡಿದು ಹುಚ್ಚು ನಾಯಿ ಇಂಜೆಕ್ಷನ್ ಮಾಡಿಸು! ಎಮ್ಮೆ ಕರುವಿಗೆ ಮಾತ್ರ ಹುಚ್ಚು ನಾಯಿ ಕಡಿದಿಲ್ಲ. ನಾಚಿಕೆಗೇಡು’ ಇತ್ಯಾದಿ ಕೂಗುತ್ತ ಪಾರ್ವತಿಯೊಡನೆ ನಡೆದ. ಅವಳನ್ನು ಗುಡಿಸಲು ಬಳಿ ಬಿಟ್ಟು ಔಷಧದ ಅಂಗಡಿಗೆ ನಡೆದ, ಔಷದ ಪಡೆದ. ಅಲ್ಲಿಂದ ಸಲೀಂ ಡಾಕ್ಟ್ರ ಮನೆಗೆ ನಡೆದ.

ಡಾಕ್ಟ್ರು ಪಾರ್ವತಿಯ ಮನೆಗೆ ನಡೆದೇ ಹೊರಟರು. ಕರುವನ್ನು ಪರೀಕ್ಷಿಸಿ ಸದ್ಯಕ್ಕೆ ಕರುವಿಗೆ ತೊಂದರೆ ಇಲ್ಲ ಎಂದು ಪ್ರಕಟಿಸಿದರು. ಗಾಯಕ್ಕೆ ಮುಲಾಮು ಹಾಕಿ ಇಂಜೆಕ್ಷನ್ ಮಾಡಿದರು. ಪುಟ್ಟ ಗೌರಿಯು ಇದುವರೆಗೆ ಡಾಕ್ಟರರನ್ನೇ ಗಮನಿಸುತ್ತಿದ್ದವಳು ‘ಇನ್ನು ಮೇಲೆ ಕರುವಿಗೆ ರೇಬಿಸ್ ಆಗಲ್ಲವ ಸಾರ್?’ ಎಂದಳು. ಗೌರಿ ಎಷ್ಟು ಮುಗ್ಧತೆಯಿಂದ ಆರ್ತತೆಯಿಂದ ಪ್ರಶ್ನಿಸಿದ್ದಳೆಂದರೆ ಇಡೀ ಅವಳ ಜೀವನವೇ ಕರುವಿಗಾಗಿ ಪರಿತಪಿಸುತ್ತಿದೆಯೇನೋ ಅನಿಸಿತು. ಸಲೀಂ ಕರಗಿಹೋದರು. ‘ಗೌರಿ ನಿನ್ನ ನಿಷ್ಕಳಂಕ ಮನಸ್ಸು ಮತ್ತು ನಿಮ್ಮಮ್ಮನ ಒಳ್ಳೆಯತನದ ಹತ್ತಿರ ಯಾವ ಕಾಯಿಲೆಯೂ ಸುಳಿಯುವುದಿಲ್ಲ ಬಿಡು’ ಎಂದು ಮೂರನೆಯ ಇಂಜೆಕ್ಷನ್ ಮಾಡಿಸಬೇಕಾದ ದಿನಾಂಕವನ್ನು ನೆನಪಿಸಿ ಹೊರಟರು.

‘ಹುಶಾರು ಸಾರ್’ ಎಂದ ಮಹದೇವ. ಅದಕ್ಕೆ ಸಲೀಂ, ‘ನಮ್ಮದು ತುರ್ತು ಸೇವೆ. ಕರುವಿಗೆ ಇಂಜೆಕ್ಷನ್ ಮಾಡದಿದ್ದರೆ ಆಗುತ್ತಿತ್ತೆ? ದನಕರುಗಳಿಗೆ ಯಾವ ಧರ್ಮ?’ ಎನ್ನುತ್ತ ಮುಂದುವರೆದರು. ಅವರ ಮುಖದಲ್ಲಿ ಬೇಸರ ಹರಳುಗಟ್ಟತೊಡಗಿತು.

ನಾಯಿ ಕಡಿದು ಇಂದಿಗೆ ಏಳನೆಯ ದಿನ. ಮೂರನೆಯ ಇಂಜೆಕ್ಷನ್ ಮಾಡಬೇಕಾದ ದಿನ. ಊರಿನ ಪರಿಸ್ಥಿತಿ ಇನ್ನೂ ಬಿಗಡಾಯಿಸಿತ್ತು. ಬೆಳಿಗ್ಗೆಯಿಂದ ಕರು ಮಂಕಾಗಿರುವುದನ್ನು ಪಾರ್ವತಿ ಗಮನಿಸಿದ್ದಳು. ಕರು ಹಾಲು ಕುಡಿದಿರಲಿಲ್ಲ, ಮೂಗು ಒಣಗಿತ್ತು, ಎಂದಿನಂತೆ ಚಟುವಟಿಕೆಯಿಂದಿರಲಿಲ್ಲ.

ಜೊಲ್ಲು ಸುರಿಯುತ್ತಿತ್ತು. ಹಾಗಾದರೆ ರೇಬಿಸ್ ಕಾಣಿಸಿಕೊಂಡಿತೆ? ಡಾಕ್ಟ್ರು ಕೊಟ್ಟ ಇಂಜೆಕ್ಷನ್‌ಗಳು ಕೆಲಸ ಮಾಡಲಿಲ್ಲವೆ? ತಮ್ಮೆಲ್ಲರ ಪ್ರಯತ್ನಗಳನ್ನು ಮೀರಿ ಆಗಬಾರದ್ದು ಆಗಿಹೋಯಿತೆ? ಕರುವಿನ ಜೊಲ್ಲು ನಮ್ಮಲ್ಲಾರಿಗಾದರೂ ಸೋಕಿದರೆ? ದೇವರೇ! ಪಾರ್ವತಿಗೆ ದಿಗಿಲಾಯಿತು. ಕರು ಜೊಲ್ಲು ಸುರಿಸುತ್ತಿರುವುದನ್ನು ಕಂಡು ಗೌರಿ ಮೌನವಾದಳು. ಆಗೊಮ್ಮೆ ಈಗೊಮ್ಮೆ ಅವಳ ಎಲ್ಲ ಪ್ರಯತ್ನ ಮೀರಿ ದೊಡ್ಡ ದೊಡ್ಡ ಹನಿಗಳು ಅವಳ ಕಣ್ಣಿಂದ ತುಳುಕಿ ಕೆನ್ನೆ ಮೇಲೆ ಉರುಳುತ್ತಿದ್ದವು.

ಅಂದು ಆನಂದ ಎಚ್ಚರವಾಗಿದ್ದ, ಅವನ ಸ್ನೇಹಿತರನೇಕರು ಸುತ್ತ ಕುಳಿತು ಏನೋ ಲೆಕ್ಕಾಚಾರದಲ್ಲಿ ಮುಳುಗಿದ್ದರು. ಎಮ್ಮೆ ಕರುವಿಗೆ ಹುಶಾರಿಲ್ಲದಿರುವುದು ಈಗಷ್ಟೇ ಅವರಿಗೆ ಗೊತ್ತಾಯಿತು.

ಆನಂದ ಮತ್ತವನ ಗುಂಪು ಪಾರ್ವತಿಗೆ ಪ್ರಶ್ನಿಸಿತು– ಏನಾಗಿದೆ ಕರುವಿಗೆ?
ಪಾರ್ವತಿ: ಹುಚ್ಚುನಾಯಿ ಕಡಿದಿದೆ, ಒಂದು ವಾರವಾಯಿತು.
ಗುಂಪು: ಒಂದು ವಾರದಿಂದ ಏನು ಮಾಡುತ್ತಿದ್ದೆ? ಡಾಕ್ಟರಿಗೆ ತೋರಿಸಿಲ್ಲವ?
ಪಾರ್ವತಿ: ತಕ್ಷಣವೇ ತೋರಿಸಿದೆ. ಸಲೀಂ ಡಾಕ್ಟರು ಚಿಕಿತ್ಸೆ ಕೊಡುತ್ತಿದ್ದಾರೆ.
ಗುಂಪು: ಏನು? ಸಲೀಂ ಡಾಕ್ಟರೇ! ಅವನ ಹತ್ರ ಯಾಕೆ ಚಿಕಿತ್ಸೆ ಮಾಡಿಸಿದೆ? ಅವನಿಗೇನು ಗೊತ್ತಿದೆ? ಡಾ. ಪ್ರಭಾಕರ್ ಹತ್ರ ತೋರಿಸಬೇಕಿತ್ತು.
ಪಾರ್ವತಿ: ಅವರ ಪರಿಚಯ ಇಲ್ಲ, ಸಲೀಮರ ಮನೆ ಹತ್ತಿರದಲ್ಲಿದೆ.
ಗೌರಿ: ಸಲೀಮ್ ಡಾಕ್ಟ್ರ ಪರಿಚಯ ನಮಗೆಲ್ಲರಿಗೆ ಇದೆ, ಅವರು ತುಂಬಾ ಒಳ್ಳೆಯವರು.
ಚಿಕ್ಕ ಹುಡುಗಿಯ ಮಾತು ಕೇಳಿದ ಕೂಡಲೇ ಗುಂಪಿಗೆ ಹಿನ್ನಡೆಯಾದಂತಾಯಿತು.
ಆಷ್ಟು ಹೊತ್ತಿಗೆ ಸರಿಯಾಗಿ ಮಹದೇವನ ಜೊತೆ ಡಾ. ಸಲೀಂ ಕಾರಿನಿಂದಿಳಿದು ಬಂದು ಕರುವನ್ನು ಪರೀಕ್ಷಿಸತೊಡಗಿದರು. ಸಲೀಂರನ್ನು ಕಂಡದ್ದೇ ಗುಂಪಿಗೆ ದ್ವೇಷ ಹೆಡೆಬಿಚ್ಚಿತು.
ಗುಂಪು: ಏನು ಸ್ವಾಮಿ? ಯಾವ ಸೀಮೆ ಚಿಕಿತ್ಸೆ ಕೊಡ್ತಾ ಇದ್ದೀರಿ? ಎರಡೆರಡು ಸಲ ಬಂದರೂ ಕರುಗೆ ಹುಶಾರಾಗಿಲ್ಲ. ಅದಕ್ಕೆ ರೇಬಿಸ್ ಕಾಣಿಸಿಕೊಂಡಿದೆ, ನೀವೇ ನೋಡಿ!
ಡಾ. ಸಲೀಂ: ಒಮ್ಮೆಲೆ ಹಾಗೆ ‘ರೇಬಿಸ್’ ಎಂಬ ತೀರ್ಮಾನಕ್ಕೆ ಬರಬೇಡಿ, ನಾನೀಗಾಗಲೇ ಕರುವನ್ನು ಪರೀಕ್ಷಿಸಿದ್ದೇನೆ. ಅದು ನಮ್ಮ ಮಾತಿಗೆ ಪ್ರತಿಕ್್ರಿಯಿಸುತ್ತಿದೆ. ನೀರು ಕುಡಿಯುತ್ತಿದೆ. ರೇಬಿಸ್‌ನಲ್ಲಿ ಪ್ರಾಣಿಗಳು ಮಾತಿಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ನೀರು ಕುಡಿಯುವುದಿಲ್ಲ.
ಗುಂಪು: (ಏರುಧ್ವನಿಯಲ್ಲಿ ಮಾತನಾಡತೊಡಗಿತು) ನಮಗೇ ಹೇಳಿ ಕೊಡ್ತಿಯೇನೋ, ನಮಗೆ ಎಲ್ಲ ಗೊತ್ತಿದೆ. ನಾವು ಹೇಳಿದ ಹಾಗೆ ನೀನು ಕೇಳ್ಬೇಕು.

ಗುಂಪಿಗೆ ನಾನಾ ತರದ ಜನ ಜಮಾವಣೆಯಾಗತೊಡಗಿದರು. ಬಂದು ಸೇರಿಕೊಂಡ ಜನರಲ್ಲಿ ಕೆಲವರು ಸಲೀಂ ಪರವಹಿಸಿ ಮಾತಾಡತೊಡಗಿದರು. ಅವರು ಮುಸ್ಲಿಮರಾಗಿದ್ದರು. ಈ ಎರಡು ಗುಂಪುಗಳು ವಾದಿಸುತ್ತ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದರು. ಆಗ ಇದ್ದಕ್ಕಿದ್ದಂತೆ ನೆರೆದಿದ್ದ ಮುಸ್ಲಿಮರಲ್ಲೇ ಕೆಲವರು ಸಲೀಂ ಡಾಕ್ಟರ್‌ಗೆ ಧಿಕ್ಕಾರ ಹಾಕಲು ಪ್ರಾರಂಭಿಸಿದರು. ಮುಸ್ಲಿಮ್ ಮಹಿಳೆಯರಿಗೆ ಬುರ್ಕಾ ಕಡ್ಡಾಯದ ಬಗ್ಗೆ, ಸಿನಿಮಾ ನೋಡಕೂಡದೆಂಬುದರ ಬಗ್ಗೆ ಸಲೀಂ ವಿರೋಧಿಸಿದ್ದರು. ಸಲೀಂ ಡಾಕ್ಟರನ್ನು ಹಣಿಯಲು ಹೊಂಚು ಹಾಕುತ್ತಿದ್ದವರಿಗೆ ಇವತ್ತು ಅನಾಯಾಸವಾಗಿ ಅವಕಾಶ ಒದಗಿಬಂದಿತ್ತು.

ಆನಂದನ ಗುಂಪಿಗೆ ಪೇಚಾಟಕ್ಕಿಟ್ಟುಕೊಂಡಿತು. ಸಲೀಂ ಪರವಾಗಿ ಕೂಗುತ್ತಿದ್ದ ಮುಸ್ಲಿಮರಿಗೂ ಗಲಿಬಿಲಿಯಾಯಿತು. ಯಾರು ಯಾರ ಪರ ಮತ್ತು ವಿರೋಧ ಎಂಬುದರ ಬಗ್ಗೆ ಗೊಂದಲ ಶುರುವಾಯಿತು. ಸಲೀಂ ಇದಕ್ಕೆಲ್ಲ ಮೂಕ ಪ್ರೇಕ್ಷಕನಂತೆ ಅಸಹಾಯಕರಾಗಿ ನಿಂತಿದ್ದರು. ಯಾರೋ ನುಗ್ಗಿ ಬಂದು ಅವರ ಕೈಯಲ್ಲಿದ್ದ ಸಿರಿಂಜ್, ಔಷಧದ ಬ್ಯಾಗ್‌ಅನ್ನು ತೆಗೆದೆಸೆದು ತಳ್ಳಾಡತೊಡಗಿದರು. ಇನ್ನೇನು ಏಟು ಬಿದ್ದವು ಎನ್ನುವಷ್ಟರಲ್ಲಿ ಮಹದೇವ ಸಲೀಂರನ್ನು ಎಳೆದುಕೊಂಡು ಬಂದು ಕಾರು ಹತ್ತಿಸಿದನು. ಅವರು ಜಾಗ ಖಾಲಿ ಮಾಡಿದರು.

ಆನಂದನ ಗುಂಪಿನ ಕೆಲವರು ಸಲೀಂ ಡಾಕ್ಟ್ರು ಬರೆದುಕೊಟ್ಟ ಔಷಧದ ಚೀಟಿ ಹಾಗೂ ದಿನಾಂಕಗಳ ಚೀಟಿಯನ್ನು ತೆಗೆದುಕೊಂಡು ಡಾ. ಪ್ರಭಾಕರ್ ಬಳಿಗೆ ಹೋದರು. ಅವರ ಸಲಹೆ ಪಡೆದು ಸಲೀಂರ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಡುವುದು ಅವರ ಉದ್ದೇಶವಾಗಿತ್ತು.
ಡಾ. ಪ್ರಭಾಕರ್ ತಮ್ಮಲ್ಲಿಗೆ ಆಗಮಿಸಿದವರ ಅಹವಾಲನ್ನು ಸಂಪೂರ್ಣವಾಗಿ ಕೇಳಿಕೊಂಡು ಚೀಟಿಗಳನ್ನು ಪರೀಕ್ಷಿಸಿದರು. ಎಲ್ಲವೂ ಸ್ವಯಂ ವೇದ್ಯವಾಗಿತ್ತು. ಅವರು ಗುಂಪನ್ನು ಕುರಿತು ‘ನಿಮಗೆ ಕರುವಿಗಿಂತ ಮುಖ್ಯವಾಗಿ ಕೋಮು ಗಲಭೆ ಎಬ್ಬಿಸುವುದು ಮುಖ್ಯವಾಗಿರುವ ಹಾಗೆ ತೋರುತ್ತದೆ.

ಡಾ. ಸಲೀಂ ಮಾಡಿರುವುದೆಲ್ಲ ಸರಿ ಇದೆ, ನೀವು ಹೊರಡಿ’ ಎಂದು ಜೋರು ಮಾಡಿ ಅವರನ್ನು ಹೊರ ಹಾಕಿದರು.
ಗುಂಪು ನಿರಾಶೆಯಿಂದ ಹಿಂತಿರುಗಿತು.

ಮನೆಯ ಮುಂದಿನ ಗುಂಪು ಖಾಲಿಯಾದ ನಂತರ ಪಾರ್ವತಿ ಈ ಕರು ಬದುಕಿದ್ದರೆಷ್ಟು ಬಿಟ್ಟರೆಷ್ಟು ಎಂದೆನಿಸಿ ಮುಂದಿನ ದಾರಿ ಕಾಣದಂತಾಗಿ ಮೂಲೆ ಹಿಡಿದು ಕುಳಿತುಬಿಟ್ಟಳು. ಅವಳ ಜೀವ ರೋಸಿ ಹೋಗಿತ್ತು. ಹುಶಾರು ತಪ್ಪಿ ಕರು ಬೆಳಿಗ್ಗೆಯಿಂದ ಹಾಲು ಕುಡಿದಿಲ್ಲ, ಎಮ್ಮೆಗೆ ಕೆಚ್ಚಲಲ್ಲಿ ಹಾಲು ಉಳಿದುಕೊಂಡಿರುವುದರಿಂದ ಕೆಚ್ಚಲು ಬಾವು ಕಾಣಿಸಿಕೊಂಡರೆ ಹಾಲಿನ ಆದಾಯ ಖೋತ ಆಗುತ್ತದೆ. ಜೊಲ್ಲು ಸುರಿಸುವ ಕರುವಿಗೆ ನಿಜಕ್ಕೂ ರೇಬಿಸ್ ತಗುಲಿಕೊಂಡಿದ್ದರೆ? ಸದಾ ಕರುವಿನ ಪಕ್ಕದಲ್ಲಿಯೇ ಇರುವ ಎಮ್ಮೆಗೆ ರೇಬಿಸ್ ದಾಟಿಕೊಂಡಿದ್ದರೆ? ಈಗಾಗಲೇ ಎಮ್ಮೆಯ ಹಾಲನ್ನು ಉಪಯೋಗಿಸಿದ್ದೇವೆ! ಸುಡುಗಾಡು ರೇಬಿಸ್ ನಮಗೆಲ್ಲ ತಗಲಿಕೊಂಡರೆ? ಚಿಕಿತ್ಸೆ ನೀಡಲು ಬಂದ ಡಾಕ್ಟರನ್ನು ಎಲ್ಲರೂ ಸೇರಿ ಗಲಾಟೆ ಮಾಡಿ ಹಿಂದಕ್ಕೆ ಓಡಿಸಿದ್ದಾರೆ! ಏನು ಮಾಡಲೂ ತೋಚದೆ ಕೈಚೆಲ್ಲಿ ಕೂತಳು. ಸುಸ್ತು ಆವರಿಸಿ ಕೂಗತೊಡಗಿದಳು.

ಇತ್ತ ಗೌರಿಗೆ ಏನೂ ಬಗೆ ಹರಿಯಲಿಲ್ಲ. ಕರುವಿಗೆ ಚಿಕಿತ್ಸೆ ಆಗಿಲ್ಲ. ಅದಕ್ಕೆ ಚಿಕಿತ್ಸೆ ಮಾಡಿಸಲು ಅವಳೊಂದು ಉಪಾಯ ಮಾಡಿದಳು. ಕರುವಿಗೆ ಹಗ್ಗಕಟ್ಟಿ ನಿಧಾನಕ್ಕೆ ಎಳೆದುಕೊಂಡು ಡಾಕ್ಟರ್ ಮನೆ ಕಡೆ ಹೊರಟಳು. ಹುಶಾರಿಲ್ಲದ ಕಾರಣ ಕರು ಮೊಂಡಾಟ ಮಾಡತೊಡಗಿತು. ಛಲಬಿಡದೆ ನಿಧಾನವಾಗಿ ಡಾಕ್ಟರ್ ಮನೆಯ ತನಕ ನೂಕುತ್ತ ನಡೆದಳು, ಗುರಿ ಮುಟ್ಟಿದ್ದಾಗ ಮೈಯೆಲ್ಲ ಬೆವೆತು ತೋಯ್ದು ಹೋದಳು.

ನಡೆದ ಘಟನೆಗಳ ಬಗ್ಗೆ ಚಿಂತಿಸಿ ತಲೆ ಚಿಟ್ಟು ಹಿಡಿದಂತಾಗಿ ಸಲೀಂ ಮನೆಯಲ್ಲಿಯೇ ಇದ್ದರು. ವಿನಾಕಾರಣ ರೇಜಿಗೆಯಲ್ಲಿ ಸಿಕ್ಕಿಕೊಂಡಿದ್ದಕ್ಕೆ ಸಿಟ್ಟು ಬಂದಿತ್ತು. ಆದರೆ ಪಾರ್ವತಿ ಗೌರಿಯರ ನೆನಪಾಗಿ ಕರುಣೆ ಉಕ್ಕಿತು.

ನೆನೆದವರ ಮನದಲ್ಲಿ ಎಂಬಂತೆ ಗೌರಿ ಕರುವಿನೊಡನೆ ಸಲೀಂರ ಮನೆ ಮುಂದೆ ಪ್ರತ್ಯಕ್ಷಳಾದಾಗ ಅವರಿಗೆ ನಂಬಲಾಗಲಿಲ್ಲ. ವಿನಯವೇ ಮೈವೆತ್ತಂತಿದ್ದ ಗೌರಿಯನ್ನು ಕಂಡಕೂಡಲೇ ಅವರಿಗೆ ಎಲ್ಲ ಮರೆತು ಹೋಯಿತು. ಮುಗ್ಧಳಾದ ಗೌರಿ ತನ್ನ ಕೈಯ್ಯಲ್ಲಿ ಹಿಡಿದು ತಂದಿದ್ದ ರೇಬಿಸ್ ಇಂಜೆಕ್ಷನ್ನು ಮುಂದೆ ಚಾಚಿದಳು. ಮರು ಮಾತಾಡದೆ ಸಲೀಂ ಇಂಜೆಕ್ಷನ್ ಮಾಡಿ ಮುಗಿಸಿದರು. ಕರು ಮಂಕಾಗಿರುವುದನ್ನು ಪರೀಕ್ಷಿಸಿ ಅದಕ್ಕೂ ಚಿಕಿತ್ಸೆ ನೀಡಿದರು. ನಾಯಿ ಕಡಿತದ ಗಾಯ ಒಣಗುತ್ತಿರುವುದನ್ನು ಗಮನಿಸಿದರು. ಒಂದೂ ಮಾತಿಲ್ಲದೆ ಎಲ್ಲ ಕೆಲಸ ಮುಗಿಯಿತು. ಗೌರಿ ಕರುವಿನೊಡನೆ ಹಿಂತಿರುಗಿದಳು.

ಹದಿನಾಲ್ಕನೆಯ ದಿನ ನಾಲ್ಕನೆಯ ಇಂಜೆಕ್ಷನ್ ಮಾಡುವ ಹೊತ್ತಿಗೆ ಊರಿನಲ್ಲಿ ಗಲಾಟೆ ನಿಂತಿದ್ದರೂ ಜನರ ಮನಸ್ಸಿನಲ್ಲಿ ಕಳವಳವೂ, ಭಾವನೆಗಳ ಮೇಲಾಟವೂ ನಡೆದಿತ್ತು. ಆ ದಿನವೂ ಮನೆ ಬಾಗಿಲಿಗೆ ಬಂದು ಗೌರಿ ಕರುವಿಗೆ ಇಂಜೆಕ್ಷನ್ ಮಾಡಿಸಿಕೊಂಡು ಹೋದಳು. ಕರುವಿನ ಗಾಯ ಒಣಗಿತ್ತು. ಕರುವಿಗೆ ರೇಬಿಸ್ ತಗುಲಿಲ್ಲ ಎಂದು ಸಲೀಂ ಹೇಳಿದ್ದು ನಿಜವಾಗಿತ್ತು. ಅಂದು ಪಾರ್ವತಿಯೂ ಸಲೀಂರ ಮನೆಗೆ ಬರಬೇಕೆಂದಿದ್ದವಳು ಆನಂದನಿಗೆ ಹೆದರಿ ಬಂದಿರಲಿಲ್ಲ. ಆದರೆ ಮೂವತ್ತನೇ ದಿನದ ಐದನೆಯ ಇಂಜೆಕ್ಷನ್‌ಗೆ ತಾಯಿ ಮಗಳಿಬ್ಬರೂ ಬಂದು ಕರುವಿಗೆ ಚಿಕಿತ್ಸೆ ಮಾಡಿಸಿಕೊಂಡು ಹೋದರು. ಕಡಿತದ ಗಾಯ ಸಂಪೂರ್ಣವಾಗಿ ವಾಸಿಯಾಗಿತ್ತು. ಕರು ಆರೋಗ್ಯ ತುಂಬಿಕೊಂಡು ಮುಸುಗುರಿಯುತ್ತಿತ್ತು.

ಮೂರು ತಿಂಗಳು ತುಂಬಿದ ದಿನ ಕರುವಿಗೆ ಕೊನೆಯ ಇಂಜೆಕ್ಷನ್ ಮಾಡಿಸಲು ಬಂದಾಗ ತಾಯಿ ಮಗಳ ಜೊತೆ ಮಹದೇವನೂ ಬಂದಿದ್ದ. ಇಂಜೆಕ್ಷನ್ ಆದ ಮೇಲೆ ಸಲಿಂ ಡಾಕ್ಟ್ರ ಮನೆಯ ವಿಶಾಲ ಕಟ್ಟೆಯಲ್ಲಿ ಕುಳಿತರು. ಮಹದೇವ ಮೊದಲೇ ಯೋಚಿಸಿ ಹಿಂದೂ ಮುಸ್ಲಿಂ ಎನ್ನದೆ ತನ್ನ ಹಲವಾರು ಮಿತ್ರರನ್ನು ಕರೆದಿದ್ದ. ಅವರೆಲ್ಲರೂ ಕಟ್ಟೆಯ ಮೇಲೆ ಬಂದು ಕುಳಿತರು. ಸಲೀಂರ ಹೆಂಡತಿ ಮಕ್ಕಳು ಜೊತೆಗೂಡಿದರು. ಎಲ್ಲರಿಗೂ ಸಲೀಂ ಡಾಕ್ಟರೇ ಬಿಸ್ಕತ್ತು ಚಹ ತಂದುಕೊಟ್ಟರು. ಮಾತಾಡಲು ಏನೂ ಇರಲಿಲ್ಲ, ಎಲ್ಲರಲ್ಲೂ ಬರೀ ಸಂತೋಷ ತುಂಬಿತ್ತು.

ಹೊರಗೆ ಕರು ಕಿರುಚಾಡುತ್ತಿತ್ತು. ಗೌರಿಯ ಸಂತೋಷ ಎಲ್ಲೆ ಮೀರಿತ್ತು. ಯಾವುದೋ ಮಾಯೆಯಲ್ಲಿ ಆನಂದ ಮತ್ತವನ ಗುಂಪು ಜಾಗ ಮಾಡಿಕೊಂಡು ಕುಳಿತಿತ್ತು. ಕರು ಹುಶಾರಾಗಿ, ಎಮ್ಮೆ ತೊಂದರೆಯಿಲ್ಲದೆ ಹಾಲು ಕೊಡುವುದನ್ನು ಮುಂದುವರೆಸಿದ್ದು ಅವನಿಗೆ ಪವಾಡದಂತೆ ತೋರಿತ್ತು. ಮಹದೇವನಿಗೆ ಭಾವಾವೇಶವನ್ನು ತಡೆಯಲಾಗಲೇ ಇಲ್ಲ, ಕಣ್ಣಿನಲ್ಲಿ ನೀರು ತುಂಬಿಕೊಂಡು ‘ರೇಬಿಸ್ ರೋಗವನ್ನು ಗೆದ್ದು ಬಿಟ್ರಿ ಸಾರ್’ ಎಂದು ಹೇಳುತ್ತ ಉಮ್ಮಳಿಸಿದ. ಸಲೀಂ ಡಾಕ್ಟರು ಮಹದೇವನ ಕಡೆ ತಿರುಗಿ ‘ರೇಬಿಸ್ ರೋಗವನ್ನು ಗೆದ್ದು ಬಿಟ್ಟೆವು’ ಎಂದು ತಿದ್ದಿ ಹೇಳಿದರು.
ನೆರೆದ ಎಲ್ಲರ ಕಣ್ಣುಗಳು ಮಂಜಾಗಿದ್ದವು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT