ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಆತ್ಮಹತ್ಯೆ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 5 ಡಿಸೆಂಬರ್ 2013, 7:57 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ, ಮಗನಿಗೆ ಸರ್ಕಾರಿ ನೌಕರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಮುಖಂಡರು ಗ್ರಾಮಸ್ಥರು ಬುಧವಾರ ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಸುಂಡ್ರಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೇ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ತಿಮ್ಮದಾಸೇಗೌಡನ ಕುಟುಂಬಕ್ಕೆ ಪರಿಹಾರ ದೊರಕಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಹಾಗೂ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ರೈತರು ಪಟ್ಟುಹಿಡಿದರು.

ವಿಚಾರ ತಿಳಿಯುತ್ತಿದ್ದಂತೆಯೇ ಉಪ ವಿಭಾಗಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು, ತಹಶೀಲ್ದಾರ್‌ ಮಾಳಿಗಯ್ಯ, ಹನೂರು ವಿಶೇಷ ತಹಶೀಲ್ದಾರ್‌ ಎಂ. ನಂಜುಂಡಯ್ಯ, ಡಿ.ವೈ. ಎಸ್‌.ಪಿ. ಚೆನ್ನಬಸವಣ್ಣ ಸ್ಥಳಕ್ಕೆ ತೆರಳಿ ಪ್ರತಿಭಟನೆ ಕೈಬಿಟ್ಟು ಶವಸಂಸ್ಕಾರಕ್ಕೆ ಮುಂದಾಗುವಂತೆ ಮನವೊಲಿಸಲು ಮುಂದಾದರು.

ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರನೀಡಬೇಕು,ಮಗನಿಗೆ ಸರ್ಕಾರಿ ನೌಕರಿ ನೀಡಬೇಕು, ತೆಳ್ಳನೂರು ನಾಲೆ ವ್ಯಾಪ್ತಿ ನೀರಾವರಿ ಸೌಲಭ್ಯ ಕಲ್ಪಿಸಬೇಕು, ಕಾಡುಪ್ರಾಣಿಗಳ ಹಾವಳಿ ಯಿಂದ ಬೆಳೆಗಳ ರಕ್ಷಣೆ ಹಾಗೂ ಸಮರ್ಪಕ ವಿದ್ಯುತ್‌ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಜಿಲ್ಲಾ ರೈತ ಮುಖಂಡ ಮಹೇಶ್‌ಪ್ರಭು, ಶೈಲೇಂದ್ರ, ಗೌಡೇಗೌಡ, ಶಿವರಾಂ ಇತರೆ ರೈತ ಮುಖಂಡರು ಮಾತನಾಡಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೃತನ ಪುತ್ರನಿಗೆ ತರಬೇತಿ ಹಾಗೂ ಸಾಲ ಸೌಲಭ್ಯ ದೊರಕಿಸುವುದಾಗಿ, ಕೃಷಿ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸುವ ಹಾಗೂ ಜಮೀನಿನ ಖಾತೆಯನ್ನು ತಕ್ಷಣ ಮಾಡಿಸಿಕೊಡುವ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆ ಕರೆಯುವ ಭರವಸೆ ನೀಡಿ ರೈತರು ಪ್ರತಿಭಟನೆಯನ್ನು ಕೈಬಿಟ್ಟರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್‌, ಇನ್‌ಸ್ಪೆಕ್ಟರ್‌ ಕಿರಣ್‌ ಕುಮಾರ್‌, ಮರಿಸಿದ್ದಶೆಟ್ಟಿ, ಅಮರನಾರಾಯಣ, ಕೃಷಿ ಸಹಾಯಕ ನಿರ್ದೇಶಕ ಸೋಮಶೇಖರ್‌ ಇತರೆ ಅಧಿಕಾರಿಗಳು ಇದ್ದರು.

ದೊರೆಯದ ಚಿಕಿತ್ಸೆ: ಪ್ರತಿಭಟನೆ
ಕೊಳ್ಳೇಗಾಲ: ವೈದ್ಯಕೀಯ ಚಿಕಿತ್ಸೆ ದೊರೆಯದೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುತ್ತಿಗೆಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾರ್ಟಳ್ಳಿ ವಾಸಿ ಲೂರ್ದುಸ್ವಾಮಿ(60) ಮೃತ ವ್ಯಕ್ತಿ. ಅಸ್ತಮಾ ಕಾಯಿಲೆಯಿಂದ 4 ವರ್ಷದಿಂದ ಬಳಲುತ್ತಿದ್ದ ಲೂರ್ದುಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಂಗಳವಾರ ರಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲವಾಗಿತ್ತು. ಆ ಸಂದರ್ಭದಲ್ಲಿ ಕಾಯಿಲೆ ಹೆಚ್ಚಳವಾಗಿತ್ತು.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಆರೋಗ್ಯ ಕೇಂದ್ರದ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಹಾಗೂ 108 ವಾಹನ ಸೌಲಭ್ಯ ದೊರಕಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದರು.

ಹನೂರು ವಿಶೇಷ ತಹಶೀಲ್ದಾರ್‌ ಎಂ. ನಂಜುಂಡಯ್ಯ , ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಮೇಶ್‌, ರಾಮಾಪುರ ಸಬ್‌ಇನ್‌ಸ್ಪೆಕ್ಟರ್‌ ಬಸವರಾಜು ಸಮಾಧಾನಪಡಿಸಿದರು.

ಸಾಲದ ಹೊರೆ; ರೈತ ಆತ್ಮಹತ್ಯೆ
ಕೊಳ್ಳೇಗಾಲ: ಸಾಲದ ಹೊರೆ ತಾಳಲಾರದೆ ರೈತ ತಿಮ್ಮದಾಸೇಗೌಡ (45) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಸುಂಡ್ರಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಿತ್ತನೆ ಬೀಜಕ್ಕೆ ಬಳಸುವ ಕೀಟನಾಶಕವನ್ನು ಅರಣ್ಯದಲ್ಲಿ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂ 7 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ 60 ಕ್ವಿಂಟಲ್‌ ಅರಿಸಿನ ಬೆಳೆದಿದ್ದ ತಿಮ್ಮದಾಸೇಗೌಡ, ಕ್ವಿಂಟಲ್‌ಗೆ ಕೇವಲ 2,500 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದರು. ಇದರಿಂದ ತೀವ್ರ ನೊಂದ ಹಾಗೂ ಸಾಲಗಾರರ ಒತ್ತಡದಿಂದ ಬೇಸತ್ತ ತಿಮ್ಮದಾಸೇಗೌಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಲವಾರಿ ಬಾರಿ ಸಂಬಂಧಿಕರ ಬಳಿ ಹೇಳಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT