ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದ ಪ್ರತಿಭಟನೆ-ಬಂಧನ

Last Updated 26 ಫೆಬ್ರುವರಿ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಭೂಮಿಯಲ್ಲಿ ನ್ಯಾಯಮೂರ್ತಿಗಳಿಗೆ ವಸತಿಗೃಹಗಳನ್ನು ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ಸದಸ್ಯರು ವಿ.ವಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಹೆಬ್ಬಾಳ ಮುಖ್ಯರಸ್ತೆವರೆಗೆ ರ್ಯಾಲಿ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಯತ್ನಿಸಿದ್ದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.ಈ ಹಂತದಲ್ಲಿ ಪೊಲೀಸರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜಿ.ಕೆ.ವೀರೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಪರಿಸ್ಥಿತಿ ನಿಯಂತ್ರಿಸಿದರು.

‘ನ್ಯಾಯಾಂಗ ವ್ಯವಸ್ಥೆಯನ್ನು ಓಲೈಸುವ ದುರುದ್ದೇಶದಿಂದ ಸರ್ಕಾರ ವಿ.ವಿಗೆ ಸೇರಿದ ಭೂಮಿಯಲ್ಲಿ ನ್ಯಾಯಮೂರ್ತಿಗಳಿಗೆ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಹಿತವನ್ನು ಕಡೆಗಣಿಸಿ ನ್ಯಾಯಾಂಗ ಬಡಾವಣೆ ನಿರ್ಮಾಣಕ್ಕಾಗಿ ವಿ.ವಿ ವ್ಯಾಪ್ತಿಯಲ್ಲಿ 22 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್ ದೂರಿದರು.

‘ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದರಿಂದ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಮತ್ತು ಶೈಕ್ಷಣಿಕ ವಾತಾವರಣವು ಹಾಳಾಗಲಿದೆ. ರೈತ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಹಲವೆಡೆ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ರೈತರ ಊಟದ ತಟ್ಟೆಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು.

ವಿ.ವಿ ಜಾಗದಲ್ಲಿ ನ್ಯಾಯಾಂಗ ಬಡಾವಣೆ ನಿರ್ಮಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಅಂತೆಯೇ ನ್ಯಾಯಮೂರ್ತಿಗಳು ಬೇರೆಡೆ ಮನೆಗಳನ್ನು ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಗೌರವಯುತವಾಗಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT