ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಕಾಯಿಲೆಗೆ ಕೃತಿ ಪರಿಹಾರ...

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೃಷಿ ಪುಸ್ತಕಗಳೆಂದರೆ ತಾಂತ್ರಿಕ ಮಾಹಿತಿಗಳು, ಬೇಸಾಯ ಕ್ರಮಗಳು, ಯಶೋಗಾಥೆಗಳ ಸಂಗ್ರಹ... ಹೀಗೆ ಒಂದಷ್ಟು ಸಿದ್ಧ ಪಠ್ಯಗಳ ಮಾಹಿತಿ ಒಳಗೊಂಡಿರುತ್ತವೆ.

ಅದರೆ ಡಾ. ಎಂ.ಬಿ. ರಾಮಮೂರ್ತಿ ಅವರು, ಕೃಷಿ ಲೋಕದಲ್ಲಿ ರೈತರು ಅನುಭವಿಸುವ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಸೂಚಿಸುವ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು `ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು~. ಕನ್ನಡ ಪುಸ್ತಕ ಪ್ರಾಧಿಕಾರ `ವೈದ್ಯಕೀಯ ಸಾಹಿತ್ಯ ಮಾಲೆ~ ಸರಣಿಯಲ್ಲಿ ಈ ಕೃತಿಯನ್ನು ಪ್ರಕಟಿಸಿದೆ.

ಬಯಲಲ್ಲಿ ದುಡಿಯುವ, ಬಿಸಿಲು-ಮಳೆಗೆ ಮೈಯೊಡ್ಡಿಕೊಳ್ಳುವ ಅನ್ನದಾತರು ಹಾಗೂ ಅವರ ದುಡಿಮೆಗೆ ನೆರವಾಗುವ ಕಾರ್ಮಿಕರು ಅನುಭವಿಸುವ ಆರೋಗ್ಯ ಸಮಸ್ಯೆಗಳನ್ನು ಈ ಹೊತ್ತಿಗೆಯಲ್ಲಿ ವಿವರಿಸಲಾಗಿದೆ.

ದನಗಳ ಸಂಪರ್ಕದಲ್ಲಿದ್ದಾಗ ಅಂಟಿಕೊಳ್ಳುವ ಸೋಂಕು ರೋಗಗಳು ಮತ್ತು ಅವುಗಳ ನಿವಾರಣೆ, ಕಲುಷಿತ ಹಾಗೂ ಫ್ಲೋರೈಡ್‌ಯುಕ್ತ ನೀರನ್ನು ಕುಡಿದಾಗ ಉಂಟಾಗುವ ಸಮಸ್ಯೆಗಳು ಮತ್ತು ಪರಿಹಾರ, ಜಮೀನಿನಲ್ಲಿ ಕೆಲಸ ಮಾಡುತ್ತಾ ಹಠಾತ್ತನೆ ಕುಸಿದು ಬಿದ್ದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ... ಹೀಗೆ ಸಾಮಾನ್ಯ ಚಿಕಿತ್ಸೆ ಮತ್ತು ಔಷಧಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ.

ರೈತರು ಮತ್ತು ಸಾಕುವ ಪ್ರಾಣಿಗಳ ಬಗ್ಗೆ ಬರೆದಿರುವ ಅಧ್ಯಾಯದಲ್ಲಿ ಆಕಳುಗಳಿಂದ ಬರುವ ಆಂಥ್ರಾಕ್ಸ್, ಬ್ರೂಸೆಲ್ಲಾ, ನಾಯಿಗಳಿಂದ ಹರಡುವ ರೇಬಿಸ್‌ನಂತಹ ಕಾಯಿಲೆಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದ್ದಾರೆ.

`ದೇವರು ಬಡತನ ಕೊಡ್ತಾನೆ, ಆದರೆ ಕೊಳಕುತನ ಕೊಡುವುದಿಲ್ಲ~ ಎಂಬ ಗಾದೆ ಮಾತಿನಂತೆ ಬಡ ರೈತ, ಕೂಲಿ ಮಹಿಳೆಯರು ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಮಾಹಿತಿ ನೀಡಿದ್ದಾರೆ.

 ವೃತ್ತಿಯಲ್ಲಿ ವೈದ್ಯರಾಗಿ ಬೆಂಗಳೂರು ವೈದ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಲೇಖಕರು ಸಮುದಾಯ ಆರೋಗ್ಯದ ಬಗ್ಗೆ ಸಾಕಷ್ಟು ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ.
 
ಜೀವನ ಮತ್ತು ಆರೋಗ್ಯ, ಸಮುದಾಯ ಆರೋಗ್ಯ, ನೈಸರ್ಗಿಕ ಕೃಷಿ ಸಾಹಿತ್ಯ... ಹೀಗೆ ರೈತ ಸಮುದಾಯದ ಜಾಗೃತಿಗಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಸರಳ ಭಾಷೆ, ಆಕರ್ಷಕ ನಿರೂಪಣೆ, ಸುಲಭವಾಗಿ ಅರ್ಥವಾಗುವ ಪಟ್ಟಿಗಳು ಈ ಕೃತಿಯಲ್ಲಿ ಅಡಕವಾಗಿವೆ.

ಪುಸ್ತಕದ ಬೆಲೆ : ರೂ. 140
ಪ್ರಕಾಶನ: ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಸಂಪರ್ಕ ಸಂಖ್ಯೆ : 080 2674 8811.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT