ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆ ನಿರ್ಲಕ್ಷ್ಯ

ಸಿಂಧನೂರು ಕ್ಷೇತ್ರ ಚುನಾವಣೆ
Last Updated 26 ಏಪ್ರಿಲ್ 2013, 6:05 IST
ಅಕ್ಷರ ಗಾತ್ರ

ಸಿಂಧನೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಿಂಧನೂರು ಕ್ಷೇತ್ರದ ಅಖಾಡದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳು ರೈತರ ಸಮಸ್ಯೆಗಳ ಬಗ್ಗೆ ಮಾತನಾಡದಿರುವ ಕುರಿತು ಪ್ರಜ್ಞಾವಂತ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಭಿವೃದ್ಧಿ ಕೆಲಸ... ಅಭಿವೃದ್ಧಿ ಕೆಲಸ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಭಿವೃದ್ಧಿ ಎಂದರೆ ಯಾವುದು. ಕೇವಲ ರಸ್ತೆ, ಕಟ್ಟಡ ಮಾತ್ರ ಅಭಿವೃದ್ಧಿಯಲ್ಲ. ಇಲ್ಲಿ ಪ್ರಮುಖ ಸಮಸ್ಯೆ ಎಂದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಿರುವುದು ಮತ್ತು ಪಾರದರ್ಶಕವಾಗಿ ಮಾರುಕಟ್ಟೆ ಇಲ್ಲದಿರುವ ಬಗ್ಗೆ ಯಾವ ಅಭ್ಯರ್ಥಿಗಳು ಮಾತನಾಡುತ್ತಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಯ್ಕೆಯಾದ ನಿರ್ದೇಶಕರು ಸಹ ಮಾರುಕಟ್ಟೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ರೈತರ ಆರೋಪ.

ರೈತರು ಬೆಳೆದ ಬತ್ತ, ಸೂರ್ಯಕಾಂತಿ, ಹತ್ತಿ, ಜೋಳ ಮತ್ತಿತರ ದಾಸ್ತಾನನ್ನು ಮಾರುಕಟ್ಟೆಗೆ ತಂದರೆ ದಲ್ಲಾಳಿಗಳು ಮುಗಿಬಿದ್ದು ರೈತರನ್ನು ಶೋಷಣೆ ಮಾಡುತ್ತಾರೆ. ಟೆಂಡರ್ ಪದ್ಧತಿಯಂತೂ ಇಲ್ಲಿಯ ರೈತರಿಗೆ ಗಗನಕುಸುಮವಾಗಿದೆ. ತೂಕದ ಯಂತ್ರ, ದಲ್ಲಾಳಿಗಳಿಂದ ವಿವಿಧ ರೂಪದಲ್ಲಿ ಕಡಿತಗೊಳಿಸುವ ಪದ್ಧತಿಯಿಂದಾಗಿ ಹಲವಾರು ವರ್ಷಗಳಿಂದ ರೈತಾಪಿ ಸಮುದಾಯ ಅನ್ಯಾಯ ಅನುಭವಿಸುತ್ತಲೇ ಬಂದಿದ್ದರೂ ಇದರ ಬಗ್ಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಲ್ಲಿಯೂ ಚಕಾರ ಎತ್ತದೇ ಇರುವುದು ತಮಗೆ ನೋವುಂಟು ಮಾಡಿದೆ ಎಂದು ರೈತ ಮುಖಂಡ ಶಂಕ್ರಪ್ಪ ನೋವಿನಿಂದ ಹೇಳುತ್ತಾರೆ.

ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ರೈತರ ಸಮಸ್ಯೆಯ ಬಗ್ಗೆಯೂ ಅಭ್ಯರ್ಥಿಗಳು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಗಂಗಾವತಿ-ರಾಯಚೂರು ಮುಖ್ಯರಸ್ತೆಯ ಮೇಲ್ಭಾಗದ ಹಳ್ಳಿಗಳು ಯಥೇಚ್ಛ ನೀರಿನಿಂದ ಶ್ರೀಮಂತಗೊಂಡಿದ್ದರೆ ರಸ್ತೆಯ ಕೆಳಭಾಗದ ಹಲವಾರು ಗ್ರಾಮಗಳ ರೈತರು ಕಳೆದ ಎರಡು ದಶಕಗಳಿಂದ ನೀರನ್ನೇ ಮರೆತಿದ್ದಾರೆ. ಬದುಕನ್ನು ಆಶ್ರಯಿಸಿ ಬೆಂಗಳೂರಿಗೆ, ಗೋವಾ, ಪುಣೆ ಮತ್ತಿತರ ಮಹಾನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಒಂದೇ ತಾಲ್ಲೂಕಿನ ಒಂದೇ ಕಾಲುವೆಯ ವ್ಯಾಪ್ತಿಗೆ ಒಳಪಟ್ಟಿದ್ದರೂ ಕೆಲವರಿಗೆ ಶ್ರೀಮಂತ್ರಿಕೆಯ ಸೋಪಾನ, ಮತ್ತೆ ಕೆಲವರಿಗೆ ಬಡತನದ ಬೇಗುದಿ ಇದೆ.

ಈ ಸಮಸ್ಯೆ ನಿವಾರಣೆಗೆ ತುಂತುರು ಹನಿ ನೀರಾವರಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಟೇಲ್ಯಾಂಡ್ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಕೆಲ ಅಭ್ಯರ್ಥಿಗಳು ಒಂದೆರಡು ಕಡೆ ಹೇಳಿದ್ದಾರೆ. ಆದರೆ ಅದನ್ನು ಸಾಧ್ಯ ಮಾಡುವುದು ಹೇಗೆ ಎನ್ನುವುದರ ಬಗ್ಗೆ ರೈತರಿಗೆ ವಿವರವಾದ ಮಾಹಿತಿಯನ್ನು ನೀಡಿರುವುದಿಲ್ಲ.

ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅರಳಹಳ್ಳಿ, ಗೊರೇಬಾಳ, ಶಿರನಗುಡಿ ಪಿಕ್‌ಅಪ್ ಡ್ಯಾಂಗಳು ಮತ್ತು ಹಲವಾರು ಏತ ನಿರಾವರಿ ಯೋಜನೆಗಳನ್ನು ಜಾರಿಗೊಳಿಸಲು ಅಭ್ಯರ್ಥಿಗಳು ಮತದಾರರ ಮುಂದೆ ಪ್ರಮಾಣ ಮಾಡಬೇಕೆಂದು ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT