ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ವಂಚಿಸಿದ ಸರ್ಕಾರ: ಶಾಸಕ

Last Updated 3 ಸೆಪ್ಟೆಂಬರ್ 2013, 6:09 IST
ಅಕ್ಷರ ಗಾತ್ರ

ಮದ್ದೂರು: ಕಬ್ಬಿನ ಅಂತಿಮ ಬೆಲೆ ನಿಗದಿಯಲ್ಲಿ ಸರ್ಕಾರ ರೈತರ ಹಿತ ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅಂತಿಮ ದರ ನಿಗದಿ ಮಾಡದೇ ಕೇವಲ ಮುಂಗಡ ನಿಗದಿ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ. ದರ ನಿಗದಿ ವಿಚಾರದಲ್ಲಿ ಕಬ್ಬು ದರ ನಿಯಂತ್ರಣ ಆಯೋಗ ರಚಿಸಿ ಹಲವು ವರ್ಷಗಳೇ ಕಳೆದರೂ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇದೀಗ ಕಬ್ಬಿಗೆ ಮುಂಗಡವಾಗಿ ರೂ 2400 ನಿಗದಿ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲೇ ಉತ್ತಮ ದರ ನಿಗದಿಗೆ ಮುಂದಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಬರೀಷ್ ಭರವಸೆ ನೀಡಿದ್ದಾರೆ. ಈ ಸರ್ಕಾರಕ್ಕೆ ರೈತರ ಬಗೆಗೆ ಕನಿಷ್ಠ ಕಾಳಜಿ ಇದ್ದರೆ ಕಬ್ಬಿಗೆ ಟನ್‌ಗೆ ಕನಿಷ್ಠ 3 ಸಾವಿರ ರೂಪಾಯಿ ನಿಗದಿಗೊಳಿಸಿ ರೈತರ ಹಿತ ರಕ್ಷಣೆಗೆ ಸರ್ಕಾರ ಮುಂದಾಗಲಿ ಎಂದು ಅವರು ಆಗ್ರಹಿಸಿದರು.

ಮಂಡ್ಯ ಹಾಗೂ ರಾಮನಗರ ಮುಡಾ ಹಗರಣಗಳು ಬೆಳಕಿಗೆ ಬಂದು ತಿಂಗಳುಗಳೇ ಕಳೆದರೂ ಇಂದಿಗೂ ಈ ಹಗರಣಗಳ ತನಿಖೆಗೆ ಸರ್ಕಾರ ಮುಂದಾಗಿಯೇ ಇಲ್ಲ. ಈ ಎಲ್ಲ ಹಗರಣಗಳಲ್ಲಿ ತಮ್ಮ ಪಕ್ಷದ ಮುಖಂಡರು ಇದ್ದಾರೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಎರಡು ಹಗರಣಗಳಲ್ಲಿ 25 ಕೋಟಿ ರೂಪಾಯಿ ಸರ್ಕಾರಿ ಹಣ ಮಾಯವಾಗಿದೆ. ಆರ್‌ಬಿಐ ಸೂಚನೆಯಂತೆ ಈ ಹಗರಣಗಳನ್ನು ಸಿಬಿಐಗೆ ಸರ್ಕಾರ ವಹಿಸಿ ನಿಸ್ಪಕ್ಷಪಾತ ತನಿಖೆಗೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ವಿಸಿ ಹಾಗೂ ಶಿಂಷಾ ಎಡ ಬಲದಂಡೆಯ ಕಡೇ ಭಾಗಗಳಿಗೆ ನೀರು ಹರಿಸಲು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ರೈತರಿಗೆ ನೀರು ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕೆಂದು ಅವರು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಬಿ. ರಾಮಕೃಷ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಿಳಿಗೌಡ, ಸೇವಾದಳ ಜಿಲ್ಲಾಧ್ಯಕ್ಷ ನವೀನ್‌ಕೃಷ್ಣ, ಮುಖಂಡರಾದ ಕೂಳಗೆರೆ ಜಯರಾಂ, ದಿವಾಕರ್, ಅಜ್ಜಹಳ್ಳಿರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT