ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಮಾನ್ಸೂ ಉಗ್ರವಾದವೂ

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

‘ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡ ಮೇಲೆಯೇ ನಿಮ್ಮ ಎದುರು ಬರಬೇಕು ಅನ್ನೋದು ನಮ್ಮ ಉದ್ದೇಶವಾಗಿತ್ತು. ಈಗ ಆ ಸಮಯ ಬಂದಿದೆ’ ಎನ್ನುತ್ತ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತು ಶುರು ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್. ತಮ್ಮ ಮೊದಲ ಚಿತ್ರದ ಟ್ರೈಲರ್ ಮೂಲಕವೇ ಸದ್ದು ಮಾಡುತ್ತಿರುವ ಪ್ರಶಾಂತ್, ‘ನನ್ನ ಸಿನಿಮಾ ಮನರಂಜನೆಗಾಗಿ ಮಾತ್ರ. ಅದನ್ನು ಹೊರತುಪಡಿಸಿದರೆ ಇದರಲ್ಲಿ ಸಂದೇಶ, ಅದು–ಇದು ಅಂತೇನೂ ಇಲ್ಲ’ ಎಂದು ನಿರ್ಭಿಡೆಯಿಂದ ಹೇಳಿದರು.

ಮೊದಲಿಗೆ ಚಿತ್ರದ ಶೀರ್ಷಿಕೆ ‘ನಂದೇ’ ಎಂಬುದಾಗಿತ್ತು. ಆದರೆ ಇದರಲ್ಲಿನ ನಾಯಕನ ಪಾತ್ರದ ಸ್ವಭಾವ ಗಮನಿಸಿ, ಅದಕ್ಕೆ ತಕ್ಕಂತೆ ‘ಉಗ್ರಂ’ ಎಂದು ಬದಲಾಯಿಸಲಾಗಿದೆ. ಸಿನಿಮಾ ತೆರೆ ಮೇಲೆ ಬರುವುದಕ್ಕೂ ಮುನ್ನವೇ ಅದಕ್ಕೆ ಸಾಕಷ್ಟು ಪ್ರಚಾರ ಪಡೆಯುವುದು ನಿರ್ಮಾಪಕರ ಉದ್ದೇಶ. ಆದರೆ ‘ಉಗ್ರಂ’ ತಂಡದ ವಿಚಾರಲಹರಿಯೇ ಬೇರೆ ಇದ್ದಂತಿದೆ!

ಖ್ಯಾತರು ಹಾಗೂ ಹೊಸಬರನ್ನು ಒಳಗೊಂಡ ತಂಡವೇ ತಮ್ಮ ಚಿತ್ರದ ವೈಶಿಷ್ಟ್ಯ ಎಂದು ಬಣ್ಣಿಸಿದ್ದು ಪ್ರಶಾಂತ್. ‘ದಶಾವತಾರಂ’, ‘ರಾಮ್‌ಲೀಲಾ’ದಂಥ ಯಶಸ್ವೀ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ ರವಿವರ್ಮನ್, ‘ಘಜನಿ’, ‘ಪಾ’ ಚಿತ್ರದ ಕಲಾನಿರ್ದೇಶಕ ಸುನೀಲ್ ಅವರನ್ನೇ ಕರೆತರಲಾಗಿದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ರಂಗಭೂಮಿ ಕಲಾವಿದರಾದ ಪ್ರದೀಪ್, ಎಂ.ಸಿ.ಆನಂದ್ ಇತರ ಹೊಸಬರೂ ಚಿತ್ರದಲ್ಲಿ ಇದ್ದಾರೆ.

ಯುವತಿಯೊಬ್ಬಳು ಆಸ್ಟ್ರೇಲಿಯಾದಿಂದ ಭಾರತಕ್ಕೆ ಬರುತ್ತಾಳೆ. ಆಕೆ ಇಲ್ಲಿ ಸಮಸ್ಯೆಗೆ ಸಿಲುಕಿದಾಗ ನಡೆಯುವ ಘಟನೆಗಳೇ ಚಿತ್ರದ ಕಥಾವಸ್ತು ಎಂಬ ಎಳೆಯನ್ನು ಪ್ರಶಾಂತ್ ಬಿಚ್ಚಿಟ್ಟರು. ‘ಇದೊಂದು ಆ್ಯಕ್ಷನ್, ರೊಮಾನ್ಸ್  ಸಿನಿಮಾ’ ಎಂದು ಅವರು ಖುಷಿ ಹಂಚಿಕೊಂಡರು.

ತಮ್ಮ ವೃತ್ತಿಜೀವನ ಸರಿಯಿಲ್ಲದ ಸಮಯದಲ್ಲೇ ಪ್ರಶಾಂತ್ ಈ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದನ್ನು ನೆನಪಿಸಿಕೊಂಡರು ಶ್ರೀಮುರಳಿ. ತಮ್ಮದು ಗಂಭೀರ ಪಾತ್ರ; ಹಿಂದಿನ ಯಾವುದೇ ಸಿನಿಮಾದಲ್ಲೂ ಇಂಥ ಪಾತ್ರದಲ್ಲಿ ಅಭಿನಯಿಸಿರಲಿಲ್ಲ ಎಂದ ಮುರಳಿ, ‘ರವಿವರ್ಮನ್ ಜತೆ ಕೆಲಸ ಮಾಡಿದ ಅನುಭವ ಅದ್ಭುತ, ಸಂಗೀತ ನೀಡಿದ ರವಿ ಬಸ್ರೂರ್ ಜನರ ಮನ ಗೆಲ್ಲುವುದು ಖಚಿತ’ ಎಂದರು.

ಚಿತ್ರದುದ್ದಕ್ಕೂ ಮೇಕಪ್ ಇಲ್ಲದೇ ಅಭಿನಯಿಸಿರುವ ನಾಯಕಿ ಹರಿಪ್ರಿಯಾಗೆ ಇದೊಂದು ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ. ಈವರೆಗೆ ನಟಿಸಿದ ೨೦ಕ್ಕೂ ಹೆಚ್ಚು ಸಿನಿಮಾಗಳ ಪೈಕಿ ತಮಗೆ ಇದೇ ಅಚ್ಚುಮೆಚ್ಚು. ಇದಕ್ಕೆಲ್ಲ ನಿರ್ದೇಶಕ ಪ್ರಶಾಂತ್ ಅವರ ಬದ್ಧತೆಯೇ ಕಾರಣ ಎಂದರು. ಅಂದಹಾಗೆ, ಮೊದಲ ಬಾರಿಗೆ ಹರಿಪ್ರಿಯಾ ಈ ಸಿನಿಮಾಕ್ಕೆ ತಾವೇ ಡಬ್ ಮಾಡಿದ್ದಾರೆ.

ಪತ್ರಿಕಾಗೋಷ್ಠಿಗೂ ಮುನ್ನ ಸಿನಿಮಾದ ಟ್ರೈಲರ್ ಹಾಗೂ ಅದರ ಬಗ್ಗೆ ಸುದೀಪ್, ಯಶ್, ಶರಣ್ ಇತರರು ನೀಡಿದ ಅಭಿಪ್ರಾಯಗಳನ್ನೂ ಪ್ರದರ್ಶಿಸಲಾಯಿತು. ನಿರ್ಮಾಪಕ ಎಸ್.ಎಸ್.ಚಿನ್ನೇಗೌಡ, ನಟ ತಿಲಕ್ ಅನಿಸಿಕೆ ಹಂಚಿಕೊಂಡರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT