ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Last Updated 15 ಮೇ 2012, 6:05 IST
ಅಕ್ಷರ ಗಾತ್ರ

ಚಿತ್ರದುರ್ಗ: ವೈದ್ಯರ ವಿಳಂಬ ಚಿಕಿತ್ಸೆ ಮತ್ತು ನಿರ್ಲಕ್ಷ್ಯದಿಂದ ರೋಗಿಯೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.ವೈದ್ಯರ ಜತೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಾಂತಿ ಭೇದಿಯಿಂದ ನರಳುತ್ತಿದ್ದ ನಗರದ ಸುಬ್ಬರಾವ್ (50) ಅವರು 11ರ ಸುಮಾರಿಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಿಸಿ ಎರಡು ಗಂಟೆ ಕಳೆದರೂ ವೈದ್ಯರು ಬರಲಿಲ್ಲ. ಯಾವುದೇ ರೀತಿ ಚಿಕಿತ್ಸೆ ದೊರೆಯದೆ ಮೃತಪಟ್ಟರು ಎಂದು ಸಂಬಂಧಿಕರು ಮತ್ತು ಸಾರ್ವಜನಿಕರು ದೂರಿದರು.

ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಿಲ್ಲ. ರೋಗಿಗಳನ್ನು ನೆಲದ ಮೇಲೆ ಮಲಗಿಸಲಾಗುತ್ತಿದೆ. ಎಲ್ಲ ವಾರ್ಡ್‌ಗಳು ರೋಗಿಗಳು ಕಿಕ್ಕಿರಿದು ತುಂಬುತ್ತಿದ್ದರೂ ಪರ್ಯಾಯ ವ್ಯವಸ್ಥೆ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧಿಯೂ ಇಲ್ಲ. ಪ್ರತಿಯೊಂದನ್ನು ಹೊರಗಿನಿಂದ ತರಬೇಕು ಎಂದು ವೈದ್ಯರು ಸೂಚಿಸುತ್ತಾರೆ.

ರಕ್ತ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಸಹ ಖಾಸಗಿ ಕೇಂದ್ರಗಳಲ್ಲಿ ಮಾಡಿಸುವಂತೆ ತಿಳಿಸುತ್ತಾರೆ. ಇದಕ್ಕೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಹೀಗಾದರೆ ಸರ್ಕಾರಿ ಆಸ್ಪತ್ರೆ ಏಕೆ ಬೇಕು. ವೈದ್ಯರು ಮತ್ತು ಸಿಬ್ಬಂದಿ ಧನದಾಹಿಗಳಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ತಡವಾಗಿ ಆಗಮಿಸಿದ ವೈದ್ಯರನ್ನೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಬಡವರ ಬದುಕಿನ ಜತೆ ವೈದ್ಯರು ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದು ದೂರಿದರು.

ನಂತರ ಸ್ಥಳಕ್ಕೆ ಆಗಮಿಸಿದ ನಿವಾಸಿ ವೈದ್ಯಾಧಿಕಾರಿ ಜಗದೀಶ್, ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ. ಜತೆಗೆ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆಯಿಂದ ಸಮಸ್ಯೆಗಳು ಉಂಟಾಗುತ್ತಿದೆ. ಶೀಘ್ರದಲ್ಲಿ ಹೊಸದಾಗಿ ರಕ್ತಪರೀಕ್ಷೆ ಘಟಕ ಆರಂಭವಾಗಲಿದೆ ಎಂದು ತಿಳಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT