ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚನ ಮೂಡಿಸಿದ ಟಗರಿನ ಕಾಳಗ

ಹರಪನಹಳ್ಳಿ; ತಾಲ್ಲೂಕು ಕ್ರೀಡಾಂಗಣದಲ್ಲಿ 132ಕ್ಕೂ ಅಧಿಕ ಟಗರುಗಳ ಸೆಣಸಾಟ
Last Updated 12 ಸೆಪ್ಟೆಂಬರ್ 2013, 4:31 IST
ಅಕ್ಷರ ಗಾತ್ರ

ಹರಪನಹಳ್ಳಿ: ಸ್ಥಳೀಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಗೋಕರ್ಣೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ 24ನೇ ವರ್ಷದ ವಿಘ್ನೇಶ್ವರ ಉತ್ಸವದ ಅಂಗವಾಗಿ ಬುಧವಾರ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಟಗರಿನ ಕಾಳಗ ಜನರಲ್ಲಿ ರೋಮಾಂಚನ ಮೂಡಿಸಿತು.

ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಉತ್ತರ ಕರ್ನಾಟಕದ ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಂದ ಆಗಮಿಸಿದ 132ಕ್ಕೂ ಅಧಿಕ ಟಗರಗಳು ತೀವ್ರ ಸೆಣೆಸಾಟ ನಡೆಸುವ ಮೂಲಕ ಸಭಿಕರಲ್ಲಿ ರೋಮಾಂಚನ ಉಂಟು ಮಾಡಿದವು. ಪಟ್ಟಣ ಸೇರಿದಂತೆ ಸಮೀಪದ ಸಹಸ್ರಾರು ಜನ ಟಗರುಗಳ ಕಾದಾಟ ನೋಡಲು ಆಗಮಿಸಿ ಸ್ಪರ್ಧಾ ಕಣವನ್ನು ರಂಗೇರಿಸಿದರು.

ರಾಣೆಬೆನ್ನೂರು ನಗರದ ಗುಡ್ದದ ಒಡೆಯ ಹಾಗೂ ಪಟ್ಟಣದ ರಹಮತ್‌ನಗರ ಇರ್ಫಾನ್ ಅವರ ಒಡೆತನದ ಟಗರುಗಳು ರಣರಂಗದಲ್ಲಿ ತೀವ್ರ ಸೆಣೆಸಾಟ ನಡೆಸಿದವು. ಸುಮಾರು 10ನಿಮಿಷಕ್ಕೂ ಅಧಿಕ ಸಮಯ ಕಾದಾಟ ನಡೆಸಿದವು. ಅಂತಿಮವಾಗಿ ಗುಡ್ಡದ ಒಡೆಯ ಒಡೆತನದ ಟಗರು ಮೊದಲ ಸುತ್ತಿನಲ್ಲಿ ಪ್ರಥಮಸ್ಥಾನ ಪಡೆಯಿತು.

ಇರ್ಫಾನ್‌ ಹಾಗೂ ಬಾಲೇನಹಳ್ಳಿ ಗ್ರಾಮದ ಉಚ್ಚೆಂಗೆಮ್ಮದೇವಿ ಪ್ರಸನ್ನ ಹೆಸರಿನ ಟಗರಿನ ಮಧ್ಯೆ ನಡೆದ ರೋಚಕ ಕಾದಾಟ ಇಡೀ ರಣರಂಗವನ್ನು ಒಂದು ರೋಮಾಂಚನದ ಸುಳಿಯಲ್ಲಿ ಸಿಲುಕಿಸಿದವು. ಕಟುಮಸ್ತಾದ ಉಭಯ ಗಟರುಗಳಿಗೆ ಮಾಲಿಕರು ಉಣ್ಣೆಯನ್ನು ಆಕರ್ಷಕವಾಗಿ ಕತ್ತರಿಸುವ ಮೂಲಕ ಕೊಂಬುಗಳಿಗೆ ಬಣ್ಣ ಲೇಪಿಸಿದ್ದರು. ನೋಡಲಿಕ್ಕೂ ಆಕರ್ಷಣೀಯವಾಗಿದ್ದ ಟಗರುಗಳು ಕಾದಾಟ ವೀಕ್ಷಿಸಿದ ಜನಸ್ತೋಮ ಭರ್ಜರಿ ಸಿಳ್ಳೇ, ಕೇಕೇ ಹಾಕುವ ಮೂಲಕ ಟಗರುಗಳ ಸಮರದಲ್ಲಿ ಸಂಭ್ರಮಿಸಿದರು.

ಸ್ಪರ್ಧೆ ಫಲಿತಾಂಶ ವಿವರ:  ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 132ಕ್ಕೂ ಅಧಿಕ ಟಗರುಗಳ ಪೈಕಿ, ಒಂದಕ್ಕಿಂತ ಒಂದು ಆಕರ್ಷಣೀಯ ಕಾದಾಟ ನಡೆಸಿದವು. ಈ ಪೈಕಿ, ಟಗರುಗಳ ವಯೋಮಾನದ ಆಧಾರದ ಮೇಲೆ ಸ್ಪರ್ಧೆ ನಡೆಯಿತು.

8ಹಲ್ಲಿನ ಟಗರಿನ ಕಾಳಗದಲ್ಲಿ ತಾಲ್ಲೂಕಿನ ಯಡಿಹಳ್ಳಿ ಗ್ರಾಮದ ಕರ್ನಾಟಕ ಸುಪುತ್ರ ಹೆಸರಿನ ಟಗರು ಪ್ರಥಮ ಸ್ಥಾನ ಪಡೆದರೆ, ಹೊಂಬಳಗಟ್ಟೆ ಗ್ರಾಮದ ಮಾರಿಕಾಂಬಾ ಹೆಸರಿನ ಟಗರು ದ್ವಿತೀಯ ಸ್ಥಾನ ಪಡೆದುಕೊಂಡಿತು.

6ಹಲ್ಲಿನ ಟಗರಿನ ಕಾಳಗದಲ್ಲಿ ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದ ಮದಕರಿ ಹೆಸರಿನ ಟಗರು ಪ್ರಥಮಸ್ಥಾನ ಪಡೆದರೆ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಲಗೋಡು ಗ್ರಾಮದ ದುಗ್ಗಮ್ಮದೇವಿ ಪ್ರಸನ್ನ ಹೆಸರಿನ ಟಗರು ದ್ವಿತೀಯ ಸ್ಥಾನಪಡೆಯಿತು.
4ಹಲ್ಲಿನ ಟಗರಿನ ಸಮರದಲ್ಲಿ ಯಡಿಹಳ್ಳಿ ಗ್ರಾಮದ ಶೇಖರಪ್ಪ ಅವರ ಟಗರು ಪ್ರಥಮಸ್ಥಾನ ಪಡೆದರೆ, ರಾಣೆಬೆನ್ನೂರು ನಗರದ ಗುಡ್ಡದ ಒಡೆಯ ಹೆಸರಿನ ಟಗರು ದ್ವಿತೀಯ ಸ್ಥಾನಪಡೆದುಕೊಂಡಿತು.


2ಹಲ್ಲಿನ ಟಗರಿನ ಕಾಳಗದಲ್ಲಿ ಹೂವಿನಹಡಗಲಿಯ ತ್ರಿಬಲ್‌ ಎಕ್ಸ್‌ ಬಿಟ್‌ ಹೆಸರಿನ ಟಗರು ಪ್ರಥಮಸ್ಥಾನ ಪಡೆದರೆ, ತಾಲ್ಲೂಕಿನ ಮಾಚಿಹಳ್ಳಿ ಗ್ರಾಮದ ಎಂ. ನಾಗರಾಜ ಅವರ ಟಗರು ದ್ವಿತೀಯ ಸ್ಥಾನ ಪಡೆಯಿತು.

ಹಾಲು ಹಲ್ಲಿನ ಟಗರುಗಳ ಕಾಳಗದಲ್ಲಿ ತಾಲ್ಲೂಕಿನ ಅಡವಿಹಳ್ಳಿ ಗ್ರಾಮದ ಐ. ಹಾಲೇಶ್‌ ಅವರ ಟಗರು ಪ್ರಥಮಸ್ಥಾನ ಪಡೆದರೆ, ಕುಂಚೂರು ಗ್ರಾಮದ ಜೀಯಾವುಲ್ಲಾ ಎಂಬುವವ ಟಗರು ದ್ವಿತೀಯ ಸ್ಥಾನ ಪಡೆಯಿತು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಆರ್‌. ಹನುಮಂತಪ್ಪ ಕಾಳಗ ಉದ್ಘಾಟಿಸಿದರು. ಎಪಿಎಂಸಿ ನಿರ್ದೇಶಕ ಕೆ.ಎಂ. ಬಸವರಾಜಯ್ಯ ಚೀಟಿ ಎತ್ತುವ ಮೂಲಕ ಕಾಳಗಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌, ಪುರಸಭಾ ಸದಸ್ಯ ಕೊಟ್ರೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ ಶಿವಮೂರ್ತೆಯ್ಯ ಉಪಸ್ಥಿತರಿದ್ದರು. ಎಚ್‌.ಎ.ವೇಣುಗೋಪಾಲ್, ಚಿಕ್ಕೇರಿ ಬಸಪ್ಪ, ಡಿಶ್‌ ವೆಂಕಟೇಶ್‌ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT