ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ಶವವಾದ ಶಿರ್ವದ ನರ್ಸ್

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಶಿರ್ವ (ಉಡುಪಿ ತಾಲ್ಲೂಕು): ದೂರದ ಲಂಡನ್‌ನಲ್ಲಿ `ನಿಗೂಢವಾಗಿ' ಸಾವಿಗೀಡಾದ ಮಂಗಳೂರಿನ ವೆಲೆನ್ಸಿಯಾದ ನರ್ಸ್ ಜೆಸಿಂತಾ ಬರ್ಬೋಜಾ ಅವರ ಶಿರ್ವ ಸೊರ್ಕಳದ ಅತ್ತೆ ಮನೆಯಲ್ಲಿ ಈಗ ಶೋಕದ ವಾತಾವರಣ ತುಂಬಿದೆ.

ಲಂಡನ್‌ನ `ಕಿಂಗ್ ಎಡ್ವರ್ಡ್ ಆಸ್ಪತ್ರೆ'ಯಲ್ಲಿ ನರ್ಸ್ ಆಗಿದ್ದ ಜೆಸಿಂತಾ (47), ಅದೇ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ ರಾಜಕುಮಾರಿ ಕೇಟ್ ವಿಲಿಯಮ್ಸ ಅವರ ಆರೈಕೆ ನೋಡಿಕೊಳ್ಳುತ್ತಿದ್ದರು. ಅವರ ಶವ ಆಸ್ಪತ್ರೆ ಬಳಿಯೇ ಪತ್ತೆಯಾಗಿದೆ. ಸಾವಿನ ನಿಜವಾದ ಕಾರಣ ತಿಳಿದುಬಂದಿಲ್ಲ.

ಗುರುವಾರವೇ ನಡೆದಿತ್ತು ಎನ್ನಲಾದ ಈ  ಪ್ರಕರಣದ ಮಾಹಿತಿ ಶುಕ್ರವಾರ ರಾತ್ರಿ 8 ಗಂಟೆಗೆ ಜೆಸಿಂತಾ ಕುಟುಂಬದವರಿಗೆ ತಲುಪಿದೆ. ಶನಿವಾರ ಬೆಳಿಗ್ಗೆ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ.

ಜೆಸಿಂತಾ ಅವರ ಪತಿ ಬೆನೆಡಿಕ್ಟ್ ಬರ್ಬೋಜಾ, ಲಂಡನ್‌ನ ಸೂಪರ್ ಮಾರ್ಕೆಟ್ ಒಂದರಲ್ಲಿ ಉದ್ಯೋಗಿ. ಇವರ ಮದುವೆ 19 ವರ್ಷಗಳ ಹಿಂದೆ ನಡೆದಿತ್ತು. ಆರಂಭದಲ್ಲಿ ಮಸ್ಕತ್‌ನಲ್ಲಿ ಕೆಲವು ಕಾಲ ವಾಸವಿದ್ದ ಈ ದಂಪತಿ, ಒಂಬತ್ತು ವರ್ಷಗಳಿಂದ ಮಗ ಜುನಾಲ್ (16) ಮತ್ತು ಮಗಳು ಲೀಶಾ (14) ಜತೆ ಲಂಡನ್‌ನಲ್ಲೇ ನೆಲೆಸಿದ್ದಾರೆ. ಈ ಕುಟುಂಬ ಎರಡು ವರ್ಷಗಳಿಗೊಮ್ಮೆ ಊರಿನ ಮನೆಗೆ ಬಂದು ಹೋಗುತ್ತಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಬಂದಿತ್ತು.

ಶುಕ್ರವಾರ ರಾತ್ರಿ ಮಾಹಿತಿ: ಶಿರ್ವ ಸೊರ್ಕಳದ ಹಳ್ಳಿಯ ಮನೆಯಲ್ಲಿರುವ ವೃದ್ಧ ತಾಯಿ ಕಾರ್ಮಿನ್ ಬರ್ಬೊಜಾ ಅವರಿಗೆ ಪುತ್ರ ಬೆನೆಡಿಕ್ಟ್ ಶುಕ್ರವಾರ ರಾತ್ರಿ ದೂರವಾಣಿ ಕರೆ ಮಾಡಿ ಜೆಸಿಂತಾ ಸಾವಿನ ಸಂಗತಿ ತಿಳಿಸಿದ್ದರು.

`ಜೆಸಿಂತಾ ನಮ್ಮಿಂದ ದೂರವಾದಳು. ನನಗೆ ಕೂಡಾ ತಡವಾಗಿ ಲಂಡನ್ ಪೊಲೀಸರು ತಿಳಿಸಿದ ಬಳಿಕವೇ ಪತ್ನಿ ಸಾವಿನ ವಿಚಾರ ಗೊತ್ತಾಗಿದೆ. ಆಕೆ ನರ್ಸ್ ಆಗಿ ಕೆಲಸ ಮಾಡುತ್ತಿರುವ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದಾಳೆ ಎಂಬ ವಿವರ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ' ಎಂದು ತಾಯಿಗೆ ಹೇಳಿದ್ದರು.

`ಆಕೆಯ ಸಾವಿಗೆ ಕಾರಣವೇನು, ಯಾವ ರೀತಿ ಸಂಭವಿಸಿತು ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡದೇ ಬೆನೆಡಿಕ್ಟ್ ಫೋನ್ ಕರೆ ಕಟ್ ಮಾಡಿದ್ದಾನೆ' ಎಂದಷ್ಟೇ ಹೇಳಿ ಜೆಸಿಂತಾ ಅವರ ಅತ್ತೆ, ಮಾಧ್ಯಮದವರ ಮುಂದೆ ಕಣ್ಣೀರಿಟ್ಟರು. 

ಜೆಸಿಂತಾಳ ಮೃತದೇಹವನ್ನು ಊರಿಗೆ ಯಾವಾಗ ತರಲಾಗುತ್ತದೆ ಎಂಬ ಮಾಹಿತಿಯೂ ಕುಟುಂಬದವರಿಗೆ ಲಭ್ಯವಾಗಿಲ್ಲ.

ಜೆಸಿಂತಾ 1984ರಲ್ಲಿ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ತಂದೆ ಲಾರೆನ್ಸ್ ಸಲ್ದಾನಾ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದರು. ಅವರ ವೃದ್ಧ ತಾಯಿ ಕಾರ್ಮಿನ್ ಶಿರ್ವದಲ್ಲೇ ನೆಲೆಸಿದ್ದಾರೆ. ಈ ದಂಪತಿಯ ಆರು ಮಕ್ಕಳಲ್ಲಿ ಜೆಸಿಂತಾ ನಾಲ್ಕನೆಯವರು. ಮೇಬಲ್, ಐವಾನ್, ಜಾಯ್, ಗ್ಲಾಡಿಸ್ ಮತ್ತು ನವೀನ್ ಉಳಿದ ಐವರು ಮಕ್ಕಳು.
ಬಡ ಮಕ್ಕಳ ಪ್ರೀತಿ: ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಸಿಸ್ಟರ್ ಐಲೀಲ್ ಮಥಾಯಸ್, `ಕಲಿಯುವಾಗ ಮತ್ತು ನಂತರ ಕೆಲಸ ಮಾಡುವಾಗ ಐದು ವರ್ಷ ನಾವು ಜತೆಗಿದ್ದೆವು. ಓದಿನ ನಂತರ ಮೂರು ವರ್ಷ ಕಡ್ಡಾಯ ಸೇವೆ ಸಲ್ಲಿಸಿದ್ದಳು' ಎಂದು ನೆನಪು ಮಾಡಿಕೊಂಡರು.

`ಆಕೆ ಶ್ರಮಜೀವಿ. ಪಠ್ಯೇತರ ಚಟುವಟಿಕೆಯಲ್ಲೂ ಚುರುಕಾಗಿದ್ದಳು. ಕೊನೆಯ ಬಾರಿ ದೇಶಕ್ಕೆ ಬಂದಿದ್ದಾಗ, ನನ್ನನ್ನು ಭೇಟಿಯಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಸ್ವಲ್ಪ ಹಣ ಕೊಟ್ಟಿದ್ದಳು' ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT