ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀನಾರಾಣಪ್ಪನ ಮಡದಿ ಮನೋರಮೆಯೇ?

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಸ್ಪಂದನ

ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಗತಿಸಿ ಶತಮಾನ ಕಳೆದಿದ್ದರೂ ಇಂದಿಗೂ ಮಂದಿ ಆತನನ್ನು ಮರೆತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಆತ ಮಂದಿಯ ಚರ್ಚೆಗೆ ಗ್ರಾಸವಾಗುತ್ತಲೇ ಇದ್ದಾನೆ (ಸಾಪು. ಜ.8).
 
`ಶ್ರೀರಾಮಾಶ್ವಮೇಧಂ~ ಗದ್ಯ ಮಹಾಕಾವ್ಯ ರಚನೆ ಮಾಡುವ ಸಂದರ್ಭದಲ್ಲಿ ಆತ ಮುದ್ದಣ-ಮನೋರಮೆಯರೆಂಬ ಸೂತ್ರಧಾರೀ ಪಾತ್ರಗಳನ್ನು ತಂದು ಇಡಿಯ ಕೃತಿಯನ್ನು ಅವರ ಮೂಲಕ ಹೇಳಿಸಿ ಆ ಕಾಲಕ್ಕೆ ವಿನೂತನ ತಂತ್ರಗಾರಿಕೆಯನ್ನು ರೂಪಿಸಿದವನೆಂಬ ಹೆಗ್ಗಳಿಕೆಗೆ ಪಾತ್ರನಾದ.

`ಮುದ್ದಣ~ನೆಂಬುದು ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕಾವ್ಯನಾಮವಲ್ಲ. `ಕಾವ್ಯಮಂಜರಿ~ಯ ರಾಮಾನುಜಯ್ಯಂಗಾರ್‌ರಿಗೆ ಕೃತಿಯನ್ನು ಒಪ್ಪಿಸಿಕೊಡುವಾಗ ಯಾವನೋ ಒಬ್ಬ ಮುದ್ದಣನ ಕೃತಿಯಿದೆಂದು ನಂದಳಿಕೆಯವರು ಹೇಳಿಕೊಳ್ಳಬೇಕಾದ ಅನಿವಾರ‌್ಯತೆ ಒದಗಿ ಬಂದದ್ದು ಗೊತ್ತಿರುವ ವಿಚಾರ. ಅದು ನಿಮಿತ್ತವಾಗಿ ಕೃತಿಕಾರನ ಹೆಸರೇ ಮುದ್ದಣ ಎಂದಾಗಿ ಬಿಟ್ಟದ್ದೊಂದು ವಿಪರ್ಯಾಸ. ಇನ್ನೂ ಒಂದು ವಿಪರ್ಯಾಸದ ಸಂಗತಿಯೆಂದರೆ `ಮನೋರಮೆ~ಯನ್ನು ನಂದಳಿಕೆಯವರ ಮಡದಿಯೆಂದು ಅನೇಕ ವಿದ್ವಾಂಸರು ಪರಿಭಾವಿಸಿದ್ದು. ಈ ಕುರಿತು ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ.

`ಶ್ರೀರಾಮ ಪಟ್ಟಾಭಿಷೇಕ~ವನ್ನು ಬರೆದುದು `ಚಾವಡಿಯ ರಂಗಭಟ್ಟನಾತ್ಮಜೆ ಮಹಾಲಕ್ಷ್ಮೀ~ ಎಂದು ಹೇಳುವ ನಂದಳಿಕೆಯವರು `ಆ ಮೂಲಕ ತನ್ನ ತಾಯಿ ಮಹಾಲಕ್ಷ್ಮಿಯನ್ನು ನೆನೆದುಕೊಳ್ಳುತ್ತಾನೆ~ ಎಂದು ಎಸ್.ವಿ. ಪರಮೇಶ್ವರ ಭಟ್ಟರು ಅಭಿಪ್ರಾಯ ಪಡುತ್ತಾರೆ. ಬವುಳಾಡಿ ವೆಂಕಟರಮಣ ಹೆಬ್ಬಾರರು `ಇದು ನನ್ನ ತಾಯಿಯ ಹೆಸರೂ ಹೌದು~ ಎನ್ನುತ್ತಾರೆ. ಚಾವಡಿಯ ರಂಗಭಟ್ಟ ನಂದಳಿಕೆಯವರ ಅಜ್ಜ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಅಲ್ಲಿಗೆ ಎಸ್ವಿಪಿಯವರ ಮಾತು ಮುರಿದುಬೀಳುತ್ತದೆ.

ಬವುಳಾಡಿಯವರು `ನೀವು ಹಾಗೆ ಹೇಳಿದರೆ ನಾವು ಹೀಗೆ ಹೇಳಬಹುದಲ್ಲ~ ಎಂಬ ದೃಷ್ಟಿಕೋನವಿರಿಸಿ ಮಾತನಾಡಿದ್ದು ಹೊರತು ಮುದ್ದಣನಿಗೆ ಬವುಳಾಡಿಯವರ ತಾಯಿಯ ಜೊತೆಗೆ ಅಂಥ ಗೌರವ ಇತ್ತೆಂಬುದು ಅರ್ಥಶೂನ್ಯ.

`ಶ್ರೀರಾಮಪಟ್ಟಾಭಿಷೇಕ~ ಪ್ರಾರಂಭಗೊಂಡದ್ದು ನಂದಳಿಕೆಯವರು ಕುಂದಾಪುರದಲ್ಲಿದ್ದಾಗ. ಕುಂದಾಪುರದಲ್ಲಿದ್ದಾಗ ಆತ ಹೋಟೆಲಿನಲ್ಲಿ ವಾಸವಾಗಿದ್ದ ಎಂಬುದಾಗಿ ಎಸ್ವಿಪಿ, ಬವುಳಾಡಿ ಮೊದಲಾದವರೆಲ್ಲ ಸ್ಪಷ್ಟಪಡಿಸಿದ್ದಾರೆ. ಆಗಿನ ದಿನಗಳಲ್ಲಿ ಹೋಟೆಲು ಮನೆಗಳಿರುತ್ತಿದ್ದುವಲ್ಲ, ಅಂಥ ಒಂದು ಹೋಟೆಲು ಮನೆ ಚಾವಡಿಯ ರಂಗಭಟ್ಟರಿಗೆ ಇದ್ದಿದ್ದಿರಬಹುದೆಂದೂ ಮಹಾಲಕ್ಷ್ಮಿ ಆ ರಂಗಭಟ್ಟರ ಮಗಳೆಂದೂ ಊಹಿಸಿದರೆ ತಪ್ಪಾಗಲಾರದು.
 
ಮೇಲಾಗಿ ಹಳ್ಳಿಯ ಅವಿದ್ಯಾವಂತ ಹೆಂಗಸಾದ ನಂದಳಿಕೆಯವರ ತಾಯಿ ಅಂತಹ ಕಾವ್ಯ ಬರೆದಳೆಂದು ಹೇಳುವುದೂ ತಪ್ಪಾಗುತ್ತದೆ. ಅದರರ್ಥ ಅದನ್ನು ಮಹಾಲಕ್ಷ್ಮಿ ಬರೆದಳೆಂದೂ ಅಲ್ಲ. ಆಕೆಯ ಬಗೆಗಿನ ಪ್ರೀತಿಗೆ ಇದೊಂದು ಕಾಣಿಕೆ ಆಗಲೂಬಹುದು.

ನಂದಳಿಕೆಯವರ ಮನೋರಮೆ ಕೂಡ ಅಂತಹುದೇ ಒಂದು ಪಾತ್ರ. ಮನೋರಮೆ ಎಂದಾಗ ಅದು ನಂದಳಿಕೆಯವರ ಮಡದಿಯೇ ಎಂದು ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ತನ್ನ ಮಡದಿಯಿಂದ ಆತ ಯಾವ ಸುಖ ಕಂಡನೋ ಅಥವಾ ಲಕ್ಷ್ಮೀನಾರಾಯಣಪ್ಪ ಆಕೆಗೆ ಯಾವ ಸುಖ ಕೊಟ್ಟನೋ ಗೊತ್ತಿಲ್ಲ. ರಾತ್ರಿ ಹಗಲೆನ್ನದೆ ಪುಸ್ತಕಗಳ ಮಧ್ಯೆ ಹೊರಳುವ, ದೈಹಿಕ ಶ್ರಮಕ್ಕೆ ಕಾಸಿನ ಬೆಲೆ ಕೊಡದ ಪುಸ್ತಕದ ಹುಳುವಾದ ಲಕ್ಷ್ಮೀನಾರಾಯಣನಿಂದ ಸಂಸಾರಕ್ಕೆ ಒಡ್ಡಿ ನಿಂತ ಕಮಲ ಏನನ್ನು ನಿರೀಕ್ಷಿಸಬಹುದು? ಎಷ್ಟನ್ನು ನಿರೀಕ್ಷಿಸಬಹುದು? ನಿರೀಕ್ಷೆಗಳೆಲ್ಲ ಹುಸಿಯಾಗುತ್ತಾ ಬಂದಾಗ- ಇಂದಿನ ಅದೆಷ್ಟೋ ಸಾಹಿತಿಗಳಂತೆ- ಸಂಸಾರದಲ್ಲಿ ಸಹಜವಾಗಿಯೇ ವಿಷಮತೆಗಳು ತಲೆದೋರಿರಬಹುದು.

`ಮುದ್ದಣ ತನ್ನ ಹೆಂಡತಿಯನ್ನು ಮದುವೆಯಾದ ಮೊದಲಲ್ಲಿ ಬೇಕುಬೇಕೆಂದೇ ಕೆಣಕಿ, ರೇಗಿಸಿ ಅಳಿಸಿ, ನಗಿಸಿದ್ದನ್ನು ಕಂಡಿದ್ದೇನೆ. ಕೊಂಚಕಾಲ ಕಳೆದ ಬಳಿಕ ಆಕೆಯೇ ಮನೋರಮೆಯಂತೆ `ಈ ಮುದ್ದಣ~ನಿಗೆ ಉತ್ತರ ಕೊಡುವುದನ್ನು ಕಂಡಿದ್ದೇನೆ~ ಎಂಬುದಾಗಿ ಹುರುಳಿ ಭೀಮರಾಯರು ಹೇಳುತ್ತಾರೆ. ಲಕ್ಷ್ಮೀನಾರಾಯಣನ ರಸಿಕತೆಯನ್ನಿದು ಸಮರ್ಥಿಸುವುದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಆತನಿಗೆ ಮಾರುತ್ತರ ಕೊಡುವಷ್ಟು ಆಕೆ ಬೆಳೆದಳೆಂದಲ್ಲವೆ ಇದರ ಅರ್ಥ? ವೈವಾಹಿಕ ಜೀವನದ ಆ ಅಲ್ಪ ಅವಧಿಯಲ್ಲಿ ಮುದ್ದಣ ಓದಿದುದೆಷ್ಟು? ಬರೆದುದೆಷ್ಟು? ಸೂತ್ರಾತ್ಮಕ ವ್ಯಾಕರಣಗ್ರಂಥವನ್ನು ಅಕ್ಷರಖಂಡದವರೆಗೆ ಬರೆದಿದ್ದನಂತೆ. ತತ್ಸಮ-ತದ್ಭವಗಳ ಪಟ್ಟಿ ಬೆಳೆಸುತ್ತಲಿದ್ದ. ಬೃಹತ್ ಕೋಶದ ರಚನೆಗೆ ಮುನ್ನುಡಿಯಿಟ್ಟಿದ್ದ.

ಗೋದಾವರಿ-ಕಾದಂಬರಿಯ ಕೆಲವು ಪರಿಚ್ಛೇದಗಳನ್ನು ಪೂರ್ತಿಗೊಳಿಸಿದ್ದ. ಭಗವದ್ಗೀತೆಯನ್ನು ಭಾಮಿನಿ ಷಟ್ಪದಿಯಲ್ಲೂ ಕರ್ನಾಟಕ ರಾಮಾಯಣವನ್ನು ವಾರ್ಧಕದಲ್ಲೂ ಬರೆದಿದ್ದನಂತೆ. ಶ್ರೀರಾಮಪಟ್ಟಾಭಿಷೇಕಂ, ಅದ್ಭುತರಾಮಾಯಣಂ, ಶ್ರೀರಾಮಾಶ್ವಮೇಧಂ ನಮ್ಮ ಕಣ್ಣ ಮುಂದೆಯೇ ಇವೆ. ಇನ್ನಿತರ ಅದೆಷ್ಟು ಕೆಲಸ ನಡುನೀರಿನಲ್ಲಿ ನಿಂತಿತ್ತೋ? ರಾತ್ರಿ ಹಗಲೆನ್ನದೆ ನಡೆಸುವ ಸಾಹಿತ್ಯರಚನೆಯಂತಹ ಅಂತರ್ಮುಖೀ ಗೀಳಿಗೆ ಸಂಸಾರದ ಚೌಕಟ್ಟಿನೊಳಗೆ ಯಾವ ಸ್ಥಾನಮಾನವಿದೆ? ಪತ್ನಿಯಾದವಳಿಗೆ ಅಭಿರುಚಿಯೂ ಇಲ್ಲದೇ ಹೋದರೆ ಯಾರಿಗೆ ಎಷ್ಟು ಸಹನೆ ಉಳಿದೀತು?

ಹಾಗಿರುವಾಗ ತನ್ನೊಂದಿಗೆ ತನ್ನ ಸಾಹಿತ್ಯವನ್ನೂ ಮೆಲುಕು ಹಾಕಬಲ್ಲ ಜೀವಿಯೊಂದು ಮಗ್ಗುಲಿಗಿರುತ್ತಿದ್ದರೆ? ಕವಿಕಲ್ಪನೆಯೊಂದಿದೆಯಲ್ಲ- ಹಾಗೂ ಆತನಲ್ಲಿದ್ದಿರಬಹುದಾದ ಸಹಜ ರಸಿಕತೆ. ಅದು ಮನೋರಮೆಯನ್ನು ಸೃಷ್ಟಿಮಾಡಿರಬಹುದು. ಲಕ್ಷ್ಮೀನಾರಾಯಣಪ್ಪನ ಭಾವಪ್ರಪಂಚದ ಚಾವಡಿಯ ರಂಗಭಟ್ಟನಾತ್ಮಜೆಯಂತೆ! ಆಗ ತಾನು ನಿತ್ಯ ಜೀವನದಲ್ಲಿ ಕಂಡುಣ್ಣಿದ್ದೂ ಅಲ್ಲಿ ಬಂದು ಸೇರಿಕೊಳ್ಳುತ್ತದೆ. ಬಡತನವೂ ಐಸಿರಿಯಾಗಿ ಪಲ್ಲಟಗೊಳ್ಳುತ್ತದೆ.

1893ರಲ್ಲಿ ತನ್ನ 25ನೆಯ ವಯಸ್ಸಿನಲ್ಲಿ ವಿವಾಹಿತನಾಗುವ ಹೊತ್ತಿಗೆ ಲಕ್ಷ್ಮೀನಾರಾಯಣಪ್ಪ ಕುಂದಾಪುರದ ಹೋಟೆಲು ಮನೆಯಲ್ಲೇ ನೆಲೆಸಿದ್ದ. ಬವುಳಾಡಿಯವರು ಅಲ್ಲಿಗೇ ಹೋಗಿ `ಪಟ್ಟಾಭಿಷೇಕ~ವನ್ನು ತಿದ್ದಿದುದಾಗಿ ಹೇಳಿಕೊಂಡಿದ್ದಾರೆ. ಅದನ್ನು ಪೂರ್ಣಗೊಳಿಸಲು ವರ್ಷಗಳೇ ಬೇಕಾದುವು. ಆ ನಡುವೆಯೇ ಆತ ಉಡುಪಿಗೆ ವಾಸ್ತವ್ಯ ಬದಲಾಯಿಸಿದ್ದು. ಶ್ರೀರಾಮ ಪಟ್ಟಾಭಿಷೇಕ ಕೃತಿ ಪೂರ್ಣಗೊಳಿಸುವ ಹೊತ್ತಿಗೆ ಅಗತ್ಯ ಎನ್ನಿಸಿದ್ದಿದ್ದರೆ ತನ್ನ ಪತ್ನಿಯನ್ನು ಅದೇ ಕೃತಿಯೊಳಕ್ಕೆ ಪ್ರವೇಶಪಡಿಸಬಹುದಾಗಿತ್ತು. ಅದನ್ನು ಮಾಡದೆ ಮಹಾಲಕ್ಷ್ಮಿಯನ್ನು ತಂದುದರ ಅಗತ್ಯವೇನಿತ್ತು?

ವಿವಾಹದ ಮೊದಲ ರಮ್ಯದಿನಗಳಲ್ಲಿ ಚಾವಡಿಯ ಮಹಾಲಕ್ಷ್ಮಿಗೆ ಅವಕಾಶ ಕಲ್ಪಿಸಿಕೊಟ್ಟ ನಂದಳಿಕೆ, ವಿವಾಹವಾಗಿ ವರ್ಷಗಳು ಕಳೆದ ಬಳಿಕ ರಾಮಾಶ್ವಮೇಧ ರಚನೆಯ ಕಾಲಕ್ಕೆ ಕಮಲೆಯನ್ನು ಮನೋರಮೆಯನ್ನಾಗಿಸಿದ ಎನ್ನುವ ಮಾತು ಎಷ್ಟು ಸರಿ?

ಗಂಡನ ಬದುಕಿನ ಕೊನೆಯ ದಿವಸಗಳಲ್ಲಿ ಕಮಲ ಆತನ ಬಳಿಯಲ್ಲಿರಲಿಲ್ಲ ಎನ್ನುವುದಕ್ಕೆ ಕೊಡಬಹುದಾದ ಯಾವ ಸಮರ್ಥನೆಯೂ ಸಮಂಜಸವೆನಿಸದು. ಇನ್ನೂ ಮೂವತ್ತರ ಹರೆಯದಲ್ಲಿದ್ದಾಗಲೇ ಕ್ಷಯರೋಗಕ್ಕೆ ತುತ್ತಾದುದು ಆತನ ದುರ್ವಿಧಿ. ಅದಾಗಲೇ ಒಂದು ವರ್ಷ ವಯಸ್ಸಾಗಿದ್ದ ತನ್ನ ಮಗುವನ್ನು ಊರಿಗೆ ಕಳುಹಿಸಿ ಗಂಡನ ಆರೈಕೆಗೆ ಹೆಂಡತಿಯಾದವಳು ನಿಲ್ಲಬಹುಹುದಿತ್ತು ಎನ್ನುವುದು ಆ ಕಾಲದ ಪತ್ನಿಯರು ನಂಬಿಕೊಂಡು ಬಂದ ಧರ್ಮ. ಸಾವನ್ನೆದುರುಗೊಳ್ಳುವ ಸಂದರ್ಭದಲ್ಲಿ ತಾನು ಒಂಟಿಯಾಗಿ ಬಿಟ್ಟೆನೆನ್ನುವುದು ಆತನ ಪಾಲಿಗೆ ನಿಜವಾದ ದುರ್ವಿಧಿ.
 
ಪಕ್ಕದ ಮನೆಯ ಮುದುಕಿಯೊಬ್ಬರು ಬಂದು ಅಡುಗೆ ಮಾಡಿ ಇಟ್ಟು ಹೋಗುತ್ತಿದ್ದರು. ಒಂಟಿಯಾಗಿ ಸಾವಿಗೆ ಕಾದು ಕುಳಿತು ನಡುಗುವ ಕೈಗಳಲ್ಲಿ ಬೆನಗಲ್ ರಾಮರಾಯರಿಗೆ ಬರೆದ ಪತ್ರ ಓದಿದರೆ ಕರುಳು ಕಿತ್ತು ಬರುತ್ತದೆ (`... ದೇಹದಲ್ಲಿ ಕ್ಷೇಮವಿಲ್ಲ. ಕ್ಷಯರೋಗವೆಂದು ಹೇಳುತ್ತಾರೆ.

ಎದ್ದು ಕೂತುಕೊಳ್ಳುವ ತ್ರಾಣವಿಲ್ಲ. ಮಲಮೂತ್ರ ಇದ್ದಲ್ಲಿಯೇ ಸರಿ. ಒಮ್ಮೆ ತಮ್ಮ ದರ್ಶನವನ್ನು ಕೊಟ್ಟರೆ ಬಹಳ ಉಪಕಾರವಾಗುತ್ತಿತ್ತು. ಹೆಚ್ಚಿಗೆ ಹೇಳಲು ಶಕ್ತನಲ್ಲ...~ -1901ರ ಫೆ.12ರಂದು ಬರೆದ ಪತ್ರ. ಇದು ಚೆನ್ನೈನಲ್ಲಿದ್ದ ಬೆನಗಲ್ ರಾಮರಾಯರಿಗೆ ತಲುಪುವಷ್ಟರಲ್ಲಿ ಫೆ.16ಕ್ಕೆ ಅವನು ಇಹಲೋಕ ತ್ಯಜಿಸಿದ್ದ). ಆತನ ಸಾವನ್ನೂ ನೋಡಿರದ ಕಮಲ, ನಂದಳಿಕೆಯವರ ಮನೋರಮೆ ಅಲ್ಲ ಎಂಬುದನ್ನು ವಿದ್ವಾಂಸರು ಇನ್ನಾದರೂ ಮನವರಿಕೆ ಮಾಡಿಕೊಳ್ಳಲಿ. 

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT