ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಯ ಪುಟ್ಟ ವಿಮಾನ ಅಮೆರಿಕದ ಸ್ಪರ್ಧೆಗೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಯಂ ಚಾಲಿತ ಪುಟ್ಟ ವಿಮಾನವನ್ನು ಸಿದ್ಧಪಡಿಸುವಲ್ಲಿ ನಗರದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಇದೇ 17ರಂದು ಅಮೆರಿಕದಲ್ಲಿ ನಡೆಯಲಿರುವ ಏಳನೇ ವಾರ್ಷಿಕ ಅನ್‌ಮ್ಯಾನ್ಡ್ ಸಿಸ್ಟಮ್ಸ ಸ್ಪರ್ಧೆಯಲ್ಲಿ ಇದನ್ನು ಪ್ರದರ್ಶಿಸಲಿದ್ದಾರೆ.

ನಗರದ ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ರಿಮೋಟ್‌ನಿಂದ ನಿಯಂತ್ರಿಸುವ `ಲಕ್ಷ್ಯ~ ಪುಟ್ಟ ವಿಮಾನ ಸಿದ್ಧಪಡಿಸಿದ್ದಾರೆ. ಮೂರು ಕಿ.ಗ್ರಾಂ ತೂಕದ ಈ ಪುಟ್ಟ ವಿಮಾನ ಸುಮಾರು 4000 ಮೀಟರ್ ಎತ್ತರದವರೆಗೆ ಹಾರಾಟ ನಡೆಸಲಿದೆ. ಜತೆಗೆ ವಿಮಾನದಲ್ಲಿ ಅಳವಡಿಸಲಾದ ಕ್ಯಾಮೆರಾದಿಂದ ನಿರಂತರವಾಗಿ ಶಬ್ದಸಹಿತ ದೃಶ್ಯವನ್ನು ಕುಳಿತಲ್ಲೇ ವೀಕ್ಷಿಸಬಹುದಾಗಿದೆ.

`ಆಟೊ ಪೈಲಟೆಡ್ ಪುಟ್ಟ ವಿಮಾನದಲ್ಲಿ ಉನ್ನತ ಗುಣಮಟ್ಟದ (ಹೈ- ಟೆಫನೇಷನ್) ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ವಿಮಾನ ಹಾರಾಟ ನಡೆಸಿದಂತೆ  ವಿಡಿಯೋ ಚಿತ್ರಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ~ ಎಂದು ವಿದ್ಯಾರ್ಥಿಗಳ ತಂಡದಲ್ಲೊಬ್ಬರಾದ ಪ್ರಸನ್ನ `ಪ್ರಜಾವಾಣಿ~ಗೆ ತಿಳಿಸಿದರು.

`ಇದರಿಂದ ಅರಣ್ಯ, ದುರ್ಗಮ ಪ್ರದೇಶದಲ್ಲಿ ಪತ್ತೆ ಕಾರ್ಯಕ್ಕೆ ನೆರವಾಗಲಿವೆ. ಹಾಗೆಯೇ ವಾಹನ ಸಂಚಾರ ಮೇಲ್ವಿಚಾರಣೆಗೆ ಬಳಸಬಹುದು. ಅತಿ ವೇಗವಾಗಿ ಸಂಚರಿಸುವ ವಾಹನಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು. ಒಂದು ವರ್ಷ ನಿರಂತರ ಪ್ರಯತ್ನದ ಬಳಿಕ ಈ ಉಪಕರಣ ಸಿದ್ಧಪಡಿಸಿದ್ದೇವೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಕೆಲ ತಾಂತ್ರಿಕ ಸಲಹೆ ಪಡೆಯಲಾಗಿದ್ದು, ಆವರಣದಲ್ಲೇ ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ~ ಎಂದರು.

ಈ ಯೋಜನೆಯ ಮಾರ್ಗದರ್ಶಕರಾದ ಕಾಲೇಜಿನ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ವಿ. ಪ್ರಕಾಶ್, `ಪ್ರತಿಷ್ಠಿತ ಅನ್‌ಮ್ಯಾನ್ಡ್ ಸಿಸ್ಟಮ್ಸ ಸ್ಪರ್ಧೆಗೆ ದೆಹಲಿ ಎಂಜಿನಿಯರಿಂಗ್ ಕಾಲೇಜು ಹಾಗೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿದೆ. ಮೇರಿಲ್ಯಾಂಡ್‌ನ ಸೇಂಟ್ ಇನಿಗೋಸ್ ಪ್ರದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಈ ಪುಟ್ಟ ವಿಮಾನ ಹಾರಾಡಲಿದೆ~ ಎಂದು ಹೇಳಿದರು.

ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ. ಮುರಳೀಧರ್, `ವಿದ್ಯಾರ್ಥಿಗಳು ಶ್ರಮ ವಹಿಸಿ ಪುಟ್ಟ ವಿಮಾನ ಸಿದ್ಧಪಡಿಸಿದ್ದಾರೆ. ಇದರ ನಿರ್ಮಾಣ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆಗೆ ಸುಮಾರು 8 ಲಕ್ಷ ರೂ ವೆಚ್ಚವಾಗಲಿದೆ. ಕಾಲೇಜಿನ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ~ ಎಂದರು.

ಆರ್.ಪ್ರಸನ್ನ, ಪ್ರತೀಕ್ ಖನ್ನಾ, ಶ್ರೀಕಾಂತ್ ಸಿಂಗ್, ಬಿ.ಎನ್. ವಿಷ್ಣು ಹಾಗೂ ರಾಹುಲ್ ಅವರ ತಂಡ ಈ ಉಪಕರಣವನ್ನು ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT