ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಾ ಉಭಯ್‌ಕರ್ ನಿಧನ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂಸ್ತಾನಿ ಸಂಗೀತವನ್ನು ಸಾಗರದಾಚೆಗೂ ಹಬ್ಬಿಸಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿ ಪಡೆದಿದ್ದ ಹಿಂದೂಸ್ತಾನಿ ಗಾಯಕಿ ವಿದುಷಿ ಲಲಿತಾ ಶಿವರಾಂ ಉಭಯ್‌ಕರ್ (84) ಅವರು ಗುರುವಾರ ನಗರದ ಅರಮನೆ ರಸ್ತೆಯ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರು ಮಗಳು ಮಾಳವಿಕ,  ಮೊಮ್ಮಕ್ಕಳೂ ಹಾಗೂ ಅಪಾರ ಶಿಷ್ಯರನ್ನು ಅಗಲಿದ್ದಾರೆ. ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಇಟಲಿ ಸೇರಿದಂತೆ ವಿದೇಶಗಳಲ್ಲಿ ಹಿಂದೂಸ್ತಾನಿ ಸಂಗೀತ ಕಛೇರಿಗಳನ್ನು ನಡೆಸಿದ್ದರು.

ಕವಿ ಕೆ.ಎಸ್.ನರಸಿಂಹಸ್ವಾಮಿ ಹಾಗೂ ಇನ್ನಿತರ ಕನ್ನಡ ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ 1950 ರಲ್ಲಿ 3 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದ ಅವರು ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯ ಸ್ಥಾಪಕ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಭಾರತೀಯ ಕರಕುಶಲ ಸಮಿತಿಯ ನಿರ್ದೇಶಕರಾಗಿ ಸುಮಾರು ಹತ್ತು ವರ್ಷಗಳ ಕಾಲ ಅವರು ಕಾರ್ಯ ನಿರ್ವಹಿಸಿದ್ದರು.

1993 ರಲ್ಲಿ ಆಶ್ವಾಸನ್ ಸಂಸ್ಥೆ ಸ್ಥಾಪಿಸಿ, ಸಮಾಜ ಸೇವೆಯಲ್ಲಿಯೂ ತೊಡಗಿದ್ದರು. ಸ್ಮತಿ ನಂದನ್ ಸಂಸ್ಥೆಯ ಮೂಲಕ ಸಂಗೀತ ಕಲೆಗಳ ಉಳಿವಿಗೆ ಅವಿರತವಾಗಿ ಶ್ರಮಿಸಿದ್ದರು. ಪ್ರತಿವರ್ಷ ದೇವಾನಂದ್ ಯುವ ಸಂಗೀತ ಉತ್ಸವ ನಡೆಸುತ್ತಿದ್ದ ಅವರು ಆ ಮೂಲಕ ಯುವ ಸಂಗೀತಗಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಾ ಬಂದಿದ್ದರು. 1986 ರಲ್ಲಿ `ಕರ್ನಾಟಕ ಗಾನ ತಿಲಕ~ ಬಿರುದು ಪಡೆದಿದ್ದ ಅವರು, 1992 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ ಬ್ರಿಟನ್ ಸರ್ಕಾರದ ಪ್ರಶಸ್ತಿಗೂ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT