ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಪೊರ್ಟ್: ನೀರಿನ ಲಿಫ್ಟ್!

Last Updated 12 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅಮೆರಿಕಕ್ಕೆ ಪ್ರವಾಸ ಹೋದವರು ಸಾಮಾನ್ಯವಾಗಿ ನಯಾಗರಾ ಜಲಪಾತ ದರ್ಶನ ಮಾಡದೇ ಬರುವುದಿಲ್ಲ. ನ್ಯೂಯಾರ್ಕ್ ರಾಜ್ಯದ ಬಫೆಲೊ ನಗರದಿಂದ 24 ಮೈಲಿ ದೂರದ ನಯಾಗರಾವನ್ನು ವಿವಿಧ ಕೋನಗಳಲ್ಲಿ ನೋಡಿಕೊಂಡು ವಾಪಸ್ ಬರುವವರೇ ಜಾಸ್ತಿ. ಬಫೆಲೊದ ಹೋಟೆಲ್‌ನಲ್ಲಿ ಇಟ್ಟಿದ್ದ ಪ್ರವಾಸಿ ಸ್ಥಳಗಳ ವಿವರಣೆಯ ಕರಪತ್ರದ ಮೇಲೆ ಕಣ್ಣು ಹಾಯಿಸದೇ ಇದ್ದರೆ ನಾನೂ ಹಾಗೇ ಮಾಡುತ್ತಿದ್ದೆ.

ಆದರೆ ಅದೃಷ್ಟವಶಾತ್ ಅದು ಹೇಗೋ ‘ಎರಿ ಕೆನಾಲ್’ನ ವರ್ಣರಂಜಿತ ಪ್ರವಾಸಿ ವಿವರಗಳ ಪುಟ್ಟ ಪುಸ್ತಕ ನನ್ನ ಗಮನ ಸೆಳೆಯಿತು. ಲಾಕ್‌ಪೋರ್ಟ್ ಎಂಬ ಪಟ್ಟಣದೊಳಗೆ ಹರಿಯುವ ಆ ಕಾಲುವೆಯಲ್ಲಿ ನೌಕೆಯಲ್ಲಿ ವಿಹರಿಸುತ್ತ ಇಡಿ ನೌಕೆಯನ್ನೇ ನೀರಲ್ಲಿ ಸುಮಾರು 60 ಅಡಿಗಳಷ್ಟು ಮೇಲೆತ್ತುವ, ಇಳಿಸುವ ತಂತ್ರಜ್ಞಾನದ ರೋಮಾಂಚಕ ಖುಷಿ ಅನುಭವಿಸಬಹುದು ಎಂಬ ಮಾಹಿತಿ ಅದರಲ್ಲಿತ್ತು.

ಅಷ್ಟಕ್ಕೂ ಲಾಕ್‌ಪೋರ್ಟ್, ಬಫೆಲೊದಿಂದ ಬಹಳ ದೂರವೂ ಅಲ್ಲ. ಹೆಚ್ಚೆಂದರೆ 10-12 ಮೈಲಿ ಇರಬಹುದು.ನಯಾಗರಕ್ಕೆ ಬಫೆಲೊದಿಂದ ಎರಡು ಮಾರ್ಗಗಳಿವೆ. ಲಾಕ್‌ಪೋರ್ಟ್ ಮೂಲಕವೂ ಬರಬಹುದು. ಒಂದು 3-4 ಮೈಲಿ ಜಾಸ್ತಿ ಆಗಬಹುದು. ಆಶ್ಚರ್ಯದ ಸಂಗತಿ ಎಂದರೆ ನಾನು ಭೇಟಿಯಾದವರಲ್ಲಿ, ನಯಾಗರದ ಮಾಹಿತಿ ನೀಡಿದವರಲ್ಲಿ ಯಾರೊಬ್ಬರೂ ಲಾಕ್‌ಪೋರ್ಟ್ ಮತ್ತು ಎರಿ ಕಾಲುವೆ ಬಗ್ಗೆ ಹೇಳಿರಲಿಲ್ಲ. ಬಹುತೇಕರಿಗೆ ಅಂಥದ್ದೊಂದು ಅದ್ಭುತ ಅನುಭವದ ಸ್ಥಳ ಅಷ್ಟು ಹತ್ತಿರದಲ್ಲಿದೆ ಎಂದೇ ಗೊತ್ತಿರಲಿಲ್ಲ.

ಲಾಕ್‌ಪೋರ್ಟ್‌ನಲ್ಲಿ ಎರಿ ಕಾಲುವೆಗೆ (ಇದು ಒಂಟಾರಿಯೊ ಸರೋವರವನ್ನು ನ್ಯೂಯಾರ್ಕ್ ಬಳಿ ಹಡ್ಸನ್ ನದಿಗೆ ಜೋಡಿಸುತ್ತದೆ. ಆ ಮೂಲಕ ಅಟ್ಲಾಂಟಿಕ್ ಸಾಗರಕ್ಕೆ ನೇರ ಜಲ ಸಂಪರ್ಕ ಕಲ್ಪಿಸುತ್ತದೆ. 1825ರಲ್ಲಿ ಪೂರ್ಣಗೊಂಡ ಕಾಲುವೆಯ ಉದ್ದ 584 ಕಿ.ಮೀ. ಸರೋವರ ಮತ್ತು ನದಿ ಪಾತ್ರದ ನೀರಿನ ಮಟ್ಟದ ಅಂತರ 585 ಅಡಿ. ಇದನ್ನು ಸರಿದೂಗಿಸಲು ಕಾಲುವೆ ಉದ್ದಕ್ಕೂ 36 ಕಡೆ ಲಾಕ್ ಅಥವಾ ಗೇಟ್‌ಗಳಿವೆ) 34 ಮತ್ತು 35ನೇ ನಂಬರ್‌ನ ಗೇಟ್‌ಗಳನ್ನು ಜೋಡಿಸಲಾಗಿದೆ.

ಇವುಗಳ ಮಧ್ಯದಲ್ಲಿ ದೋಣಿಗಳನ್ನು ನಿಲ್ಲಿಸಿ, ಕಾಲುವೆಯ ನೀರಿನ ಮಟ್ಟವನ್ನು ಏರಿಸಿ ಅಥವಾ ತಗ್ಗಿಸಿ ದೋಣಿಯನ್ನು ಇಂಚಿಂಚು ಮೇಲೆತ್ತುವ, ಕೆಳಗೆ ಇಳಿಸುವ ವಿಧಾನ ನಿಜಕ್ಕೂ ಅವಿಸ್ಮರಣೀಯ ಅನುಭವ. ಇದಕ್ಕಾಗಿಯೇ ನಿತ್ಯ ಬೆಳಿಗ್ಗೆಯಿಂದ ಸಂಜೆ 5.30ರವರೆಗೂ ನಿಗದಿತ ಸಮಯದಲ್ಲಿ ಪ್ರವಾಸಿ ದೋಣಿ ಸಂಚಾರವಿದೆ.

ಇದರ ಜತೆಗೆ ಎರಿ ಕಾಲುವೆ ಒಂದು ಕಡೆ ಗುಹೆ ಮೂಲಕ ಹಾದು ಹೋಗುತ್ತದೆ, ಅದನ್ನೂ ತೋರಿಸುವ ವ್ಯವಸ್ಥೆ ಇದೆ.ದೋಣಿ ಬಂದಾಗ ಇಡಿ ಸೇತುವೆಯನ್ನೇ ಮೇಲಕ್ಕೆ ಎತ್ತಿ ದಾರಿ ಮಾಡಿಕೊಡುವುದನ್ನೂ ಇಲ್ಲಿ ಕಾಣಬಹುದು.ನಯಾಗರಾ ಪ್ರವಾಸದ ಜತೆ ಒಂದು ಮೂರು ತಾಸು ಬಿಡುವು ಮಾಡಿಕೊಂಡು ಲಾಕ್‌ಪೋರ್ಟ್ ಮಾರ್ಗವಾಗಿ ಹೋದರೆ ಬದುಕಿನ ಅನನ್ಯ ಅನುಭವ ನಿಮ್ಮದಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT