ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಗಿನ್ : ನೋಡಬಾರದ ದೃಶ್ಯಗಳಿಗೆ ನಿರ್ಬಂಧ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಐಫೋನ್, ಆಂಡ್ರಾಯ್ಡ ಅಥವಾ ಐಪಾಡ್ ತೆರೆದು, `ಟೆಕ್ಸ್ಟ್‌ಪ್ಲಸ್~ ಅಪ್ಲಿಕೇಶನ್ ಅನ್ನು ಕೆಲವೇ ಕ್ಷಣಗಳಲ್ಲಿ ಇಳಿಸಿಕೊಂಡು, ತಮ್ಮ ಬೆಡ್‌ರೂಮಿನೊಳಗೆ ದೌಡಾಯಿಸುವ ಮಕ್ಕಳನ್ನು ಕಂಡರೆ ಪಾಲಕರಲ್ಲಿ ಆತಂಕ ಮೂಡುವುದು ಸಹಜ. ಅದರಲ್ಲೂ ಮಕ್ಕಳ ಕೈಗೆ ಅತ್ಯಾಧುನಿಕ ಸಾಫ್ಟ್‌ವೇರ್‌ವುಳ್ಳ ಮೊಬೈಲ್ ಬಂದ ಮೇಲಂತೂ ಅವರು ಅದರಲ್ಲಿ ವೀಕ್ಷಿಸುವ ವೆಬ್‌ಸೈಟ್‌ಗಳ ಬಗ್ಗೆ ಸಂಶಯವೂ ಹೆಚ್ಚಾಗುತ್ತಿದೆ!

ಅಲ್ಪ ಅಶ್ಲೀಲ ಅಥವಾ ಕಡಿಮೆ ನಗ್ನತೆಯ ವಿಷಯಗಳನ್ನು ಒಳಗೊಂಡಿರುವುದಾಗಿ `ಟೆಕ್ಸ್ಟ್‌ಪ್ಲಸ್~ನ ಅಪ್ಲಿಕೇಶನ್ ಆಗಿರುವ `12 (ಪ್ಲಸ್)~ ಹೇಳಿಕೊಳ್ಳುತ್ತದೆ. ಆದರೆ, ಯಾವುದು ಕಡಿಮೆ ಅಥವಾ ಯಾವುದು ಹೆಚ್ಚು ಎಂಬುದೇ ಚರ್ಚಾರ್ಹ ವಿಷಯ. `12 (ಪ್ಲಸ್)~ಗೆ ಲಾಗ್‌ಇನ್ ಆದವರಿಗೆ ಇಂಥದೊಂದು ಸಂದೇಶ ಕಾಣುತ್ತದೆ: `ಅಶ್ಲೀಲ ಮಾತುಗಳ ಚಾಟ್ ಮಾಡುವವರು ಅಥವಾ ಕಳಿಸುವವರಿಗೆ ಸ್ವಾಗತ~.

ಪಾಲಕರಿಗೆ ಬಂದೊದಗಿರುವ ಸಮಸ್ಯೆ ಇದೇ. ಯಾವುದೇ ವ್ಯಕ್ತಿ ಆ ತಾಣಕ್ಕೆ ಸೇರಿಕೊಳ್ಳುವಾಗ ತನಗೆ 13 ವರ್ಷಗಳಾಗಿವೆ ಎಂದು ನಮೂದಿಸಬೇಕು; ಆದರೆ, ಇದೊಂದು ಅಡ್ಡಿಯೇ ಅಲ್ಲ. `ನನಗೆ 13 ವರ್ಷ ವಯಸ್ಸು~ ಎಂಬುದನ್ನು ಕ್ಲಿಕ್ ಮಾಡಿದರೆ ಸಾಕು; ಆ ಸೈಟ್‌ಗೆ ಪ್ರವೇಶ ಸಿಕ್ಕುಬಿಡುತ್ತದೆ. ಇದಕ್ಕೆ ಸೇರ್ಪಡೆಯಾಗುವ ಸದಸ್ಯರು ಪರಸ್ಪರ ಖಾಸಗಿಯಾಗಿ ಮಾತಾಡಬಹುದು, ಸಂದೇಶ ಅಥವಾ ಇನ್ನೇನಾದರೂ ಚಿತ್ರ- ಧ್ವನಿ ತುಣುಕು ಕಳಿಸಬಹುದು.

ಮಕ್ಕಳ ಕೈಗೆ ಸಿಗುವ ಮೊಬೈಲ್-ಐಪಾಡ್‌ಗಳಲ್ಲಿ ಅನೇಕ ಅಪ್ಲಿಕೇಶನ್‌ಗಳು ಇರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸುವ ಪಾಲಕರಿಗೆ, ಈಗ ಸುಲಭವಾಗಿ ಲಭ್ಯವಾಗುವ ಅಶ್ಲೀಲ ವೆಬ್‌ಸೈಟ್‌ಗಳು ಇನ್ನಷ್ಟು ಚಿಂತೆಗೆ ಕಾರಣವಾಗಿವೆ. ಯೂಟ್ಯೂಬ್ ಸೇರಿದಂತೆ ಹಲವು ವೆಬ್‌ಸೈಟ್‌ಗಳಿಂದ `ಆಕ್ಷೇಪಾರ್ಹ~ ದೃಶ್ಯಗಳನ್ನು ಕದ್ದುಮುಚ್ಚಿ ನೋಡಲು ಯಾವ ಅಡ್ಡಿಯೂ ಇಲ್ಲ.

ಪಾಲಕರ ಈ ಚಿಂತೆಯನ್ನು ದೂರ ಮಾಡುವ ವಿಧಾನಗಳು ವೆಬ್ ವಲಯಕ್ಕೆ ಕಾಲಿಟ್ಟಿವೆ. `ನೋಡಬಾರದ~ ದೃಶ್ಯಗಳು ಮೊಬೈಲ್, ಐಫೋನ್ ಅಥವಾ ಐಪಾಡ್‌ನಲ್ಲಿ ಬಾರದಂತೆ ಮಾಡಲು ಕೇವಲ ಕೆಲವು ನಿಮಿಷಗಳು ಸಾಕು.

ಉಪಕರಣದ `ಸೆಟಿಂಗ್~ ಬದಲಾಯಿಸಿ, ಬೇರೆಯದೇ ಆದ ಬ್ರೌಸರ್ ಅನ್ನು ಅನುಸ್ಥಾಪಿಸಬಹುದು. ಅಶ್ಲೀಲ ವೆಬ್‌ತಾಣಗಳನ್ನು ಈ ಬ್ರೌಸರ್ ತೆರೆಯುವುದೇ ಇಲ್ಲ.

ಆದರೆ, ಇದನ್ನು ಅಳವಡಿಸಿಕೊಂಡಾಗ ಯೂಟ್ಯೂಬ್‌ನ ಹಲವು ವಿಡಿಯೋಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂಬುದನ್ನೂ ಗಮನಿಸಬೇಕು. ಬಳಕೆದಾರನೊಬ್ಬ ಯಾವುದೇ ಅಶ್ಲೀಲ ವಿಡಿಯೊವನ್ನು ಅಂತರ್ಜಾಲದಲ್ಲಿ ಹಾಕಿದರೆ, ಬೇರೊಬ್ಬರು `ಗೂಗಲ್~ಗೆ ಅದರ ಬಗ್ಗೆ ತಿಳಿಸುವವರೆಗೆ ಇತರ ವೀಕ್ಷಕರು ಅದನ್ನು ನೋಡುವ ಸಾಧ್ಯತೆ ಇರುವುದಿಲ್ಲ.

ತಮ್ಮ ಮಕ್ಕಳು `ಆ್ಯಪಲ್~ ಉಪಕರಣ ಬಳಸುತ್ತಿದ್ದರೆ, ಪಾಲಕರು ಮೊದಲಿಗೆ ಅದರ `ಸೆಟ್ಟಿಂಗ್~ ಬದಲಾಯಿಸುವ ಮೂಲಕ ಅಶ್ಲೀಲ ವಿಡಿಯೋ ತಾಣ ಅವರಿಗೆ ಸಿಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ `ಜನರಲ್~, ನಂತರ `ರಿಸ್ಟ್ರಿಕ್ಷನ್~ಗೆ ಹೋಗಿ, ಅಲ್ಲಿ `ಎನೇಬಲ್ ರಿಸ್ಟ್ರಿಕ್ಷನ್~ ಎಂಬುದನ್ನು ಆಯ್ಕೆ ಮಾಡಬೇಕು. ಈ ಸಂದರ್ಭದಲ್ಲಿ ಉಪಕರಣವು ಕೇಳುವ ಪಾಸ್‌ವರ್ಡ್, ಮಕ್ಕಳು ಊಹಿಸದಂತೆ ಇರಬೇಕು ಎಂಬುದನ್ನು ಗಮನಿಸಿ. ಮುಂದಿನ `ಅಲೋ~ (ಅವಕಾಶ ಕಲ್ಪಿಸುವ) ವಿಭಾಗದಲ್ಲಿ `ಸಫಾರಿ~ ಎಂಬುದನ್ನು `ಆಫ್~ ಎಂದು ಆಯ್ಕೆ ಮಾಡಿ. ಇದೇ ಪೇಜ್‌ನಲ್ಲಿ `ಯೂಟ್ಯೂಬ್~ಗೂ ಅವಕಾಶ ತಪ್ಪಿಸಲು ಸಾಧ್ಯವಿದೆ.

ಅಶ್ಲೀಲ ತಾಣ ವೀಕ್ಷಣೆಗೆ ಅವಕಾಶ ಇರುವ ಬಗ್ಗೆ `ಟೆಕ್ಸ್ಟ್‌ಪ್ಲಸ್~ಗೆ ಮಾಹಿತಿಯಿಲ್ಲವೇ? ಈ ಪ್ರಶ್ನೆಗೆ ಮುಖ್ಯ ಭದ್ರತಾಧಿಕಾರಿ ಇಲಾನ್ ಗೋಲ್ಡ್‌ಮನ್ ಹೇಳುವುದು ಹೀಗೆ- `ಇದರ ಬಗ್ಗೆ ಕೆಲವು ಬಳಕೆದಾರರು ದೂರು ನೀಡಿದಾಗಲೇ ನಮ್ಮ ಗಮನಕ್ಕೆ ಬಂದಿದ್ದು. ಅಶ್ಲೀಲ ಚಾಟಿಂಗ್‌ಗಳನ್ನು ನಡೆಸುವ ಚಾಟ್‌ರೂಮ್‌ಗಳನ್ನು ಸ್ಥಗಿತಗೊಳಿಸಲೆಂದೇ ನಮ್ಮ ಪರಿಣತರು  ಕೆಲಸ ಮಾಡುತ್ತಿದ್ದಾರೆ~

ಮಕ್ಕಳ ಕೈಯಲ್ಲಿರುವ ಆ್ಯಪಲ್ ಉಪಕರಣಗಳಿಗೆ ಅಶ್ಲೀಲ ತಾಣ ಪ್ರವೇಶ ದೊರಕದಂತೆ ಮಾಡಲು `ಕೆ-9 ವೆಬ್ ಪ್ರೊಟೆಕ್ಷನ್ ಬ್ರೌಸರ್~ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದು ಸುಲಭ ಲಭ್ಯವಿದ್ದು, ಬೇಗನೇ ಇನ್‌ಸ್ಟಾಲ್ ಆಗುತ್ತದೆ. ಆಂಡ್ರಾಯ್ಡ ಟ್ಯಾಬ್ಲೆಟ್ ಅಥವಾ ಫೋನ್ ಬಳಕೆದಾರರು ತಮ್ಮ ಫೋನ್‌ನಲ್ಲಿರುವ ಸೆಟ್ಟಿಂಗ್‌ಗೆ ಹೋಗಿ, `ಕಂಟೆಂಟ್ ಫಿಲ್ಟರಿಂಗ್ ಟ್ಯಾಬ್~ ಆಯ್ಕೆ ಮಾಡಬಹುದು.

ಫೋನ್ ಅಥವಾ ಟ್ಯಾಬ್ ಸೆಟ್ ಮಾಡುವಾಗ, ಪಾಲಕರು ಒಂದು ಸಂಗತಿ ಮರೆಯಬಾರದು. ಬೇರಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಅದರ ಸೂಚನೆಯನ್ನು ಸಹ ಪಡೆಯುವ ಅವಕಾಶ ಹಲವು ಉಪಕರಣಗಳಲ್ಲಿ ಇರುತ್ತದೆ. ಇದರಿಂದ ತಮಗೆ ತಿಳಿಯದಂತೆ ಮಕ್ಕಳು ಯಾವ-ಯಾವ ಅಪ್ಲಿಕೇಶನ್‌ಗಳನ್ನು ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬುದು ಪಾಲಕರಿಗೆ ಗೊತ್ತಾಗುತ್ತದೆ.

ಉಪಕರಣಗಳಲ್ಲಿ ಸೆಟ್ಟಿಂಗ್ ಮಾಡಿಕೊಂಡ ಬಳಿಕ, ಅದಕ್ಕೆ ಸಂಬಂಧಿಸಿದ ಸೂಚನೆಗಳು ಪರದೆ ಮೇಲಿದ್ದರೆ ಅಳಿಸಿ ಹಾಕಿಬಿಡಬೇಕು.

ಆಂಡ್ರಾಯ್ಡನ ಯೂಟ್ಯೂಬ್ ಅಪ್ಲಿಕೇಶನ್‌ನಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ಆದರೆ, ಇದೇನೂ ಅಷ್ಟು ಪರಿಣಾಮಕಾರಿ ಅಲ್ಲ. ನಾಲ್ಕು ಡಾಲರ್ ದರದಲ್ಲಿ ಅಂತರ್ಜಾಲದಲ್ಲಿ ಸಿಗುವ `ವೆಬ್‌ನ್ಯಾನಿ~ ಒಂದಷ್ಟು ಮಟ್ಟಿಗೆ ಅಶ್ಲೀಲ ತಾಣಗಳನ್ನು ನಿರ್ಬಂಧಿಸಬಲ್ಲದು. ಮಕ್ಕಳ ಕೈಯಲ್ಲಿರುವ ಮೊಬೈಲ್‌ಗಳನ್ನು ಪಾಲಕರು ನಿಯಂತ್ರಿಸಬಲ್ಲ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಮೆಜಾನ್‌ನ ವಕ್ತಾರೆ ಕಿನ್ಲೆ ಕ್ಯಾಂಪ್‌ಬೆಲ್ ಹೇಳುತ್ತಾರೆ.

ಆದರೆ, ಅದರ ಕುರಿತ ಹೆಚ್ಚಿನ ವಿವರವನ್ನು ಅವರು ಒದಗಿಸಿಲ್ಲ. ಮಕ್ಕಳಲ್ಲಿರುವ ಮೊಬೈಲ್, ಐಪಾಡ್‌ನಲ್ಲಿ ಏನೇನು ಸಿಗುತ್ತಿದೆ ಎಂಬುದು ಪಾಲಕರಿಗೆ ಸಂಪೂರ್ಣ ಗೊತ್ತಾಗುವ ತಂತ್ರಜ್ಞಾನ ಬರುವವರೆಗೂ ಅವರ ಆತಂಕಕ್ಕೆ ಕೊನೆಯಿಲ್ಲವಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT