ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಟರಿ ಮೂಲಕ ಒಲಿದ ಅಧ್ಯಕ್ಷ ಸ್ಥಾನ

ರಾವಂದೂರು, ಚಿಟ್ಟೇನಹಳ್ಳಿ ಗ್ರಾಮ ಪಂಚಾಯಿತಿ
Last Updated 20 ಡಿಸೆಂಬರ್ 2012, 8:09 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಎರಡನೆ ಅವಧಿಯ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆಯಿತು.ಚಿಟ್ಟೇನಹಳ್ಳಿ ರಾವಂದೂರು ಹಾಗು ದೊಡ್ಡಬೇಲಾಳು ಗ್ರಾಮಪಂಚಾಯಿತಿಗಳ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆ ಬುಧವಾರ ಶಾಂತಿಯುತವಾಗಿ ಜರುಗಿತು.

ರಾವಂದೂರು ಗ್ರಾಮಪಂಚಾಯಿತಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.  ಈ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸ್ವಾಮಿಗೌಡ ಜೆಡಿಎಸ್ ಬೆಂಬಿತ ಅಭ್ಯರ್ಥಿ ಎಚ್.ಡಿ.ವಿಜಯ್ ನಾಮಪತ್ರ ಸಲ್ಲಿಸಿದ್ದರು.

ರಾವಂದೂರು ಗ್ರಾ.ಪಂ.ನಲ್ಲಿ ಇದ್ದ ಒಟ್ಟು 20 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನದ ಇಬ್ಬರು ಅಭ್ಯರ್ಥಿಗಳು ತಲಾ 10 ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿ ಬಿಇಒ ಸಿ.ಎಸ್.ರಾಮಲಿಂಗು ಲಾಟರಿ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಮುಂದಾದರು. ಲಾಟರಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ  ಸ್ವಾಮೀಗೌಡರಿಗೆ ಅದೃಷ್ಟ ಒಲಿದಿದ್ದರಿಂದ ಅಧ್ಯಕ್ಷರನ್ನಾಗಿ ಘೋಷಿಸಿದರು.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡದ ಮಹಿಳೆಗೆ ಮೀಸಲಾಗಿತ್ತು. ಇದಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಗರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚಿಟ್ಟೇನಹಳ್ಳಿ ಗ್ರಾಮಪಂಚಾಯಿತಿ: ಅಧ್ಯಕ್ಷ ಸ್ಥಾನ ಬಿಎಸಿಎಂ (ಬಿ) ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಬೆಂಬಲಿತ ಈರಪ್ಪಾಜಿ ಮತ್ತು ಕಾಂಗ್ರೆಸ್ ಬೆಂಬಲಿತ ಹೆಮ್ಮಿಗೆ ಮಹದೇವ್ ನಾಮಪತ್ರ ಸಲ್ಲಿಸಿದ್ದರು.

ಒಟ್ಟು 21 ಸದಸ್ಯರು ಇದ್ದು ಇದರಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 10 ಮತ ಪಡೆದರು.  ಒಂದು ಕುಲಗೆಟ್ಟ ಮತವಾಗಿತ್ತು. ಇದರಿಂದ ಚುನಾವಣಾಧಿಕಾರಿ ಕೃಷಿ ಸಹಾಯಕ ನಿರ್ದೇಶಕ ಕೆ.ರಾಜು ಲಾಟರಿ ಎತ್ತುವ ಮೂಲಕ ಅಭ್ಯರ್ಥಿ ಆಯ್ಕೆ ನಡೆಸಿದರು. ಇದರಲ್ಲಿ ಜೆಡಿಎಸ್‌ನ ಈರಪ್ಪಾಜಿ ವಿಜಯಿಯಾದರು.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡದ ಮಹಿಳೆಗೆ ಮೀಸಲಾಗಿತ್ತು. ಮೀಸಲಾದ ಸ್ಥಾನಕ್ಕೆ ಸರೋಜ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ದೊಡ್ಡಬೇಲಾಳು ಗ್ರಾಮ ಪಂಚಾಯಿತಿ: ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಶ್ರೀ, ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹದೇವಮ್ಮ ಅರ್ಜಿ ಸಲ್ಲಿಸಿದ್ದರು.

ಮತದಾನದಲ್ಲಿ ಭಾಗ್ಯಶ್ರೀ 11 ಮತ ಪಡೆದು ಜಯಶೀಲರಾದರು. ಮಹದೇವಮ್ಮ 9 ಮತ ಪಡೆದು ಪರಾಭವಗೊಂಡರು.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು ಇದಕ್ಕೆ ಜೆಡಿಎಸ್ ಬೆಂಬಲಿತ ಡಿ.ಟಿ.ಸತೀಶ್ ಹಾಗು ಕಾಂಗ್ರೆಸ್ ಬೆಂಬಲಿತ ಶಿವಸ್ವಾಮಿ ಸ್ಪರ್ಧಿಸಿದ್ದರು. ಡಿ.ಟಿ.ಸತೀಶ್ 11 ಮತ ಪಡೆದು ವಿಜಯಿಯಾದರೆ ಶಿವಸ್ವಾಮಿ 9 ಮತಪಡೆದು ಪರಾಭವಗೊಂಡರು.

ಚುನಾವಣಾ ಅಧಿಕಾರಿಯಾಗಿ ಜಿಲ್ಲಾಪಂಚಾಯಿತಿ ಸಹಾಯಕ ಎಂಜಿನಿಯರ್ ಮನೋಹರ್ ಕಾರ್ಯ ನಿರ್ವಹಿಸಿದರು.ಪಿಡಿಒ ಶಿವಯೋಗಿ, ಜೆಡಿಎಸ್ ಮುಖಂಡ ಕೆ.ಕೆ.ಕುಮಾರ್, ಪ್ರಸನ್ನ, ಅಪೂರ್ವ ಮೋಹನ್, ತಾ.ಪಂ.ಮಾಜಿ ಅಧ್ಯಕ್ಷರಾದ ಜವರಪ್ಪ, ಆರ್.ಎಸ್.ಮಹದೇವ್, ಮಾಜಿ ಸದಸ್ಯ ಜಮೃದ್ ಪಾಷ, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT