ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಠಿ ಪ್ರಹಾರ: ಕ್ರಮಕ್ಕೆ ಆಗ್ರಹಿಸಿ ಧರಣಿ

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೀದರ್:  ರಸ್ತೆಗಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ತಾಲ್ಲೂಕಿನ ಶಹಾಪುರ ಗ್ರಾಮಸ್ಥರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಶಹಾಪುರ ಗೇಟ್‌ನಿಂದ ಗ್ರಾಮದವರೆಗೆ ರಸ್ತೆ ನಿರ್ಮಾಣಕ್ಕಾಗಿ ಶಾಂತ ರೀತಿಯಲ್ಲಿ ರಸ್ತೆತಡೆ ನಡೆಸಲಾಗುತ್ತಿತ್ತು. ಆದರೆ, ಪೊಲೀಸರು ಗ್ರಾಮದ ಮಹಿಳೆಯರು, ವೃದ್ಧರು ಹಾಗೂ ಯುವಕರನ್ನು ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ ಹೋರಾಟವನ್ನು ಬೆಂಬಲಿಸಿದ್ದ 52 ಜನರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಪಾದಿಸಿದ್ದಾರೆ.

ಶಹಾಪುರ ಗ್ರಾಮದಿಂದ ಅರಣ್ಯದ ಮೂಲಕ ಗೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಲವು ವರ್ಷಗಳಿಂದ ಬಳಸಿಕೊಂಡು ಬರಲಾಗುತ್ತಿದೆ. ಇದೀಗ ನಬಾರ್ಡ್‌ನ 15ನೇ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾಕಾರಣ ಆಕ್ಷೇಪ ಎತ್ತಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಕಾಮಗಾರಿ ಮತ್ತೆ ಆರಂಭಿಸುವಂತೆ ಒತ್ತಾಯಿಸಿ ರಸ್ತೆತಡೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬಂಧಿಸಲಾಗಿರುವ ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾಮಗಾರಿಗೆ ತಡೆ ಒಡ್ಡಿ ರಾದ್ಧಾಂತಕ್ಕೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಹಾಪುರಗೇಟ್‌ನಿಂದ ಗ್ರಾಮದರೆಗಿನ ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು. ಬೇಡಿಕೆಗಳನ್ನು ಕೂಡಲೇ ಈಡೇರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಜನ ಲಾರಿ, ಟೆಂಪೋಗಳಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಂಕರೆಪ್ಪ, ಜಿಲ್ಲಾ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಆರ್.ಪಿ. ರಾಜಾ, ಕರ್ನಾಟಕ ಟೈಗರ್ಸ್‌ ಹೋರಾಟ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ಶಹಾಪುರೆ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT