ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದಾಯಕ ಪುಸ್ತಕ ‘ಉದ್ಯಮ’

Last Updated 11 ಡಿಸೆಂಬರ್ 2013, 15:46 IST
ಅಕ್ಷರ ಗಾತ್ರ

ಕನ್ನಡ ಪುಸ್ತಕ ಮಾರಾಟ ಮಾಡುವುದೆಂದರೆ ನಾಡು–ನುಡಿ ಮತ್ತು ಸಾಂಸ್ಕೃತಿಕ (ಸರಸ್ವತಿ) ಸೇವೆ ಎಂದು ಭಾವಿಸಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಉಳಿದೆಲ್ಲ ಕ್ಷೇತ್ರಗಳಂತೆ ಇದೂ ದೊಡ್ಡ ಹಣಕಾಸು ವಹಿವಾಟಿನ ಸ್ವರೂಪ ಪಡೆದು­ಕೊಂಡಿದೆ.

ಮಾರುಕಟ್ಟೆ, ಬಂಡವಾಳ, ಅವಕಾಶಗಳನ್ನು ದಿನದಿಂದ ದಿನಕ್ಕೆ ಹಿಗ್ಗಿಸಿಕೊಂಡು ಸಾಗುತ್ತಿದೆ. ನಾಲ್ಕೈದು ಸಾವಿರ ರೂಪಾಯಿಯಲ್ಲಿ ನಡೆಯುತ್ತಿದ್ದ ಪುಸ್ತಕ ಹಂಚಿಕೆಯ ಪ್ರೀತಿ, ಲಕ್ಷ, ಕೋಟಿ ಸನಿಹ ಮುಟ್ಟಿದೆ, ಮಾರುಕಟ್ಟೆಯನ್ನೂ ವಿಸ್ತರಿಸಿಕೊಂಡಿದೆ.

ಸಾಹಿತಿ ಗಳಗನಾಥರು ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಹಳ್ಳಿ ಹಳ್ಳಿಗಳಿಗೂ ಮುಟ್ಟಿಸಿದ್ದರು. ಧಾರವಾಡದ ಮನೋಹರ ಗ್ರಂಥಮಾಲೆ ಆರಂಭದಲ್ಲಿ ಗ್ರಾಮೀಣ ಜನರಲ್ಲಿ ಪುಸ್ತಕದ ಅಭಿರುಚಿಯನ್ನು  ಬಿತ್ತಿತ್ತು. ಕಾಲ ಸರಿದಂತೆ ಪುಸ್ತಕ ಮಾರಾಟ ಉದ್ಯಮದ ರೂಪ ಪಡೆದಿರುವುದಂತೂ ಅಕ್ಷರಶಃ ಸತ್ಯ. ಉದ್ಯಮವಾಗಿ ಪರಿವರ್ತಿತವಾದ ತರುವಾಯ ಅಲ್ಲಿ ಲಾಭ, ನಷ್ಟದ ಲೆಕ್ಕ ಸುಳಿದಿದೆ.

ಲಾಬಿಯೂ ತಲೆ ಎತ್ತಿದೆ. ಪುಸ್ತಕಗಳನ್ನು ಪ್ರಕಟಿಸಿ ಹಣ ಸಂಪಾದಿಸಲು ಸಾಧ್ಯವಿದೆ ಎನ್ನುವುದನ್ನು ಹಲವು ಪ್ರಕಾಶಕರು ಕಂಡುಕೊಂಡಿದ್ದಾರೆ. ಹ್ಯಾರಿಪಾಟರ್ ಸರಣಿಯ ಮಕ್ಕಳ ಪುಸ್ತಕ ಜಗತ್ತಿನಲ್ಲೇ ಹೆಸರು ಮಾಡಿ ಭಾರಿ ಲಾಭವನ್ನೂ ಗಳಿಸಿತ್ತು. ಅದರಂತೆ ಕನ್ನಡದಲ್ಲೂ ಪ್ರಮುಖ ಕಾದಂಬರಿಗಳು, ಕಾವ್ಯಗಳು, ಆತ್ಮ ಚರಿತ್ರೆಯ ಪುಸ್ತಕಗಳು ಹಲವು ಮುದ್ರಣಗಳನ್ನು ಕಂಡು ನಿರೀಕ್ಷೆಗೂ ಮೀರಿ ಪ್ರಕಾಶಕರಿಗೆ ಲಾಭ ತಂದಿತ್ತಿವೆ.

ಪ್ರಕಾಶನ ಹಲವು ಬಗೆ
ಪ್ರಕಾಶನ ಸಂಸ್ಥೆಗಳನ್ನು ದೊಡ್ಡ, ಸಣ್ಣ ಮತ್ತು ತೀರಾ ಸಣ್ಣ ಪ್ರಕಾಶನ ಸಂಸ್ಥೆಗಳೆಂದು ಪ್ರತ್ಯೇಕವಾಗಿ ಗುರುತಿಸಬಹುದು. ಬಹುಪಾಲು

ದೊಡ್ಡ ಪ್ರಕಾಶನ ಸಂಸ್ಥೆಗಳು ನಗರಗಳಲ್ಲಿ ಕೇಂದ್ರೀಕೃತವಾಗಿದ್ದು ಪುಸ್ತಕ ಮಾರಾಟಕ್ಕೆ ಉದ್ಯಮದ ಸ್ವರೂಪ ನೀಡಿದರೆ, ಸಣ್ಣ ಪ್ರಕಾಶಕರೂ ತಮ್ಮ ಸಾಂಸ್ಕೃತಿಕ ಪ್ರೀತಿಯನ್ನು ಕಾಯ್ದುಕೊಳ್ಳುವ ಮೂಲಕ ಬಂಡವಾಳವನ್ನೂ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು, ಪ್ರಾಧಿಕಾರಗಳು ಪುಸ್ತಕಗಳನ್ನು ಪ್ರಕಟಿಸಿದರೂ ಖಾಸಗಿ ಪ್ರಕಾಶಕರೇ ಬಲಾಢ್ಯರು. ಪುಸ್ತಕೋದ್ಯಮದಲ್ಲಿ ಅವಕಾಶಗಳು ವಿಪುಲವಾಗಿವೆ. ಇದನ್ನೆಲ್ಲ ಪರಿಗಣಿಸಿಯೇ  ಹೂಡಿಕೆದಾರರು ಪುಸ್ತಕಗಳ ಹೂಟೆಗೆ ಮುಂದಾಗುತ್ತಿರುವುದು.

ಪುಸ್ತಕ ವ್ಯಾಪಾರ
ಸಾಹಿತ್ಯ ಜಾತ್ರೆ ಎಂದು ಪರಿಗಣಿಸುವ ಸಾಹಿತ್ಯ ಸಮ್ಮೇಳನಗಳಲ್ಲೂ ಮುಖ್ಯವಾಗುವುದು ಪುಸ್ತಕ ವ್ಯಾಪಾರ. ಈ ಪುಸ್ತಕೋದ್ಯಮ ವರ್ಷದಿಂದ ವರ್ಷಕ್ಕೆ ಬೆಳವಣಿಯ ಹಾದಿಯಲ್ಲಿ ಸಾಗುತ್ತಿದೆ. ಪ್ರತಿ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರಾಸರಿ ಮೂರರಿಂದ ಐದು ಕೋಟಿ ರೂಪಾಯಿ ಪುಸ್ತಕ ವಹಿವಾಟು ನಡೆಯುತ್ತದೆ.

ಪುಸ್ತಕೋದ್ಯಮ, ಕನ್ನಡ ಸಾಹಿತ್ಯದ ಬೆಳೆವಣಿಗೆಗೆ ಇಂಬು ಎನ್ನುವವರು ಕೆಲವರಾದರೆ, ವಹಿವಾಟೇ ಪ್ರಧಾನವಾಗಿ ಪುಸ್ತಕ ಸೇವೆ ಗೌಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುವ ವರ್ಗವೂ ಇದೆ.

‘ಏಕಗವಾಕ್ಷಿ’
ಈ ಮಾರುಕಟ್ಟೆ ಕೇಂದ್ರಿತ ಪುಸ್ತಕೋದ್ಯಮ ಮೊದಲಿನಿಂದ ಇದ್ದರೂ ವೇಗವಾಗಿದ್ದು ಸರ್ಕಾರ ಜಾರಿಗೆ ತಂದ ‘ಏಕಗವಾಕ್ಷಿ’ ಯೋಜನೆಯಿಂದ. ‘ಏಕಗವಾಕ್ಷಿ’ ಯೋಜನೆ ಎಂದರೆ ಸರ್ಕಾರವೇ ಪ್ರಕಾಶಕರಿಂದ ₨1 ಲಕ್ಷ ಮಿತಿಯಲ್ಲಿ 300 ಪುಸ್ತಕಗಳನ್ನು ಕೊಳ್ಳುವ ನೀತಿ. ಪುಸ್ತಕಗಳನ್ನು ಆಯ್ಕೆ ಮಾಡುವುದು ಸರ್ಕಾರದಿಂದ ನಿಯೋಜನೆಗೊಂಡ ‘ಉನ್ನತ ಪುಸ್ತಕ ಆಯ್ಕೆ ಸಮಿತಿ’ (ಎರಡು ವರ್ಷ ಅಧಿಕಾರ ಅವಧಿ). ಈ ಯೋಜನೆಯಡಿ ಖರೀದಿಸುವ ಪುಸ್ತಕಗಳಲ್ಲಿ ಶೇ 80ರಷ್ಟು ಕನ್ನಡದ್ದಾದರೆ ಶೇ 20ರಷ್ಟು ಪರಭಾಷೆ ಪುಸ್ತಕಗಳಾಗಿರುತ್ತವೆ. ಈ ನೀತಿ ಜಾರಿಯಾಗಿದ್ದು ಪ್ರಕಾಶಕರ ಅನುಕೂಲಕ್ಕಾಗಿಯೆ.

ಆದರೆ ಈ ಯೋಜನೆ ಬಹುತೇಕ ದುರ್ಬಳಕೆಯಾಗಿದೆ. ಪುಸ್ತಕ ಪ್ರಕಾಶನಕ್ಕೆ ಯಾವುದೇ ರೀತಿಯ ಅನುಮತಿ, ನೀತಿಗಳು ಇಲ್ಲದ ಕಾರಣ ಪ್ರಕಾಶನ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಸರ್ಕಾರವು ‘ಏಕಗವಾಕ್ಷಿ’ ಯೋಜನೆಯಡಿ ಐದು ಕೋಟಿ ಮತ್ತು ರಾಜಾರಾಂ ಮೋಹನರಾಯ್ ಯೋಜನೆಯಡಿ ಮೂರು ಕೋಟಿ ರೂಪಾಯಿ ಪುಸ್ತಕಗಳನ್ನು ಪ್ರಕಾಶಕರಿಂದ ಖರೀದಿಸುತ್ತದೆ.

ಹೀಗೆ ನಿಗದಿತ ಮಿತಿಯಲ್ಲಿ ನಡೆಯುವ ಪುಸ್ತಕ ಖರೀದಿಗೆ ಹಲವು ಪ್ರಕಾಶನ ಸಂಸ್ಥೆಗಳು ಬೇನಾಮಿ ಹೆಸರಿನಲ್ಲಿ ಸರ್ಕಾರಕ್ಕೆ ಪುಸ್ತಕ ಮಾರಾಟ ಮಾಡಲು ಮುಂದಾಗುತ್ತಿವೆ. ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳನ್ನು ತಮ್ಮ ಹತ್ತಿರದ ಸಂಬಂಧಿಕರ ಹೆಸರಿನಲ್ಲಿ ನೋಂದಾಯಿಸಿ­ಕೊಳ್ಳುವುದು,ಸಂಬಂಧಿಕರ ಹೆಸರಿನಲ್ಲಿರುವ ಪ್ರಕಾಶನ ಸಂಸ್ಥೆಗಳ ವ್ಯವಹಾರಕ್ಕೆ ಪ್ರತ್ಯೇಕ ಲೆಟರ್‌ಹೆಡ್ ವ್ಯವಸ್ಥೆ ಮಾಡಿಕೊಳ್ಳುವುದು, ಆ ಎಲ್ಲ ಪ್ರಕಾಶನ ಸಂಸ್ಥೆಗಳ ಹೆಸರಿನಲ್ಲೂ ಪುಸ್ತಕ ಪ್ರಕಟಿಸುವುದು... ಹೀಗೆ ಬೇನಾಮಿಯಾಗಿಯೇ ನಡೆಯುವ ಪುಸ್ತಕ ವ್ಯಾಪಾರ ಪೂರ್ಣವಾಗಿ ಪುಸ್ತಕ ಸಂಸ್ಕೃತಿಯನ್ನು ಬೇರೊಂದು ಮಜಲಿಗೆ ಕೊಂಡೊಯ್ದಿದೆ.

ಪೂರ್ಣ ಪ್ರಮಾಣದ ಉದ್ಯಮ
ಪುಸ್ತಕ ಪ್ರಕಾಶನ ಪೂರ್ಣ ಪ್ರಮಾಣದ ಉದ್ಯಮದ ಹಾದಿಗೇ ಹೊರಳುತ್ತಿರುವುದನ್ನು ಕೆಲವು ಪ್ರಮುಖ ಪ್ರಕಾಶನ ಸಂಸ್ಥೆಗಳು ಒಪ್ಪಿಕೊಳ್ಳುತ್ತವೆ. ‘ಬಂಡವಾಳ ತೊಡಗಿಸುತ್ತೇವೆ, ಪುಸ್ತಕ ಪ್ರಕಟಿಸುತ್ತೇವೆ. ಕಿಂಚಿತ್ತೂ ಆದಾಯ ಬಾರದಿದ್ದರೆ ಹೇಗೆ? ಎಂದು ಪ್ರಶ್ನಿಸುತ್ತಾರೆ.

‘ಗ್ರಾಮೀಣ ಜನರ ಬಳಿಗೆ ಪುಸ್ತಕಗಳನ್ನು ಕೊಂಡೊ ಯ್ಯುತ್ತೇವೆ. ಪ್ರಕಾಶನದ ಪೈಪೋಟಿಯಿಂದ ಹೊಸ ಓದುಗರನ್ನೂ ಸೃಷ್ಟಿಸುತ್ತೇವೆ. ಕನ್ನಡದ ಜ್ಞಾನ ಪರಿಧಿ ವಿಸ್ತರಿಸುತ್ತಿದ್ದೇವೆ. ರಾಜ್ಯದಲ್ಲಿ ಪ್ರಕಟವಾಗುತ್ತಿರುವ ಶೇ 90ರಷ್ಟು ಪುಸ್ತಕ ಓದುಗರಿಗೆ ದೊರೆಯುತ್ತಿಲ್ಲ. ಸರ್ಕಾರ ಸೂಕ್ತ ಸ್ಥಳ ನಿಗದಿ ಪಡಿಸಿಲ್ಲ, ಮಾರುಕಟ್ಟೆಯನ್ನೂ ಸಹ ಮಾಡಿಕೊಟ್ಟಿಲ್ಲ, ಖಾಸಗಿ ಪ್ರಕಾಶಕರು ಆ ಕೊರತೆ ಯನ್ನು ತುಂಬುತ್ತಿದ್ದಾರೆ’ ಎಂದು ಉದ್ಯಮದ ರೂಪ ವನ್ನು ಸಮರ್ಥಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಎಷ್ಟು ಪ್ರಕಾಶನ ಸಂಸ್ಥೆಗಳಿವೆ? ವಹಿವಾಟು ಯಾವ ಪ್ರಮಾಣ ದಲ್ಲಿ ನಡೆಯುತ್ತಿದೆ? ಈ ಪ್ರಶ್ನೆಗಳಿಗೆ ನಿಖರ ಉತ್ತರ ನೀಡಲು ಸಾಧ್ಯವಾಗದು ಎನ್ನುವುದು ಗ್ರಂಥಾಲಯದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮಾತು.

ಕೇಂದ್ರ ಗ್ರಂಥಾಲಯ ಇಲಾಖೆಯಲ್ಲಿ ಲೇಖಕರು ತಮ್ಮ ಪುಸ್ತಕಗಳನ್ನು ನೋಂದಾಯಿಸುತ್ತಾರೆ. ಕಳೆದ ವರ್ಷ 7,600 ಪುಸ್ತಕಗಳು ನೋಂದಣಿಯಾಗಿದ್ದವು. ಗ್ರಾಮೀಣ ಭಾಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಕಾರ್ಯಕ್ರಮಗಳಲ್ಲಿ ಬಿಡುಗಡೆಯಾಗುವ ಪುಸ್ತಕಗಳು ನೋಂದಣಿ ಆಗುವುದಿಲ್ಲ. ಹಾಗಾಗಿ ರಾಜ್ಯದಲ್ಲಿ ವರ್ಷ ದಲ್ಲಿ ಪ್ರಕಟವಾಗುವ ಪುಸ್ತಕಗಳ ಸಂಖ್ಯೆಯ ನಿಖರ ಮಾಹಿತಿ ಲಭ್ಯವಾಗದು ಎನ್ನುತ್ತಾರೆ ಅವರು.
ಈ ಉದ್ಯಮ ಗ್ರಾಮೀಣ ಭಾಗಕ್ಕಿಂತ ನಗರಗಳ ಲ್ಲಿಯೇ ಹೆಚ್ಚು ಕೇಂದ್ರೀಕೃತವಾಗಿದೆ. ಹಳ್ಳಿಗಾಡಿನ ಪ್ರಕಾಶನ ಸಂಸ್ಥೆಗಳು ಮೂಲ ಸೌಲಭ್ಯ, ಮಾರುಕಟ್ಟೆ ಮತ್ತಿತರ ಕಾರಣಗಳಿಂದ ಪುಸ್ತಕ ಮಾರುವ ಕೆಲಸವನ್ನುಸಣ್ಣದಾಗಿಯಷ್ಟೇ ನಡೆಸುತ್ತಿದ್ದರೆ, ದೊಡ್ಡ ಪ್ರಕಾಶಕರು ಲಾಭಕ್ಕಾಗಿ ಹೊತ್ತಿಗೆಗಳನ್ನು ತರುವ ಕಾಯಕದಲ್ಲಿದ್ದಾರೆ ಎನ್ನುವ ಆರೋಪ ಗ್ರಾಮೀಣ ಪ್ರಕಾಶಕರದ್ದು.

ಪ್ರಯೋಗದ ಹಾದಿ...

ಕುಂದಾಪುರದ ತಾಲ್ಲೂಕಿನ ‘ಗಾವಳಿ’ಯಂಥ ಸಣ್ಣ ಹಳ್ಳಿಯಲ್ಲಿ ‘ಪುಸ್ತಕನಿಧಿ ಪ್ರಕಾಶನ’ ಸಂಸ್ಥೆ ನಡೆಸುತ್ತಿರುವ ಮುನಿಯಾಲ ಗಣೇಶ್ ಶೆಣೈ, ಲೇಖಕರೂ ಹೌದು. ಈ ಕ್ಷೇತ್ರ ಪ್ರಜ್ಞಾಪೂರ್ವಕವಾಗಿಯೇ ಉದ್ದಿಮೆಯ ರೂಪು ಪಡೆಯುತ್ತಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಪ್ರಯೋಗಾತ್ಮಕವಾಗಿ ಪುಸ್ತಕೋದ್ಯಮದಲ್ಲಿ ತೊಡಗಿದವರು ಅವರು ಪುಸ್ತಕೋದ್ಯಮದ ಹಾದಿಯ ಕುರಿತು ಹೇಳುವುದು ಹೀಗೆ....

‘ಅವ್ಯವಹಾರದ ಕಾರಣದಿಂದ ಸಗಟು (ಏಕಗವಾಕ್ಷಿ ಯೋಜನೆ) ಖರೀದಿ ನಿಲ್ಲಿಸಿ ಎಂದು ಸರ್ಕಾರವನ್ನು ಆಗ್ರಹಿಸುವ ಕೆಲವು ಪ್ರಕಾಶಕರು ಇದ್ದಾರೆ. ಆದರೆ ಈ ಮಾತು ನೆಗಡಿ ಬಂದರೆ ಮೂಗು ಕೊಯ್ದುಕೊಂಡಂತೆ ಎಂಬಂತಾಗುತ್ತದೆ. ಸರ್ಕಾರದ ಈ ಯೋಜನೆಯಿಂದಲೇ ಪ್ರಕಾಶಕರು ಉಳಿದಿರುವುದು. ಹಲವು ಪ್ರಕಾಶನ ಸಂಸ್ಥೆಗಳ ಲಾಭವನ್ನೂ ಮಾಡಿಕೊಳ್ಳುತ್ತಿವೆ. ಪುಸ್ತಕ ಪ್ರಕಾಶನ ಎಂಬುದು ವ್ಯಾಪಾರ, ಉದ್ಯಮ ಆಗುತ್ತಿರುವುದೂ ನಿಜ. ಸಹಜವಾಗಿ ಪುಸ್ತಕಗಳಿಗೆ ಬಂಡವಾಳ ಹೂಡಿದ ಪ್ರಕಾಶಕ ಅದರಿಂದ ಲಾಭ ಅಪೇಕ್ಷಿಸುವುದು ತಪ್ಪಲ್ಲ.

ಆದಾಯ ಗಳಿಕೆಯಾದರಷ್ಟೇ ಇಲ್ಲಿ ಮತ್ತಷ್ಟು ಹಣ ತೊಡಗಿಸಲು, ನಮ್ಮನ್ನೂ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಲಾಭ ಗಳಿಕೆಯೇ ಪ್ರಧಾನವಾಗಿ ಪುಸ್ತಕ ಮೌಲ್ಯಗಳು ಕಣ್ಮರೆಯಾಗಬಾರದು. ಪ್ರಕಾಶಕರು ಸೂಕ್ಷ್ಮವಾಗಿ ಗ್ರಹಿಸಿದರೆ ‘ಲಾಬಿ’ಗಿಂತ ಹೆಚ್ಚು ಆದಾಯವನ್ನೂ ಒಳ್ಳೆಯ ರೀತಿಯಲ್ಲಿಯೇ ಸಂಪಾದಿಸಬಹುದು. ಪುಸ್ತಕ ಪ್ರೀತಿಯನ್ನು ಜನರಲ್ಲಿ ಉತ್ತಮವಾಗಿ ಬೆಳೆಸಬಹುದು’. 

‘1984ರಲ್ಲಿ ನಾನು ಪ್ರಕಾಶನ ಸಂಸ್ಥೆ ಆರಂಭಿಸಿದಾಗ ನಾಲ್ಕು ಸಾವಿರ ರೂಪಾಯಿ ಬಂಡವಾಳ ಹೂಡಿದ್ದೆ. ನನ್ನದೇ ಪ್ರವಾಸ ಕಥನ ‘ಲಕ್ಷದ್ವೀಪ’ ಎರಡನೇ ಪ್ರಕಟಣೆ. ಸದ್ಯ ₨30 ಲಕ್ಷ ಮೌಲ್ಯದ ಪುಸ್ತಕಗಳು ನನ್ನಲ್ಲಿವೆ. ವಾರ್ಷಿಕ ₨20 ಲಕ್ಷದಷ್ಟು ವಹಿವಾಟು ನಡೆಯುತ್ತದೆ. ಇದೆಲ್ಲ ಸಾಧ್ಯವಾಗಿದ್ದು ಪುಸ್ತಕ ಮಾರಾಟಕ್ಕೆ ನನ್ನದೇ ಹಾದಿ ಕಂಡುಕೊಂಡು ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಕ್ಕೆ. ಜೈಲಿನಲ್ಲಿ, ವೇಶ್ಯವಾಟಿಕೆ ನಡೆಯುವ ಸ್ಥಳಗಳಲ್ಲಿ, ಕಾಲೇಜುಗಳಲ್ಲಿ, ಫುಟ್‌ಪಾತ್‌ನಲ್ಲಿ ಪುಸ್ತಕ ಮಾರಿದ್ದೇನೆ. ಆಯಾ ಕಾಲಕ್ಕೆ ಯಾವ ಪುಸ್ತಕಗಳಿಗೆ ಬೇಡಿಕೆ ಇದೆ ಮತ್ತು ಜನರು ಯಾವ ಪುಸ್ತಕಗಳನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಗ್ರಹಿಸಿದ್ದೇನೆ.

ಸದ್ಯದ ಸನ್ನಿವೇಶದಲ್ಲಿ ನನ್ನ ಪ್ರಕಾಶನ ಸಂಸ್ಥೆಯಿಂದ ಅಡುಗೆ, ಆರೋಗ್ಯ, ಯೋಗ ಮತ್ತಿತರ ಸಾಮಾನ್ಯ ಜನರ ಜೀವನಕ್ಕೆ ಅನುಕೂಲವಾಗುವ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಹಳ್ಳಿ ಹಳ್ಳಿಗಳಿಗೆ ತೆರಳಿ ಪುಸ್ತಕ ಮಾರುವುದು ಮತ್ತು ಸಮಗ್ರವಾಗಿ ವಹಿವಾಟಿನ ರೂಪು ನೀಡುವುದು ನನ್ನಿಂದ ಸಾಧ್ಯವಿಲ್ಲದ್ದು. ನನ್ನೂರಿನ ನಾಲ್ಕಾರು ಪಾನ್‌ ಅಂಗಡಿಗಳಿಗೆ ಸಣ್ಣ ಪುಸ್ತಕಗಳನ್ನು ಮಾರಾಟಕ್ಕಿಟ್ಟೆ, ಸ್ಪಂದನೆ ದೊರೆಯಿತು. ನಂತರ ಆಸ್ಪತ್ರೆ, ಹೋಟೆಲ್‌ ಹೀಗೆ ಸಣ್ಣ ಪುಟ್ಟ ಅಂಗಡಿಗಳನ್ನೂ ಮಾರುಕಟ್ಟೆಯನ್ನಾಗಿಸಿಕೊಂಡೆ.

ಕುಂದಾಪುರ ತಾಲ್ಲೂಕಿನ ನೂರಕ್ಕೂ ಹೆಚ್ಚು ಸಣ್ಣ ಅಂಗಡಿಗಳಲ್ಲಿ ನಮ್ಮ ಪ್ರಕಾಶನದ ಪುಸ್ತಕಗಳು ಲಭ್ಯವಾಗುತ್ತವೆ. ₨10ರಿಂದ ₨15ರವರೆಗಿನ ಪುಸ್ತಕಗಳನ್ನು ಇಲ್ಲಿ ಮಾರಾಟ ಮಾಡಿದೆ. ಚಿಕೂನ್ ಗೂನ್ಯಕ್ಕೆ ಅಮೃತಬಳ್ಳಿ ಮದ್ದಾಗುವುದನ್ನು ತಿಳಿದ ಜನರು ಆ ಪುಸ್ತಕಗಳನ್ನು ಹೆಚ್ಚು ಕೊಂಡರು. ನನ್ನ ಪುಸ್ತಕೋದ್ಯಮಕ್ಕೆ ಹೆಚ್ಚು ಬಲ ಬಂದಿದ್ದು 100 ಗಿಡಗಳ ಕುರಿತು ನಾನು ಪ್ರಕಟಿಸಿದ ಸರಣಿ ಪುಸ್ತಕಗಳಿಂದ. ಹಂತ ಹಂತವಾಗಿ ಪ್ರಕಟಿಸಿದ ಈ ಪುಸ್ತಕಗಳಿಂದ ಬಂದ ಆದಾಯದಿಂದ ಸರಣಿಯ ಉಳಿದ ಪುಸ್ತಕಗಳನ್ನೂ ಪ್ರಕಟಿಸಿದೆ. ಇವುಗಳ ಒಟ್ಟು ಬೆಲೆ ₨4,300. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಿದೆ. ಈ ಸರಣಿಗೆ 200 ಜನರನ್ನು ಸದಸ್ಯರನ್ನಾಗಿಸಿಕೊಂಡೆ’. 
-ಮುನಿಯಾಲ ಗಣೇಶ ಶೆಣೈ, ‘ಪುಸ್ತಕನಿಧಿ’ ಪ್ರಕಾಶನ

‘ವ್ಯಾಪ್ತಿ ಹೆಚ್ಚಿದೆ’
‘ಪುಸ್ತಕ ಪ್ರಕಾಶನ ‘ಉದ್ಯಮ’ವಾಗುವ ಪ್ರಕ್ರಿಯೆ ಬಹಳ ಹಿಂದೆಯೇ ಆರಂಭಗೊಂಡಿತು. ಈಗ ಅದರ ವ್ಯಾಪ್ತಿ ಹೆಚ್ಚಾಗಿದೆ ಅಷ್ಟೆ. ‘ಪುಸ್ತಕ ಮಾಧ್ಯಮ’ ಮತ್ತು ‘ಪುಸ್ತಕೋದ್ಯಮ’ ಎಂದು ಎರಡು ರೀತಿಯಲ್ಲಿ ಗುರ್ತಿಸಬಹುದು. ಪುಸ್ತಕ ಸಂಸ್ಕೃತಿಯನ್ನು ಪೂರ್ಣ ವಾಣಿಜ್ಯ ರೀತಿಯಲ್ಲಿ ಅಲ್ಲದಿದ್ದರೂ ವ್ಯಾವಹಾರಿಕವಾಗಿಯಂತೂ ನೋಡುವ ಕ್ರಮವಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವು ಯಾವುದೇ ಹೂಡಿಕೆ ಮಾಡಿದರೂ ಆ ಹಣ ಹಿಂದಿರುಗಬೇಕು. ಪುಸ್ತಕ ಮಾರಾಟದಲ್ಲೂ ನಷ್ಟ ಆಗಬಾರದು. ನನ್ನ ಹೂಡಿಕೆಯಲ್ಲಿ ಲುಕ್ಸಾನೂ ಆಗಿಲ್ಲ. 1994ರಿಂದ ಪುಸ್ತಕ ಮಾರಾಟವನ್ನು ಗಂಭಿರವಾಗಿ ಪರಿಗಣಿಸಿದೆ. ಆರಂಭದ ಬಂಡವಾಳ ಹೂಡಿಕೆ ₨50 ಸಾವಿರ. ಸದ್ಯ ₨7 ಲಕ್ಷಕ್ಕೂ ಹೆಚ್ಚು ಮೌಲ್ಯದ ಪುಸ್ತಕಗಳ ಸಂಗ್ರಹವಿದೆ.

‘ವಾರ್ಷಿಕ ಸರಾಸರಿ 30ರಿಂದ 35 ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ಸಾಹಿತ್ಯ ಸಮ್ಮೇಳನ, ಪುಸ್ತಕ ಪರಿಷೆ ಮತ್ತಿತರ ಸಮಾರಂಭಗಳಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅವಧಿಯಾದ ಕಾರಣ ಮಾರ್ಚ್‌–ಜುಲೈ ನಡುವೆ ವಹಿವಾಟು ಇಳಿಕೆಯಾಗುತ್ತದೆ. ನಾವು ಹಣವನ್ನೇ ಪ್ರಧಾನವಾಗಿ ಪರಿಗಣಿಸಿದ್ದರೆ ಹೆಚ್ಚು ಮಾರಾಟವಾಗುವ ಸ್ಫರ್ಧಾತ್ಮಕ ಪುಸ್ತಕಗಳನ್ನು ಮಾರುತ್ತಿದ್ದೆವು. ಆದರೆ ನಮ್ಮ ಪ್ರಕಟಣೆ ವಿಚಾರಾರ್ಹ ಸಾಹಿತ್ಯದ ಪ್ರಕಾಶನ. ವಿಳಾಸವೇ ಗೊತ್ತಿಲ್ಲದ ಹಲವು ಪ್ರಕಾಶನ ಸಂಸ್ಥೆಗಳು ಇವೆ. ಕೆಲವರು ಪ್ರಕಾಶನದಿಂದ ದುಡ್ಡು ಮಾಡುವವರೂ ಇದ್ದಾರೆ’.
-ರವಿಕುಮಾರ್, ‘ಅಭಿನವ’ ಪ್ರಕಾಶನ, ಬೆಂಗಳೂರು

‘ಉದ್ಯಮವಾಗಲು ವಿರೋಧವಿಲ್ಲ’

‘ಪುಸ್ತಕ ಮಾರಾಟ ಉದ್ಯಮವಾಗುವುದನ್ನು ನಾನು ವಿರೋಧಿಸುವುದಿಲ್ಲ. ಮಾರಾಟ ಹೆಚ್ಚಿದಂತೆ ಈ ಪ್ರಕ್ರಿಯೆ ಆಗಬೇಕು,  ಆಗುತ್ತಿದೆ. ಅಧಿಕಾರಿಗಳ ಭ್ರಷ್ಟ ಮನೋಧರ್ಮ, ಉದ್ಯಮದೊಳಗೆ ನಡೆವ ಲಾಬಿ, ಪುಸ್ತಕ ಖರೀದಿ ಯಲ್ಲಿನ ಭ್ರಷ್ಟಾಚಾರ ನಿಲ್ಲಬೇಕು. ನೈತಿಕ ಗಡಿರೇಖೆ ದಾಟಬಾರದು. ಪಾರದರ್ಶಕ ನಡೆಯಿ ಲ್ಲದ ಕಾರಣ ಪುಸ್ತಕ ಪ್ರಕಾಶನದ ಲೆಟರ್ ಹೆಡ್ ಸಂಸ್ಥೆ ಗಳು ಹುಟ್ಟಿಕೊಂಡಿವೆ. ಒಂದು ಸಂಸ್ಥೆ ಹೆಸರಿನಲ್ಲಿ 40–50 ಪ್ರಕಾಶನ ಸಂಸ್ಥೆಗಳು ನಡೆಯುತ್ತಿವೆ. ‘ವಂಚನೆ’ ಕಾರಣಕ್ಕೆ ಈ ಹಿಂದೆ ಒಂದು ಪ್ರಕಾಶನ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ನಂತರ ಇದೇ ಕ್ರಮ ಏಕೆ ಜಾರಿಯಾಗುತ್ತಿಲ್ಲ? ವಂಚಕ ಪ್ರಕಾಶನ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಒಳಿತು. ಇತರೆ ಕ್ಷೇತ್ರಗಳಂತೆ ಮೌಲ್ಯಗಳೆಲ್ಲ ಗೌಣವಾಗಿ ಲಾಭವೇ ಪುಸ್ತಕ ಮಾರಾಟ ದಲ್ಲಿ ಪ್ರಧಾನವಾಗಬಾರದು. ರಾಜಧಾನಿ ಮತ್ತು ನಗರ ಕೇಂದ್ರಿತ ವಾದ ಪ್ರದೇಶಗಳಲ್ಲಿ ಲಾಬಿ ಸಹ ಹೆಚ್ಚುತ್ತದೆ. ಸಣ್ಣ ಪ್ರಕಾಶಕರೂ ಲಾಬಿಯಿಂದ ಹೊರತೇನಲ್ಲ.
‘ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಪ್ರಾಧಿಕಾರದಿಂದಲೇ 16 ಕಡೆ ಪುಸ್ತಕ ಮಾರಾಟ ಮಳಿಗೆ ತೆರೆಯಲಾಯಿತು. ಈಗ ಅದರಲ್ಲಿ 4 ಮುಚ್ಚಿವೆ ಯಂತೆ. ನಮ್ಮ ಮುಖ್ಯ ಉದ್ದೇಶ ತಳಸಮುದಾಯದ ಮಕ್ಕಳಿಗೂ ಪುಸ್ತಕಗಳನ್ನು ಮುಟ್ಟಿಸುವುದು. ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು.

-ಎಸ್‌.ಜಿ. ಸಿದ್ಧರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು


ದೊಡ್ಡ ಪ್ರಕಾಶಕರ ಲಾಬಿ
ಸದ್ಯದ ಸನ್ನಿವೇಶದಲ್ಲಿ ಕಾವ್ಯ ಹೆಚ್ಚು ಮಾರಾಟವಾಗುತ್ತಿಲ್ಲ. ವಿಮರ್ಶೆ ಮತ್ತಿತರ ಗಂಭೀರ ಪ್ರಕಾರದ ಸಾಹಿತ್ಯ ಪುಸ್ತಕಗಳಿಗೆ ಬೇಡಿಕೆ ಇದೆ.

ಪುಸ್ತಕ ಪ್ರಕಾಶನ ಹೊರ ನೋಟಕ್ಕೆ ಕಾಣುವಷ್ಟು ಪೂರ್ಣವಾಗಿ ಮಾರುಕಟ್ಟೆ ರೂಪು ಪಡೆದಿಲ್ಲ. ದೊಡ್ಡ ಪ್ರಕಾಶಕರದ್ದು ಗುಪ್ತ ಕಾರ್ಯಸೂಚಿ ಇದ್ದೇ ಇದೆ. ಗ್ರಾಮೀಣ ಪುಸ್ತಕ ಪ್ರಕಾಶನ ಸಂಸ್ಥಗಳೇ ನೈಜವಾಗಿ ಉಳಿದಿರುವುದು. ಬೆಂಗಳೂರು ಕೇಂದ್ರಿತವಾಗಿ ಪುಸ್ತಕೋ ದ್ಯಮ ಬೆಳೆಯುತ್ತಿದೆ. ಬಸವರಾಜ ಹೊರಟ್ಟಿ ಅವರು ಗ್ರಂಥಾಲಯ ಸಚಿವ ರಾಗಿದ್ದಾಗ ಏಕಗವಾಕ್ಷಿ ವ್ಯವಸ್ಥೆ ಜಾರಿ ಯಾಯಿತು. ನಮ್ಮಲ್ಲಿ ₨1 ಲಕ್ಷ ಮಿತಿ ಯಲ್ಲಿ 300 ಪುಸ್ತಕ ಕೊಂಡರೆ ಬೇರೆ ರಾಜ್ಯ ಗಳಲ್ಲಿ 700 ಪ್ರತಿಗ ಳನ್ನು ಅಲ್ಲಿನ ಸರ್ಕಾರ ಖರೀದಿಸುತ್ತದೆ. ದೊಡ್ಡ ನಗರಗಳಲ್ಲಿ ಪ್ರಕಾಶ ಕರ ಸಂಖ್ಯೆ ಗಣನೀಯ ವಾಗಿ ಹೆಚ್ಚಿದೆ. ಹೀಗೆ ಏಕಾಏಕಿ ಹೆಚ್ಚಿ ದಂತೆ ಒಳವ್ಯವಹಾರವೂ ಬೆಳೆಯಿತು. ಸಣ್ಣ ಪ್ರಕಾಶಕರಿಗೆ ವ್ಯವಹಾರ ಕುದುರಿಸು ವುದು ಕಷ್ಟವಾಗುತ್ತಿದೆ. ನಿಮ್ಮ ಪುಸ್ತಕ ಮಾರಾಟ ಮಾಡಿಸುತ್ತೇವೆ ಎನ್ನುವ ಮಧ್ಯವರ್ತಿಗಳೂ ಇದ್ದಾರೆ. ಲೇಖಕ– ಪ್ರಕಾಶಕನ ಬಳಿ ಪುಸ್ತಕ ಮಾರಾಟಕ್ಕೆ ಅಂಗಡಿ ಇರುವುದಿಲ್ಲ. ಹಾಗಾಗಿ ಲೇಖಕನೇ ತನ್ನ ಪುಸ್ತಕಗಳನ್ನು ಜನರ ಬಳಿಗೊಯ್ಯಲು ಸಾಧ್ಯವಾಗುತ್ತಿಲ್ಲ. ನಾನು ಪುಸ್ತಕ ಆಯ್ಕೆ ಉನ್ನತ ಸಮಿತಿ ಸದಸ್ಯನಾಗಿದ್ದಾಗ 3,500ಕ್ಕೂ ಹೆಚ್ಚು ಪುಸ್ತಕಗಳು ಸಮಿತಿ ಎದುರು ಬರುತ್ತಿ ದ್ದವು. ಈಗ 7000 ದಾಟಿದೆ. ಗ್ರಂಥಾಲ ಯಗಳಿಗೆ ಪುಸ್ತಕ ಆಯ್ಕೆ ಮಾಡುವಾಗ, ಕಾಗದದ ಗುಣಮಟ್ಟ ಮತ್ತಿತರ ವಿಷಯಗಳ ಕುರಿತೇ ಆಸ್ಥೆ ತೋರಲಾಗು ತ್ತದೆ. ಸಮಿತಿ ಸದಸ್ಯರೇ ಪುಸ್ತಕ ಓದಿರು ವುದಿಲ್ಲ. ಪುಸ್ತಕದ ಹೆಸರು, ಮುನ್ನುಡಿ, ಬೆನ್ನುಡಿ, ಕೆಲವು ಪುಟ ಓದಿ ಆಯ್ಕೆ ಮಾಡಲಾಗುತ್ತದೆ. ನಗರ ಕೇಂದ್ರಿತ ಕೆಲವು ಪ್ರಕಾಶಕರು ಐಡಿಯಾಲಜಿ ಇಟ್ಟುಕೊಂಡೇ ಪ್ರಕಾಶನಕ್ಕೆ ಮುಂದಾಗು ತ್ತಾರೆ. ಪ್ರಕಾಶಕರಿಗೆ ಆ ಗ್ರಂಥಾಲಯಗ ಳಿಗೆ ತಮ್ಮ ಪ್ರಕಟಣೆಗಳನ್ನು ಮಾರಲು ವಾಮಮಾರ್ಗ ಗೊತ್ತಿವೆ.
-ವಿಷ್ಣುನಾಯ್ಕ, ಶ್ರೀ ರಾಘವೇಂದ್ರ ಪ್ರಕಾಶನ,  ಅಂಬಾರಕೊಡ್ಲ, ಅಂಕೋಲಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT