ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ ಪ್ರಕರಣ: ಎಸ್‌ಐ ಅಮಾನತು;ಮತ್ತೆ ಮೂವರ ಬಂಧನ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಯುವತಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.ಘಟನೆ ಸಂಬಂಧ ಇದುವರೆಗೂ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಅಸ್ಸಾಂ ಹಾಗೂ ಇತರ ರಾಜ್ಯಗಳಲ್ಲಿ ಶೋಧಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಪುರ್ಬ ಜಬೊನ್ ಬರುವಾ ತಿಳಿಸಿದ್ದಾರೆ. 

 ಶನಿವಾರ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಭಾನುವಾರ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿಯನ್ನು ನಗ್ನಗೊಳಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರೂ 45 ನಿಮಿಷಗಳ ನಂತರ ತಡವಾಗಿ ಬಂದರು ಎಂಬ ಆರೋಪಗಳು ಕೇಳಿಬಂದಿವೆ. 

ಸಬ್‌ಇನ್ಸ್‌ಪೆಕ್ಟರ್ ಅಮಾನತು:   ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದ ದಿಸ್‌ಪುರ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಬಾನ್ ಬರುವಾ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇಂದು ವರದಿ ಸಲ್ಲಿಕೆ: ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ. ಗುವಾಹಟಿಗೆ ತೆರಳಿದ್ದ ಮಹಿಳಾ ಆಯೋಗದ ಸದಸ್ಯರು ಯುವತಿಯನ್ನು ಭೇಟಿ ಮಾಡಿ ಘಟನೆ  ಬಗ್ಗೆ  ಮಾಹಿತಿ ಪಡೆದಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ತಿಳಿಸಿದ್ದಾರೆ.

ಚಾನೆಲ್ ವಿರುದ್ಧ ಪ್ರತಿಭಟನೆ:  ಖಾಸಗಿ ಚಾನೆಲ್‌ವೊಂದರ ವರದಿಗಾರ ಆರೋಪಿಗಳಿಗೆ ಲೈಂಗಿಕ ಕಿರುಕುಳ ನೀಡಲು ಪ್ರಚೋದಿಸಿ ಅದರ ದೃಶ್ಯಗಳನ್ನು ಸೆರೆ ಹಿಡಿದಿದ್ದು ಆ ಚಾನೆಲ್‌ನಲ್ಲಿ ಇದನ್ನು  ಪ್ರಸಾರ ಮಾಡಲಾಗಿದೆ ಎಂದು ಖಂಡಿಸಿ ಅಣ್ಣಾತಂಡದ ಸದಸ್ಯ ಅಖಿಲ್ ಗೊಗೊಯ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಲೈಂಗಿಕ ಕಿರುಕುಳದ ದೃಶ್ಯಗಳನ್ನು ಪ್ರಸಾರ ಮಾಡಿರುವ ಖಾಸಗಿ ಚಾನೆಲ್ ಅಸ್ಸಾಂ ಸರ್ಕಾರದ ಹಿರಿಯ ಸಚಿವರೊಬ್ಬರ ಪತ್ನಿಯ ನಿಯಂತ್ರಣದಲ್ಲಿದೆ. ಈ ಚಾನೆಲ್ ವಿರುದ್ಧ ಮತ್ತು ಆ ವರದಿಗಾರನ ವಿರುದ್ಧ ಕ್ರಮಕೈಗೊಳುವಂತೆ ಅಖಿಲ್ ಗೊಗೊಯ್  ಆಗ್ರಹಿಸಿದರು. ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ ಸೇರಿದಂತೆ  ಇತರ ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT