ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಉಪ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷ, ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದೆ. ವಾರದೊಳಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಭೇಟಿಯಾಗಿ ಉಪ ಚುನಾವಣೆ ತಯಾರಿ ಕುರಿತು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪೂರ್ವಸಿದ್ಧತೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.

ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳು ಹಿಂದೆ ಜೆಡಿಎಸ್ ವಶದಲ್ಲಿದ್ದವು. ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಮತ್ತು ಅದೇ ಪಕ್ಷದ ಶಾಸಕ ಎನ್.ಚೆಲುವರಾಯಸ್ವಾಮಿ ಲೋಕಸಭೆಯಲ್ಲಿ ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದರು. ಆಗಸ್ಟ್ ತಿಂಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು `ಕೈ' ಪಾಳೆಯ ಕಾರ್ಯತಂತ್ರ ರೂಪಿಸತೊಡಗಿದೆ.

ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಭೇಟಿಯ ವೇಳೆ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಈಗಾಗಲೇ ಚಾಲ್ತಿಯಲ್ಲಿರುವ ಕೆಲವು ಹೆಸರುಗಳ ಬಗ್ಗೆ ಇಬ್ಬರೂ ಸಮಾಲೋಚನೆ ನಡೆಸಿದ್ದಾರೆ. ಇದೇ 25ರಂದು ಕಾಂಗ್ರೆಸ್ ವರಿಷ್ಠರು ದೆಹಲಿಯಲ್ಲಿ ಕರೆದಿರುವ ಸಭೆಗೂ ಮುನ್ನವೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದು. ಈ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ ಆಡಳಿತ ಪಕ್ಷ. ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿರುವವರಿಗೆ ಟಿಕೆಟ್ ನೀಡಬೇಕೆಂಬ ಯೋಚನೆ ಪಕ್ಷದ ಪ್ರಮುಖರಲ್ಲಿದೆ. ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಬೇಕೆಂಬ ಇಂಗಿತವನ್ನು ಉಭಯ ನಾಯಕರು ಮಾತುಕತೆ ವೇಳೆ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಬುಧವಾರ ಸಭೆ: ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪರಮೇಶ್ವರ್ ಅವರು ಬುಧವಾರ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದಾರೆ. ಎರಡೂ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖ ಮುಖಂಡರು ಮತ್ತು ಕೆಪಿಸಿಸಿಯ ಹಿರಿಯ ಮುಖಂಡರಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ನಂತರ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಸುರೇಶ್‌ಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ವಿಧಾನಸಭೆಯ ಮಾಜಿ ಅಧ್ಯಕ್ಷ ಕೃಷ್ಣ (ಕೆ.ಆರ್.ಪೇಟೆ) ಅವರನ್ನು ಕರೆತಂದು ಉಪ ಚುನಾವಣಾ ಕಣಕ್ಕಿಳಿಸುವ ಬಗ್ಗೆಯೂ ಒಂದು ಬಣ ಆಸಕ್ತಿ ತಳೆದಿದೆ. ಪಕ್ಷದ ಜೊತೆ ಗುರುತಿಸಿಕೊಂಡಿರುವ ಸಿನಿಮಾ ತಾರೆಯರಿಗೆ ಟಿಕೆಟ್ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ನಟಿಯರಾದ ರಮ್ಯಾ ಹಾಗೂ ಸುಮಲತಾ (ವಸತಿ ಸಚಿವ ಅಂಬರೀಷ್ ಅವರ ಪತ್ನಿ) ಅವರ ಹೆಸರೂ ಕೇಳಿಬಂದಿವೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಶಾಸಕ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರ     ಹೆಸರು ಪರಿಶೀಲನೆಯಲ್ಲಿದೆ. ಕನಕಪುರದ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಲಕ್ಷ್ಮಣ್ ಎಂಬ ಉದ್ಯಮಿಯೊಬ್ಬರ ಹೆಸರೂ ಚಾಲ್ತಿಯಲ್ಲಿದೆ.

ಕೃತಜ್ಞತೆ ಸಲ್ಲಿಸಲು ಸಮಾವೇಶ: ರಾಜ್ಯದಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿರುವುದಕ್ಕಾಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬೃಹತ್ ಸಮಾವೇಶ ನಡೆಸಲು ಪ್ರದೇಶ ಕಾಂಗ್ರೆಸ್ ಸಮಿತಿ ಯೋಚಿಸಿದೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಇದೇ 25ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ಆಹ್ವಾನ ನೀಡಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಭೇಟಿ ವೇಳೆ ಈ ಬಗ್ಗೆಯೂ ಚರ್ಚೆ ನಡೆದಿದೆ. ಆಗಸ್ಟ್ ಅಂತ್ಯದೊಳಗೆ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಗುರುವಾರ ಇಬ್ಬರೂ ಒಟ್ಟಾಗಿ ಎಐಸಿಸಿ ಅಧ್ಯಕ್ಷರನ್ನು ಭೇಟಿಮಾಡಿ ಸಮಾವೇಶಕ್ಕೆ ಆಹ್ವಾನಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ತಯಾರಿ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಬುಧವಾರ ಪಕ್ಷದ ಪ್ರಮುಖ ಮುಖಂಡರ ಸಭೆ ಕರೆದಿದ್ದಾರೆ.

`ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಉಸ್ತುವಾರಿಗಳ ನೇಮಕ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಬೇಕಿದೆ.

ಜು.24ರಂದು ಸಭೆ ಕರೆಯಲಾಗಿದೆ. ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಭವನೀಯ ಅಭ್ಯರ್ಥಿಗಳ ಕುರಿತು ವರದಿ ಸಲ್ಲಿಸುವಂತೆ ಶಾಸಕರಾದ ಆರ್.ಅಶೋಕ ಮತ್ತು ಸಿ.ಟಿ. ರವಿ ಅವರಿಗೆ ಸೂಚಿಸಲಾಗಿದೆ. ಇಬ್ಬರೂ ಬುಧವಾರದ ಸಭೆಗೆ ಮುನ್ನ ವರದಿ ಸಲ್ಲಿಸುವ ಸಾಧ್ಯತೆ' ಎಂದು ಜೋಶಿ ತಿಳಿಸಿದರು.

`ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಪಕ್ಷ ಯೋಚಿಸಿದೆ. ಬುಧವಾರದ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಕುರಿತು ಚರ್ಚಿಸಲಾಗುವುದು. ನಂತರ ಪಕ್ಷದ ಸಂಸದೀಯ ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ' ಎಂದು ಹೇಳಿದರು.

ಇಂದು ಜೆಡಿಎಸ್ ಸಭೆ
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ  ಎಚ್.ಡಿ.ದೇವೇಗೌಡ ಅವರು ಸೋಮವಾರ ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಮತ್ತಿತರರೊಂದಿಗೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಪಕ್ಷದ ಮೂಲ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT